ಚಿತ್ರ ವಿಮರ್ಶೆ: ಹಿನ್ನೆಲೆ ಸಂಗೀತದಿಂದಲೇ ಹೃದಯ ತಟ್ಟಿದ 'ಅಮರನ್'

Upayuktha
0


ನ್ಸ್ಟಾಗ್ರಾಮ್ ಮೂಲಕವೂ ಉಪಯೋಗವಿದೆ ಎಂದು ಗೊತ್ತಾದದ್ದು ಇತ್ತೀಚೆಗೆ. ಏಕೆಂದರೆ ಇನ್ಸ್ಟಾಗ್ರಾಮ್ ಎಂದರೆ ರೀಲ್ಸ್ ಕಾಟ ಎನ್ನಬಹುದು. ರೀಲ್ಸ್ ಮಾಡುತ್ತಾ ಹಲವರು ಕಾಲ ಕಳೆದರೆ, ಇನ್ನೂ ಕೆಲವರು ಅದನ್ನು ನೋಡುತ್ತಾ ಕಾಲ ಕಳೆಯುತ್ತಾರೆ. ಇನ್ಸ್ಟಾಗ್ರಾಮ್ ನೋಡುವ ಸಾಲಿನಲ್ಲಿ ನಾನು ಸಹ ಇದ್ದೇನೆ. ಆದರೆ ತೀರ ಗೀಳು ಎಂಬಂತೆ ಮಾಡಿಕೊಂಡಿಲ್ಲ. ಹಾಗೇ ಮಾಡಿಕೊಳ್ಳುವುದೂ ಬೇಡ. ಹೀಗೆ ರೀಲ್ಸ್ ನೋಡುತ್ತಿರಬೇಕಾದರೆ ಒಂದು ಮ್ಯೂಸಿಕ್ ಎಲ್ಲ ರೀಲ್ಸ್ ನಲ್ಲೂ BGM (ಹಿನ್ನಲೆ ಸಂಗೀತವಾಗಿ) ಬರುತ್ತಿತ್ತು. ಆಗಲೇ ಅದರ ಬಗ್ಗೆ ಹುಡುಕಾಟ ಪ್ರಾರಂಭಿಸಿದ್ದು ನಾನು. ಸಾಯಿ ಪಲ್ಲವಿ 'Intro music Amaran' ಎಂದಿತ್ತು. ಮೊದಲಿಗೆ ಆ ಸಂಗೀತ ಹೆಚ್ಚು ಕಾಡದಿದ್ದರೂ ಬರುಬರುತ್ತಾ ಹೆಚ್ಚು ಆಪ್ತವಾಗುತ್ತಾ ಹೋಯಿತು. ತಮಿಳಿನ ಈ 'ಅಮರನ್ ಮೂವಿ' ಬಗ್ಗೆ ಒಂದೆರಡು ತಿಂಗಳ ಹಿಂದೆಯೇ ಗೊತ್ತಾಗಿದ್ದರೂ, ಆಮೇಲೆ ಪೂರ್ತಿ ಮರೆತಿದ್ದೆ. ಆದರೆ ವಯೋಲಿನ್ನಲ್ಲಿ ನುಡಿಸಿರುವ BGM ನನ್ನನ್ನು ಆ ಚಿತ್ರದ ಕಡೆಗೆ ಪೂರ್ತಿ ವಾಲಿಸಿತು. ಎಷ್ಟೆಂದರೆ ನನ್ನ ಮೊಬೈಲಿನ ರಿಂಗ್ ಟೋನ್ ಸಹ ಈಗ ಅದೇ!


ಈ ಚಿತ್ರದ ಹಾಡುಗಳನ್ನು ಕೇಳಿ, ಟ್ರೈಲರ್ ನೋಡಿದ ನಂತರ ಈ ಚಿತ್ರ 'ಮೇಜರ್ ಮುಕುಂದ್ ವರದರಾಜನ್' ಅವರ ಜೀವನಾಧರಿತ ಚಿತ್ರವೆಂದು ಗೊತ್ತಾಯಿತು. ಎರಡು ದಿನದ ಹಿಂದೆ ರಜೆಗೆಂದು ಮೈಸೂರಿಗೆ ಹೋದಾಗ ಈ ಚಿತ್ರವನ್ನು ವೀಕ್ಷಿಸಿದೆ. ಮೊದಲೇ ಅಂದುಕೊಂಡಂತೆ ಈ ಸಲವೂ ಚಿತ್ರ ನೋಡುತ್ತಿರುವಾಗ ಕಣ್ಣೀರು ಬರುತ್ತಲೇ ಇತ್ತು. ಆದರೆ ಎಂದಿಗಿಂತಲೂ ಹೆಚ್ಚು ಎಮೋಷನಲ್ ಮಾಡಿತು. ಆದ್ದರಿಂದ ಬಿಡುವಿಲ್ಲದೇ ಕಣ್ಣು ತೇವಗೊಳ್ಳುತ್ತಲೇ ಇತ್ತು. 


ನಟರಾದ ಶಿವಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಬರೀ ಅಭಿನಯಿಸಿಲ್ಲ. ಆ ಪಾತ್ರದಲ್ಲೇ ಜೀವಿಸಿದ್ದಾರೆ ಎನಿಸಿತು. ಅದರಲ್ಲೂ ಸಾಯಿ ಪಲ್ಲವಿ ನಿಜ ಜೀವನದ 'ಇಂದು ರೆಬೆಕಾ ವರ್ಗಿಸ್' ಆಗಿಯೇ ಕಾಣುತ್ತಾ, ನೋಡುಗನ ಮನಸ್ಸನ್ನು ಅವರಿಸುತ್ತಾರೆ. 'ಅಮರನ್' ಚಲನಚಿತ್ರವು ಭಾರತದ ಆರ್ಮಿಗೆ ಸಂಬಂಧಿಸಿದ ಚಿತ್ರ. ಇಂದು ಮತ್ತು ಮುಕುಂದ್ ಅವರ ಕಾಲೇಜಿನ ಪ್ರೀತಿ, ನಂತರ ಮುಕುಂದ್ ಆರ್ಮಿಗೆ ಸೆಲೆಕ್ಟ್ ಆಗುವುದು, ತದ ನಂತರ ಇಬ್ಬರ ಪ್ರೀತಿಗೆ ಮನೆಯವರಿಂದ ಆಗುವ ತೊಂದರೆ, ನಂತರ ನಡೆಯುವ ಅಂತರಧರ್ಮೀಯ ಮದುವೆ, ಪುಟ್ಟ ಮಗಳು ಅರ್ಶಿಯಾಳ ಜನನ, ಇದರ ನಡುವೆಯೇ ಇಂಡಿಯನ್ ಆರ್ಮಿಯಲ್ಲಿ ಉಗ್ರರ ವಿರುದ್ಧ ಹೋರಾಡುವ ನಾಯಕ ಮುಕುಂದ್ ಮತ್ತು ಸಂಗಡಿಗರು, ಹೀಗೆ ಬಿಡುವೇ ಇಲ್ಲದಂತೆ ಚಿತ್ರ ಮುಂದುವರೆ ಯುತ್ತಲೇ ಹೋಗುತ್ತದೆ. ನಾಯಕತ್ವ, ಧೈರ್ಯ, ಸೀನಿಯರ್ ಜೂನಿಯರ್ ಎಂದು ನೋಡದೇ ಎಲ್ಲರಿಗೂ ಮಿಡಿಯುವ ಮೇಜರ್ ಮುಕುಂದ್ ಅವರ ಹಲವಾರು ಒಳ್ಳೆಯ ಗುಣಗಳು ಪ್ರೇಕ್ಷಕನನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ.


ಆರ್ಮಿಯಲ್ಲಿ ದುಡಿಯುತ್ತಿರುವ ಭಾರತದ ಸೈನಿಕರ ಜೀವನ ಮಾತ್ರವಲ್ಲದೇ ಅವರ ಕುಟುಂಬದವರು ಎದುರಿಸುತ್ತಿರುವ ಕಷ್ಟಗಳನ್ನು ಈ ಚಿತ್ರ ತಿಳಿಸಿಕೊಡುತ್ತದೆ. ಪ್ರೇಮಿಗಳಾದ ಇಂದು ಮತ್ತು ಮುಕುಂದ್ ಸಂಸಾರ ಜೀವನಕ್ಕೆ ಕಾಲಿಟ್ಟರೂ ಭೇಟಿಯಾಗುವುದು ತುಂಬಾ ಕಡಿಮೆ. ಕೆಲವೊಮ್ಮೆ ವರ್ಷಕ್ಕೆ ಒಂದು ಅಥವಾ ಎರಡು ಸಲ ಈ ರೀತಿ! ಆದರೂ ಅವರ ಮಧ್ಯೆ ಇದ್ದ ಸಾಗರದಷ್ಟು ಪ್ರೀತಿ ಊಹಿಸಲು ಕಷ್ಟ. "ನಾವಿಬ್ಬರೂ ಸಮುದ್ರ ಮತ್ತು ಆಕಾಶದಷ್ಟು ದೂರದಲ್ಲಿದ್ದೇವೆ" ಎನ್ನುತ್ತಾ ತೀರಿ ಹೋದ ತನ್ನ ಪತಿಯ ಬಗ್ಗೆ ಇಂದುರವರು ಹೇಳುತ್ತಾ ಇಬ್ಬರ long distance relationship ಬಗ್ಗೆ ಪ್ರತಿಯೊಬ್ಬರಿಗೂ ಮಾದರಿಯಾಗುತ್ತಾರೆ.


ಕಾಶ್ಮೀರ ತಮ್ಮದು ತಮಗೆ ಬೇಕಿರುವುದು 'ಆಜಾದಿ' (freedom) ಎನ್ನುತ್ತಾ ಎಳೆಯ ಮಕ್ಕಳನ್ನು ಭಯೋತ್ಪಾದನೆಗೆ ತಳ್ಳುತ್ತಿರುವ ಒಂದು ಗುಂಪು, ಭಯದ ನೆರಳಿನಲ್ಲೇ ಇರುವ ಮತ್ತೊಂದು ಗುಂಪು, ಓದಿ ವಿದ್ಯಾವಂತರಾದರೆ ಮಾತ್ರ ಇಂತಹ ಉಗ್ರ ಮನೋಭಾವವನ್ನು ಬೇರಿನಿಂದ ತೊಡೆದು ಹಾಕಬಹುದು ಎನ್ನುವ ಮಗದೊಂದು ಗುಂಪು. ಇವರೆಲ್ಲರ ನಡುವೆ ರಕ್ಷಣೆಗಾಗಿ ನಿಲ್ಲುತ್ತಾ, ತಮ್ಮ ಅಮೂಲ್ಯ ಜೀವಗಳನ್ನು ಮುಡಿಪಾಗಿಟ್ಟಿರುವ ಇಂಡಿಯನ್ ಆರ್ಮಿ! ಯಾರದ್ದೋ ತಪ್ಪಿಗೆ ಮತ್ತ್ಯಾರೋ ಬಲಿಯಾಗಿ, ಇನ್ಯಾರೋ ಅನಾಥವಾಗುತ್ತಿದ್ದಾರೆ! 


ಇಂತಹ ಸೇನೆಗೆ ಸಂಬಂಧಿಸಿದ ಚಿತ್ರಗಳು ಹಲವಾರು ಬಂದಿದ್ದರೂ ಗಡಿಯಲ್ಲಿ ಆಗುತ್ತಿರುವ ಗಲಾಟೆ ಮುಂದುವರಿಯುತ್ತಲೇ ಇದೆ. ಅಲ್ಲಿರುವ ಪುಟ್ಟ ಕಂದಮ್ಮಗಳು ಸಹ ಬಂದೂಕು ನೋಡುತ್ತಾ ಬೆಳೆದರೆ, ಅಂತವರು ಮುಂದೆ ಇನ್ನೇನಾಗಲೂ ಸಾಧ್ಯ?! ಕೆಟ್ಟು ಹೋಗಿರುವ ತಲೆ, ಮನಸ್ಸುಗಳು ಶಾಶ್ವತವಾಗಿ ಸರಿಯಾಗಲಿ ಎಂದಷ್ಟೇ ಆರಾಮಾಗಿ ದಿನಗಳನ್ನು ದೂಡುತ್ತಿರುವ ನಾವು ಹಾರೈಸಬಹುದು. ಆದರೆ ಇಂತವರ ವಿರುದ್ಧ ಹೋರಾಡುತ್ತಾ, ಅನ್ಯಾಯವಾಗಿ ಜೀವ ಬಿಟ್ಟು, ತಮ್ಮ ಕುಟುಂಬಗಳನ್ನು ಅನಾಥರನ್ನಾಗಿಸುತ್ತಿರುವ ನಮ್ಮ ಸೈನಿಕರಿಗೆ ಏನೆಂದು ಹೇಳುವುದು ಎಂಬುದೇ ಗೊತ್ತಾಗುವುದಿಲ್ಲ. ಕಣ್ಣೀರೊಂದೇ ಅವರಿಗೆ ನಾವು ಸಲ್ಲಿಸುವ ಗೌರವವೇ ಎಂಬ ಪ್ರಶ್ನೆ ಕಾಡುತ್ತದೆ!!


- ಅಚಲ ಬಿ ಹೆನ್ಲಿ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top