ಬಹುಶ್ರುತ ವಿದ್ವಾಂಸರು, ಸವ೯ತಂತ್ರ ಸ್ವಂತಂತ್ರರು, ಶಾಸ್ತ್ರ ಚೂಡಾಮಣಿಗಳಾಗಿ ಪ್ರಸಿದ್ಧರಾದ ಪ್ರೊ. ಸಾ.ಕೃ. ರಾಮಚಂದ್ರ ರಾವ್ ನಾಡಿನ ಹೆಸರಾಂತ ಲೇಖಕರು. ಆಕರ್ಷಕ ವ್ಯಕ್ತಿತ್ವ, ಎಲ್ಲ ಜನರಲ್ಲಿ ಗೌರವ ಹುಟ್ಟಿಸುವ ನಿಲುವು, ಹಣೆಯಲ್ಲಿ ಗೋಪಿಚಂದನದ ಲೇಪನ, ಹೊಳಪಾದ ಕಣ್ಣುಗಳಿಂದ ಕೂಡಿದ ಮಹನೀಯರು. ಸದಾ ಬಿಳುಪಿನ ಖಾದಿ ಉಡುಪು ಧರಿಸಿ, ಕಲಾತ್ಮಕವಾಗಿ ಮಾಡಿದ ಕೊಲ್ಹಾಪುರದ ಪಾದರಕ್ಷೆಗಳನ್ನು ಸದಾ ಅಲಂಕಾರಿಕವಾಗಿ ಹಾಕಿಕೊಂಡು ನಡೆವ ಇವರ ವ್ಯಕ್ತಿತ್ವ ಆಕರ್ಷಣೀಯ!
ಇವರ ಪೂರ್ವಿಕರು ದೇಶಸ್ಥ ಮಾಧ್ವಪಂಗಡಕ್ಕೆ ಸೇರಿದವರಾಗಿದ್ದು, ಮಾದನೂರಿನ ಶ್ರೀ ಶ್ರೀ ವಿಷ್ಣುತೀರ್ಥರ ಶಿಷ್ಯರೆಂದು ಇತಿಹಾಸದಲ್ಲಿ ವ್ಯಕ್ತವಾಗಿದೆ. ಸಂಸ್ಕೃತ, ಕನ್ನಡ ಭಾಷೆಯಲ್ಲಿ ಅದ್ವಿತೀಯ ಪಾರಂಗತರ ವಂಶಸ್ಥರು. ಸಾಲಿಗ್ರಾಮ ಕೃಷ್ಣ ನಾರಾಯಣ ರಾವ್ ಮತ್ತು ಕಮಲಾಬಾಯಿ ದಂಪತಿಗಳ ಪುತ್ರನಾಗಿ ಹಾಸನದಲ್ಲಿ ತಾ9-2-1927 (4-9-1925) ರಂದು ಜನಿಸಿದರು. ಬಾಲ್ಯದಲ್ಲಿ ಶಿಕ್ಷಣ ಕೋಟೆ ಮಾಧ್ಯಮಿಕ ಶಾಲೆ, ನಂಜನಗೂಡಿನಲ್ಲಿ ಮುಗಿಸಿ, ಮೈಸೂರಿನಲ್ಲಿ ಮಹಾರಾಜಾ ಕಾಲೇಜಿನಲ್ಲಿ 1948ರಂದು ಎಂ ಎ ಪರೀಕ್ಷೆಯನ್ನು ಪಾಸು ಮಾಡಿದರು.
1959ರಲ್ಲಿ ರಮಾದೇವಿ ಅವರೊಂದಿಗೆ ವಿವಾಹವಾದರು. ರಿಸಚ್೯ ಅಸಿಸ್ಟೆಂಟ್ ಆಗಿ ನೇಮಕಗೊಂಡು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸೇರಿದರು. ತದನಂತರ, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫಾ ಮೆಂಟಲ್ (ನಿಮಾನ್ಸ್) ಅಸಿಸ್ಟೆಂಟ್ ಪ್ರೊಫೆಸರ್, ರೀಡರ್, ಕ್ಲಿನಿಕಲ್ ಸೈಕಾಲಜಿ ವಿಭಾಗದ ಮುಖ್ಯಸ್ಥರಾಗಿದ್ದುದು ವಿಶೇಷ. ಎಂ ಇ ಎಸ್ ಕಾಲೇಜಿನಲ್ಲಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದರು. ಚಿತ್ರಕಲಾ ಪರಿಷತ್, ವಿವೇಕಾನಂದ ಚೇರ್, ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿವ೯ಹಿಸಿದ ಮಹನೀಯರು.
ಸಾ.ಕೃ ರಾಮಚಂದ್ರ ರಾವ್ ಅವರು ಶ್ರೀ ಲಕ್ಷ್ಮೀಪುರಂ ಶ್ರೀನಿವಾಸಾಚಾರ್ಯರ ಸ್ಪೂರ್ತಿ ಪಡೆದು, ಸಂಸ್ಕೃತ, ಮತ್ತು ಆ ಭಾಷೆಯ ದರ್ಶನ ಶಾಸ್ತ್ರ ವನ್ನು ಕರತಲಾಮಲಕ ಮಾಡಿಕೊಂಡರು. ಅಮರ, ಶಬ್ದ ರೂಪ, ಧಾತುಪಾಠಾದಿ ಅಧ್ಯಯನ ಮಾಡಿದರು. ಕಾವ್ಯದ ಜೊತೆಗೆ ಕಾಳಿದಾಸನ ನಾಟಕಗಳು, ಸಂಗ್ರಹ ರಾಮಾಯಣ, ಮುಂತಾದ ಪುರಾಣ ಗ್ರಂಥಗಳನ್ನು ಅಭ್ಯಾಸ ಮಾಡಿದರು. ಸಂಗೀತ, ಶಾಸ್ತ್ರ, ನಾಟಕ, ಕಾವ್ಯದಲ್ಲಿ ಪಂಡಿತರಾದ ಮಹಾನುಭಾವರು. ಭಗವದ್ಗೀತೆ, ರಾಮಾಯಣ, ಮಹಾಭಾರತ ಅಧ್ಯಯನ ಮಾಡಿ ಶ್ರೇಷ್ಠ ವಿದ್ವಾಂಸರಾಗಿ ನಾಡಿಗೆ ಕೀರ್ತಿ ತಂದ ಮಹಾನುಭಾವರು.
ಸಂಗೀತದಲ್ಲಿ ಗುರುವರ್ಯರಾದ ರಾಳ್ಲಪಳ್ಳಿ ಅನಂತಕೃಷ್ಣ ಶರ್ಮ ಅವರ ಅಭಿಮಾನಿಗಳು. ತಮಿಳಿನಲ್ಲಿ ಆಳ್ವಾರರ ನುಡಿಮುತ್ತುಗಳು ಎಂಬ ಗ್ರಂಥ ರಚಿಸಿ, ತಮ್ಮಗುರುಗಳಾದ ವಿದ್ವಾಂಸರಾದ ಹೆಮ್ಮಿಗೆ ದೇಶಿಕಾಚಾಯ೯ರನ್ನು ಸ್ಮರಣೆ ಮಾಡಿದ್ದಾರೆ. ಬಂಗಾಳಿ ಭಾಷೆ ಕಲಿತು, ರಾಯರು ಈಶ್ವರ ಚಂದ್ರರ ಅಭಿಮಾನಿಗಳಾಗಿದ್ದುದು ವಿಶೇಷ. ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯಲ್ಲೂ ಪ್ರವೀಣರು. ಬೌದ್ಧ, ಜೈನ ತತ್ವಗಳನ್ನು ಸಹ ಅಭ್ಯಾಸ ಮಾಡಿದರು.
ಶ್ರೀ ರಾಮ ಕೃಷ್ಣಾಶ್ರಮದ ಸಂಬಂಧದಿಂದ, ಅನೇಕ ಆಧ್ಯಾತ್ಮಿಕ ವಿಷಯವನ್ನುಅರಿತರು. ಜೊತೆಗೆ ಕಲಾವಿದ ವೆಂಕಟಪ್ಪನವರ ಪರಿಚಯದೊಂದಿಗೆ ಚಿತ್ರಕಲೆಯನ್ನು ಬಿಡಿಸುವ ಪರಿಶ್ರಮದಲ್ಲೂ ಸಾಕಷ್ಟು ಮುನ್ನಡೆ ಸಾಧಿಸಿದರು. ಬಹುಶ್ರುತ ಹಿರಿಯ ಸಾಹಿತಿಗಳ ಸ್ನೇಹ, ಸಲುಗೆ ದೊರೆತವು. ವಿ.ಸೀ, ಡಿ ವಿ ಜಿ, ಮಾಸ್ತಿ, ಜಿ. ಪಿ ರಾಜರತ್ನಂ, ಎ.ಆರ್ ಕೃಷ್ಣ ಶಾಸ್ತ್ರೀ, ಆರ್ ಎಲ್ ನರಸಿಂಹಯ್ಯ, ಮತ್ತು ಕೆ. ಸಂಪತ್ ಗಿರಿರಾಯರು, ಬೇಂದ್ರೆ, ವಿ ಕೆ ಗೋಕಾಕ್, ಎಂ ಟಿ ವಿ ಆಚಾರ್ಯ, ಜಿ ವೆಂಕಟಾಚಲಂ ಮುಂತಾದವರ ಸಂಪರ್ಕ ಇವರಿಗೆ ದೊರೆತವು.
ಹಾಗಾಗಿ ಇದರಿಂದ ಇವರ ವ್ಯಕ್ತಿತ್ವ-ವಿಚಾರ ಸುಂದರವಾಗಿ ರೂಪಿಸಲು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಾಯ ಮಾಡಿದವು. ಭಾರತೀಯ ತತ್ವಶಾಸ್ತ್ರ, ಮನಶಾಸ್ತ್ರ ಆಯುವೇ೯ದ ವಿಭಾಗದ ಸಮಗ್ರ ಚಿಂತನ ಮಂಥನ ಮಾಡಿದರು. ಭಾರತೀಯ ಸಂಸ್ಕೃತಿ, ಮತ್ತು ಅಪರೂಪದ ಹಸ್ತಲಿಪಿಯನ್ನು ಅಧ್ಯಯನ ಮಾಡಿ ನಾಡಿಗೆ ಅನೇಕ ಕೃತಿಗಳನ್ನು ನೀಡಿದ ವಿದ್ವಾಂಸರು. ಚಿತ್ರ ಕಲೆಯನ್ನು ಅಭ್ಯಾಸ ಮಾಡಿ ಇವರು ಚಿತ್ರಿಸಿದ ಚಿತ್ರಗಳು, ಶಿಲ್ಪಗಳು ಬೆಂಗಳೂರಿನಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಆಸಕ್ತರು ವೀಕ್ಷಿಸಲು ಪ್ರದರ್ಶಿಸಲಾಗಿದೆ. ಪಾಲಿಯಲ್ಲಿ ಸುಮಂಗಲ ಗಾಥಾ ಎಂಬ ಕೃತಿ ದ ಲೈಟ್ ಆಫ್ ದಿ ಧಮ೯ ಜರ್ನಲ್ ನಲ್ಲಿ ಪ್ರಕಟಿಸಿದ್ದಾರೆ.
ಪ್ರೊ. ಸಾಲಿಗ್ರಾಮ ಕೃಷ್ಣ ರಾಮಚಂದ್ರರಾವ್ ಅವರಿಗೆ ಪ್ರಶಸ್ತಿಗಳು, ಪುರಸ್ಕಾರಗಳು ಅರಸಿ ಬಂದಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ, ಅನಕೃ ಪ್ರಶಸ್ತಿ, ವೇದರತ್ನ, ವಾಚಸ್ಪತಿ ಪ್ರಶಸ್ತಿ, ಗೌರವ ಡಿ ಲಿಟ್ ಪದವಿ ಕರ್ನಾಟಕ ವಿಶ್ವವಿದ್ಯಾಲಯದ ಗೌರವ, ಡಿ ವಿ ಜಿ ಪ್ರಶಸ್ತಿ, ಸತ್ಯಕಾಮ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ವಿದ್ಯಾಲಂಕಾರ ಪ್ರಶಸ್ತಿ ಮುಂತಾದವು ಲಭಿಸಿವೆ.
ಬಹುಶ್ರುತ ವಿದ್ವಾಂಸರಾದ ಪ್ರೊ. ಸಾ ಕೃ ರಾಮಚಂದ್ರರಾವ್ ಅವರು 32 ಸಂಪುಟಗಳ ಪ್ರಾಜೆಕ್ಟ್ ಆಂಗ್ಲ ಭಾಷೆಯಲ್ಲಿ ಋಗ್ವೇದ ಬರೆಯುವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ತಾ॥ 2-2-2006 ರಂದು ಹರಿಪಾದವನ್ನು ಸೇರಿದರು.
ಶ್ರೀಧರ ರಾಯಸಂ
ಗಿರಿನಗರ, ಬೆಂಗಳೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ