ನವರಾತ್ರಿ ವಿಶೇಷ: ಮಂಗಳೂರಿನ ಶ್ರೀ ಮಂಗಳಾದೇವಿ

Upayuktha
0


ರ್ನಾಟಕದ ದೇವಿ ದೇವಾಲಯಗಳಲ್ಲಿ ಮಂಗಳೂರಿನ ಮಂಗಳಾದೇವಿಯ ದೇವಾಲಯವು ಕೂಡ ಪ್ರಸಿದ್ಧ ಹಾಗೂ ಪುರಾತನವಾದುದು. ಮಂಗಳಾದೇವಿಯು ಪಾರ್ವತಿಯ ಅವತಾರವೆಂಬ ನಂಬಿಕೆ ಇದೆ. ಈ ದೇವಾಲಯವನ್ನು  ವಿಷ್ಣುವಿನ ಅವತಾರಗಳಲ್ಲಿ ಒಂದಾದ ಪರಶುರಾಮನು ಸ್ಥಾಪಿಸಿದನೆಂದು ನಂತರದಲ್ಲಿ 9ನೇ ಶತಮಾದಲ್ಲಿ ತುಳುನಾಡಿನ ರಾಜನಾದ ಕುಂದವರ್ಮನು ದೇವಿಯ ದೇವಾಲಯವನ್ನು ಸುಂದರವಾಗಿ ಪುನಃ ಕಟ್ಟಿದನೆಂದು ಹೇಳಲಾಗುತ್ತದೆ.


ಮಂಗಳೂರು ಮಂಗಳಾದೇವಿಯ ದೇವಾಲಯವನ್ನು ನಿರ್ಮಿಸಿದ ಹಿನ್ನೆಲೆ:  

ಅಲೂಪ ಸಾಮ್ರಾಜ್ಯದ ರಾಜ ಕುಂದವರ್ಮನು ರಾಜನಾಗಿದ್ದನು. ಆಗ ನೇಪಾಳದಿಂದ ನಾಥ ಪದ್ಧತಿಯ ಪ್ರವರ್ತಕರಾದ ಗೋರಖನಾಥ ಮತ್ತು ಮತ್ಸೇಂದ್ರನಾಥ ಎಂಬ ಇಬ್ಬರು ಸನ್ಯಾಸಿಗಳು ನೇತ್ರಾವತಿ ನದಿಯನ್ನು ದಾಟಿ ಮಂಗಳೂರನ್ನು ತಲುಪಿದರು. ಈ ಸ್ಥಳವು ಕಪಿಲ ಮಹರ್ಷಿಗಳ ಸ್ಥಳವಾಗಿದ್ದಿತು. ತನ್ನ ರಾಜ್ಯಕ್ಕೆ ಬಂದ ಈ ಸನ್ಯಾಸಿಗಳನ್ನು ರಾಜ ಕುಂದವರ್ಮನನು ಭೇಟಿ ಮಾಡಿ ಆಶೀರ್ವಾದ ಪಡೆಯಲು ಇಚ್ಛಿಸಿದಾಗ ಆ ಸನ್ಯಾಸಿಗಳು ರಾಜ್ಯದಲ್ಲಿ ಮಂಗಳಾದೇವಿಯ ದೇವಾಲಯವನ್ನು ನಿರ್ಮಿಸಿದರೆ ಮಂಗಳವಾಗುತ್ತದೆ ಎಂದು ಹೇಳಿದರು. ಕುಂದವರ್ಮನು ತನ್ನ ತಾಯಿಯಿಂದ ಕೇಳಿದ ಅಂದಾಸುರ ಮತ್ತು ವಿಹಾಸಿನಿ ಮತ್ತು ಪರಶುರಾಮರ ಕಥೆಯನ್ನು ನಾಥ ಸಾಧುಗಳು ಹೇಳಿದರು. ಸನ್ಯಾಸಿಗಳು ದೇವಾಲಯಕ್ಕೆಂದು ತೋರಿಸಿದ ಜಾಗವನ್ನು ಅಗೆದಾಗ ಆ ಸ್ಥಳದಲ್ಲಿ ಅವನಿಗೆ ಲಿಂಗ ಧಾರಾಪಾತ್ರ ಮತ್ತು ನಾಗರಾಜನು ದೊರೆತರು. ಆ ನಾಗಾ ಸಾಧುಗಳ ಸಲಹೆ ಸೂಚನೆಯಂತೆ ರಾಜನು ಮಂಗಳಾದೇವಿಗೆ ಭವ್ಯವಾದ ದೇವಾಲಯವನ್ನು ನಿರ್ಮಿಸಿದನು. 


ಮಂಗಳಾದೇವಿಯ ದೇವಾಲಯವು ಕೇರಳ ಶಿಲ್ಪಕಲೆಯ ರೀತಿಯಲ್ಲಿ ಕಟ್ಟಲಾದ ದೇವಾಲಯವಾಗಿದೆ. ದೇವಾಲಯಕ್ಕೆ ಎರಡು ಮಹಡಿ ಎತ್ತರದ ಗೋಪುರವಿದೆ. ಡಮರು ಕೂಡ ಇದೆ. ಧ್ವಜ ಸ್ಥಂಬ ಕೂಡ ಇದೆ. ದೇವಾಲಯದ ಗರ್ಭಗುಡಿಯ ಇಕ್ಕೆಲಗಳಲ್ಲಿ ದ್ವಾರಪಾಲಕರುಗಳ ಚಿತ್ರಗಳಿವೆ. ಮಂಗಳಾದೇವಿಯು ಕುಳಿತ ಭಂಗಿಯಲ್ಲಿ ಧಾರಾಪಾತ್ರದಲ್ಲಿ ಇದ್ದಾಳೇ ಅವಳ ಎಡ ಭಾಗದಲ್ಲಿ ಲಿಂಗವಿದೆ.


ಮಂಗಳಾದೇವಿಯ ವಿಶೇಷ ಪೂಜೆಯು ನವರಾತ್ರಿ 9 ದಿನಗಳು ನಡೆಯುತ್ತವೆ.ಮೊದಲನೆಯ ದಿನ ಶೈಲಪುತ್ರಿಯಾಗಿ,ಎರಡನೆಯ ದಿನ ಬ್ರಹ್ಮಚಾರಿಣಿ, ಮೂರನೆಯ ದಿನ ಚಂದ್ರಘಂಟಿ, ನಾಲ್ಕನೆಯ ದಿನ ಕೋಶ್ಮಾಂಡಿ, ಐದನೆಯ ದಿನ ಸ್ಕಂದ ಮಾತಾ ಆರನೆಯ ದಿನ ಕಾತ್ಯಾಯಿನಿ, ಏಳನೇ ದಿನದಂದು ಚಂಡಿಕೆಯಾಗಿ, ಎಂಟನೇ ದಿನದಂದು ಮಹಾಸರಸ್ವತಿಯಾಗಿ ಪೂಜಿಸಲ್ಪಡುತ್ತಾಳೆ. ಮಹಾನವಮಿಯಂದು ವಾಗ್ದೇವಿಯಾಗಿ ಪೂಜಿಸಲ್ಪಡುತ್ತಾಳೆ. ಅಂದು ಆಯುಧ ಪೂಜೆಯನ್ನು ಮಾಡಲಾಗುತ್ತದೆ. ದೇವೀ ಹಾಗೂ ರಾಕ್ಷಸರ ಮಧ್ಯೆ ಯುದ್ಧ ನಡೆದು, ದೇವೀ ಜಯಿಸಿದ ಸಂಕೇತವಾಗಿ ಈ ಪೂಜೆಯನ್ನು ನಡೆಸಲಾಗುತ್ತದೆ. ದೇವಿಯ ಎಲ್ಲಾ ಶಸ್ತ್ರಾಸ್ತ್ರಗಳನ್ನು ಅಂದು ಪೂಜಿಸಲಾಗುತ್ತದೆ. ಚಂಡಿಕಾಯಾಗವೂ ನಡೆಯುತ್ತದೆ. ಹತ್ತನೆಯ ದಿನದಂದು ಮಹಾರಥೋತ್ಸವ ನಡೆಯುತ್ತದೆ, ವಿಶೇಷವಾಗಿ ಹತ್ತನೆಯ ದಿನ ದಸರೆಯಂದು ರಥೋತ್ಸವವನ್ನು ಮಾಡಲಾಗುತ್ತದೆ ಮತ್ತು ದೇವಿಯ ರಥವನ್ನು ಮಾರ್ನಮಿ ಕಟ್ಟೆಯ ಬಳಿ ಬನ್ನಿಮರದ ಬಳಿಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ದೇವಿಯ ಪೂಜೆಯು ನಡೆಯುತ್ತದೆ.


ಮಂಗಳೂರಿನ ದೇವಿಯ ಉತ್ಸವವೇ ದಸರಾ ಉತ್ಸವವಾಗಿತ್ತು. ಇತ್ತೀಚಿನ ದಶಕಗಳಲ್ಲಿ ಗೋಕರ್ಣನಾಥೇಶ್ವರ ದೇವಾಲಯದ ಉತ್ಸವವು ಮೈಸೂರು ದಸರೆಯಂತೆ ಹೆಚ್ಚಿನ ವೈಭವದಿಂದ ನಡೆಸುವುದರಿಂದ ಆ ಉತ್ಸವಕ್ಕೆ ಮಂಗಳೂರು ದಸರೆ ಉತ್ಸವ ಎನ್ನಲಾಗುತ್ತದೆ. 


- ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top