ವ್ಯಕ್ತಪಡಿಸದ ಸಮಸ್ಯೆ ದ್ವಿಗುಣಗೊಳ್ಳುತ್ತದೆ: ಡಾ ಪಿವಿ ಭಂಡಾರಿ

Upayuktha
0

ಫಿಸಿಯೋಥೆರಪಿ ಕಾಲೇಜು ಹಾಗೂ  ಅಲೈಡ್ ಹೆಲ್ತ್ ಸೈನ್ಸ್ಸ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ



ಮೂಡುಬಿದಿರೆ: ಕಾಲೇಜು ಜೀವನವು ವಿದ್ಯಾರ್ಥಿ ಜೀವನದ ಒಂದು ವಿಶಿಷ್ಟವಾದ ಹಂತ. ಇದು ಸಂಪೂರ್ಣವಾಗಿ ತಾರುಣ್ಯವು ಅಲ್ಲದ ಸಂಪೂರ್ಣವಾಗಿ ವಯಸ್ಕರು ಅಲ್ಲದ ಸಮಯ. ಇಲ್ಲಿ ಸಾಕಷ್ಟು ಸವಾಲು ನಮ್ಮ ಮುಂದೆ ಇರುತ್ತದೆ.  ನಾವು ಸ್ವಾತಂತ್ರ‍್ಯವನ್ನು ಬಯಸುತ್ತಿರುವಾಗ, ಆರ್ಥಿಕವಾಗಿ ಹೆತ್ತವರ ಮೇಲೆ ಅವಲಂಬಿತರಾಗಿರುತ್ತೇವೆ.  ನಮ್ಮ ಮನಸ್ಸು ಹಲವಾರು ಹೊಸ ಸಾಧ್ಯತೆಗಳನ್ನು ಅನ್ವೇಷಿಸುವ ಹಂತವಿದು ಎಂದು ಖ್ಯಾತ ಮನೋವೈದ್ಯ ಡಾ ಪಿ ವಿ ಭಂಡಾರಿ ನುಡಿದರು. 


ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥೆಗಳಾದ  ಫಿಸಿಯೋಥೆರಪಿ ಕಾಲೇಜು ಹಾಗೂ  ಅಲೈಡ್ ಹೆಲ್ತ್ ಸೈನ್ಸ್ಸ್ ಕಾಲೇಜುಗಳ 2024-25 ಸಾಲಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಭಿವಿನ್ಯಾಸ ಕರ‍್ಯಕ್ರಮದಲ್ಲಿ ಮಾತನಾಡಿದರು.


ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯ.

ಶೈಕ್ಷಣಿಕ ಜೀವನದಲ್ಲಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ಮೂರು ರೀತಿಯ ಒತ್ತಡಗಳನ್ನು ಅನುಭವಿಸುತ್ತಾರೆ. ಮೊದಲನೆಯದಾಗಿ ಶೈಕ್ಷಣಿಕ ಒತ್ತಡ, ಎರಡನೆಯದು ಕಾಲೇಜಿನ ನಿಯಮ, ನಿಬಂಧನೆಗಳನ್ನು ಪಾಲಿಸುವ ಒತ್ತಡ, ಮೂರನೆಯದು, ಸಹಪಾಠಿಗಳ ಜೊತೆಗೆ ಹೊಂದಿಕೊಳ್ಳುವ ಒತ್ತಡ. ಈ ರೀತಿಯ ಒತ್ತಡಗಳು ಅಗತ್ಯ. ಆದರೆ ಇವುಗಳ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವ ಕೌಶಲವನ್ನು ಬೆಳೆಸಿಕೊಳ್ಳಬೇಕು ಎಂದರು. 


ವ್ಯಕ್ತ ಪಡಿಸದ ಸಮಸ್ಯೆ ದ್ವಿಗುಣಗೊಳ್ಳುತ್ತದೆ

ವಿದ್ಯಾರ್ಥಿಗಳು ತಮ್ಮ ಪ್ರಯಾಣದ ಆರಂಭದಲ್ಲಿ ವಿವಿಧ ಸವಾಲುಗಳನ್ನು ಎದುರಿಸುತ್ತಾರೆ. ಇದು ಮನೆಗೀಳಾಗಿರಬಹುದು, ಮೊಬೈಲ್ ಫೋನ್‌ಗಳ ವ್ಯಸನವಾಗಿರಬಹುದು ಅಥವಾ ಕೆಲವು ದುಷ್ಚಟಗಳಲ್ಲಿ ತೊಡಗಿರಬಹುದು. ತಮ್ಮ ಸಮಸ್ಯೆಗಳನ್ನು ಪೋಷಕರು, ಸ್ನೇಹಿತರು ಮತ್ತು ಶಿಕ್ಷಕರೊಂದಿಗೆ ಹಂಚಿಕೊಳ್ಳಬೇಕು. ಹಂಚಿದ ಸಮಸ್ಯೆ ಅರ್ಧ ಪರಿಹಾರವಾದಂತಾದರೆ,  ವ್ಯಕ್ತ ಪಡಿಸದ ಸಮಸ್ಯೆ ದ್ವಿಗುಣಗೊಳ್ಳುತ್ತಾ ಸಾಗುತ್ತದೆ ಎಂದರು.  


ತಾತ್ಕಾಲಿಕ ಸಮಸ್ಯೆಗೆ ಆತ್ಮಹತ್ಯೆ ಶಾಶ್ವತ ಪರಿಹಾರವೆಂದು ಪರಿಗಣಿಸದಿರಿ 

ಒತ್ತಡ, ವೈಫಲ್ಯವನ್ನು ಒಪ್ಪಿಕೊಳ್ಳುವುದು ಮತ್ತು ಒಬ್ಬರ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗದಿರು ವುದು ಸಹಜ ವಿದ್ಯಮಾನವೆಂದು ಪರಿಗಣಿಸಬೇಕು.  ವಿದ್ಯಾರ್ಥಿಗಳು ತಮ್ಮ ತಾತ್ಕಾಲಿಕ ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೆ ಶಾಶ್ವತ ಪರಿಹಾರವೆಂದು ಪರಿಗಣಿಸುವುದು ದೊಡ್ಡ ತಪ್ಪು ಎಂದು ಕಿವಿಮಾತು ಹೇಳಿದರು


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಆರೋಗ್ಯ ಕೇಂದ್ರದ ಸ್ತ್ರೀರೋಗ ತಜ್ಞೆ ಡಾ.ಹನ್ನಾ ಶೆಟ್ಟಿ, ಫಿಸಿಯೋಥೆರಪಿ ಮತ್ತು ಅಲೈಡ್ ಹೆಲ್ತ್ ಸೈನ್ಸ್ಸ್ ಕ್ಷೇತ್ರವು ಸಮಾಜಕ್ಕೆ ಸೇವೆ ಒದಗಿಸಲು ಇರುವ ಉತ್ತಮ ಅವಕಾಶ.   ಆಳ್ವಾಸ್‌ನಲ್ಲಿ ಲಭಿಸುವ ಉತ್ತಮ ಮಾರ್ಗದರ್ಶನ ಹಾಗೂ ಸೌಲಭ್ಯಗಳನ್ನು  ಬಳಸಿಕೊಂಡು  ವೃತ್ತಿಪರತೆಯನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಆಳ್ವಾಸ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲೆ ಡಾ.ಶಮಾ ಶೆಟ್ಟಿ,  ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ಸ್‌ನ ಪ್ರಾಂಶುಪಾಲ ಡಾ.ಶಂಕರ್ ಶೆಟ್ಟಿ, ಆಡಳಿತಾಧಿಕಾರಿ ಹೇಮಂತ್  ಇದ್ದರು.


ಉಪಪ್ರಾಂಶುಪಾಲೆ ಶ್ರೀವನಿತಾ ಟಿವೈ ಸ್ವಾಗತಿಸಿ, ಬುಶ್ರಾ ನಿರೂಪಿಸಿ, ಹಾಸ್ಪಿಟಲ್ ಅಡ್ಮಿಸ್ಟ್ರೇಷನ್ ವಿಭಾಗದ ಮುಖ್ಯಸ್ಥ ಆದರ್ಶ ಹೆಗ್ಡೆ ವಂದಿಸಿ, ಸುದೇಶ್ ಕಾರ್ಯಕ್ರಮದಲ್ಲಿ ಸಹಕರಿಸಿದರು.  



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top