ಗಾಂಧಿ ಸ್ಮೃತಿ- ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮ
ಕಲ್ಬುರ್ಗಿ: ಜೀವನದಲ್ಲಿ ಎದುರಾಗುವ ಅರಿಷಡ್ ವೈರಿಗಳನ್ನು ಗೆದ್ದು ಉತ್ತಮ ಬದುಕು ಕಟ್ಟಿದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಲೋಕಸಭಾ ಸದಸ್ಯರಾದ ಬಸವರಾಜ್ ಪಾಟೀಲ್ ಸೇಡಂ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಕಲಬುರ್ಗಿ ಜಿಲ್ಲಾ ಘಟಕದ ವತಿಯಿಂದ ಅಕ್ಟೋಬರ್ 3 ರಂದು ಕಲ್ಬುರ್ಗಿಯ ಶ್ರೀ ರಮೇಶ್ಚಂದ್ರ ಲಾಹೋಟಿ ಸ್ಮಾರಕ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ. ಗಾಂಧೀ ಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಾ ಗುಣ ಸಂಪನ್ನತೆಯಿಂದ ವ್ಯಕ್ತಿತ್ವವು ಅರಳುತ್ತದೆ. ಗಾಂಧೀಜಿಯವರು ಜಗತ್ತಿನ ಗೌರವಾನ್ವಿತ ವ್ಯಕ್ತಿಯಾಗಿ ಮಹಾತ್ಮರಾದರೆ, ಸರಳತೆಯಿಂದ ಮೆರೆದ ಲಾಲ್ ಬಹುದ್ದೂರ್ ಶಾಸ್ತ್ರೀಯವರು ಮಹಾನ್ ವ್ಯಕ್ತಿಯಾದರು. ಮಾತೆಯರು ಹೊಟ್ಟೆಕಿಚ್ಚನ್ನು ಬಿಟ್ಟು ತಾಳ್ಮೆ ಮತ್ತು ಸಹನೆಯಿಂದ ಉತ್ತಮ ಗುಣಗಳನ್ನು ರೂಢಿಸಿಕೊಂಡು ಅಭಿವೃದ್ಧಿ ಹೊಂದಬೇಕು. ಗುಣದಿಂದಲೇ ಗೌರವ ಹೊರತು ಆಭರಣಗಳಿಂದಲ್ಲ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳವು ತನ್ನ ಸಾಮಾಜಿಕ ಸೇವಾ ಗುಣದಿಂದ ರಾಜ್ಯದಲ್ಲಿ ಅಭಿವೃದ್ಧಿ ಪರ ಕೆಲಸ ಮಾಡಿ ಹೆಸರು ಪಡೆದಿರುವುದು ಹೆಮ್ಮೆಯ ಸಂಗತಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಗ್ರಾಮ ಅಭಿವೃದ್ಧಿ ಮತ್ತು ವ್ಯಸನ ಮುಕ್ತ ಸಮಾಜ ನಿರ್ಮಾಣ ಸಾಕಾರಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಸ್ ಬಿ ಐನ ಸ್ವ- ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರಾದ ನಂದಕಿಶೋರ್ ಮಳಖೇಡಕರ್ ಮಾತನಾಡಿ ವ್ಯಸನ ಮುಕ್ತಿ ಹೊಂದಿದವರಿಗೆ ನಮ್ಮ ಸಂಸ್ಥೆಯ ಮೂಲಕ ಉಚಿತ ತರಬೇತಿ ನೀಡಿ ಆರ್ಥಿಕ ಸಬಲತೆ ತರಲು ಪ್ರಯತ್ನಿಸುವುದಾಗಿ ಹೇಳಿದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಮತಿ ಮಹಾದೇವಿ ಎಚ್. ಪಾಟೀಲ್ ಮಾತನಾಡಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅಂತಹ ರಾಷ್ಟ್ರ ನಾಯಕರ ಜೀವನ ನಮಗೆಲ್ಲ ಪ್ರೇರಣೆಯಾಗಲಿ ಎಂದು ಹೇಳಿದರು. ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಜಯಂತ ಪೂಜಾರಿ ಅವರು ಮಾತನಾಡಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಶ್ರೀ ಕ್ಷೇತ್ರದ ಗ್ರಾಮ ಅಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆಯ ಕೆಲಸಗಳಿಂದ ಪ್ರಗತಿಯತ್ತ ಹೆಜ್ಜೆಯಿಡುತ್ತಿದ್ದು ಮೌನಕ್ರಾಂತಿ ನಡೆಯುತ್ತಿದೆ ಎಂದರು. ವೇದಿಕೆಯ ಉಪಾಧ್ಯಕ್ಷರಾದ ನ್ಯಾಯವಾದಿ ಮಾಲತಿ ರೇಶ್ಮಿ ಅವರು ಹಕ್ಕೊತ್ತಾಯ ಪತ್ರವನ್ನು ವಾಚಿಸಿದರು.
ವೇದಿಕೆಯ ಖಜಾಂಚಿ ಹಾಗೂ ಆಕಾಶವಾಣಿಯ ನಿವೃತ್ತ ಕಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿ, ಅಕ್ಟೋಬರ್ 2 ರಿಂದ 15 ರವರೆಗೆ ರಾಜ್ಯಾದ್ಯಂತ ದುಶ್ಚಟ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ ಎಂಬ ಸಂದೇಶದೊಂದಿಗೆ ಜನಾಂದೋಲನ ಸ್ವರೂಪಿ ಕಾರ್ಯಕ್ರಮ ಹಮ್ಮಿಕೊಳ್ಳಲು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಸಂಕಲ್ಪ ಗಾಂಧಿ ಸ್ಮೃತಿ ಮತ್ತು ನವ ಜೀವನ ಸಮಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಈವರೆಗೆ ಒಂದು ಲಕ್ಷ 25 ಸಾವಿರಕ್ಕೂ ಅಧಿಕ ಜನರು ವ್ಯಸನ ಮುಕ್ತರಾಗಿ ನವ ಜೀವನವನ್ನು ನಡೆಸುತ್ತಿದ್ದಾರೆ. ಕಲ್ಬುರ್ಗಿ ಜಿಲ್ಲೆಯಲ್ಲಿ 562 ಜನರನ್ನು ಮದ್ಯ ವರ್ಜನ ಶಿಬಿರದ ಮೂಲಕ ದುಶ್ಚಟದಿಂದ ಪಾರು ಮಾಡಲಾಗಿದೆ ರಾಜ್ಯದಲ್ಲಿ 1848 ಮದ್ಯ ವರ್ಜನ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದ್ದು ಮದ್ಯ ವ್ಯಸನ ಮುಕ್ತರ ನವ ಜೀವನ ಸಮಿತಿ ರಚಿಸಿ ಸ್ವಉದ್ಯೋಗ ವ್ಯಕ್ತಿತ್ವ ವಿಕಸನ ಕೃಷಿ ಚಟುವಟಿಕೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಜನಜಾಗೃತಿಯ ಅಧ್ಯಕ್ಷ ಸಿ.ಎನ್ ಬಾಬಳಗಾಂವ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮ ಅಭಿವೃದ್ಧಿಯ ಜಿಲ್ಲಾ ನಿರ್ದೇಶಕ ಗಣಪತಿ ಮಾಳಂಜಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಅನಿಲ್ ಕುಮಾರ್ ಡಾಂಗೆ, ಶಾಂತಪ್ಪ ಕೋರೆ, ಗುರುಬಸಪ್ಪ ಸಜ್ಜನ್ ಶೆಟ್ಟಿ, ಮಲ್ಲಿನಾಥ್ ಮೆಂದ್ರಗಿ, ಅಣ್ಣಪ್ಪ ಜಮಾದಾರ್, ಸೂರ್ಯಕಾಂತ್ ಔರಾದ್ ಬಿ., ರವಿಕುಮಾರ್ ನೀಲೂರು ಧನಂಜಯ ಭಾಸಗಿ, ಮಲ್ಲಿನಾಥ ಮೈಂದರಗಿ, ಪ್ರವೀಣ್ ಸುವರ್ಣ, ಕಲ್ಲನ ಗೌಡ, ರಿಯಾಜ್ ಅತ್ತಾರ್ ಕೃಷ್ಣಪ್ಪ ಮತ್ತಿತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 28ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರ ನಾಯಕರ ವೇಷ ಧರಿಸಿ ಬಹುಮಾನಗಳನ್ನು ಪಡೆದರು. ಕಾರ್ಯಕ್ರಮದಲ್ಲಿ ಗೀತಾಂಜಲಿ ಮತ್ತು ಸುಮಿತ್ರ ಪ್ರಾರ್ಥನೆ ಗೀತೆ ಹಾಡಿದರು. ಚಂದ್ರಶೇಖರ್ ಮತ್ತು ಶ್ರೀಮತಿ ಮಮತಾ ನಿರೂಪಣೆಗೈದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ