ಹರಿದಾಸ ಸಾಹಿತ್ಯದ ಮಹಾರತ್ನ ಕನಕದಾಸರು

Upayuktha
0


15 ಮತ್ತು 16ನೇ ಶತಮಾನಗಳನ್ನು ಹರಿದಾಸ ಸಾಹಿತ್ಯದ ಯುಗವೇ ಎಂದು ಕರೆಯಲಾಗುವುದು. ದಾಸ ಸಾಹಿತ್ಯವನ್ನು ಅನೇಕರು ರಚಿಸಿ ಹಾಡಿದ್ದಾರೆ. ಆದರೆ ಆ ಹರಿದಾಸ ಸಾಹಿತ್ಯವನ್ನು ಉತ್ತುಂಗದ ಸ್ಥಾನಕ್ಕೆ ಕೊಂಡೊಯ್ದ ಅಗ್ರಗಣ್ಯರೆಂದರೆ ಅದು ಒಬ್ಬರು ಪುರಂದರದಾಸರಾದರೆ ಮತ್ತೊಬ್ಬರು ಕನಕದಾಸರು.  ಇವರ ಜ್ಞಾನಪ್ರವಾಹದ ನಾಲೆ ಇಂದಿಗೂ  ಮೈದುಂಬಿ ಹರಿಯುತ್ತಿದೆ. ಕನಕರೆಂಬ ದಾಸರತ್ನವು 1509ರಲ್ಲಿ ಇಂದಿನ ಹಾವೇರಿ ಜಿಲ್ಲೆಯ ಸಿಗ್ಗಾವ ತಾಲೂಕಿನ ಬಾಡ ಎಂಬ ಪುಟ್ಟ ಗ್ರಾಮದಲ್ಲಿ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ಶರಣ ದಂಪತಿಗಳ ಉದರದಲ್ಲಿ ಜನಿಸಿದರು. ಇವರ  ತಂದೆ ತಾಯಿಗಳು ಅನೇಕ ವರ್ಷಗಳ ಕಾಲ ತಿರುಪತಿ ತಿಮ್ಮಪ್ಪನಿಗೆ ಹರಕೆಯನ್ನ ಹೊತ್ತು ತಮಗೆ ಸಂತಾನ ಭಾಗ್ಯವನ್ನು ಕರುಣಿಸು ಎಂದು ಬೇಡಿಕೊಂಡಾಗ ಆ ತಿರುಪತಿ ತಿಮ್ಮಪ್ಪನ ಕೃಪೆಯಿಂದ  ಹುಟ್ಟಿದವರೇ ತಿಮ್ಮಪ್ಪ ನಾಯಕರು ಅವರೇ ಮುಂದೆ ಕನಕದಾಸರಾಗುತ್ತಾರೆ. 


ಇವರು ವ್ಯಾಸರಾಯರನ್ನು ತಮ್ಮ ಗುರು ಎಂದು ಸ್ವೀಕರಿಸಿ ಅವರಿಂದ ಆತ್ಮಜ್ಞಾನದ ವಿದ್ಯೆಯನ್ನ ಪಡೆದು ಅವರ ನೆಚ್ಚಿನ ಶ್ರೇಷ್ಠ ಶಿಷ್ಯರಾದರೂ. ಕನಕದಾಸರು ಭಕ್ತಿಯ ಪರಾಕಾಷ್ಟೆಯನ್ನು ಮೆರೆದ ಮಹಾಭಕ್ತರು. ಅವರ ಭಕ್ತಿಯನ್ನ ಕಂಡು ಭಗವಂತನೇ ಸೋತುಹೋಗಿದ್ದನು ಒಂದು ಬಾರಿ ಉಡುಪಿಯ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣನ ದರ್ಶನಕ್ಕಾಗಿ ಕನಕದಾಸರು ಹೋದಾಗ ಅಲ್ಲಿನ ಮಂದಬುದ್ಧಿಯ ಪುರೋಹಿತರು ಇವರಿಗೆ ಮೂರ್ತಿಯ ದರ್ಶನಕ್ಕಾಗಿ ಅವಕಾಶ ನೀಡದಿದ್ದಾಗ ಆ ದೇವಸ್ಥಾನದ ಒಂದು ಕಿಟಕಿಯಲ್ಲಿ ಕನಕದಾಸರು ಇನುಕಿ ನೋಡಿದಾಗ ಮೂರ್ತಿ ಸ್ವರೂಪಿಯಾಗಿ ಕುಳಿತ ಸಾಕ್ಷಾತ್ ಶ್ರೀ ಕೃಷ್ಣನೇ ಕನಕದಾಸರ ಕಡೆಗೆ ತಿರುಗಿ ಒಮ್ಮೆ ನೋಡಿದನು ಆ ಕಿಂಡಿಯನ್ನು ಇವತ್ತಿಗೂ ಕನಕರ ಕಿಂಡಿಯಂದು  ಕರೆಯುತ್ತಾರೆ  ಆ ಭಗವಂತನೇ ಅವರ ಕಡೆಗೆ ತಿರುಗಿ ದರ್ಶನ ಕೊಡುತ್ತಾನೆ  ಎಂದಾದರೆ ಅವರ ಭಕ್ತಿಯ ಶ್ರೇಷ್ಠತೆ ಎಷ್ಟಿತ್ತೆಂದು ಅರಿವಾಗುತ್ತದೆ.


ಇನ್ನೂ ಅವರು ರಚಿಸಿದ ದಾಸ ಸಾಹಿತ್ಯ  ಅತ್ಯದ್ಭುತವಾದದ್ದು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ದಿಟ್ಟನುಡಿಗಳು ಅವರದ್ದು. ಇಂದು ನಾವುಗಳು ನನ್ನ ಜಾತಿ ಶ್ರೇಷ್ಠ ನಿನ್ನ ಜಾತಿ ಶ್ರೇಷ್ಠ ಎಂದು ಜಾತಿಯ ಅಮಲಿನಲ್ಲಿ ಮುಳುಗಿಹೋಗಿದ್ದೇವೆ ನಮ್ಮ ಕಣ್ಣೆದುರು ಜಾತಿಯನ್ನು ಬಿಟ್ಟು ಮತ್ತೇನು ಕಾಣುತ್ತಿಲ್ಲ ದಿನನಿತ್ಯವೂ ಜಾತಿ ಕುಲಗಳದ್ದೇ ಸುದ್ದಿ ಗದ್ದಲಗಳು ಕನಕದಾಸರು ಹೇಳುತ್ತಾರೆ ಕುಲ ಕುಲ ಎಂದು ಹೊಡೆದಾಡದಿರಿ ಕುಲದ ನೆಲೆ ನೀವೇನು ಬಲ್ಲಿರೋ ಎಲೆ ಮಾನವರೇ ಎಂಬ ಅವರ ಆ ಮಾತನ್ನು ನಮ್ಮ  ಅಂತರಾಳದೊಳಗೆ ಇಳಿಸಿಕೊಳ್ಳಲು ಯಾವತ್ತಿಗೂ ನಾವು ಪ್ರಯತ್ನಿಸುತ್ತಿಲ್ಲ ಅದರಿಂದಲೇ ಕುಲದ ಮದನಮಗೇರಿ ಬಿಟ್ಟಿದೆ ಅದಕ್ಕಾಗಿಯೇ ನಮಗೆ ಆನಂದಕ್ಕಿಂತ ದುಃಖವೇ ನಮ್ಮನ್ನು ಸದಾಕಾಲ ಕಾಡುತ್ತಿದೆ. ಯಾವ ಕುಲವೂ ಶ್ರೇಷ್ಠವಲ್ಲ ಯಾವ ಕುಲವೂ ಕನಿಷ್ಠವಲ್ಲ ಅದನ್ನ ಅರಿತು ನಾವು ಸಾಗಬೇಕಿದೆ. ಈ ಜಗತ್ತು ಆ ಭಗವಂತನ ಕೊಡುಗೆ ನಾವೆಲ್ಲರೂ ಅವನನ್ನೇ ನೆನೆಯಬೇಕಾಗಿದೆ ಅವನು ಸೃಷ್ಟಿಸಿದ ಪ್ರಪಂಚವನ್ನು ಬಿಟ್ಟು ನಾವು ಬದುಕಲಾರೆವು ಇದೇ ಮಾತನ್ನು ಕನಕದಾಸರು ತಮ್ಮ ಕೀರ್ತನೆಯಲ್ಲಿ ಅದ್ಭುತವಾದ ಸಾಲುಗಳಲ್ಲಿ ಕಟ್ಟಿಕೊಡುತ್ತಾರೆ.

         ತೊರೆದು ಜೀವಿಸಬಹುದೇ 

         ಹರಿ ನಿನ್ನ ಚರಣಗಳನ್ನು 

         ಬರಿದೆ ಮಾತೇಕಿನ್ನು 

        ಅರಿತು ಪೇಳುವೆನಯ್ಯ //


ಓ ಹರಿಯೇ ನಾನು ನಿನ್ನನ್ನು ತೊರೆದು ಜೀವಿಸಲು ಸಾಧ್ಯವೇ? ನನಗೆ ನಿನ್ನ ಪಾದಗಳೇ ಗತಿ ಆ ನಿನ್ನ ಪಾದಗಳನ್ನು ಬಿಟ್ಟು ನಾನು ಬದುಕಲಾರೆ ನನ್ನನ್ನ ಕಾಯುವವನು ನೀನೇ ನನ್ನನ್ನು  ಕೊಲ್ಲುವವನು ನೀನೇ ನಿನ್ನ ಚರಣಗಳನ್ನು ಬಿಟ್ಟು ನಾನು ಜೀವಿಸಲಾರೆ ಇದನ್ನು ಬರೀ ಮಾತಿನಿಂದ ಹೇಳುತ್ತಿಲ್ಲ ನಾನು ನಿನ್ನನ್ನು ಅರಿದು  ನೋಡಿಯುತ್ತಿರುವೆ ಎಂದು ಕನಕದಾಸರು ಹೇಳುತ್ತಾರೆ. ಈ ಮಾತುಗಳು ಸುಮ್ಮನೆ ಅವರ ಬಾಯಲ್ಲಿ ಬಂದ ಮಾತಲ್ಲ ಆತ್ಮಜ್ಞಾನದ ನುಡಿಗಳಾಗಿವೆ. ಕನಕದಾಸರೆಂಬ  ಶ್ರೇಷ್ಠ ದರ್ಶನಿಕನು ಈ ಕನ್ನಡ ನಾಡಿನಲ್ಲಿ ಜನ್ಮವೆತ್ತಿ ಸಂಚರಿಸಿ ಹೋಗಿರುವುದು ನಮ್ಮೆಲ್ಲರ ಸೌಭಾಗ್ಯವೇ ಆಗಿದೆ ಅವರನ್ನು ಜಾತಿಯ ಗೂಟಕ್ಕೆ ಕಟ್ಟಿ ಹಾಕದೆ ನಿರಂತರವಾಗಿ ಆ ಮಹಾತ್ಮನ ಚಿಂತನೆಗಳನ್ನು ಅರಿತು ಸಾಗೋಣ.   


ಶ್ರೀರಾಮಕೃಷ್ಣ ದೇವರು 

ಶ್ರೀ ಷಣ್ಮುಖಾರೂಢ  ಮಠ.ವಿಜಯಪುರ 



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top