ಬಾಳ್ಗತೆ: ಕೊನೆಯ ಕ್ಷಣದಲ್ಲಿ ಅದೇನು ಬಾಕಿ ಇತ್ತೋ..?

Upayuktha
0

ಪ್ರಾತಿನಿಧಿಕ ಚಿತ್ರ


ನಾವೊಂದಿಷ್ಟು ಹುಡುಗರು ಬೆಂಗಳೂರಿನ ಜಾಲಹಳ್ಳಿ ಮೂಲೆಯೊಂದರಲ್ಲಿ ಅಡ್ಡೆ ಮಾಡಿಕೊಂಡಿದ್ದ ಸಮಯ ಅದು. ಅಲ್ಲಿದ್ದ ಕಾಕಾನ ಹೋಟೆಲ್ (ಈಗಲೂ ಇದೆ) ಬಿಟ್ಟು ಬೇರೆ ಸೌಲಭ್ಯವಿರದಿದ್ದಾಗ, ಸ್ಮಶಾನದೆದುರಿಗಿನ ಚಪಾತಿ ಪೂರೈಸುತ್ತಿದ್ದ ಏಕೈಕ ಹೋಟೆಲಿಗೆ ಸಂಜೆಯಾಗುತ್ತಿದ್ದಂತೆ ಮುಗಿಬೀಳುತ್ತಿದ್ದೆವು. ಕಾರಣ ಲಿಮಿಟೆಡ್ ಊಟ ಲಭ್ಯವಿರುತ್ತಿದ್ದ ಚಿಕ್ಕ ಹೋಟೆಲ್ ಅದು. ಒಂದಿನ ಚಪಾತಿ ಖಾಲಿ ಆಗಿ ನಾವು ಗಲಾಟೆಗಿಳಿದಿದ್ದಾಗ, 

"..ನನ್ನದನ್ನೂ ಆ ಹುಡುಗರಿಗೆ ಕೊಟ್ಟು ಬಿಡಪ್ಪ." ಎನ್ನುವ ಮಾತಿಗೆ ತಿರುಗಿ ನೋಡಿದರೆ ಕೈಮುಗಿಯೋಣ ಎನ್ನಿಸುವಷ್ಟು ಗೌರವ ಭಾವದ ವೃದ್ಧರೊಬ್ಬರು ತೆಗೆದುಕೊಂಡಿದ್ದ ಎರಡು ಚಪಾತಿಯನ್ನೂ ಹಿಂದಿರುಗಿಸುತ್ತಿದ್ದರು. ನಾನು, ರವಿ, ಪ್ರದೀಪ(ಇಬ್ಬರೂ ಈಗಿಲ್ಲ) ಬಸು... ಎಲ್ಲ ತಲೆ ತಗ್ಗಿಸಿದ್ದೆವು. ನಂತರದಲ್ಲಿ ನನಗೂ ಆಚಾರ‍್ರರಿಗೂ ಬಹಳ ಬೇಗ ಸಲುಗೆಯಾಯಿತು. ಪಕ್ಕದ ದೇವಸ್ಥಾನದ ಅಶ್ರಯಕ್ಕಂಟಿದ್ದ ಕೋಣೆಯೊಂದರಲ್ಲಿ ಏಕಾಂಗಿ ಸಂಸಾರ. ಸಾಯಂಕಾಲ ಸಲೀಸಾಗಿ ನಾನು ಕೋಣೆ ಸೇರಿ ಅಡುಗೆ ತಯಾರಿಗಿಳಿದು "..ತಾತ ಗಂಟೆ ಹೊಡೀರಿ. ಟೈಮ್ ಆಯ್ತು.."ಎನ್ನುವಷ್ಟು. ನಮ್ಮನ್ನೆಲ್ಲ ತುಂಬು ಪ್ರೀತಿಯಿಂದ ಮಾತಾಡಿಸುತ್ತಿದ್ದ ತಾತ ಅನಾಮತ್ತು ನಾನೂರು ಕಿ.ಮೀ. ದೂರದಿಂದ ಬಂದು ಸೆಟ್ಲಾದವರು ಹೆಸರು ವೆಂಕಟೇಶಾಚಾರ‍್ರು...


...ತೀರ ಬಡತನ ಇಲ್ಲದಿದ್ದರೂ ಮಕ್ಕಳ ಮಟ್ಟಿಗೆ ಶ್ರೀಮಂತಿಕೆಯ ಕುಟುಂಬ ಆಚಾರ‍್ರರದು. ಸಲೀಸಾಗಿ ಐದು ಮಕ್ಕಳನ್ನು ಹೆತ್ತು ಮಹಾತಾಯಿಯಾಗುವ ಕಾಲಕ್ಕೆ ಹೆರಿಗೆ ಬರಕತ್ತಾಗಲಿಲ್ಲ. "..ಮಕ್ಕಳನ್ನ ನೋಡಿಕೊಳ್ರಿ.." ಎಂದು ಕಣ್ಮುಚ್ಚಿದವರು ಪ್ರೀತಿಯ ಮಡದಿ ಜಾನಕಿ. ಒಪ್ಪವಾಗಿದ್ದ ಸಂಸಾರ ಹಳಿತಪ್ಪಿತು. ಮಂಡಿಲಿ ಲೆಕ್ಕ, ಸಂಜೆಗೆ ವೇದಪಾಠದ ಆಚಾರ‍್ರರಿಗೆ ಕೈಗೂಸನ್ನು ಸೈರಿಸುವುದೋ, ದೊಡ್ಡವನಿಗೆ ಸ್ಕೂಲಿಗೆ ಕಳಿಸುವುದೋ ಗಲಿಬಿಲಿಯಾಗುವ ಹೊತ್ತಿಗೆ ಮನೆ ಅಪ್ಪಟ ಕೊಂಡವಾಡೆಯಾಗಿತ್ತು. ಅಕ್ಕ ಪಕ್ಕದ ಹೆಂಗಸರು ಪಾಳಿ ಮೇಲೆ ಕೊನೆಯ ಚಿಕ್ಕ ಮಕ್ಕಳನ್ನು ಸುಧಾರಿಸುತ್ತಿದ್ದರು. ಆದರಿದು ಶಾಶ್ವತವಲ್ಲ ಎನ್ನಿಸುತ್ತಿದ್ದಂತೆ ಅಚಾರ‍್ರು ಎದ್ದು ನಿಂತರು. ಮೊದಲಿನೆರಡು ಮಕ್ಕಳು ಸ್ಕೂಲಿಂದ ಬರುವವರೆಗೆ ಮನೆಲಿದ್ದು, ಅವರ ಸುಪರ್ದಿಗೆ ಮಕ್ಕಳನ್ನು ಒಪ್ಪಿಸಿ ಸಂಜೆಯವರೆಗೆ ದುಡಿತಕ್ಕೆ ನಿಂತರು. ಇವರ ಪರಿಸ್ಥಿತಿಗೆ ಒಗ್ಗಿದ್ದ ಮಂಡಿ ಯಜಮಾನರು ಏನೇನೋ ಕೆಲಸ ಕೊಟ್ಟು ಇವರನ್ನು ಪೊರೆದರು.


ಬೆಳಿಗ್ಗೆ ಎದ್ದು ಮಕ್ಕಳಿಗೆ ತಿಂಡಿ ಮಾಡುವುದು, ಸಣ್ಣದು ಕಿರುಚಿದಾಗಲೆಲ್ಲ ಅದಕ್ಕೆ ಬಾಟಲಿ.. ಒಂದೆ ಬಾಟಲಿ ಉಪಯೋಗಿಸುವಾಗ ಕೆಲವೊಮ್ಮೆ ಸ್ವಚ್ಚತೆಯಿಲ್ಲದೆ ಹಾಲೇ ಕೆಟ್ಟು ಹೋಗಿ ಮಗು ಹಂಗೆ ಕುಡಿದು ಕಿರುಚುವುದೂ.. ಅತ್ತ ಹೊರಗೆ ಕಟ್ಟೆಮೇಲೆ ಕೂತಿದ್ದ ನಾಲ್ಕನೆಯ ಮಗುವಿಗೆ ಬುಡ ತೊಳೆಸಬೇಕು, ಅಷ್ಟೊತ್ತಿಗೆ ಎದ್ದು ರಾಗವೆಬ್ಬಿಸುತ್ತಿದ್ದ ಮೂರನೆಯದನ್ನು ಸ್ಕೂಲಿಗೆ ರೆಡಿ ಮಾಡು.. ಊಟ. ಎಲ್ಲದರ ಬಟ್ಟೆ ಬರೆ.. ಮಧ್ಯಾನ್ಹ ಸೂರ್ಯ ನೆತ್ತಿ ಕೆದರುವ ಹೊತ್ತಿಗೆ ಅಚಾರ‍್ರು ಹೈರಾಣಾಗುತ್ತಿದ್ದರು. 


ಆದರೆ ಅಷ್ಟೊತ್ತಿಗೆ ಅವರ ಕೆಲಸದ ಸಮಯ. ಉರಿನೆತ್ತಿಗೆ ಒದ್ದೆ ಮಾಡಿದ ಅಚ್ಚಬಿಳಿ ಮಡಿ ಹಾಕಿಕೊಂಡು ಮಂಡಿ ಕಡೆಗೆ ನಡೆಯುತ್ತಿದ್ದರು. ತೀರ ಮುಸ್ಸಂಜೆ ಏಳೂವರೆಗೆ ಮನೆಗೆ ಬರುವ ಹೊತ್ತಿಗೆ ಅನುಭವವಿಲ್ಲದ ಮಕ್ಕಳ ಕೈಯ್ಯಲ್ಲಿ ಉಳಿದವು ಕಿರುಚುತ್ತಿರುತ್ತಿದ್ದವು. ಅವಕ್ಕೆ ಊಟೋಪಚಾರ. ಹಾಲು.. ಶಾಲೆಯ ತಯಾರಿ.. ಮಕ್ಕಳ ಬಟ್ಟೆ. ಕಾಲಕಾಲಕ್ಕೆ ಔಷಧಿ. ಮತ್ತೊಂದು ಹೆಣ್ಣಿಗೆ ಯೋಚಿಸುವವರ ಮಧ್ಯೆ ಅವರ ಸಯಂಮ ನೋಡಿ ಊರೇ ದಂಗಾಗುತ್ತಿತ್ತು. ಮಂಡಿ ಯಜಮಾನರೂ ಬೆನ್ನಿಗೆ ನಿಂತ ಪರಿಣಾಮ, ಆದಷ್ಟೂ ಕೈಯೊಡ್ಡದೆ ದಶಕಗಟ್ಟಲೇ ವರ್ಷಗಳನ್ನೇ ಹಿಂದಿಕ್ಕಿದ್ದರು. ಕಾಲವನ್ನೂ ಸೋಲಿಸಿದ್ದರು ಯಜಮಾನ್ರು.


ಅಷ್ಟಾಗಿ ಮೊದಲನೆಯ ಮಗನಿಗೆ ಸಣ್ಣ ನೌಕರಿ ಆಗಿ ಮದುವೆಗೆ ಬಂದ. ಅಲ್ಲಲ್ಲಿ ಕಷ್ಟಸುಖಕ್ಕೆ ಆಗುವಂತಹ ಹುಡುಗಿಗಾಗಿ ಹುಡುಕಾಡಿದರು. ಅಚಾರ ವಿಫುಲ ಸಂತತಿಯ ದೇಖರೇಖಿ ನೋಡಿಕೊಳ್ಳಲು ಸಿದ್ಧವಿದ್ದ ಸುಧಾಮ ಕುಟುಂಬದ ಸೊಸೆಯೂ ಕಾಲಿಟ್ಟಳು. ಇನ್ನು ಹೆಂಗೋ ನಡಿತದ. ತಾವು ಹೊರಗಿನ ದುಡಿತ ನಿಭಾಯಿಸಿದ್ರಾಯಿತು ಎಂದುಕೊಂಡರು. ಆದರೆ ಮೊದಲನೆಯ ದಿನವೇ ಅನ್ನಕ್ಕೆ ಅಕ್ಕಿ ಇಡ್ಬೇಕಾ, ಅಕ್ಕಿ ಹಿಟ್ಟಾ ಎಂದು ಅನುಮಾನಿಸುತ್ತಾ ನಿಂತಿದ್ದಾಳೆ ಸೊಸೆ ಅನ್ನ ಹೇಗೆ ಮಾಡುವುದೂ ಗೊತ್ತಿಲ್ಲದ ಖೋಡಿ ಅದು. ಮತ್ತೆ ಆಚಾರ‍್ರರೆ ಪಂಚೆಕಟ್ಟಿ ನಿಂತು ಕಲಿಸಿದರು. ಎಲ್ಲಾ ಒಂದು ಹಂತಕ್ಕೆ ಬಂತು ಎನ್ನುವಷ್ಟರಲ್ಲಿ ಸೊಸೆ ಬಸಿರಾಗಿದ್ದಳು. ಅವಳ ಬಾಣಂತನದಿಂದ ಆರಂಭವಾದ ಚಾಕರಿಕೆ, ವರ್ಷಾನುಗಟ್ಟಲೇ ನಡೆದು ಮತ್ತಿಬ್ಬರ ಹೆಣ್ಣು ಮಕ್ಕಳ ಮದುವೆಯವರೆಗೂ ಬಂತು. ಅಲ್ಲಿಗೆ ಬದುಕು ಮುಕ್ಕಾಲು ಮುಗಿದಿತ್ತು. ಆದರೆ ಅವರ ಮುಖದಲ್ಲಿ ನೆಮ್ಮದಿ ಇತ್ತು. ಜಾನಕಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದರು. ನಾಲ್ಕನೆಯ ಹುಡಗನ ಮದುವೆ ಮಾಡಿದರು.


ಅಲ್ಲಿವರೆಗೂ ಎಲ್ಲ ಸೋಲಿಸಿ ಜೀವನ ಕಟ್ಟಿದ್ದ ಯಜಮಾನರ ದಿಕ್ಕು ಬದಲಾಗಿಹೋಯಿತು. ಹೊಸ ಸೊಸೆ ಬದುಕನ್ನೇ ತಿರುಗಿಸಿಬಿಟ್ಟಳು. 

ಅವಳ ಜೊತೆಗೆ ತಿರುಗಿ ಬಿದ್ದ ಹುಡುಗನೂ ಬದುಕು ಹಾಳುಮಾಡಿದ್ದು ಅಪ್ಪನೆ ಎನ್ನುವ ವಿತಂಡವಾದಕ್ಕಿಳಿದಿದ್ದ. ಅಚಾರ‍್ರರು ತತ್ತರಿಸಿ ಹೋಗಿದ್ದರು. ಮನೆ ಎಂಬುವುದು ರಂಪಾಟಾಗಿ ಹೋಗಿತ್ತು. ಎಲ್ಲದಕ್ಕೂ ಮದ್ದು ಎಂದರೆ ಬೇರೆ ಬೇರೆಯಾಗಿ ಹೋಗುವುದು. ಅದನ್ನು ನೋಡುವುದು ಈ ಜನ್ಮದಲ್ಲಿ ಸಾಧ್ಯವಿಲ್ಲ ಎನ್ನುತ್ತಾ, ಮನೆಯ ಸದಸ್ಯರಿಗೆ ತೀರ ಭಾರವಾಗುವ ಮುಂಚೆ ಎದ್ದು ನಡೆದ ಅಚಾರ‍್ರು ಗೊತ್ತು ಗುರಿಯಿಲ್ಲದೆ ಬೆಂಗಳೂರು ಸೇರಿದ್ದರು. ಎಲ್ಲೋ ದಿನ ತೆಗೆಯಲು ನಿರ್ಧರಿಸಿದವರಿಗೆ ಅನಾಯಾಸವಾಗಿ ಒಲಿದಿದ್ದ ವೈದಿಕ ವೃತ್ತಿ, ವೇದ ಪಾಠಗಳು ಕೈ ಹಿಡಿದಿದ್ದವು. ಇನ್ನೆಷ್ಟು ದಿನ ಬಿಡು ಎನ್ನುತ್ತಾ ಇದ್ದುಬಿಟ್ಟಿದ್ದರು. 


ಕಥೆ ಕೇಳಿ ನಾವು ತತ್ತರಿಸಿಹೋಗಿದ್ದೆವು. 

ದೇವರಂಥ ಮನುಷ್ಯನನ್ನು ಹೀಗೂ ಅನುಮನಿಸಬಹುದಾ ಎನ್ನಿಸಿದ್ದು ಆ ಸಂಜೆ ಅವರ ಕೋಣೆ ಎದುರಿಗಿನ ರಂಪಾಟದಿಂದ. ಅದೆಲ್ಲಿಂದಲೋ ಅವರ ಇರುವನ್ನು ಪತ್ತೆ ಹಚ್ಚಿ ಇಲ್ಲಿಗೆ ಬಂದಿದ್ದ ನಾಲ್ಕನೆ ಮಗ "..ಮನೆಯಿಂದ ಬಂಗಾರ ಬೆಳ್ಳಿ..."ಕದ್ದು ತಂದಿದ್ದಾರೆಂದು ಹುಯಿಲೆಬ್ಬಿಸುತ್ತಿದ್ದಾನೆ. ಸಾತ್ವಿಕ ಸಿಟ್ಟಿನ ಅಚರ‍್ರು ತಡೆಯಲಾರದೆ ಕೂಗಾಡಿದ್ದಾರೆ. ಅಘಾತದ ಜತೆಗೆ ಅರೋಪವೂ ಸೇರಿ, ನಿರಂತರ ನಾಲ್ವತ್ತು ದಶಕಗಳ ಜರ್ಜರಿತ ದೇಹ ತಡೆಯದೆ ಕುಸಿದು ಬಿದ್ದಿದೆ.


ನಾವೆಲ್ಲಾ ಸ್ನೇಹಿತರೂ ಅವನನ್ನು ಹಿಡಿದು ಮತ್ಯಾವತ್ತೂ ಅಚರ‍್ರ ತಂಟೆಗೆ ಬರದಂತೆ ವ್ಯವಸ್ಥೆ ಮಾಡಿದ್ದೆವು. ಬಹಳ ದಿನಗಳ ನಂತರ ನಮ್ಮ ಕೈ ಬಿಸಿ ಆರಲು ಸಿಕ್ಕ ಅವಕಾಶ ಅದು. ಆದರೆ ತಾತ ಮಾತ್ರ ಮೊದಲಿನ ಲವಲವಿಕೆಗೆ ಮರಳಲೇ ಇಲ್ಲ. ಬದುಕು ಎಂಥಾ ದೆಸೆಗಿಟ್ಟರೂ ನುಂಗಿ ಎಲ್ಲ ಮಾಡಿದ್ದರು. ತುಂಬಾ ಸೂಕ್ಷ್ಮ ಮನಸ್ಸಿನ ಹಿರಿಯರು ಮನೆ ಎದುರಿಗೆ ನಾಯಿ ಹೋಗುತ್ತಿದ್ದರೂ ಕರೆದು ಅನ್ನವಿಡುವ ಸಹೃದಯಿ. ಆರೋಪದಿಂದ ತತ್ತರಿಸಿದ್ದರು. ನಾನು ಬೆಂಗಳೂರು ಬಿಡುವವರೆಗೂ ಸಂಜೆಗಳಲ್ಲಿ ಅವರೊಂದಿಗಿರುತ್ತಿದ್ದೆ. ಅಲ್ಲಿಂದ ಕರಾವಳಿ ಸೇರಿದ ಮೇಲೆ ಆಗೀಗ ಫೋನಿನಲ್ಲೋ ಕಾಗದದಲ್ಲೋ ಸಂಪರ್ಕ ಉಳಿದಿತ್ತು. ತಿಂಗಳಿಗೊಮ್ಮೆ ತಪ್ಪದೆ ಗೋಕುಲದಲ್ಲಿದ್ದ ಅವರ ಚಿಕ್ಕ ರೂಮಿಗೆ ಮರೆಯದೆ ಹೋಗುತ್ತಿದ್ದೆವು. ತುಂಬಾ ಖುಷಿಯಾಗುತ್ತಿದ್ದ ತಾತ ನಾವು ಹೊರಡುವಾಗ ಕಣ್ಣಂಚಿನಲ್ಲಿ ನೀರಿರುತ್ತಿತ್ತು.


ಒಂದಿನ ಬೆಳಿಗ್ಗೆನೆ ರವಿಯ ಕರೆ. "..ನಿನ್ನ ಹತ್ತಿರ ಮಾತಾಡ್ಬೇಕಂತೆ. ಪದೇ ಪದೇ ತಾತ ಕೇಳ್ತಿದಾರೆ. ಯಾವಾಗ ಬರ್ತಿದ್ದಿ..?"  "..ಇನ್ನೊಂದೆರಡ ವಾರದಲ್ಲಿ ಬರ್ತೀನಿ. ಯಾಕೆ ತಾತಗೆ ಹುಶಾರಿಲ್ವಾ..?" 


"ಇದಾರೆ. ಆದ್ರೆ ಭಾಳಾ ಇಳಿದುಹೋಗಿದಾರೆ. ಇತ್ತಿಚೆಗ್ಯಾಕೋ ಜಾನಕತ್ತೆನ ನೆನಿಸ್ಕೊತಾರೆ ಬರೀ. ನೀನೊಮ್ಮೆ ಬಂದುಹೋಗು ಮಾರಾಯ.."ಎಂದ. ಆಯ್ತು ಎನ್ನುತ್ತ ಫೋನಿರಿಸಿದ್ದೆ. ಈಗಿನಿಂತೆ ಮೊಬೈಲು ಇನ್ನು ದಾಂಗುಡಿ ಇಡದ ಕಾಲವದು. ಏನಿದ್ದರೂ ಲ್ಯಾಂಡ್‌ಲೈನುಗಳೇ ಗತಿ. ಇದಾಗಿ ವಾರವೂ ಕಳೆದಿಲ್ಲ. ಶ್ರೀನಿವಾಸನ ಫೋನು. 


"..ನಿನ್ನೆ ಅಚಾರ‍್ರು ಹೋದರು. ಮೊನ್ನೆನೆ ನೀನು ಯಾಕ ಬರ್ತೀಲ್ಲಾ ಅಂತ ಕೇಳ್ತಾನೆ ಇದ್ರು. ಎನೋ ಮಾತಾಡ್ಬೇಕು ಅಂತಿದ್ರು. ನಿನ್ನೆ ಮತ್ತೆ "..ಹುಡ್ಗ ಯಾಕೋ ಬರ್ಲಿಲ್ಲ.. ಮಾತಾಡ್ಬೇಕಿತ್ತು.." ಅಂತ ಕೇಳಿದ ಅರ್ಧ ತಾಸಿನಲ್ಲಿ ಹೋದರು.." ಎಂದು ಬಿಟ್ಟ. ಅಷ್ಟೆ ಕುಸಿದು ಕುಳಿತು ಬಿಟ್ಟೆ. ವೃದ್ಧಜೀವಕ್ಕೆ ಕೊನೆಯ ಘಳಿಗೆಯಲ್ಲಿ ಮಾತಾಡುವುದಕ್ಕೆ ಅದ್ಯಾವ ಮಾತು ಬಾಕಿ ಇತ್ತೋ..? ಜೀವನವಿಡೀ ಹೈರಾಣಾಗುತ್ತಲೇ ಬದುಕಿದ್ದ ಜೀವಕ್ಕೆ ಅದಿನ್ನೇನು ಮನಸ್ಸಿನಲ್ಲಿತ್ತೋ..? ದೇವರೇ.. ಕೇವಲ ಎರಡ್ಮೂರು ವಾರ ಮೊದಲು ಮಾತಾಡಿದ್ದು ಕಿವಿಯಲ್ಲಿ ಗುಂಯ್‌ಗುಡುತ್ತಲೇ ಇದೆ..  

"..ಮಕ್ಕಳನ್ನ ಸಾಕೋದರಲ್ಲಿ ತಪ್ಪಾತೇನು ಅನ್ಸಿದಾಗೆಲ್ಲ ನಿಮ್ಮ ನೆನಪಾಗಿ ಸಮಾಧಾನ. ಎಲ್ಲೆಲ್ಲಿ ಹುಡುಗ್ರೊ.. ಬಂದು ಉಳದ್ರಿ. ಮಕ್ಕಳಂಗ ನೀವು ಬಂದು ಕೂತರ ಜೀವಕ್ಕ ಖುಶಿ. ನೀನೂ ಹೊಂಟ ಕೂಡಲೇ ಖೋಲಿ ಬಿಕೋ ಅನ್ನಿಸ್ತದ. ಮಕ್ಕಳನ್ನ ಕೈಲಾದ ಮಟ್ಟಿಗೆ ಪ್ರಾಮಾಣಿಕವಾಗಿ ಬೆಳಿಸಿದೆ. ಎನೋ ಒಂಚೂರು ಏರುಪೇರಾಗೇದೇನೊ..? ನನ್ನ ಕೈಲಾದಷ್ಟು ಮಾಡಿದಿನಿ. ಕಡೀ ಮಗಳ ಧಾರಿಗೆ ಜುಬ್ಬಾ ಹಾಕ್ಕೊಬೇಕಂತ ಇತ್ತು. ಜಾನಕಿ ಹೋದಮ್ಯಾಲ ಎಲ್ಲಾ ಆಕೀ ಜತಿಗೇ ಹೋಯ್ತು ನೋಡು. ಆದರೆ ಆಕೀಗೆ ನಾನು ಮಾತ ಕೊಟ್ಟಂಗ, ಮಕ್ಕಳಿಗೆ ಕೈಲಾದಷ್ಟ ಮಾಡೇನಿ ಅನ್ನಿಸಿರ್ತದ ಹೌದಿಲ್ಲೋ. ಎಲ್ಲಿದ್ದರೂ ಆಕೀ ನೋಡತಿರ್ತಾಳ. ಮಕ್ಕಳಂದ್ರ ಜೀವಾ ಬಿಡ್ತಿದ್ಲು. ಅದೊಂದ ಅಕೀಗೂ ಬೇಕಿದ್ದಿದ್ದು. ಅದನ್ನ ಮಾತ್ರ ನಾ ಮರಿಯಾಕ ಅಗಲಿಲ್ಲ ನೋಡು.." ಅದೇ ಕೊನೆ ಮಾತು. 


ಹೆಚ್ಚಿನ ಗಂಡಸರಿಗೆ ತನ್ನ ಪ್ರೀತಿಯ ಕುಟುಂಬಕ್ಕೆ ಇಲ್ಲೆ ಸ್ವರ್ಗ ತೋರಿಸುವ ಉಮೇದಿ. ಅದಕ್ಕಾಗಿ ಮೊದಲು ಮತ್ತು ನಂತರ ಇಬ್ಬಗೆಯಲ್ಲೂ ಜೀವ ತೇಯುತ್ತಾರಾದರೂ ಬದುಕು ಕೆಲವೊಮ್ಮೆ ಕೈಕೊಟ್ಟು ಬಿಡುತ್ತದೆ. ಅದ್ಯಾಕೋ ಸ್ವರ್ಗ ದಕ್ಕುವುದೇ ಇಲ್ಲ... ಸುಖ ಮೊದಲೇ ಮರೀಚಿಕೆ... ದುರದೃಷ್ಟವಾ..? ಹಣೆಬರಹವಾ..? - ಜಗತ್ತು ಮಬ್ಬಾಗಿತ್ತು. ಕಣ್ಣೆದುರಿಗೆ ಯಾವ ಜಲಪಾತವೂ ಇರಲಿಲ್ಲ. ಆದ್ರೆ ಚಿತ್ರಗಳಿಗೆ ಜೀವವಿರಲಿಲ್ಲ.



- ಸಂತೋಷ್ ಕುಮಾರ್ ಮೆಹಂದಳೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top