ಧರ್ಮಸ್ಥಳ: ಕಾರ್ತಿಕ ಮಾಸದ ಲಕ್ಷದೀಪೋತ್ಸವದ ಎರಡನೇ ದಿನವಾದ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕೆರೆಕಟ್ಟೆ ಉತ್ಸವವು ವಿಜೃಂಭಣೆಯಿಂದ ನಡೆಯಿತು.
ಮಂಜುನಾಥನಿಗೆ ಪೂಜೆ ಸಲ್ಲಿಸಿ ವಿವಿಧ ವೈದಿಕ ಕ್ರಮಗಳೊಂದಿಗೆ ಉತ್ಸವಮೂರ್ತಿಯನ್ನು ಸ್ವರ್ಣ ಪಲ್ಲಕ್ಕಿಯಲ್ಲಿ ವಿರಾಜಮಾನಗೊಳಿಸಿ ದೇವಾಲಯಕ್ಕೆ 16 ಸುತ್ತು ಪ್ರದಕ್ಷಿಣೆ ಬರಲಾಯಿತು. ಸಂಗೀತ, ಚೆಂಡೆ, ಶಂಖ ಸೇರಿದಂತೆ ಸರ್ವವಾದ್ಯಗಳ ಪ್ರದಕ್ಷಿಣೆ ಸೇವೆಯನ್ನು ಮಂಜುನಾಥನಿಗೆ ಸಲ್ಲಿಸಲಾಯಿತು.
ಬಳಿಕ ದೇವಾಲಯದ ಹೊರಾಂಗಣದಲ್ಲಿ ಸಾವಿರಾರು ಭಕ್ತರ ಮೆರವಣಿಗೆಯಲ್ಲಿ ದೇವರನ್ನು ವಿಹಾರಕ್ಕೆ ಕೊಂಡೊಯ್ಯಲಾಯಿತು. ದೇವರನ್ನು ಭಕ್ತರ ಭಕ್ತಿಯ ಉದ್ಘೋಷದೊಂದಿಗೆ ಮಂಗಳವಾದ್ಯಗಳ ಸಹಿತ ಕೆರೆಕಟ್ಟೆಗೆ ಕರೆತಂದು 5 ಸುತ್ತುಗಳ ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಲಾಯಿತು. ದೇವಾಲಯದ ಆನೆಗಳಾದ ಲಕ್ಷ್ಮಿ, ಶಿವಾನಿ ಮತ್ತು ಬಸವ ಭೀಷ್ಮ ಭಕ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದವು.
ಕೆರೆಕಟ್ಟೆಯಲ್ಲಿ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಬೆಳ್ಳಿರಥದಲ್ಲಿ ಕುಳ್ಳಿರಿಸಿ ದೇವಾಲಯಕ್ಕೆ ಒಂದು ಸುತ್ತು ಬರಲಾಯಿತು. ನೆರೆದಿದ್ದ ಭಕ್ತರು ಪುನೀತ ಭಾವದಿಂದ ಮಂಜುನಾಥನ ರಥ ಎಳೆದು ಕೃತಾರ್ಥರಾದರು. ದೇವರನ್ನು ದೇವಾಲಯದೊಳಗೆ ಕೊಂಡೊಯ್ಯುವಲ್ಲಿಗೆ ಉತ್ಸವ ಸಂಪನ್ನವಾಯಿತು.
ವರದಿ: ಶ್ರವಣ್ ನೀರಬಿದಿರೆ, ದ್ವಿತೀಯ ಎಂಸಿಜೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ