ನಮ್ಮ ನಾಡದೇವತೆ ಚಾಮುಂಡೇಶ್ವರಿ, 12ನೇ ಶತಮಾನದ ಹೊಯ್ಸಳರಾಜ ವಿಷ್ಣುವರ್ಧನ, 15ನೇ ಶತಮಾನದ ವಿಜಯನಗರದ ಅರಸರ ಮತ್ತು ಇತ್ತೀಚಿನ ಮೈಸೂರು ಅರಸರ ಕುಲದೇವತೆ ಚಾಮುಂಡೇಶ್ವರಿಯಾಗಿದ್ದಾಳೆ. ಮೈಸೂರು ಚಾಮುಂಡೇಶ್ವರಿ 18 ಶಕ್ತಿ ಪೀಠದಲ್ಲಿ ಒಂದಾಗಿದೆ. ದೇವಿಯ ಕೂದಲು ಮೈಸೂರು ಭಾಗದಲ್ಲಿ ಬಿದ್ದಿದೆ ಎಂದು ಉಲ್ಲೇಖ ಪುರಾಣಗಳಲ್ಲಿ ದೊರೆಯುತ್ತದೆ.
ಶ್ರೀ ಚಾಮುಂಡೇಶ್ವರಿ ಪೌರಾಣಿಕ ಹಿನ್ನಲೆಯುಳ್ಳ ದೇವತೆಯಾಗಿದ್ದು, 'ದೇವಿ ಮಹಾತ್ಮೆ' ಪುರಾಣದ ಪ್ರಮುಖ ದೇವತೆಯಾಗಿದ್ದಾಳೆ. ಪೌರಾಣಿಕ ಹಿನ್ನಲೆಯ ಈ ಶಕ್ತಿ ದೇವತೆ ಬೆಟ್ಟದ ಮೇಲೆ ವಾಸವಾಗಿದ್ದ ಮಹಿಷಾಸುರನನ್ನು ವಧಿಸಿದಳೆಂಬ ಕಥೆ 'ದೇವಿ ಮಹಾತ್ಮೆ' ಯಲ್ಲಿ ವರ್ಣಿಸಲಾಗಿದೆ. ಶ್ರೀ ಚಾಮುಂಡೇಶ್ವರಿಯಿಂದಲೇ ಈ ಬೆಟ್ಟಕ್ಕೆ ಚಾಮುಂಡಿಬೆಟ್ಟ ವೆಂಬ ಹೆಸರು ಬಂದಿದೆ. ಸ್ಕಂದ ಪುರಾಣ ಮೊದಲಾದ ಪುರಾಣದಲ್ಲಿ ಎಂಟು ಬೆಟ್ಟಗಳಿಂದ ಸುತ್ತುವರಿದ ತ್ರಿಮುಕುಟ ಕ್ಷೇತ್ರ ವೆಂಬ ಪವಿತ್ರ ಕ್ಷೇತ್ರವನ್ನು ಉಲ್ಲೇಖಿಸುತ್ತದೆ. ಆದರ ಪಶ್ಚಿಮ ಭಾಗದಲ್ಲಿರುವ ಚಾಮುಂಡಿಬೆಟ್ಟವು ಎಂಟು ಬೆಟ್ಟಗಳ ಪೈಕಿ ಒಂದಾಗಿದೆ. ಚಾಮುಂಡಿಬೆಟ್ಟದಲ್ಲಿರುವ ಶ್ರೀ ಮಹಾಬಲೇಶ್ವರ ದೇವಸ್ಥಾನವು ಅತ್ಯಂತ ಪ್ರಾಚೀನವಾದುದು. ಹಿಂದೆ ಬೆಟ್ಟವನ್ನು ಮಹಾಬಲಾದ್ರಿ ಎಂದೂ ಸಹ ಕರೆಯಲಾಗುತ್ತಿತ್ತು.
ಮಾರ್ಕಂಡೇಯ ಪುರಾಣದಲ್ಲಿ ಕೂಡ ದೇವಿಯ ಕತೆ ಬರುತ್ತದೆ. ತಾಂತ್ರಿಕ ಶಕ್ತಿಯ ಉಪಾಸಕರ ಆರಾಧ್ಯ ದೇವಿಯಾದ ಚಾಮುಂಡಿಯು ವಿಜಯನಗರದ ಅರಸರ ಕುಲದೇವಿ, ಮೈಸೂರು ಮಹಾರಾಜರ ಕುಲದೇವಿ ಅಷ್ಟೇ ಏಕೆ ಹೊಯ್ಸಳರ ಕಾಲದಲ್ಲಿ ದೇವಿ ಗುಡಿಯನ್ನು ನರ‍್ಮಿಸಲಾಗಿದೆ ಎಂಬ ಐತಿಹ್ಯವಿದೆ. 94 ಅಥವಾ 61 ತಾಂತ್ರಿಕ ದೇವಿಯರಲ್ಲಿ ಪ್ರಮುಖ ದೇವಿಯರಲ್ಲಿ ಚಾಮುಂಡಿ ದೇವಿ ಪ್ರಮುಖಳು. ಚಾಮುಂಡಿ ದೇವಿಯ ವಾಸಸ್ಥಾನ ಸ್ಮಶಾನ ಅಥವಾ ಅಂಜುರ ಗಿಡದ ಕೆಳಗೆ ಎಂದು ಹೇಳಲಾಗುತ್ತದೆ. ವಿಂಧ್ಯ ಪರ್ವತದಲ್ಲಿ ದೇವಿಯ ಉಪಾಸನೆ ಅರಂಭವಾಯಿತು ಎಂದು ಕೂಡ ಹೇಳಲಾಗುತ್ತದೆ. ಕರ್ನಾಟಕದ ಮೈಸೂರಿನ ಇತಿಹಾಸದಲ್ಲಿ ಹೇಳಿರುವಂತೆ ಚಾಮುಂಡಿಗೆ ಮಹಿಷಾಸುರನ ವಧೆ ಮಾಡಿದ ಮೇಲೆ ಮಹಿಷಾಸುರ ಮರ್ದಿನಿ ಎಂಬ ಹೆಸರು ಕೂಡ ಬಂದಿತು.
ಪುರಾಣಗಳಲ್ಲಿ ಮತ್ತು ದೇವಿ ಉಪಾಸಕರಿಗೆ ದೇವಿಯ ಆರಾಧನೆ ಬಹಳ ಪ್ರೀತಿ ಪ್ರದಾಯಕವಾಗಿರುತ್ತದೆ. ದೇವಿಯ ಕೊರಳಲ್ಲಿ ಮುಂಡಗಳ ಮಾಲೆಯನ್ನು ಧರಿಸಿರುತ್ತಾಳೆ. ತೆರೆದ ನಾಲಿಗೆ ಕೋರೆ ಹಲ್ಲುಗಳಿಂದ ಶೋಭಿತೆ ಅಷ್ಟ ಭುಜಗಳಲ್ಲಿ ವಿವಿಧ ಅಯುಧಗಳನ್ನು ಹಿಡಿದಿರುವ ದೇವಿಯ ಪ್ರಮುಖ ಆಯುಧಗಳು ತ್ರಿಶೂಲ, ಖಡ್ಗಗಳಾಗಿವೆ. ಅವಳ ವಾಹನ ಹುಲಿ ಅಥವಾ ಸಿಂಹವಾಗಿರುತ್ತದೆ. ಚಾಮುಂಡಿ ದೇವಿ ಶಿಷ್ಟ ಪುರಾಣದ ವಿಶಿಷ್ಟದೇವತೆಯಾಗಿದ್ದಾಳೆ.
ಚಂಡ ಮುಂಡರ ವಧೆಯ ನಂತರ ಚಾಮುಂಡಿಯು ಮಹಾಬಲಗಿರಿ ಎಂದು ಕರೆಯಲ್ಪಡುತ್ತಿದ್ದ ಮೈಸೂರಿನಲ್ಲಿ ಬಂದು ನೆಲೆಸುತ್ತಾಳೆ. ನಂತರದಲ್ಲಿ ಮಹಿಷಾಸುರನ ವಧೆಯ ನಂತರ ಆ ಸ್ಥಳಕ್ಕೆ ಮಹಿಷೂರು ಅಥವಾ ಮೈಸೂರು ಎಂಬ ಹೆಸರಿನಿಂದ ಪ್ರಸಿದ್ಧಿಯಾಗುತ್ತದೆ. ಹೊಯ್ಸಳರ ಕಾಲದಲ್ಲಿ ಅಂದರೆ ದೇವಿಯ ದೇವಾಲಯದ ನಿರ್ಮಾಣವಾಗಿರುತ್ತದೆ. ವಿಜಯನಗರದ ಅರಸರ ಕುಲದೇವಿಯು ಚಾಮುಂಡೇಶ್ವರಿಯೇ ಆಗಿದ್ದಳು.
ಶಿಷ್ಟ ಪುರಾಣದ ಪ್ರಕಾರ ಮಹಿಷಾಸುರನ ವಧೆಯನ್ನು ಮಾಡಿ ವಿಶ್ರಾಂತಿಯನ್ನು ಪಡೆಯಲು ಕಪಿಲಾ ನದಿಯ ದಂಡೆಯಲ್ಲಿ ಸ್ನಾನ ಮಾಡಿ ವಿಶ್ರಾಂತಿ ಪಡೆಯುತ್ತಿದ್ದಾಗ ನಂಜುಡೇಶ್ವರನು ಚಾಮುಂಡೇಶ್ವರಿಯಲ್ಲಿ ಅನುರಕ್ತನಾಗಿ ಮದುವೆಯಾಗುತ್ತಾನೆ ಎಂದು ಕಥೆ ಹೇಳುತ್ತಾರೆ. 1000 ವರ್ಷ ಹಿಂದಿನ ಅಂದರೆ ಗಂಗರ ಆಳ್ವಿಕೆಯ 950ರ ಶಾಸನವನ್ನು ಈಗಲೂ ಚಾಮುಂಡಿ ಬೆಟ್ಟದಲ್ಲಿ ಕಾಣಬಹುದಾಗಿದೆ.
ಜಾನಪದ ಕಥೆಗಳು ಪುರಾಣ ಕಥೆಗಳು ಬಹಳಷ್ಟು ಬೇರೆ ಬೇರೆ ರೀತಿಯಲ್ಲಿ ಪ್ರಚಲಿತವಾಗಿವೆ. ಚಾಮುಂಡಿ ಉಜ್ಜಯಿನಿ ದೇಶದ ಬಿಜ್ಜಳರಾಯನ ಕಿರಿಯ ಮಗಳು. ಚಾಮುಂಡಿಯ ಅಕ್ಕ ಉರಿಮಸಣಿ ಸೇರಿದಂತೆ ಒಟ್ಟು ಏಳುಜನ ಅಕ್ಕ-ತಂಗಿಯರು. ಇವರು ಕಾರಣಾಂತರಗಳಿಂದ ಪರಸ್ಪರ ಜಗಳವಾಡಿ, ಮನೆಬಿಟ್ಟು ಪರಸ್ಪರ ದೂರವಾಗುತ್ತಾರೆ. ಬೇರೆ ಬೇರೆ ಪ್ರದೇಶದಲ್ಲಿ ನೆಲೆಸಲು ಉತ್ತರ ಪ್ರದೇಶದಿಂದ ಹೊರಟು, ದಕ್ಷಿಣ ಪ್ರಾಂತ್ಯದ ಭಿನ್ನ ಭಿನ್ನ ಸ್ಥಳಗಳಲ್ಲಿ ನೆಲೆಸುತ್ತಾರೆ. ಚಾಮುಂಡಿಯ ಹಿನ್ನೆಲೆಗೆ ಸಂಬಂಧಿಸಿದಂತೆ ಹಲವಾರು ಕತೆಗಳು ಪ್ರಚಲಿತವಾಗಿವೆ.
ಮೈಸೂರು ಮಹಾರಾಜರಿಗೆ ಸಂತಾನ ಭಾಗ್ಯವಿರಲಿಲ್ಲ. ಚಾಮುಂಡೇಶ್ವರಿಯನ್ನು ಪೂಜಿಸಿದ ನಂತರ ಅವರಿಗೆ ಸಂತಾನ ಭಾಗ್ಯ ದೊರೆಯುತ್ತದೆ. 19ನೇ ಶತಮಾನದಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನವನ್ನು ಮೈಸೂರು ಮಹಾರಾಜರು ನಿರ್ಮಾಣ ಮಾಡಿದರು. ಚೌಕಾಕೃತಿಯಲ್ಲಿ ನಿರ್ಮಾಣವಾಗಿರುವ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿದೆ. ಹೆಬ್ಬಾಗಿಲು, ಪ್ರವೇಶ ದ್ವಾರ, ನವರಂಗ, ಅಂತರಾಳ, ಗರ್ಭಗೃಹ, ಮತ್ತು ಪ್ರಾಕಾರಗಳನ್ನು ಹೊಂದಿದೆ. ಮಹಾದ್ವಾರದ ಮೇಲೆ ಸುಂದರವಾದ ಗೋಪುರ ಮತ್ತು ಗರ್ಭಗುಡಿಯ ಮೇಲೆ 'ವಿಮಾನ' ಶಿಖರಗಳಿವೆ. ಏಳು ಅಂತಸ್ತುಗಳಗೋಪುರ ಪಿರಮಿಡ್ ಆಕಾರದಲ್ಲಿ ದ್ರಾವಿಡ ಶೈಲಿಯಲ್ಲಿದೆ. ಶಿಖರದ ಮೇಲೆ ಏಳು ಚಿನ್ನದ ಲೇಪಿತ ಕಲಶಗಳಿವೆ.ಕಾರಣ ಚಾಮುಂಡಿ ಬೆಟ್ಟವನ್ನು ಅಭಿವೃದ್ಧಿಗೊಳಿಸಿ ಮೆಟ್ಟಿಲುಗಳನ್ನು ನಿರ್ಮಿಸಿಕೊಟ್ಟು ಜನ ಸಾಮಾನ್ಯರಿಗೂ ದೇವಿಯ ಅನುಗ್ರಹವಾಗುವಂತೆ ಮಾಡಿದ್ದಾರೆ.
ಕರ್ನಾಟಕದ ರಾಜರ ಕುಲದೇವಿಯಾದ ಚಾಮುಂಡೇಶ್ವರಿಯನ್ನೇ ಕರ್ನಾಟಕ ಸರಕಾರವು ನಾಡದೇವತೆ ಎಂಬ ಕಾರಣದಿಂದ ಅವಳ ಪೂಜೆ ಮಾಡುತ್ತಾರೆ. ನವರಾತ್ರಿ ಮಹೋತ್ಸವ ನಾಡ ಹಬ್ಬವಾಗಿದ್ದು ದೇವಿಯ ಉತ್ಸವದ ಚಾಲನೆಯನ್ನು ಗಣ್ಯ ಅತಿಥಿಗಳಿಂದ ಮಾಡಿಸುತ್ತಾರೆ. ಮೊದಲು ರಾಜರು ಸ್ವತಃ ಮಾಡುತ್ತಿದ್ದರು.
ದೇವಿಗೆ ದಿನವು ವಿಶೇಷ ಅಲಂಕಾರ ಮತ್ತು ಪೂಜೆಗಳು ನಡೆಯುತ್ತವೆ. ದಸರಾ ಹಬ್ಬದ ದಿನ ಜಂಬೂ ಸವಾರಿಯಿಂದ ದಸರಾ ಹಬ್ಬದಲ್ಲಿ ದೇವಿಯ ಉತ್ಸವ ಕೊನೆಗೊಳ್ಳುತ್ತದೆ. ಧಾರ್ಮಿಕ ಪೂಜೆಗಳೊಂದಿಗೆ ಸಾಂಸ್ಕೃತಿಕವಾಗಿ ಕೂಡ ವಿಶೇಷ ಕಾರ್ಯಕ್ರಮ ನಡೆಯುವುದು ದಸರಾ ಹಬ್ಬದ ವಿಶೇಷ.
- ಮಾಧುರಿ ದೇಶಪಾಂಡೆ, ಬೆಂಗಳೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ