ಅ.12ರಿಂದ 15ರ ವರೆಗೆ ಬೆಳಗಿನ ಜಾವ ಪೂರ್ವ ಕ್ಷಿತಿಜದಲ್ಲಿ ಬರಿಗಣ್ಣಿಗೂ ಗೋಚರ
ಬಿಳಿ ವೃತ್ತದೊಳಗೆ ಗುರುತಿಸಿರುವುದು ಧೂಮಕೇತು. ಪಕ್ಕದಲ್ಲಿ ಅದನ್ನೇ ಝೂಮ್ ಮಾಡಿ ತೋರಿಸಲಾಗಿದೆ.
ಈ ನವರಾತ್ರಿಯ ಸಮಯ, ಒಂದು ಅತಿಥಿ ಭೂಮಿಗೆ ಭೇಟಿ ನೀಡುತ್ತಿದೆ. C/2023 A3 ಹೆಸರಿನಿಂದ ಗುರುತಿಸಲ್ಪಟ್ಟ ಧೂಮಕೇತು - ಒಂದು ಧೂಳು ಹಾಗು ಹಿಮ-ಕಲ್ಲಿನ ಉಂಡೆಯು, ಸೌರಮಂಡಲದ ಅಂಚಿನಿಂದ ಸುಮಾರು ಲಕ್ಷ ವರ್ಷಗಳ ಹಿಂದೆ ತನ್ನ ಸ್ಥಾನದಿಂದ, ಸೂರ್ಯನ ಸುತ್ತ ಒಂದು ಕಕ್ಷೆಯಲ್ಲಿ ಹೊರಟಿತ್ತು. ಇದನ್ನು ಹಿಂದಿನ ವರ್ಷ ಚೈನಾದ ತ್ಸುಚಿನ್ಶ್ಯಾನ್ ಒಬ್ಸರ್ವೆಟರಿ ಮತ್ತು ದಕ್ಷಿಣ ಆಫ್ರಿಕಾದ ಅಟ್ಲಾಸ್ ಒಬ್ಸರ್ವೆಟರಿಯ ಖಗೋಳಶಾಸ್ತ್ರಜ್ಞರು ಜನವರಿ 9, 2023 ರಂದು ಸೆರೆಹಿಡಿದರು. C/2023 A3 ದಲ್ಲಿ ‘ಸಿ’ ಎಂದರೆ ಇದು ಆವರ್ತಕವಲ್ಲದ ಧೂಮಕೇತು, ‘ಎ’ ಎಂಬುವುದು, ಇದು ಜನವರಿ ತಿಂಗಳ ಮೊದಲಾರ್ಧ ದಲ್ಲಿ ಮೊದಲನೆಯಬಾರಿ ವೀಕ್ಷಿಸಿರುವ ‘3’ ನೆಯ ಧೂಮಕೇತು.
ಹವ್ಯಾಸಿ ಖಗೋಳ ಆಸಕ್ತರು ಈ ಧೂಮಕೇತುವನ್ನು ಅಕ್ಟೋಬರ್ ತಿಂಗಳ ಹಲವಾರು ದಿನಗಳಲ್ಲಿ ನೋಡಿ ಆನಂದಿಸಬಹುದು.
ಆವರ್ತಕವಲ್ಲದ ಧೂಮಕೇತುಗಳೆಲ್ಲ ಸೌರಮಂಡಲ ಹೊರಭಾಗದಲ್ಲಿ ಊರ್ಟ್ ಕ್ಲೌಡ್ ನಿಂದ ಬರುತ್ತವೆ. ಈ ಊರ್ಟ್ ಕ್ಲೌಡ್ ಸೂರ್ಯನಿಂದ ಸುಮಾರು 2000 ಖಗೋಳಮಾನ (1 ಖಗೋಳ ಮಾನ = 150 ಮಿಲಿಯ ಕಿಲೋಮೀಟರು: ಭೂಮಿ-ಸೂರ್ಯನ ಮಧ್ಯದ ಅಂತರ) ದಿಂದ ಪ್ರಾರಂಭವಾಗಿ ಸುಮಾರು 2 ಲಕ್ಷ ಖಗೋಳಮಾನದ ವರೆಗೆ ವಿಸ್ತರಿಸುತ್ತದೆ. ಇಲ್ಲಿ ಕೋಟ್ಯಾಂತರ ಹಿಮ-ಕಲ್ಲಿನ ಉಂಡೆಗಳು ಉಂಟಾಗಿವೆ. C/2023 A3 ಕೂಡ ಈ ಸ್ಥಳದಿಂದಲೇ ಹೊರಟು ಸೂರ್ಯನೆಡೆ ಸಾಗಿದೆ.
ಈ ಧೂಮಕೇತುವು ಸೂರ್ಯನ ಸುತ್ತ ಒಂದು ಸುಧೀರ್ಘವೃತ್ತಾಕಾರದ ಕಕ್ಷೆಯಲ್ಲಿ ಹಾದು ಹೋಗುತ್ತಿದೆ. ಈ ಕಕ್ಷೆಯಲ್ಲಿ ಸೂರ್ಯನಿಗೆ ಅತೀ ಸಮೀಪವಾಗಿ ಸೆಪ್ಟೆಂಬರ್ 27, 2024 ರಂದು 5.8 ಕೋಟಿ ಕಿ.ಮೀ. ದೂರದಲ್ಲಿತ್ತು. ಈ ಕಕ್ಷೆಯಲ್ಲಿ ಸೂರ್ಯನಿಗೆ ಅತೀ ಸಮೀಪಕ್ಕೆ ಬಂದು, ತನ್ನ ಕಕ್ಷೆಯಲ್ಲಿ ಹಾದುಹೋಗುತ್ತಾ ಭೂಮಿಗೆ ಸಮೀಪವಾಗಿ ಈ ಧೂಮಕೇತುವು ಅಕ್ಟೋಬರ್ 12 ರಂದು ಸುಮಾರು 70,67,200ಕಿ. ಮೀ. ದೂರದಲ್ಲಿ, 80.5 ಕಿ. ಮೀ. ಪ್ರತಿ ಸೆಕೆಂಡ್ ರಷ್ಟು ವೇಗದಲ್ಲಿ ಹಾದು ಹೋಗುತ್ತದೆ. ಈ ಸಮಯವು ಈ ಧೂಮಕೇತು ಗೋಚರಿಸಲು ಪ್ರಕಾಶಮಾನವಾಗಿರುತ್ತದೆ.
ಪ್ರಸ್ತುತ ಈ ಧೂಮಕೇತುವು, ಮುಂಜಾನೆ 5 ರಿಂದ 5.45ರ ನಡುವೆ ಪೂರ್ವ ಕ್ಷಿತಿಜದ ಕಡೆ ಗೋಚರಿಸುತ್ತದೆ. ಮುಂಜಾನೆ ಪೂರ್ವದಲ್ಲಿ ಕ್ಷಿತಿಜದಿಂದ ಸುಮಾರು 25 ಡಿಗ್ರಿ ಎತ್ತರದಲ್ಲಿ ಸಿಂಹ ರಾಶಿಯ ಮಖಾ ನಕ್ಷತ್ರ (ರೆಗ್ಯುಲಸ್) ಹಾಗೂ ಅಜಗರ ನಕ್ಷತ್ರಪುಂಜದ ಅಲ್ಫಾರ್ಡ್ ನಕ್ಷತ್ರಗಳು ಗೋಚರಿಸುತ್ತಿವೆ. ನಮ್ಮ ಕೈಯನ್ನು ನೇರವಾಗಿ, ಕಿರುಬೆರಳು ಹಾಗೂ ಹೆಬ್ಬೆರಳನ್ನು ಚಾಚಿ ಹಿಡಿದುಕೊಂಡರೆ, ಇವೆರಡರ ಮಧ್ಯಂತರ 25 ಡಿಗ್ರಿ ಆಗಿರುತ್ತದೆ. ಹಾಗಾಗಿ, ಈ ಎರಡು ನಕ್ಷತ್ರಗಳನ್ನು ಕ್ಷಿತಿಜದಿಂದ 25 ಡಿಗ್ರಿ ದೂರದಲ್ಲಿ ಗುರುತಿಸ ಬಹುದು. ಈ ಎರಡು ನಕ್ಷತ್ರಗಳನ್ನು ಉಪಯೋಗಿಸಿ ಕ್ಷಿತಿಜದ ಕಡೆ ಸಮಬಾಹು ತ್ರಿಕೋನವನ್ನು ಕಲ್ಪಿಸಿದರೆ, ಆ ತ್ರಿಕೋನದ ಮೂರನೆಯ ಶೃಂಗ ಇರುವಲ್ಲಿ ಈ ಧೂಮಕೇತುವನ್ನು ಗುರುತಿಸಬಹುದು. ಈ ಧೂಮಕೇತುವು ಅಕ್ಟೋಬರ್ 7ರ ವರೆಗೆ ಮ್ಯಾಗ್ನಿಟ್ಯೂಡ್ 2.0 ರಷ್ಟು ಪ್ರಮಾಣದಲ್ಲಿ ಗೋಚರಿಸುತ್ತದೆ (ಮ್ಯಾಗ್ನಿಟ್ಯೂಡ್ ಕಿರಿದಾದಷ್ಟು ಕಾಯವು ಹೆಚ್ಚು ಪ್ರಕಾಶಮಾನವಾಗಿರುತ್ತದೆ). ಬರಿಗಣ್ಣಿನಲ್ಲೂ ನೋಡಲು ಸಾಧ್ಯ.
ಈ ಅವಧಿಯಲ್ಲಿ ಈ ಧೂಮಕೇತುವನ್ನು ಗೋಚರಿಸಲು ಸಾಧ್ಯವಾಗದಿದ್ದರೆ, ಅಕ್ಟೋಬರ್ 15 ರಿಂದ 30ರ ವರೆಗೆ, ಸಂಜೆ ಆಕಾಶದಲ್ಲಿ ಶುಕ್ರ ಗ್ರಹದ ಬಲಬದಿಯಲ್ಲಿ (ಉತ್ತರ ದಿಕ್ಕಿನಲ್ಲಿ) ಗುರುತಿಸಬಹುದು. ದುರ್ಬೀನು ಅಥವಾ ಸಣ್ಣ ದೂರದರ್ಶಕದ ಮೂಲಕ ಈ ಧೂಮಕೇತುವನ್ನು ಈ ಅವಧಿಯಲ್ಲಿ ನೋಡಿ ಆನಂದಿಸಬಹುದು. ದೀರ್ಘ ಮಾನ್ಯತೆಯ ಛಾಯಾಚಿತ್ರಗಳು ಕೂಡ ಇದನ್ನು ಬಹಿರಂಗಪಡಿಸುತ್ತವೆ. ಈ ಧೂಮಕೇತುವನ್ನು ವೀಕ್ಷಿಸಲು ನಮಗೆಲ್ಲರಿಗೂ ಶುಭ್ರಾಕಾಶವು ಲಭಿಸಲಿ ಎಂದು ಆಶಿಸೋಣ.
- ಅತುಲ್ ಭಟ್,
ಹವ್ಯಾಸಿ ಖಗೋಳವೀಕ್ಷಕ ಹಾಗೂ ರಿಸರ್ಚ್ ಸ್ಕಾಲರ್, ಮಣಿಪಾಲ್ ಸೆಂಟರ್ ಫಾರ್ ನ್ಯಾಚುರಲ್ ಸೈನ್ಸಸ್, MAHE
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ