ಮಾಯಮೃಗವನ್ನು ನೋಡಿ ಮರುಳಾದ ಸೀತೆಗೆ ಕಷ್ಟಗಳ ಸರಮಾಲೆಯನ್ನೇ ಎದುರಿಸುವ ಸಮಯ ಬಂದೊದಗಿತ್ತು. ಇದು ರಾಕ್ಷಸರ ಪ್ರದೇಶ ಮಾಯೆಯೇ ಇರಬಹುದು ಎಂಬ ಅನುಮಾನ ಬಂದರೂ ಕೂಡ ರಾಮನು ಆ ಮಾಯಮೃಗದ ಹಿಂದೆ ಹೆಂಡತಿಯ ಆಸೆಗಾಗಿ ಹೋಗಬೇಕಾಯಿತು.ರಾಮನು ಪರಮಾತ್ಮನ ಅವತಾರ ಹಾಗೂ ಸೀತೆ ಲಕ್ಷ್ಮಿದೇವಿಯ ಅವತಾರವಾದರೂ ಹೆಣ್ಣು ಮಕ್ಕಳು ಪ್ರಪಂಚದ ತಳುಕಿನ ಮೋಹಕ್ಕೆ ಒಳಗಾದರೆ ಕಷ್ಟ ಅನುಭವಿಸಬೇಕಾದೀತೆಂಬುದನ್ನು ಸೀತಾ ರಾಮರ ಮೂಲಕ ತೋರಿಸುತ್ತಾರೆ. ಇಂದಿನ ಸಮಾಜದಲ್ಲಿ ಕಪಟ ಮೋಸವನ್ನು ಮಾಡುವವರು ಹೇಗೆ ಬರುತ್ತಾರೆ ಎಂಬುದನ್ನು ರಾಮಾಯಣಕಾಲದಲ್ಲಿ ರಾವಣನ ಮೂಲಕ ತೋರಿಸುತ್ತಾರೆ.
ಸಾಧುವೇಷದಲ್ಲಿ ಬಂದ ರಾವಣ ಸೀತೆಯ ಅಪಹರಣವನ್ನು ಮಾಡುತ್ತಾನೆ. ಸೀತೆಗೆ ಅನಸೂಯಾದೇವಿ ಕೊಟ್ಟ ಆಭರಣಗಳನ್ನು ಸೀತೆ ರಾವಣ ಕದ್ದೊಯ್ಯುvAಗ ಕೆಳಗೆ ಹಾಕುತ್ತಾಳೆ. ಪತಿಗೆ ತನ್ನನ್ನು ಹುಡುಕಲು ಅನುಕೂಲವಾಗಲೀ ಎಂಬ ಉದ್ದೇಶವಾಗಿರುತ್ತದೆ. ಮುಂದೆ ರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ದಕ್ಷಿಣದಲ್ಲಿ ಬಂದು ಹನುಮಂತ ಸುಗ್ರೀವರ ಭೇಟಿಯನ್ನು ಮಾಡಿ ಲಂಕೆಗೆ ಬಂದು ಸೀತೆಯನ್ನು ಹುಡುಕಿಸುತ್ತಾರೆ. ಹನುಮಂತನು ಸಮುದ್ರವನ್ನು ದಾಟಿ ಲಂಕೆಗೆ ತೆರಳಿ ಸೀತೆಯನ್ನು ಹುಡುಕುವಾಗ ನಾವು ಸೀತೆಯ ಬಗೆಗೆ ಹನುಮನ ಮೂಲಕ ಕೇಳುವಾಗ ಅವಳ ಬಗೆಗೆ ಪೂಜನೀಯ ಭಾವನೆ ಮೂಡುತ್ತದೆ ಮತ್ತು ಎಲ್ಲ ಸ್ತ್ರೀಯರಿಗೂ ಅನುಕರಣೀಯವಾಗಿದೆ. ದೊಡ್ಡ ಅರಮನೆಯ ರಾಣಿಯಾಗಲು ಸಾಕಷ್ಟು ಧನ ಕನಕ ಸಂಪತ್ತಿನ ಆಮಿಷವನ್ನು ತೋರಿದರೂ ಮರುಳಾಗದೇ ರಾಕ್ಷಸಿಯರ ಮೂಲಕ ಸಾಕಷ್ಟು ಹಿಂಸೆ ಕೊಟ್ಟರೂ ಸೋಲದೇ ತನ್ನ ಪತಿವ್ರತಾ ಲಕ್ಷಣವನ್ನು ಹಾಗೂ ಪತಿಯ ಮೇಲಿನ ಪ್ರೀತಿಯ ಜೊತೆಗೆ ಭಕ್ತಿಯನ್ನು ತೋರಿಸಿದಳು. ಜೀವನದಲ್ಲಿ ಎಲ್ಲರಿಗೂ ಈ ರೀತಿಯ ವಿಷಮ ಪರಿಸ್ಥಿತಿ ಬಂದರೂ ಅದನ್ನು ಧೈರ್ಯದಿಂದ ಎದುರಿಸಬೇಕೆಂದು ಸೀತೆಯಿಂದ ಕಲಿಯುಬೇಕಾಗಿದೆ.
ರಾವಣನ ವಧೆಯ ನಂತರ ಸೀತಾದೇವಿಯ ಅಗ್ನಿ ಪ್ರವೇಶವು ಯಾವುದೇ ಕಲ್ಲು ಹೃದಯದ ವ್ಯಕ್ತಿಯನ್ನು ಕೂಡ ಕರಗಿಸುತ್ತದೆ. ಇಂದಿಗೂ ಕೂಡ ಸ್ತ್ರೀ ಎಷ್ಟೇ ಪವಿತ್ರಳೇ ಆಗಿದ್ದರೂ ಸಮಾಜದ ಕಣ್ಣಿನಲ್ಲಿ ಅವಳು ಯಾವುದೇ ತಪ್ಪನ್ನು ಮಾಡಿರಬಹುದೆಂಬ ಅನುಮಾನ ಮತ್ತು ಅಗ್ನಿ ಪರೀಕ್ಷೆಗೆ ಗುರಿಯಾಗುವ ಪರಿಸ್ಥಿತಿ ಬರುತ್ತಲೇ ಇರುತ್ತದೆ. ಆದ್ದರಿಂದ ಹೆಣ್ಣುಮಕ್ಕಳು ತಮ್ಮ ಪ್ರತಿಹೆಜ್ಜೆಯನ್ನು ಯೋಚಿಸಿ ವಿವೇಚನೆಯಿಂದ ಇಡಬೇಕು.
ಸೀತಾಮಾತೆಯು ಅಯೋಧ್ಯೆಗೆ ಬಂದನಂತರವೂ ಕೂಡ ಶ್ರೀರಾಮನ ಪಟ್ಟಾಭೀಷೇಕದ ನಂತರ ಆನಂದದಿಂದ ಇದ್ದರೂ ಪತಿಗೆ ಅನುಕೂಲೆಯಾಗಿ ಪತಿಯ ಪ್ರತಿಯೊಂದು ಕಾರ್ಯದಲ್ಲೂ ಅವನಿಗೆ ಸಹಕಾರಿಯಾಗಿ ಇದ್ದಳು. ಆದರೆ ಅಗಸನೊಬ್ಬನ ಕೊಂಕು ಮಾತಿಗೆ ಶ್ರೀರಾಮಚಂದ್ರನು ಸೀತೆಯನ್ನು ವನವಾಸಕ್ಕೆ ಕಳುಹಿಸುತ್ತಾನೆ. ಆದರೆ ಅವನ ಪ್ರೀತಿ ಅಚಲವಾಗಿರುತ್ತದೆ. ತುಂಬು ಗರ್ಭಿಣಿ ವನದಲ್ಲಿ ಋಷಿಗಳ ಆಶ್ರಯಯಲ್ಲಿ ಮಕ್ಕಳಿಗೆ ಜನ್ಮ ನೀಡುವ ಸೀತೆಯು ಪ್ರತಿಯೊಬ್ಬ ಹೆಣ್ಣುಮಗಳು ಕೂಡ ಮಕ್ಕಳಿಗಾಗಿ ಏನೆಲ್ಲಾ ಮಾಡಬಲ್ಲಳು ಎಂಬುದಕ್ಕೆ ಉದಾಹರಣೆಯೂ ಮತ್ತು ಇಂತಹ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವವರಿಗೆ ಮಾರ್ಗದರ್ಶಕಳು ಆಗಿದಾಳೆ.
ಸಮಾಜದ ಮತ್ತು ಪರಿಸ್ಥಿತಿಯ ಕಾರಣ ಎಷ್ಟೆಲ್ಲ ಕಷ್ಟವನ್ನು ಅನುಭವಿಸಿದರೂ ಕೂಡ ಸೀತೆಗೆ ಪತಿಯ ಮೆಲೆ ಪ್ರೀತಿ ಕಡಿಮೆಯಾಗಲಿಲ್ಲ. ರಾಮನು ಕೂಡ ಅವಳನ್ನು ಬಿಟ್ಟು ಬೇರಾವ ಸ್ತ್ರೀಯನ್ನು ಕಣ್ಣೆತ್ತಿ ನೋಡಲಿಲ್ಲ. ಇಂದಿಗೂ ಕೂಡ ಲೋಕದಲ್ಲಿ ಶ್ರೀರಾಮ ಆದರ್ಶ ಪುರುಷನೇ ಆಗಿದ್ದಾನೆ. ನಡವಳಿಕೆಯನ್ನು ಹೇಳುವಾಗ ಉತ್ತಮವಾಗಿರುವ ಪುರಷುರಿಗೆ ಶ್ರೀರಾಮನಂತಹವನು ಎನ್ನುತ್ತಾರೆ. ಪವಿತ್ರತೆಯ ಹೋಲಿಕೆಯ ಮಾತು ಬಂದಾಗ ಸೀತೆಯನ್ನೇ ಉದಾಹರಣೆ ಕೊಡುತ್ತಾರೆ. ಮತ್ತು ದಾಂಪತ್ಯದ ಹೋಲಿಕೆಗೆ ಸೀತಾರಾಮರ ಜೋಡಿಯೆಂದೂ ಹೇಳಲಾಗುತ್ತದೆ. ಒಟ್ಟಾರೆ ಸೀತಾ ದೇವಿ ಎಲ್ಲರಿಗೂ ಆದರ್ಶ ಮಹಿಳೆ ಅವಳ ತಾಳ್ಮೆ, ಪತಿ ಭಕ್ತಿ, ಮಮತೆ, ಜಾಣ್ಮೆಯನ್ನು ಎಲ್ಲ ಸ್ತ್ರೀಯರು ಕಲಿಯ ಬೇಕು.
- ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ