ಬಳ್ಳಾರಿ: ಫುಟ್ಬಾಲ್ ಕ್ರೀಡೆ ಬಳ್ಳಾರಿಯಲ್ಲಿ ಬಹಳ ಖ್ಯಾತಿ ಪಡೆದಿರುವ ಕ್ರೀಡೆ, ನನ್ನ ತಂದೆ ನಾರಾ ಸೂರ್ಯನಾರಾಯಣ ರೆಡ್ಡಿ ಅವರು ಕೂಡ ಫುಟ್ಬಾಲ್ ಆಟಗಾರರಾಗಿದ್ದರು, ಅವರು ಬಳ್ಳಾರಿಯಲ್ಲಿ ಫುಟ್ಬಾಲ್ ಪಂದ್ಯಾವಳಿ ಏರ್ಪಡಿಸಿದ್ದ ಮೊದಲಿಗ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಗರದ ಬಿಡಿಎಎ ಫುಟ್ಬಾಲ್ ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಹಾಗೂ ಸೇಂಟ್ ಜಾನ್ಸ್ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಫುಟ್ಬಾಲ್ ಪಂದ್ಯಾವಳಿ (2024) ಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಬೇಕಿದೆ, ರಾಜ್ಯ ಸರ್ಕಾರ ಸಾಕಷ್ಟು ಉತ್ತೇಜನ ನೀಡುತ್ತಿದೆ,
ಹರಿಯಾಣ-ಪಂಜಾಬ್ ರಾಜ್ಯಗಳ ರೀತಿ ನಮ್ಮಲ್ಲೂ ಕ್ರೀಡಾಳುಗಳು ಮುನ್ನೆಲೆಗೆ ಬರಬೇಕಿದೆ, ರಾಜ್ಯದ ಪ್ರತಿ ಒಂದು ಮನೆಯಲ್ಲಿ ಒಬ್ಬ ಕ್ರೀಡಾಳು ರೂಪುಗೊಳ್ಳುವಂತಾಗಬೇಕು ಎಂದರು.
ಕ್ರೀಡೆ ಬಹಳ ಮುಖ್ಯ, ಕ್ರೀಡೆಗೆ ಕುಟುಂಬಸ್ಥರಿಂದ ಬೆಂಬಲ ಸಿಗದಿದ್ದರೂ ಎದೆಗುಂದದೇ ಮುನ್ನುಗ್ಗಿ, ನಿಮಗೆ ಸರಿ ಎನಿಸಿದ್ದನ್ನು ಮಾಡಿ, ನಿಮ್ಮ ಬದುಕು ನಿಮ್ಮದು, ಮನಸ್ಸಿನಲ್ಲಿ ಅಂದುಕೊಂಡದ್ದನ್ನು ಸಾಧಿಸಿ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಇಲ್ಲಿ ಸೇರಿರುವ ನೀವೇ ಮುಂದಿನ ನಾಯಕರು, ಯುವಕರೇ ನಮ್ಮ ದೇಶದ ಆಸ್ತಿ, ಯುವಜನರೇ ಸಂಪತ್ತು ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ, ಕೇವಲ ಕ್ರೀಡೆ ಮಾತ್ರವಲ್ಲದೇ ಹದಿಹರೆಯದ ವಯಸ್ಸಿನಲ್ಲಿ ಪ್ರತಿಯೊಬ್ಬರು ಬದುಕುವಂತೆ ಉಲ್ಲಾಸದ ಅನುಭವಗಳನ್ನು ತಾವು ಪಡೆಯಿರಿ ಎಂದರು.
ಈ ಪಂದ್ಯಾವಳಿಯಲ್ಲಿ ಬಳ್ಳಾರಿ ಜಿಲ್ಲೆಯ ತಂಡಗಳೇ ಗೆಲ್ಲಲಿ ಎಂಬುದು ನನ್ನ ಆಸೆ, ಆದರೆ ಇಲ್ಲಿಗೆ ಬಂದಿರುವ ರಾಜ್ಯದ ಎಲ್ಲ ಕ್ರೀಡಾಳುಗಳು ಕೂಡ ನನ್ನ ಅಕ್ಕ ತಂಗಿಯರೇ ಎಂದರು.
ಇಡೀ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಎಲ್ಲ ಫುಟ್ಬಾಲ್ ಕ್ರೀಡಾಳುಗಳನ್ನು ಸ್ವಾಗತಿಸಿದ ಶಾಸಕ ನಾರಾ ಭರತ್ ರೆಡ್ಡಿ, ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗೆಲ್ಲುವ ತಂಡಕ್ಕೆ 1 ಲಕ್ಷ ರೂ., ರನ್ನರ್ ಅಪ್ ತಂಡಕ್ಕೆ 50 ಸಾವಿರ ರೂ.ಗಳನ್ನು ಟಚ್ ಫಾರ್ ಲೈಫ್ ಫೌಂಡೇಶನ್ ವತಿಯಿಂದ ನೀಡುವುದಾಗಿ ಘೋಷಿಸಿದರಲ್ಲದೇ, ಶುಕ್ರವಾರ ಮಧ್ಯಾಹ್ನ ಎಲ್ಲ ಕ್ರೀಡಾಳುಗಳಿಗೆ ಪ್ರೀತಿಪೂರ್ವಕ ಔತಣಕೂಟ ಏರ್ಪಡಿಸಿರುವುದಾಗಿ ಹೇಳಿದರು.
ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಾಲಾಕ್ಷ ಟಿ, ಸೇಂಟ್ ಜಾನ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹೆಚ್.ಎಸ್.ಶಿವರಾಮ್ ಸೇರಿದಂತೆ ಹಲವರು ಹಾಜರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ