Witty: ಏಕಾಕಿ ಕಾಕಿ ಗಿಡದ ಪ್ರಾರ್ಥನೆ ಪರಿಣಾಮ, ಮೇಲುಕೊಪ್ಪದಲ್ಲಿ ನಿತ್ಯ ಮಳೆ...!

Upayuktha
0


"ಸ್ವಾಮಿ ದಿನಾ ಯಾಕೆ ಮಳೆ ಬರ್ತಾ ಇದೆ? ಹೀಗೆ ಮಳೆ ಬರ್ತಾ ಇದ್ರೆ ಅಡಿಕೆ ತೋಟದ ಕತೆ ಏನಾಗಬೇಕು? ಮುಂದೆ ಗತಿ ಏನು?" ಆಗಿದ್ದಾಗಲಿ ಅಂತ ಮೇಲುಕೊಪ್ಪ ಸಂಖ್ಯಾ ಜ್ಯೋತಿಷಿ ಅನಾರ್ಯವರ್ದಿಯವರಿಗೆ ಮೂರು ಪ್ರಶ್ನೆಗಳಿರುವ ಒಂದು ಕಾಂಬೋ (combo) ಪ್ರಶ್ನೆ ಕೇಳಿದೆ!


"ಒಂದು ಸಂಖ್ಯೆ ಹೇಳು" ಅಂದ್ರು ಗಂಭೀರವಾಗಿ.


ನಾನು ಇವತ್ತಿನ ತಾರೀಖನ್ನು ನೆನಸಿಕೊಂಡು ಚತುರ್ದಶ ಅಂದೆ!

"ಬೇರೆ ಯಾವ ಸಂಖ್ಯೆಯೂ ಸಿಗಲಿಲ್ವಾ?* ಅಂದ್ರು, ಅತಿ ಗಂಭೀರವಾಗಿ.


"ಗುರುಗಳೆ 14 ಒಳ್ಳೆ ಸಂಖ್ಯೆ ಅಲ್ವಾ? ಒಂದು ನಾಲ್ಕು ಕೂಡಿದರೆ 5 ಆಗುತ್ತೆ. ಪಂಚಮಂ ಕಾರ್ಯ ಸಿದ್ದಿ ಅಂತಾರೆ? ಸರಿ ಅಲ್ವಾ?" ಎಂದೆ.


"ನಿನ್ತಲೆ.  ಅನಿಷ್ಟ" ಅಂದ್ರು. ಅನಿಷ್ಟ ಅಂದಿದ್ದು ಸಂಖ್ಯೆಗೋ ನನಗೋ ಅಂತ ನಾನು ಮತ್ತೆ ಕೇಳುವುದಕ್ಕೆ ಹೋಗಲಿಲ್ಲ!!.


"ಇನ್ನೂ ಐದು ದಿನಗಳು ಮಳೆ ಹೀಗೆ ಇರುತ್ತೆ. ಆರೇಂಜ್ ಅಲರ್ಟ್ ಮುಂದುವರೆಯುತ್ತೆ "ಹವಾಮಾನ ವರದಿಯನ್ನು ಟಿವಿ 9 ನಿರೂಪಕರು ಹೇಳಿದ ಹಾಗೆ ಹೇಳಿದರು ಅನಾರ್ಯವರ್ದಿ.


"ಮಳೆಗೆ ಕಾರಣ?" 

"ಅನಿಷ್ಟ ಸಂಖ್ಯೆಗಳು ಬಾಯಲ್ಲಿ ಬರೋದರಿಂದ."

("ಬಾಯಲ್ಲಿ ಬಂದಿದ್ದಲ್ಲ, ಕ್ಯಾಲೆಂಡರ್‌ನಲ್ಲಿ ಬಂದಿದ್ದು". ಮನಸ್ಸಿನ ಬ್ರಾಕೇಟ್‌ನಲ್ಲಿ ಅಂದುಕೊಂಡೆ ತುಟಿಗಳ ಆವರಣ ಚಿಹ್ನೆ ತೆಗೆದು ಹೇಳೋದಕ್ಕೆ ಹೋಗಲಿಲ್ಲ!)


ಅವರದೇ ತೋಟದ ಎಲೆ ಚುಕ್ಕಿ ರೋಗದ ಅಡಿಕೆ ಮರದಿಂದ ಒಡೆದ ಅಡಿಕೆ ಕಾಯಿಗಳು ಒಂದೊಂದೆ ಬೀಳ್ತಾ ಇರುವ ಶಬ್ದದ ಮಧ್ಯೆ ಆತಂಕದಲ್ಲೇ ಮತ್ತೊಂದು ಪ್ರಶ್ನೆ ಕೇಳಿದೆ "ಮಳೆ ನಿಲ್ಲಿಸಲು ಪರಿಹಾರ ಏನೂ ಇಲ್ವಾ ಗುರೂಜಿ?"


"ಇದೆ." 

ಸ್ವರ ಆಪ್ತಮಿತ್ರ ಸಿನಿಮಾದ ಅವಿನಾಶ್ ಸ್ವರ ಇದ್ದ ಹಾಗಿತ್ತು.


"ಏನು ಪರಿಹಾರ ಗುರುಗಳೆ!?


"ನಿನ್ನ ಹಂಚಿನ ಮನೆಯ ವಾಯುವ್ಯ ಮೂಲೆಯ ಕೋರೆ ಹಂಚಿನ ಮೇಲೆ ಒಂದು ಚೊಂಬು ಬಿಸೀ ಕುದಿಯುವ ನೀರನ್ನು ಚಿತ್ತಾ ಮಳೆಯ ಮಧ್ಯೆ, ಬಿಸಿಲು ಜೋರಿರುವ ಸಮಯ ನೋಡಿ ಹಾಕು.  ಐದು ದಿನ ಇದೇ ರೀತಿ ಬಿಸಿ ನೀರು ಹಾಕು. ಮಳೆ ಕಮ್ಮಿ ಆಗಲಿಲ್ಲ ಅಂದ್ರೆ ಬಂದು ಭೇಟಿ ಆಗು.  ಬೇರೆ ದಾರಿ ಹುಡುಕುವ" ಆ್ಯಂಟಿಬಯಾಟಿಕ್ ಮಾತ್ರೆ ಕೊಟ್ಟು ಹೇಳುವ ವೈದ್ಯರ ರೀತಿ ಹೇಳಿದ ಅನಾರ್ಯವರ್ದಿ ಕವಡೇಗಳನ್ನು ಡಬ್ಬಿಗೆ ತುಂಬಿಸಿ, ತಮ್ಮ RCC  ಮನೆಯ ಒಳಗೆ ಹೋದರು.


ಹೊರಡಲು ಎದ್ದು ನಿಂತ ನನಗೆ, ಅವರ ಟೇಬಲ್ ಮೇಲೆ ಮಡಿಚಿಟ್ಟ ಇವತ್ತಿನ ಪೇಪರ್ ಕಾಣಿಸಿತು. ಒಮ್ಮೆ ಕಣ್ಣು ಹಾಯಿಸಿದೆ. 'ರಾಜ್ಯಾದ್ಯಂತ ಇನ್ನೂ ಐದು ದಿನಗಳು ಸಾಧಾರಣ ಮಳೆ ಸಾಧ್ಯತೆ ಇದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ ಜಿಲ್ಲೆಗಳಲ್ಲಿ ಸಂಜೆಯ ವೇಳೆ ಅಥವಾ ರಾತ್ರಿ ಬಿರುಸಿನ ಮಳೆ ಸಾಧ್ಯತೆ ಇದ್ದು ಆರೇಂಜ್ ಅಲಾರ್ಟ್ ಘೋಷಣೆ ಮಾಡಲಾಗಿದೆ' ಎಂದಿತ್ತು.  


ಹವಾಮಾನ ವರದಿಯನ್ನು ಗುರುಗಳು ಕೃತಿಚೌರ್ಯ ಮಾಡಿದಾರಾ? 

{ಮನಸ್ಸಿನ ಬ್ರಾಕೇಟ್‌ನಲ್ಲಿ ಅಂದುಕೊಂಡೆ. ಯಾಕೋ ಆವರಣ ಚಿಹ್ನೆಯ ತುಟಿಗಳು, ಸಣ್ಣ ನಗುವಿನೊಂದಿಗೆ ಪುಷ್ಪಾವರಣ ಚಿಹ್ನೆ ಆಯಿತು!!}


ಪೇಪರ್ ಮಡಿಚಿ ಅಲ್ಲೇ ಇಟ್ಟು ಮನೆಗೆ ಬಂದೆ.


**


"ಏನಂದ್ರು ನಿಮ್ಮ ಸಂಖ್ಯಾ ಜ್ಯೋತಿಷಿಗಳು?" 

ಎಂದು ಮನೆಯವಳು ಕೇಳಿದಾಗ, ನಾನು "ಚೊಂಬು ಬಿಸ್ನೀ.." ಅನ್ನುವಷ್ಟರಲ್ಲಿ, "ಏನು ಚೊಂಬಂತಾ?  ನಂಗೊತ್ತಿತ್ತು. ಈ ವರ್ಷ ಹೀಗೆ ದಿನಾ ಮಳೆ ಬಂದ್ರೆ, ಅಡಿಕೆಯೂ ಉಳಿಯೊಲ್ಲ, ಭತ್ತವೂ ಉಳಿಯೊಲ್ಲ. ಕಾಂಗ್ರೆಸ್ ಜಾಹೀರಾತಿನ 'ಚೊಂಬೇ' ಗತಿ. ಹೋಗಲಿ ಬಿಡಿ, ಆಮೇಲೆ ನಾಲ್ಕು ಕಾಕಿ ಕುಡಿ, ಜೀರಿ ಮೆಣಸು ತನ್ನಿ, ತಂಬುಳಿ ಮಾಡ್ತಿನಿ" ಅಂದ್ಳು!!


"ಚೊಂಬುಳಿಯಾ!!?"


"ನಿಮ್ತಲೆ. ಒಂದ್ಸಲ ಪ್ರಶಮನಿಗೆ ಹೋಗಿ ಕಿವಿ ತೋರಿಸಿಕೊಂಡು ಬನ್ನಿ" ಅಂತ ಹೇಳಿ ಒಳಗೆ ಹೋದಳು.


**


ಸಂಖ್ಯಾ ಜ್ಯೋತಿಷಿಗಳು ಅದ್ಯಾಕೆ ಹಂಚಿನ ಮಾಡಿನ ವಾಯುವ್ಯ ದಿಕ್ಕಿಗೆ ಕುದಿಯುವ ನೀರು ಹಾಕಲು ಹೇಳಿದರು? ಎಂದು ಕುತೂಹಲದಿಂದ ಹಂಚಿನ ಮಾಡಿನ ವಾಯುವ್ಯ ಮೂಲೆಯ ಮೂಲೆ ಹಂಚು ನೋಡಿದರೆ.... ನೋಡಿದರೆ... ಆಶ್ಚರ್ಯ! 


ಅಲ್ಲೊಂದು ಕಾಕಿ ಗಿಡ ಸೊಂಪಾಗಿ ಬೆಳೆದು ನಿಂತಿದೆ!


ಅದರ ಮೇಲೆ ಬಿಸ್ನೀರು ಹಾ...ಕ...ಬೇ...ಕೂ...


ಅರೆ, ಅನಾರ್ಯವರ್ದಿಯವರಿಗೆ ದಿವ್ಯಜ್ಞಾನ ನಿಜವಾಗಿಯೂ ಇದೆಯಾ? ಅಥವಾ ಮೊನ್ನೆ ಮೊನ್ನೆ ವಾಕಿಂಗ್ ಬಂದು ಆರು ನಿಮಿಷ (ಅವರು ಪ್ರತಿಯೊಂದಕ್ಕೂ ಸರಿ ಸಂಖ್ಯೆಯ ನಿಯಮ ಅಳವಡಿಸಿಕೊಂಡು, ಪಾಲನೆ ಮಾಡುವವರು) ಕೂತೆದ್ದು ಹೋದ ಅನಾರ್ಯವರ್ದಿಯವರು ವಾಯುವ್ಯ ಮೂಲೆ ಹಂಚಿನ ಕಾಕಿ ಗಿಡ ಗಮನಿಸಿ ಹೋಗಿದ್ರಾ!?  


ಗೊತ್ತಿಲ್ಲ.


**


ಅಂದರೆ ಭಗವಂತ ಆ ಕಾಕಿ ಗಿಡ ಸಾಯದಿರಲಿ ಎಂದು ದಿನಾ ಮಳೆ ಹುಯ್ಯುವಂತೆ ಮಾಡ್ತಾ ಇದ್ದಾನಾ? ಬಿಸಿಲು ಹೊತ್ತಲಲ್ಲಿ ಬಿಸ್ನೀರು ಹಾಕಿ ಅಂತ ಅನಾರ್ಯವರ್ದಿ ಹೇಳಿದ್ದು ಈ ಗಿಡ ಇರುವ ಜಾಗಕ್ಕಾ? 


ಆ ಕಾಕಿ ಗಿಡ ಸಾಯಲಿ ಎಂದಾ!?


ಬಿಸಿಲಿನಲ್ಲಿ ಮೂಲೆ ಹಂಚಿನ ಮೇಲಿರುವ ಕಾಕಿ ಗಿಡವೇ ಭಗವಂತನನ್ನು ನೀರಿಗಾಗಿ ಪ್ರಾರ್ಥಿಸಿ ಪ್ರಾರ್ಥನೆ ಮಾಡ್ತಾ ಇದೆಯಾ?  


ಕಾಕಿ ಗಿಡದ ಪ್ರಾರ್ಥನೆಯ ಪರಿಣಾಮ ಮೇಲುಕೊಪ್ಪದಲ್ಲಿ ನಿತ್ಯ ಮಳೆ ಬರ್ತಾ ಇದೆಯಾ?  


ಕಾದ ಹಂಚಿನ ಮೇಲೆ ಬದುಕಿರುವ ಈ ಗಿಡ ಸಾಯಿಸಿದರೆ ಮಳೆ ನಿಲ್ಲುತ್ತಾ? ಭಗವಂತ ಮಳೆ ನೀರು ಹರಿಸಿ ಬೆಳೆಸಿದ ಕಾಕಿ ಗಿಡವನ್ನು ನಾನು ಅನ್ಯಾವಾಗಿ ಸಾಯಿಸುವುದಾ?  


ಛೇ ಬೇಡ. ಅ ಗಿಡದ ಮೇಲೆ ಬಿಸ್ನೀರು ಹಾಕುವುದು ಬೇಡ. ಭಗವಂತ ಕಾಕಿ ಗಿಡಕ್ಕೆ ದಾರಿ ನಿರ್ಮಿಸಿದ ಹಾಗೆ ನಮ್ಮ ಅಡಿಕೆ ತೋಟಕ್ಕೂ, 'ಬಿಸಿಲಿಗೆ ಕಾಯುತ್ತಿರುವ ನಮಗೂ ಪರ್ಯಾಯ ದಾರಿ ತೋರಿಸಲಿಕ್ಕಿಲ್ವಾ!? ಅಂತೆಲ್ಲ ಯೋಚಿಸುತ್ತಾ ಒಳ ಬಂದರೆ, ಟಿವಿ ಮ್ಯೂಸಿಕ್ ಚಾನಲ್‌ನಲ್ಲಿ ಅಪೂರೂಪಕ್ಕೆ ಒಂದು ಒಳ್ಳೆ ಹಾಡು ಬರ್ತಾ ಇತ್ತು.


ಬೆಟ್ಟದಾ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ

ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ

ಪುಟ್ಟಿಸಿದ ದೇವ ತಾ ಹೊಣೆಗಾರನಾಗಿರಲು

ಗಟ್ಯಾಗೆ ರಕ್ಷಿಪನು ಇದಕೆ ಸಂಶಯವಿಲ್ಲ.


ಪೂರ್ತಿ ಹಾಡು ಮುಗಿದ ಮೇಲೆ, ತೋಟದ ಎಲೆ ಚುಕ್ಕಿ ಅಡಿಕೆ ಮರದ ಬೆನ್ತಟ್ಟಿ "ಏನಾಗಲ್ಲ. ಬಿಸಿಲು ಬಂದ್ರೆ ಎಲ್ಲ ಸರಿ ಆಗುತ್ತೆ" ಅಂತ ಭರವಸೆ ಕೊಟ್ಟು, ಬುಡದಲ್ಲಿದ್ದ ಕಾಕಿ ಗಿಡದ ಕುಡಿಯನ್ನು ಗಿಡದ ಅನುಮತಿ ಪಡೆದು, ಕುಯ್ದು, ಮನೆಗೆ ತಂದು ಕೊಟ್ಟೆ!!.


**

ಕಾಕಿ ಸೊಪ್ಪಿನ ತಂಬುಳಿ ಇವತ್ತು ಮತ್ತಷ್ಟು ರುಚಿ ಆಗಿದೆ ಅನಿಸಿತು.  

ಏಕಾಕಿ ಆಗಿ ಕುಳಿತು ಇಷ್ಟು ಬರೆಯುವ ಹಾಗೆ ಮಾಡಿದ ಮೂಲೆ ಹಂಚಿನ ಕಾಕಿ ಗಿಡಕ್ಕೆ ಹೇಳಿದೆ "ಏ ಕಾಕಿ ಗಿಡವೆ, ನೀನು ಏಕಾಕಿ ಅಲ್ಲ."


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top