ಬೆಳಕು ಅಂತರಂಗ ಅರಳಿಸಲಿ, ಸಂಬಂಧವೇ ಸಂಪತ್ತಾಗಲಿ: ಡಾ. ಆಳ್ವ ಆಶಯ

Upayuktha
0

ಆಳ್ವಾಸ್ ನಲ್ಲಿ ದೀಪಾವಳಿ ಸಂಭ್ರಮ, ಸಾಂಪ್ರದಾಯಿಕ ಮೆರುಗು, ಸಾಂಸ್ಕೃತಿಕ ಸೊಬಗು, ಸಿಡಿಮದ್ದಿನ ಬೆರಗು, ಸಾಕ್ಷೀಕರಿಸಿದ 20000 ಕ್ಕೂ ಅಧಿಕ ಜನಸ್ತೋಮ


ವಿದ್ಯಾಗಿರಿ: ಶಿಕ್ಷಣ, ಕ್ರೀಡೆ, ಸಂಸ್ಕೃತಿ ಸಂಗಮವಾಗಿ ಅರಳಿದ ಆಳ್ವಾಸ್ ಅಂಗಣದಲ್ಲಿ ಗುರುವಾರ ಬೆಳಕಿನ ಸಂಭ್ರಮ. ಬಾನಂಗಳದಲ್ಲೂ ಮೂಡಿದ ಚಿತ್ತಾರ. ಅದು ಅಕ್ಷರಶಃ ದೇಶದ ಉತ್ಸವ, ನಾಡಿನ ಹಬ್ಬ, ತುಳುನಾಡಿನ ಪರ್ಬ, ಬೆಳಗುವ ಬೆರಗು  ‘ಆಳ್ವಾಸ್ ದೀಪಾವಳಿ'ಯ ಸೊಬಗು.


ಸರ್ವಧರ್ಮಗಳ ಸಮಭಾವ, ಭಾರತೀಯತೆಯ ಭ್ರಾತೃತ್ವ, ಸೌಹಾರ್ದತೆಯ ಸಮಗ್ರತೆ ಎಂಬAತೆ ಸರ್ವ ಹಬ್ಬಗಳನ್ನು ಆಚರಿಸಿಕೊಂಡು ಬಂದಿರುವ  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು, ಗುರುವಾರ ಸಂಜೆ ಇಲ್ಲಿನ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲುರಂಗ ಮಂದಿರದಲ್ಲಿ 'ಆಳ್ವಾಸ್ ದೀಪಾವಳಿ-2024' ಆಚರಿಸಿತು.


15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿದಂತೆ ಪೋಷಕರು, ಸ್ಥಳೀಯರು ಸೇರಿ 20 ಸಾವಿರಕ್ಕೂ ಅಧಿಕ ಜನರ ಸಮ್ಮುಖದಲ್ಲಿ ದೀಪಾವಳಿಯ ಬೆಳಕು ಲೋಕ ಬೆಳಗಿತು.


ಕೊಂಬು, ಕಹಳೆ, 36 ಛತ್ರಿ ಚಾಮರದ ಜೊತೆ, 100 ಕ್ಕೂ ಅಧಿಕ ದೇವಕನ್ಯೆಯರು, ದೀಪ, ಕಳಶ ಹಿಡಿದ ಬಾಲಿಕೆಯರು ಹಾಗೂ ಪುಟಾಣಿಗಳ ಜೊತೆ ಬಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹಾಗೂ ಅತಿಥಿಗಳು ಮೆರವಣಿಗೆ ಮೂಲಕ ಸಭಾಂಗಣವನ್ನು ಪ್ರವೇಶಿಸಿದರು. ಸಾಂಪ್ರದಾಯಿಕ ಮೆರವಣಿಗೆಯಿಂದ ಸಭಾಂಗಣವು ನಂದನವನದAತೆ, ಇಂದ್ರನ ಆಸ್ಥಾನದಂತೆ ಕಂಗೊಳಿಸಿತು.


ಆಳ್ವಾಸ್ ಅಂಗಣದಲ್ಲಿ ಮುಸ್ಸಂಜೆಯ ಹೊಂಗಿರಣವು ಮುತ್ತಿಕ್ಕುತ್ತಿದ್ದಂತೆ, ಸೇರಿದ್ದ ವಿದ್ಯಾರ್ಥಿ ಸಾಗರವು ಪೋಣಿಸಿದ ಮುತ್ತುಗಳಂತೆ ಕಣ್ಮನ ಸೆಳೆದರು. ಶುಭ ಸೂಚಕವಾದ ನೆಲದ ಮೂಲ ನಿವಾಸಿಗಳ ಕೊಳಲು ಹಾಗೂ ಡೋಲು, ಚೆಂಡೆ ನಿನಾದವು ಸಂಜೆಯ ರಂಗೇರಿಸಿತು.


ಮೂರು ನೂರಕ್ಕೂ ಹೆಚ್ಚು  ಲಂಗ ದಾವಣಿ ತೊಟ್ಟು ಮಲ್ಲಿಗೆ ಮುಡಿದ ಬಾಲಕಿಯರು, ಪುಟಾಣಿಗಳು ಒಟ್ಟು ವೇದಿಕೆಯ ಮೆರುಗು  ಹೆಚ್ಚಿಸಿದರು.


ತುಳುನಾಡಿನ ಕೃಷಿ ಪ್ರಧಾನವಾದ ದೀಪಾವಳಿ ಹಬ್ಬದ ಆಚರಣೆ ಮಾದರಿಯಲ್ಲಿ ಮೊದಲಿಗೆ ಗೋ ಪೂಜೆ ನಡೆಯಿತು. ಅವಲಕ್ಕಿ, ಬೆಲ್ಲ, ಭತ್ತ, ನೀರ್ ದೋಸೆ, ಬಾಳೆ ಹಣ್ಣು ನೀಡಿ ಗೋವನ್ನು ಸತ್ಕರಿಸಲಾಯಿತು. ಆರತಿ ಬೆಳಗಿ ಆರಾಧಿಸಲಾಯಿತು.

ಬಳಿಕ ವೇದಿಕೆ ಮುಂಭಾಗದಲ್ಲಿಯೇ ತುಳಸಿ ಪೂಜೆ ನಡೆಯಿತು. ಕದಿರು ಕಟ್ಟಿ ಮನೆ ತುಂಬಿಸುವ ಸಮೃದ್ಧಿಯನ್ನು ಆಶಿಸಲಾಯಿತು.


ಕಳಸೆ, ನೇಗಿಲು, ನೊಗ,  ಮುಡಿ ಕಟ್ಟುವ ಕೊದಂಟಿ ಸೇರಿದಂತೆ ಸಮಗ್ರ ಕೃಷಿ ಪರಿಕರಗಳು, ಹಣ್ಣು ಹಂಪಲು, ಕರಾವಳಿಯ ಗದ್ದೆಯ ನಾಟಿಯ ತರಕಾರಿ ಬೆಳೆಗಳು, ದವಸ ಧಾನ್ಯಗಳ ಪೂಜೆಯ ಮೂಲಕ 'ಸಿರಿ - ಸಂಪತ್ತು -ಸಮೃದ್ಧಿಯನ್ನು ನಾಡಿಗೆ ಹರಸಲಾಯಿತು.


ನಂತರದ ದೇವಾರಾಧನೆಯಲ್ಲಿ ವಿಘ್ನ ನಿವಾರಕ ಗಣಪತಿ, ವಿದ್ಯಾ ಅಧಿಪತಿ ಸರಸ್ವತಿ, ಸಂಪತ್ತಿನ ದೇವಿ ಲಕ್ಷ್ಮೀ, ಮರ್ಯಾದಾ ಪುರುಷೋತ್ತಮ ಶ್ರೀರಾಮ ಹಾಗೂ ಜೀವನೋಲ್ಲಾಸದ ಪ್ರತೀಕ ಶ್ರೀಕೃಷ್ಣ ದೇವರ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.  ದೀಪಾರಾಧನೆ ಮಾಡಿ ಪೂಜಿಸಲಾಯಿತು.


ಪಾತಾಳಕ್ಕೆ ತೆರಳಿದರೂ ಮತ್ತೆ ಮತ್ತೆ ತನ್ನ ಸಾಮ್ರಾಜ್ಯಕ್ಕೆ ಚಿತ್ತೈಸುವಂತೆ ಬಲಿಯೇಂದ್ರ ಚಕ್ರವರ್ತಿಯನ್ನು ಆರಾಧಿಸಿ ತುಳುವರು ಕರೆಯುತ್ತಾರೆ. ಕೃಷಿ ಮೂಲಕ ತನ್ನ ಸಾಮ್ರಾಜ್ಯವನ್ನು ಸ್ವರ್ಗ ಮಾಡಿದ ಬಲಿಯೇಂದ್ರ ಚಕ್ರವರ್ತಿಯನ್ನು ಆಹ್ವಾನಿಸಲಾಯಿತು.


ತುಳು ಸಂಸ್ಕೃತಿಯಂತೆ ಹಾಲೆ (ಪಾಳೆ) ಅಥವಾ ಸರ್ವಪರ್ಣಿಕ ಮರದ  ಬಲಿಯೇಂದ್ರ ಕಂಬದ ದೀಪ ಪ್ರಜ್ವಲಿಸುವ ಮೂಲಕ ಡಾ.ಎಂ.ಮೋಹನ ಆಳ್ವ ಅವರು ನಾಡಿನ ಸಮೃದ್ಧಿಯನ್ನು ಪ್ರಾರ್ಥಿಸಿದರು.  ತುಳುನಾಡು ಸೇರಿದಂತೆ ಕರಾವಳಿ ನಂಬಿಕೆಯಾದ ಬಲಿಯೇಂದ್ರ ಪೂಜೆ ನಡೆಯಿತು.

ಬಳಿಕ ಮಾತನಾಡಿದ ಡಾ.ಎಂ.ಮೋಹನ ಆಳ್ವ, ವಿಶ್ವದ ಮೂರು ಪ್ರಮುಖ ಹಬ್ಬಗಳು ಕ್ರಿಸ್ಮಸ್, ರಮ್ಜಾನ್ ಹಾಗೂ ದೀಪಾವಳಿ. ಈ ಪೈಕಿ ದೀಪಾವಳಿ ಸರ್ವಧರ್ಮೀಯರ ಹಬ್ಬವಾಗಿ ಪರಿವರ್ತನೆಗೊಂಡಿದೆ ಸೌಹಾರ್ದತೆಯನ್ನು ಸಂಕೇತಿಸಿದರು.


ಬೆಳಕು ನಿಷ್ಪಕ್ಷಪಾತ. ಎಲ್ಲರ ಅಂತರಂಗದ ಬೆಳಕು ಬೆಳಗಬೇಕು. ಭಾವನೆ, ಜವಾಬ್ದಾರಿಗಳಲ್ಲಿ, ಕರ್ತವ್ಯದಲ್ಲಿ ನಾವು ಬೆಳಗಬೇಕು ಎಂದು ಹಾರೈಸಿದರು.

ಕರ್ತವ್ಯ ಎಂಬ ಬತ್ತಿ, ಜ್ಞಾನ ಎಂಬ ಎಣ್ಣೆ ಹಾಗೂ ಹಣತೆ ಎಂಬ ಶಿಕ್ಷಣ ಸಂಸ್ಥೆ ಇದ್ದಾಗ ವಿದ್ಯಾರ್ಥಿಗಳ ಬದುಕು ಬೆಳಗಲು ಸಾಧ್ಯ ಎಂದರು.

ಪ್ರತಿದಿನವೂ ದೀಪಾವಳಿ. ಆದರೆ,  ಒಳಿತನ್ನು ಆಯ್ಕೆ ಮಾಡುವ ಸಾಮರ್ಥ್ಯ ನಿಮ್ಮದಾಗಬೇಕು. ಅಂತರಂಗದ ಬೆಳಗಿ, ಕಾಣುವ ಕಾಣ್ಕೆ ನಿಮ್ಮದಾಗಲಿ ಎಂದರು.


ಸಂಬಂಧಗಳೇ ಸಂಪತ್ತು. ಆ ಸಂಪತ್ತಿಗೆ ಸಾವು ಇಲ್ಲ. ಆರ್ಥಿಕ ಸಂಪತ್ತು ಸಂಬAಧಕ್ಕೆ ಕಾರಣ ಆಗಬಾರದು ಎಂದರು.

ಅಜ್ಞಾನ ಹಾಗೂ ಅಂಧಕಾರ ತೊಡೆದು ದೀಪ ಹಚ್ಚೋಣ. ಜಾತಿ ಧರ್ಮ, ಕುಲ ಮತ ಎನ್ನದೇ ಸಂಬAಧ ಬೆಳಗೋಣ. ಎಲ್ಲರೂ ಒಂದಾಗಿ ಬೆಳೆಯೋಣ ಎಂದರು.

ವಿದ್ಯೆ, ವಿನಯ, ವಿವೇಕ ನಮ್ಮದಾಗಲಿ. ಪ್ರತಿಯೊಬ್ಬರ ಬದುಕಲಿ ಸಂಭ್ರಮ ಎಂದು ಹಾರೈಸಿದರು.

ಹಣತೆ ಹಚ್ಚುತ್ತೇನೆ ನಾನು ಅಹಂಕಾರದಿAದ ಅಲ್ಲ. ಪರಸ್ಪರ ಮುಖ ನೋಡುವ ಸಡಗರದಿಂದ ಎಂದು ಕವಿವಾಣಿಗಳನ್ನು  ಅವರು ಉಲ್ಲೇಖಿಸಿದರು.

ಹಲವು ಹಿತವಚನಗಳನ್ನು  ಉಲ್ಲೇಖಿಸಿದ ಅವರು ಕತ್ತಲೆಯಿಂದ ಹೊರಬಂದು ಬದುಕು ಪ್ರಜ್ವಲಿಸಲಿ. ಹೊಸ ಮನ್ವಂತರಕ್ಕಾಗಿ ದೀಪ ಹಚ್ಚೋಣ ಎಂದರು

ಎಲ್ಲರೂ ಒಳ್ಳೆಯದನ್ನು ನಮ್ಮದಾಗಿಸಿ ಕೊಳ್ಳುವ. ಸಣ್ಣ ಸಣ್ಣ ಕೆಲಸಗಳನ್ನು ಶ್ರದ್ಧೆಯಿಂದ ನಿರ್ವಹಿಸಿದಾಗ ದೊಡ್ಡ ದೊಡ್ಡ ಸಾಧನೆ ಸಾಧ್ಯ ಎಂದ ಅವರು, ಬದುಕಿನ ನವ ಸೂತ್ರಗಳು ಹಾಗೂ ಉತ್ತಮ ಬದುಕಿನ ಅಷ್ಟ ಸೂತ್ರಗಳನ್ನು ವಾಚಿಸಿದರು.


ಸಾಂಸ್ಕೃತಿಕ ವೈಭವ:

ಆರಾಧನೆಯ ಬಳಿಕ ಆಚರಣೆಯ ಭಾಗವಾಗಿ ದೀಪಾವಳಿಯ ಸಂಭ್ರಮದ ವೇದಿಕೆಯಲ್ಲಿ 'ಆಳ್ವಾಸ್ ಸಾಂಸ್ಕೃತಿಕ ವೈಭವ' ಮೇಳೈಸಿತು.

 ಪುತ್ತೂರಿನ ವಿದ್ವಾನ್ ದೀಪಕ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ನೀಲಕಂಠನ ಆರಾಧನೆಯ 'ಭೋ ಶಂಭೋ, ಶಿವ ಶಂಭೋ, ಸ್ವಯಂ ಭೋ' ಶಾಸ್ತ್ರೀಯ ನೃತ್ಯದ ಮೂಲಕ ಚಾಲನೆ ದೊರೆಯಿತು.


ಅನಂತರ ಕೃಷ್ಣ -ರಾಧೆಯರ ಮೋಹಕತೆ. ನವರಾತ್ರಿಯ ನವದುರ್ಗೆಯ ಆರಾಧನೆ ಸಂದರ್ಭದಲ್ಲಿ ಗುಜರಾತಿನಲ್ಲಿ ನರ್ತಿಸುವ  ಗಾರ್ಭ ಮತ್ತು ದಾಂಡಿಯಾದ ನೃತ್ಯ. ರಾಧಾ-ಶ್ಯಾಮ ನರ್ತನವು ವಿದ್ಯಾರ್ಥಿ ಸಾಗರದ ನಡುವೆ ಪ್ರೀತಿಯ ಅಲೆ ಸೃಷ್ಟಿಸಿತು.

ಮಂಟಪ ಪ್ರಭಾಕರ ಮತ್ತು ವಿದ್ವಾನ್ ಚಂದ್ರಶೇಖರ ನಾವುಡ ನಿರ್ದೇಶನದಲ್ಲಿ ಮೋಡಿಬಂದ ‘ಬಡಗುತಿಟ್ಟು ಯಕ್ಷಗಾನ ರಾಸಲೀಲೆ' ಯಕ್ಷ ರೂಪಕವು ಕೃಷ್ಣನ ಯದುಕುಲ ಲೋಕ ಕರಾವಳಿಯಲ್ಲಿ ಅವತರಿಸಿದಂತೆ ಭಾಸವಾಯಿತು. 'ಕೊಳಲನೂದುತ ಬಂದ ಕೃಷ್ಣ'  ಸಾಲಿಗೆ ಮಕ್ಕಳ ನೃತ್ಯ ಗೋಕುಲವನ್ನೇ ಸೃಷ್ಟಿಸಿತು.


ಭಾರತೀಯ ಮಾರ್ಷಲ್ ಕಲಾ ಮಾದರಿಯ ಮಣಿಪುರಿ ಸ್ಟಿಕ್ ಡ್ಯಾನ್ಸ್ ಈಶಾನ್ಯ ಭಾರತದ ಸಾಹಸದ ದರ್ಶನ ನೀಡಿತು. ಒಬ್ಬರ ಮೇಲೆ ಮತ್ತೊಬ್ಬರು ಏರಿ ನಿರ್ಮಿಸಿದ ಪಿರಮಿಡ್, ಜಿಗಿತ, ಬಾಯಿಗಿರಿಸಿದ ಚೂರಿ, ಅಗ್ನಿಯ ಆಟ ರೋಮಾಂಚನಗೊಳಿಸಿತು.

ಈಶಾನ್ಯದ ಬಳಿಕ ಭಾರತದ ದಕ್ಷಿಣಕ್ಕೆ ಹೊರಳಿದ ವೇದಿಕೆಯು ಕೇರಳದ ಚೆಂಡೆ ಹಾಗೂ ತಾಳದ ನಾದಕ್ಕೆ ಕಿವಿಯಾಯಿತು. ನಾದದ ಜೊತೆಗೆ ಚೆಂಡೆ ಹಾಗೂ ತಾಳ ವಾದಕರು ಹೆಜ್ಜೆ ಹಾಕಿದರು.

ಬಸವರಾಜ್ ಹಾಗೂ ಚೇತನ್ ತರಬೇತಿಯಲ್ಲಿ ಮೂಡಿ ಬಂದ ಮಲ್ಲಕಂಬ ಮತ್ತು ರೋಪ್ ಕಸರತ್ತು ಕಲಾಕ್ರೀಡೆಯಾಗಿ ಮೆರಗು ನೀಡಿತು.


ಪಾಶ್ಚಾತ್ಯ, ಭಾರತೀಯ, ಕಸರತ್ತುಗಳ ಮಿಶ್ರಣದಂತೆ ಸಂಕಲಿಸಿದ ಸೃಜನಾತ್ಮಕ ನೃತ್ಯ ಹೊಸ ಲೋಕಕ್ಕೆ ಕೊಂಡೊಯ್ಯಿತು.

ಕರ್ನಾಟಕದ ದೇಸಿ ಕಲೆಯಾದ ಡೊಳ್ಳು ಕುಣಿತವನ್ನು ಆಳ್ವಾಸ್ ನ ತಾಂತ್ರಿಕ ವಿದ್ಯಾರ್ಥಿಗಳು ಪ್ರದರ್ಶಿಸಿದಾಗ ಪ್ರೇಕ್ಷಕ ವರ್ಗವೇ ಧ್ವನಿಯಾಯಿತು. ಹುಡುಗ- ಹುಡುಗಿಯರ ಸ್ಪರ್ಧೆಯೇ ಏರ್ಪಟ್ಟು, ಕನ್ನಡ ಧ್ವಜ ಹಾರಾಡಿತು.


ಅಖಿಲ ಪರಿಮಳನ್ ನಿರ್ದೇಶನದ ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, 'ಭೂಮಿ' ದ್ವೀಪ ದೇಶದ ಚಮತ್ಕಾರದ ಶಕ್ತಿಯೆಡೆಗೆ ಕೊಂಡೊಯ್ಯಿತು. ತಿರುಗುವ ಚಕ್ರ, ಹಾರುವ ಬೆಂಕಿ ಉಂಡೆ ಇತ್ಯಾದಿಗಳು ಸೊಬಗೇರಿಸಿದವು.

ಆಶಿಂಬಂಧು ಚಟರ್ಜಿ ನಿರ್ದೇಶನದಲ್ಲಿ ಪ್ರಸ್ತುಗೊಂಡ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರ ಕಥಕ್ 'ವರ್ಷಧಾರೆ'ಯನ್ನೇ ಸುರಿಸಿತು. ತುಂತುರು ಮಳೆಯನ್ನು ಸಂಭ್ರಮಿಸುವ ಋತುವಿನ ದರ್ಶನ ನೀಡಿತು.


ಕೊನೆಯಲ್ಲಿ  ವೇದಿಕೆಯಲ್ಲಿ  ಗೊಂಬೆ ವಿನೋದಾವಳಿ ನೃತ್ಯ  ರಂಗೇರಿದರೆ, ಆಗಸದಲ್ಲಿ ಸಿಡಿಮದ್ದು ಚಿತ್ತಾರ ಮೂಡಿಸಿತು. ಬೆಳಕಿನ ಜೊತೆ ಗೊಂಬೆಗಳು ಅಂದ ಹೆಚ್ಚಿಸಿದವು. ಕುಲದಲ್ಲಿ  ಕೀಳ್ಯಾವುದೋ... ತಂದನಾನಿ ಹಾಡಿನೊಂದಿಗೆ ತೆರೆಬಿತ್ತು.

ಶಾಸಕ ಉಮಾನಾಥ ಕೋಟ್ಯಾನ್, ಉದ್ಯಮಿ ಕೆ.ಶ್ರೀಪತಿ ಭಟ್, ಮಾಜಿ ಸಚಿವ ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ ಚೌಟ, ಐಕಳ ಹರೀಶ್ ಶೆಟ್ಟಿ, ಸಂಗೀತ ನಿರ್ದೇಶಕ ವಿ.ಮನೋಹರ್, ಜಯಶ್ರೀ ಅಮರನಾಥ ಶೆಟ್ಟಿ ಇದ್ದರು.

ವೇಣುಗೋಪಾಲ ಶೆಟ್ಟಿ, ನಿತೇಶ್ ಮಾರ್ನಾಡು, ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top