1959-60ರ ದಶಕದ ಒಂದು ರಾತ್ರಿ. ಧಾರವಾಡದ ಬಯಲು ರಂಗ ಮಂದಿರದಲ್ಲಿ ಕಿಕ್ಕಿರಿದ ಜನಸಂದಣಿ. ಬಂತು ಒಂದು ದೃಶ್ಯ. ಅತ್ಯಂತ ಜಿಪುಣ ಸಾಹುಕಾರನ ಮನೆಯಲ್ಲಿ, ಸಾಹುಕಾರನ ಮಗಳು ಊಟಕ್ಕೆ (ಬನ್ನಿ) ಹೇಳುವಷ್ಟರಲ್ಲೇ, ಕಾರಕೂನ ಪಾತ್ರಧಾರಿ, ಅರೆಕ್ಷಣದಲ್ಲಿ ತನ್ನ ತಲೆಮೇಲಿದ್ದ ಟೋಪಿ ಕಿತ್ತೆಸೆದು, ತನ್ನ ಮೈಮೇಲಿದ್ದ ಕೋಟು, ಅಂಗಿ ಬನಿಯನ್ ಕಳಚಿ ಎಸೆದು, ರೆಡಿ ಅಂತ ಹೇಳಿದಾಗ, ಜನಗೊಳ್ಳೆಂದು ನಕ್ಕು ಚಪ್ಪಾಳೆ ಹೊಡೆದರು. ಹೆಸರಿಗೆ ಸಾಹುಕಾರ. ನಿಜಜೀವನದಲ್ಲಿ ಆತ ಭಾರಿ ಕಂಜೂಸ್. ಸಂಬಳ ಭತ್ಯೆ ಕೊಡದೇ, ಬರೀ ಊಟದ ಸಂಬಳ ಗೊತ್ತು ಮಾಡಿರುತ್ತಾನೆ. ಭರಗೆಟ್ಟ ಹಸಿವು, ಕರೆದ ಕೂಡಲೇ ಓಡದಿದ್ದರೆ ಎಲ್ಲಿ ಆ ಕವಳವೂ ತಪ್ಪಿತೋ ಎಂಬ ಹೆದರಿಕೆ, ಆ ಕಾರಕೂನ ಪಾತ್ರಧಾರಿಯ ಚಡಪಡಿಸುವಿಕೆ, ಎಲ್ಲ ಆತನ ಮುಖ ಅಂಗಾಭಿನಯಗಳಲ್ಲಿ ಹೆಪ್ಪುಗಟ್ಟಿತ್ತು. ಸಾಹುಕಾರ ಹಾಗೂ ಇತರ ರಂಗನಾಟಕಗಳಲ್ಲಿ, ತನ್ನ ಪಾತ್ರಗಳಲ್ಲಿ ಸತತ ಜನರನ್ನು ನಗಿಸುತ್ತಿದ್ದ ಈ ವಿದೂಷಕನೇ ಟಿ.ಆರ್.ನರಸಿಂಹರಾಜು. ಈ ರಂಗನಾಟಕದಲ್ಲಿ ಇನ್ನೊಬ್ಬ ಕಾರಕೂನ ಟಿ.ಎನ್. ಬಾಲಕೃಷ್ಣ. ಸಾಹುಕಾರನಾಗಿ ಜಿ.ವಿ. ಅಯ್ಯರ್ ಹಾಗೂ ಈ ನಾಟಕದ ನಾಯಕ ರಾಜಕುಮಾರ್. ಅಂದು ನನಗೆ 8-98 ವರ್ಷ. ನೆರೆ ಸಂತ್ರಸ್ತರ ಪ್ರವಾಹ ಪರಿಹಾರ ನಿಧಿಗಾಗಿ, ಕರ್ನಾಟಕದಾದ್ಯಂತ ಸಾಹುಕಾರ, ಬೇಡರಕಣ್ಣಪ್ಪ ನಾಟಕ. ಅದರಲ್ಲಿ ರಾಜ್-ಕಣ್ಣಪ್ಪ, ಕೆ.ಎಸ್.ಅಶ್ವಥ್-ಈಶ್ವರ, ಜಿ.ವಿ.ಅಯ್ಯರ್-ಕಪಟಪೂಜಾರಿ. ನರಸಿಂಹರಾಜು ಪೂಜಾರಿಯ ಮುಗ್ಧಮಗ ಕಾಶಿ. ಬೇಡರ ಕಣ್ಣಪ್ಪನ ಕಷ್ಟಕ್ಕೆ ಮರುಗಿ, ಆತನೊಂದಿಗೆ ಸ್ನೇಹ ಬೆಳಸಿ, ಆತನ ಶಿವಭಕ್ತಿಗೆ ಇಂಬುಕೊಟ್ಟ ಪಾತ್ರ. ಆ ಪಾತ್ರದಲ್ಲಿ ತಂದೆಗೆ ಕೇಳುವ ಮುಗ್ಧ ಪ್ರಶ್ನೆಗಳು ಜನರಲ್ಲಿ ನಗು ಉಕ್ಕಿಸುತ್ತಿತ್ತು. ಮೂರನೆಯ ರಾತ್ರಿ ಕೆ.ಹಿರಣಯ್ಯ ಬರೆದ ಎಚ್ಚಮನಾಯಕ. ಇದರಲ್ಲಿ ರಾಜ್-ಎಚ್ಚಮನಾಯಕ, ಆರ್.ನಾಗರತ್ನಮ್ಮ-ಮೋಹಿನಿ, ಬಾಲಕೃಷ್ಣ-ಸಿದ್ಧಾಂತಿ, ನರಸಿಂಹರಾಜು-ಬುಡಾನ್ ಶಾಸ್ತ್ರಿ, ಕೆ.ಎಸ್.ಅಶ್ವಥ್-ಉಸ್ಮಾನ್, ವೀರಭದ್ರಯ್ಯ-ಬಾದಶಹಾ ಆಗಿ ಅಭಿನಯಿಸಿದ್ದರು. ಬಾಲಕೃಷ್ಣ-ನರಸಿಂಹರಾಜು ಅವರ ಸಂಭಾಷಣಾ ಶೈಲಿಯೇ ಹಾಸ್ಯಭರಿತವಾಗಿದ್ದು, ನಾಟಕಕಾರರ ಶಬ್ದಗಳು, ಇವರ ಬಾಯಲ್ಲಿ ವಿವಿಧ ಆಯಾಮಗಳನ್ನು ಪಡೆದು, ಸಭಿಕರನ್ನು ಕ್ಷಣಕ್ಷಣಕ್ಕೂ ನಗುವಿನ ಅಲೆಗಳಲ್ಲಿ ತೇಲಿಸುತ್ತಿತ್ತು. ಆ ಸಂದರ್ಭದಲ್ಲಿ ಬಗೆಗಿನ ನಿರ್ದೇಶನಾ ಸೂಚನೆಗಳನ್ನು ಕೊಡುತ್ತಿದ್ದಾಗ ಹಾಗೂ ಈ ಕಲಾವಿರದರೆಲ್ಲ ಆ 4 ದಿನ ನಮ್ಮ ಮಹೇಂದ್ರಕರ್ ಚಾಳ್‌ನ ಮನೆಗೆ ಊಟಕ್ಕೆ ಬಂದಾಗಲೆಲ್ಲ ಅವರೊಂದಿಗೆ ಹತ್ತಿರದ ಮಾತುಕಥೆ. ಮುಂದೆ ಧಾರವಾಡಕ್ಕೆ ಹತ್ತಿರ ಯಾವುದೇ ಊರಿನ ನಾಟಕ ಕಂಪನಿಯ ಕ್ಯಾಂಪ್‌ಗೆ, ವಿಶೇಷ ನಾಟಕಗಳನ್ನು ಆಡಲು ಅಥವಾ ಚಲನಚಿತ್ರಗಳ ಶೂಟಿಂಗ್‌ಗೆ ಬಂದಾಗಲೆಲ್ಲ, ನರಸಿಂಹರಾಜು ಅವರನ್ನು ನಮ್ಮ ತಂದೆ ಎನ್.ಎಸ್. ವಾಮನ್, ಆಕಾಶವಾಣಿಯ ಸಂದರ್ಶನ ಅಥವಾ ರೇಡಿಯೋ ನಾಟಕಕ್ಕೆ ಆಹ್ವಾನಿಸುವುದಲ್ಲದೇ, ನರಸಿಂಹರಾಜು ಹಾಗೂ ಅವರ ಪತ್ನಿ ಶಾರದಮ್ಮ ಅವರನ್ನೂ ನಮ್ಮ ಮನೆಗೆ ಊಟ ಹಾಗೂ ವಾಸ್ತವ್ಯಕ್ಕಾಗಿ ಕರೆತರುತ್ತಿದ್ದರು. ಒಮ್ಮೆ ಇವರೊಂದಿಗೆ ಇವರ ಪುಟ್ಟ ಮಗುವೂ ನಮ್ಮ ಮನೆಗೆ ಬಂದ ನೆನಪು. ನಮ್ಮ ತಂದೆಗೆ ಅವರು ಬರೆದ ಪತ್ರಗಳಲ್ಲಿ ಒಂದನ್ನು ಇನ್ನೂ ನಾನು ಭದ್ರವಾಗಿ ಉಳಿಸಿಕೊಂಡಿದ್ದೇನೆ. ಈಗ ಇವರ ಜೀವನ ಸಾಧನೆ, ಚಿತ್ರಗಳು ಹಾಗೂ ಅವರ ಕೆಲವು ಪಾತ್ರಗಳ ಬಗ್ಗೆ ಸ್ಮರಿಸೋಣ. ಆರಂಭದ ಜೀವನ: 24.07.1923 ರಂದು ತಿಪಟೂರಿನಲ್ಲಿ ಹುಟ್ಟಿದ, ತಿಪಟೂರು ರಾಮರಾಜು ನರಸಿಂಹರಾಜು ಅವರ ತಂದೆ ಅಂದು ಪೊಲೀಸ್ ಪೇದೆಯಾಗಿದ್ದ ರಾಮರಾಜು ಹಾಗೂ ತಾಯಿ ವೆಂಕಟಲಕ್ಷ್ಮಿ ಅಮ್ಮ. ಮನೆಯಲ್ಲಿ ಬಡತನ.
ಬಾಲ್ಯದಲ್ಲೇ ರಂಗಭೂಮಿ ಪ್ರವೇಶ: ನಾಲ್ಕನೇ ವರ್ಷದಲ್ಲಿ ಈ ಮಗುವನ್ನು ಚಿಕ್ಕಪ್ಪ ಲಕ್ಷ್ಮಿಪತಿರಾಜು ಕರೆದೊಯ್ದು ತಿಪಟೂರಿಗ ಬಂದಿದ್ದ, ಸಿ.ಬಿ. ಮಲ್ಲಪ್ಪ ಅವರ ಚಂದ್ರಮೌಳೇಶ್ವರ ನಾಟಕ ಮಂಡಳಿಗೆ ಸೇರಿಸಿದರು. ಆ ವಯಸ್ಸಿನಲ್ಲೇ ಪ್ರಹ್ಲಾದ, ಲೋಹಿತಾಶ್ವ, ಬಾಲಕೃಷ್ಣನಾಗಿ ಅಭಿನಯದ ಆರಂಭ.
ರಂಗಭೂಮಿ ಸೇವೆ: ದೊಡ್ಡವನಾದ ಮೇಲೆ ತಾರುಣ್ಯದಲ್ಲಿ ತನ್ನದೇ ಒಂದು ತಂಡಮಾಡಿಕೊಂಡು, ಗೋರ ಕುಂಬಾರ, ಹರಿಶ್ಚಂದ್ರ ನಾಟಕಗಳನ್ನು ಅಭಿನಯಸಿದ್ದು ಅಪಾರ ನಷ್ಟದಿಂದ ಸ್ವಂತ ಕಂಪನಿ ಮುಚ್ಚಿತು. ಆಗ ಎಡತೊರೆ ನಾಟಕ ಕಂಪನಿಗೆ ಸೇರಿದರು. ಪೌರಾಣಿಕ ನಾಟಕಗಳಲ್ಲಿ ಸ್ತ್ರೀ ಪಾತ್ರ, ವಿಶ್ವಾಮಿತ್ರ, ರಾವಣ ರಾಮ ಹಾಗೂ ಭರತನ ಪಾತ್ರಗಳನ್ನು ನಿರ್ವಹಿಸಿದರು. ಮುಂದೆ ಹಿರಣ್ಯಯ್ಯ ಮಿತ್ರಮಂಡಳಿ, ಭಾರತ ಲಲಿತಾ ಕಲಾ ಸಂಘ, ಬೇಲೂರಿನ ಗುಂಡಾ ಜೋಯಿಸರ ಕಂಪನಿ, ಗುಬ್ಬಿ ಚೆನ್ನಬಸವೇಶ್ವರ ನಾಟಕ ಕಂಪನಿಗಳಲ್ಲಿ ಪಾತ್ರವಹಿಸಿದರು. ಗುಬ್ಬಿ ಕಂಪನಿಯಲ್ಲಿ ರಾಜಕುಮಾರ್, ಬಾಲಕೃಷ್ಣ, ಜಿ.ವಿ. ಅಯ್ಯರ್ ಇವರ ಸಹಕಲಾವಿದರು ಹಾಗೂ ಆಪ್ತ ಮಿತ್ರರು. ಇಲ್ಲಿ ಧರ್ಮರತ್ನಾಕರ ನಾಟಕದ ನಾಯಕನಾಗಿ ಅಭಿನಯಿಸಿ ಗುಬ್ಬಿ ವೀರಣ್ಣನವರ ಮೆಚ್ಚುಗೆ ಪಡೆದಿದ್ದರು. ಹೀಗೆ ತನ್ನ 37ನೇ ವಯಸ್ಸಿನವರೆಗೆ ನಾಟಕ ಕಲಾವಿದರಾಗಿದ್ದರು ನರಸಿಂಹರಾಜು.
ಚಲನಚಿತ್ರ ರಂಗಪ್ರವೇಶ: 1954ರಲ್ಲಿ ಮುತ್ತುರಾಜ (ರಾಜ್‌ಕುಮಾರ್) ಜಿ.ವಿ.ಅಯ್ಯರ್ ಜೊತೆಗೆ ಬೇಡರ ಕಣ್ಣಪ್ಪ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಹೆಚ್.ಎಲ್.ಎನ್.ಸಿಂಹ ಇವರೆಲ್ಲರನ್ನೂ ಪರಿಚಯಿಸಿದ ನಿರ್ದೇಶಕರು. ಕಣ್ಣಪ್ಪ ಹಾಗೂ ಕಾಶಿಪಾತ್ರಗಳು ಮನೆಮಾತಾದವು. ನರಸಿಂಹರಾಜು ಅವರಿಗೆ ಚಾರ್ಲಿ ಚಾಪ್ಲಿನ್ ಸ್ಫೂರ್ತಿ ನೀಡಿದ್ದ ಅಲ್ಲಿಂದ ಆರಂಭವಾದ ಚಲನಚಿತ್ರ ಪಯಣದಲ್ಲಿ 250 ಚಲನಚಿತ್ರಗಳಲ್ಲಿ ಅಭಿನಯ. 60ರ ದಶಕದಲ್ಲಿ ಚಲನಚಿತ್ರದಲ್ಲಿರುವ ಹಾಸ್ಯಕ್ಕೆ ಜನ ಮನಸೋತು. ನರಸಿಂಹರಾಜು, ಬಾಲಕೃಷ್ಣ ಇದ್ದರೇನೇ ಚಲನಚಿತ್ರ ಎಂದು ಹೇಳತೊಡಗಿದರು. ಈ ಹಾಸ್ಯ ಕಲಾವಿದರ ಕಾಲ್‌ಶೀಟ್ ಪಡೆದ ಮೇಲೆ ನಾಯಕರ ಕಾಲ್‌ಶೀಟ್ ಪಡೆಯುವ ಮಟ್ಟಿಗೆ, ಇವರು ಹಾಸ್ಯ ಚಕ್ರವರ್ತಿ, ಹಾಸ್ಯರತ್ನ ಆದರು. ನಾಯಕ ರಾಜಕುಮಾರ್‌ಗಿಂತ ಮೊದಲು, ಮದ್ರಾಸ್‌ನಲ್ಲಿ ಮನೆಕಟ್ಟಿದ ಮೊಟ್ಟಮೊದಲ ಕನ್ನಡ ಚಲನಚಿತ್ರ ಕಲಾವಿದರು ಇವರು. ಕುಟುಂಬವನ್ನು ಬಹಳ ಪ್ರೀತಿಸುತ್ತಿದ್ದ ನರಸಿಂಹರಾಜು ಬೆಂಗಳೂರಿನಲ್ಲೂ ಮನೆ ಕಟ್ಟಿದರು. ಚಲನಚಿತ್ರಗಳ ಅಭಿನಯದಲ್ಲಿ ಸ್ಟಾರ್ ಹಾಸ್ಯಕಲಾವಿದರಾಗಿದ್ದರೂ, ಕೊಂಚ ಬಿಡುವು ಸಿಕ್ಕರೂ ಕರ್ನಾಟಕದ ಮೂಲೆ ಮೂಲೆಗೆ ಹೇಗೆ ನಾಟಕ ಕಂಪನಿಗಳಲ್ಲಿ ಪಾತ್ರ ವಹಿಸುತ್ತಿದ್ದರು. ಆಗ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಬಿಝಿ ಇದ್ದ ಕಲಾವಿದರು ಇವರೇ ಆಗಿದ್ದರು. ಆದರೆ ಈ ಕನ್ನಡದ ಹಾಸ್ಯರತ್ನಕ್ಕೆ ರಾಜ್ಯ ಅಥವಾ ರಾಷ್ಟ್ರದ ಯಾವುದೇ ಪ್ರಶಸ್ತಿ ಸಿಗಲಿಲ್ಲ.
ವಿವಾಹ: ಸ್ಕೂಲ್ ಮಾಸ್ಟರ್ ಚಿತ್ರದಲ್ಲಿ ಭಾಮೆಯ ನೋಡಲು ತಾ ಬಂದ ಗೀತೆಯ ಚಿತ್ರಣದಲ್ಲಿ ಭಾವಿ ಅಳಿಯನಾಗಿ ಮೇಷ್ಟ್ರ ಮಗಳನ್ನು ನೋಡಲು ಬಂದು ಪಿಳಿಪಿಳಿ ಕಣ್ಣು ಬಿಡುತ್ತಿದ್ದ ಪಾತ್ರ ನರಸಿಂಗರಾಜು ಅವರದ್ದು. ನಿವೃತ್ತ ಶಾಲಾ ಮಾಸ್ಟರ್‌ನ ಮಕ್ಕಳು ಕೈ ಬಿಟ್ಟರೂ, ಕೈ ಹಿಡಿದ ಅಳಿಯನ ಪಾತ್ರದಲ್ಲಿ ಇವರು ರಂಜಿಸಿದರು. 1949ರಲ್ಲಿ ಇವರನ್ನು ಕೈ ಹಿಡಿದ ಶಾರದಮ್ಮ ಅವರು, ನಿಜ ಜೀವನದಲ್ಲಿ ಈ ಚಿತ್ರಕ್ಕೆ ಮೊದಲೇ ನರಸಿಂಹರಾಜು ಅವರ ನಾಚಿಕೆಯ ಕಣ್ಣೋಟ ಕಂಡಿದ್ದರಂತೆ. ಚಲನಚಿತ್ರದ ದೃಶ್ಯಗಳ ರಿಹರ್ಸಲ್‌ನಲ್ಲಿ ನರಸಿಂಹರಾಜು ಆಂಗಿಕ ಅಭಿನಯ ಮಾಡಿದರೆ ಎರಡೂ ಕಿವಿ ಕೇಳಿಸದ ಬಾಲಣ್ಣ ಚೆನ್ನಾಗಿ ಅರ್ಥಮಾಡಿಕೊಂಡು ಇವರಿಬ್ಬರೂ ಪ್ರತಿ ಚಿತ್ರದ, ಪ್ರತಿ ದೃಶ್ಯದಲ್ಲೂ ಉತ್ತಮವಾಗಿ ಅಭಿನಯಿಸಲು ಸಾಧ್ಯವಾಯಿತು. 1947 ರಲ್ಲಿ ಬರ ಪರಿಹಾರ ನಿಧಿಗಾಗಿ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯದಲ್ಲಿ, ನರಸಿಂಹರಾಜು ಆರಂಭಿಕ ಬ್ಯಾಟ್ಸ್ಮನ್. ಮೊದಲ ಚೆಂಡಿನಲ್ಲೇ ಎತ್ತರದ ಅಮಿತಾಬ್ ಬಚ್ಚನ್, ನರಸಿಂಹರಾಜುರವರನ್ನು ಬೋಲ್ಡ್ ಮಾಡಿದರು. ಆಗ ಒನ್ ಮೋರ್ ಚಾನ್ಸ್ ಎಂದು ನರಸಿಂಹರಾಜು ಕೂಗಿದಾಗ, ಇಡೀ ಸ್ಟೇಡಿಯಂನ ಜನ ನಗುವಿನ ಅಲೆಯಲ್ಲಿ ತೇಲಿದರಂತೆ. ಕೆ.ಎಸ್.ಅಶ್ವಥ್ ಒಮ್ಮೆ ನರಸಿಂಹರಾಜು ಅವರನ್ನು ಮೆಚ್ಚಿ ಹೊಗಳಿದ ಮಾತುಗಳು ಇವು "ನರಸಿಂಹರಾಜು ನಿಮ್ಮ ಬಗ್ಗೆ ನನಗೆ ಗರ್ವವಿದೆ. ಮದ್ರಾಸಿನಲ್ಲಿ ಮನೆ, ಕಾರು, ಫೋನು ಹಾಗೂ ಆದಾಯ ತೆರಿಗೆ ಕಟ್ಟಿದ ಮೊದಲ ಕನ್ನಡ ನಟ ನೀವು''. ತಮಿಳು ಚಿತ್ರರಂಗದಿಂದ ಭಾರಿ ಬೇಡಿಕೆ ಬಂದರೂ, ಕನ್ನಡ ಚಿತ್ರರಂಗಕ್ಕೆ ಮೀಸಲಾಗಿಟ್ಟ ತಮ್ಮ ಜೀವನದಿಂದ, ಇವರ ಕನ್ನಡ ಪ್ರೇಮ ಸ್ಪಷ್ಟವಾಗಿ ಗೋಚರವಾಗುತ್ತದೆ.
ಹಿಂದೆ ಕನ್ನಡ ಚಿತ್ರರಂಗದ ಕಲಾವಿದರು ಹಾಗೂ ಅವರ ಕುಟುಂಬ ಸದಸ್ಯರು ಆತ್ಮೀಯವಾಗಿದ್ದರು. ಶಾರದಮ್ಮ ಅವರು ಒಮ್ಮೆ ಆರೋಗ್ಯ ಸಮಸ್ಯೆಯಿಂದ ರಾಯಲ್ ಪೇಟೆಯ ಆಸ್ಪತ್ರೆಯಲ್ಲಿದ್ದಾಗ, ಹರಿಣಿ, ಪಂಢರೀಬಾಯಿ ಹಾಗೂ ಸರೋಜಾದೇವಿ ಅವರು ಇವರಿಗೆ ಬಹಳ ಸಹಾಯ ಸೇವೆ ಮಾಡಿದರಂತೆ. ಜಿ.ವಿ.ಅಯ್ಯರ್ ಅವರ ಹೆಂಡತಿ ಸುಂದರಮ್ಮ, ನರಸಿಂಹರಾಜು, ರಾಜಕುಮಾರ್, ಬಾಲಣ್ಣ ಹಾಗೂ ಜಿ.ವಿ.ಅಯ್ಯರ್ ಅವರಿಗೆ ಎಷ್ಟೋ ಬಾರಿ ಕೈ ತುತ್ತು ಹಾಕುತ್ತಿದ್ದರಂತೆ. ಸುಂದರಮ್ಮ ಹೇಳುತ್ತಿದ್ದರಂತೆ. "ಇವರೆಲ್ಲ ನಾಳೆ ಬೇರೆ ಬೇರೆ ದಾರಿ ಹಿಡಿಯಬಹುದು. ಆದರೆ ನನ್ನ ಹೃದಯದಲ್ಲಿ ಈ ನಾಲ್ವರ ಅಮರ ಸ್ನೇಹ, ಬಾಲನರಸಿಂಹರಾಜ ಅಯ್ಯರ್ ಆಗಿ ಉಳಿದಿದೆ"
ಇವರ ಕೆಲವು ಚಲನಚಿತ್ರಗಳು ಹಾಗೂ ಪಾತ್ರಗಳು: ಸಂಧ್ಯಾರಾಗ ಚಿತ್ರದಲ್ಲಿ ಅನಾಥನಾಗಿ, ಪತ್ರಿಕಾ ಸಂಪಾದಕನಾಗಿ, ಉತ್ತಮ ಪೋಷಕ ಪಾತ್ರ ಮಾಡಿದ್ದಾರೆ. ಎಂ.ಆರ್.ವಿಠ್ಠಲ್ ನಿರ್ದೇಶನದ ನಕ್ಕರೇ ಅದೇ ಸ್ವರ್ಗ ಚಿತ್ರದ ನಾಯಕನಾಗಿ, ನಗಬೇಕು ನಗಿಸಬೇಕು ಎಂಬ ಹಾಡಿಗೆ ಅಭಿನಯಿಸಿ, ಜೀವನದಲ್ಲಿ ನಗುವಿನ ಸಂದೇಶ ಸಾರಿದರೆ, ಪ್ರೊ.ಹುಚ್ಚೂರಾಯದಲ್ಲಿ ಮರಗೂಳಿ ಪ್ರೊಫೆಸರ್ ಆಗಿ, ಹಾಸ್ಯ ಕರುಣೆ, ತತ್ವಶಾಸ್ತ್ರ ಪ್ರತಿಪಾದಿಸಿದ್ದಾರೆ. ಲಗ್ನಪತ್ರಿಕೆ ಚಿತ್ರದಲ್ಲಿ ಬ್ರಹ್ಮಚಾರಿಗಳ ಸಂಘದ ಸದಸ್ಯನಾಗಿ, ರಾಜಕುಮಾರ್ ಜೊತೆ ಮದುವೆ ವಿರೋಧಿ ಪಾತ್ರದಲ್ಲಿ ರಂಜಿಸಿದರು. ಬೆಂಗಳೂರು ಮೇಲ್ ಚಿತ್ರದಲ್ಲಿ ಕೊಲೆಗಾರನನ್ನು ಕಂಡು ಬೆದರಿದರೂ ಪೊಲೀಸರಿಗ ರಹಸ್ಯ ಭೇದಿಸುವ ಪಾತ್ರ ಮಾಡಿದರು. ಪ್ರೇಮಕ್ಕೂ ಪರ್ಮಿಟ್ಟೇ ಚಿತ್ರದಲ್ಲಿ ಕಲ್ಯಾಣಕುಮಾರ್, ಕಲ್ಪನಾ, ಜ್ಯೂನಿಯರ್ ರೇವರಿ ಅವರೊಂದಿಗೆ ಹಾಡಿ ಕುಣಿದರು. ರತ್ನಮಂಜರಿ ಚಿತ್ರದಲ್ಲಿ ಮಾಂತ್ರಿಕನ ಗುಹೆಯಲ್ಲಿ ಶಿರಮಾತ್ರ ಕಾಣಿಸುವ ದೃಶ್ಯ. ಯಾರು ಯಾರೂ ನೀ ಯಾರು ಹಾಡಿನ ದೃಶ್ಯದಲ್ಲಿ ಎಂ.ಎನ್. ಲಕ್ಷ್ಮೀದೇವಿ ಅವರೊಂದಿಗೆ ಇವರು ಹಾಡಿ ಕುಣಿದರು. ಬೀದಿ ಬಸವಣ್ಣದಲ್ಲಿ ಸಿ.ಐ.ಡಿ. ಆಗಿ, ರಂಗಮಹಲ್ ರಹಸ್ಯ ಹಾಗೂ ಅಪರಾಧಿ ಚಿತ್ರಗಳಲ್ಲಿ ಮುಗ್ಧನಂತೆ ಕಾಣುವ ನಿಶ್ಯಬ್ಧ ಖಳನಾಯಕನಾಗಿ ಅಭಿನಯಿಸಿದ್ದಾರೆ.
ಆಘಾತಗಳು: ಅವರ ಜೀವನದಲ್ಲಿ ಒದಗಿದ ಆಘಾತಗಳು ಎರಡು. ಒಂದು ಅಪಘಾತದಲ್ಲಿ ಅವರು ಅಪಾರವಾಗಿ ಪ್ರೀತಿಸುತ್ತಿದ್ದ, ಅವರ ಮಗ ಶ್ರೀಕಾಂತನ ಅಕಾಲಿಕ ಸಾವು. ಎರಡು-ಇವರು ನಿರ್ಮಾಪಕರಾಗಿ, ವಿಷ್ಣುವರ್ಧನ್, ಮಂಜುಳಾ, ಲೀಲಾವತಿ ಅವರೊಂದಿಗೆ ತಾವೂ ಅಭಿನಯಿಸಿದ್ದ, ಪ್ರೊ. ಹುಚ್ಚೂರಾಯ ಚಲನಚಿತ್ರ ಸೋಲು. ಮಗನ ಹೆಸರಲ್ಲೇ ಚಿತ್ರ ನಿರ್ಮಾಣ ಮಾಡಿದ್ದ ನರಸಿಂಹರಾಜು ಅವರಿಗೆ ಮಗನ ಅಗಲುವಿಕೆ ಅಪಾರ ದುಃಖ ತಂದು, ಸಹಿಸಲಾಗದ ಸಂಕಟ ಕೊಟ್ಟಿತು. ಈ ನೋವಿನಲ್ಲೇ ಇವರು ತಮ್ಮ 56ನೇ ವಯಸ್ಸಿನಲ್ಲಿ, 11.07.1974 ರಂದು ನಿಧನ ಹೊಂದಿದರು. ಇವರ ಸ್ಮರಣೆಯಲ್ಲಿ ನರಸಿಂಹರಾಜು ಪ್ರಶಸ್ತಿ ಸ್ಥಾಪಿಸಲಾಯಿತು.
ಇವರ ಕೆಲವು ಚಲನಚಿತ್ರಗಳು ಹಾಗೂ ಪಾತ್ರಗಳು: ಬಳಹಳಷ್ಟು ಚಿತ್ರಗಳಲ್ಲಿ ನಾಯಕ ಪಾತ್ರಧಾರಿಯಾಗಿದ್ದ ರಾಜಕುಮಾರ್‌ಗೆ ಮಿತ್ರನ ಪಾತ್ರ ನರಸಿಂಹರಾಜು ಅವರದ್ದು ಹಾಗೂ ಬಾಲಕೃಷ್ಣ ಅವರ ಪಾತ್ರ ಖಳನಾಯಕ ಮಿತ್ರನದು. ನೂರಾರು ಚಿತ್ರಗಳಲ್ಲಿ ಇವರಿಬ್ಬರು ಕಲಾವಿದರ ಚಾಲೆಂಜ್, ತಂತ್ರ ಪ್ರತಿತಂತ್ರಗಳು ಜನರನ್ನು ರಂಜಿಸುತ್ತಿದ್ದವು. ಪೌರಾಣಿಕವಾಗಿರಲಿ, ಸಾಮಾಜಿಕ ಅಥವಾ ಜಾನಪದವಾಗಿರಲಿ ಬಾಂಡ್ ಚಿತ್ರವಾಗಿರಲಿ, ನರಸಿಂಹರಾಜುಗೆ ಪಾತ್ರ ಖಾಯಂ ಆಗಿತ್ತು. 1954 ರಲ್ಲಿ ಬೇಡರ ಕಣ್ಣಪ್ಪ ಮೊದಲ ಚಿತ್ರವಾದರೆ, 1980 ರಲ್ಲಿ ಬಿಡುಗಡೆಯಾದ ಮಂಜಿನ ತೆರೆ ಕೊನೆಯ ಚಿತ್ರ. 1958 ರಲ್ಲಿ ಹಿಂದೀ ಚಲನಚಿತ್ರ ಚೋರಿ ಚೋರಿಯಲ್ಲಿ ಅತಿಥಿ ಕಲಾವಿದರಾಗಿ ಅಭಿನಯಿಸಿದ್ದು ಉಂಟು. 1960ರಲ್ಲಿ ಎಂ.ವಿ.ರಾಜಮ್ಮ ನಿರ್ಮಿಸಿದ ಬಿ.ಆರ್. ಪಂತಲು ನಿರ್ದೇಶನದ ಮಕ್ಕಳರಾಜ್ಯ ಚಿತ್ರದಲ್ಲಿ ಬಾಲಕಲಾವಿದ ಉಮೇಶ್ ಹಾಗೂ ಶಿವಾಜಿ ಗಣೇಶನ್ ಜೊತೆ ಅಭಿನಯಿಸಿದ್ದಾರೆ.
ಐತಿಹಾಸಿಕ ಪಾತ್ರಗಳು: 1960 ರಲ್ಲಿ ಸಿ.ವಿ.ರಾಜು ನಿರ್ದೇಶಿಸಿದ, ರಣಧೀರ ಕಂಠೀರವ ಚಿತ್ರ ನಿರ್ಮಿಸಿದ ರಾಜಕುಮಾರ್, ಜಿ.ವಿ.ಅಯ್ಯರ್, ಬಾಲಕೃಷ್ಣ ಅವರೊಂದಿಗೆ ನರಸಿಂಹರಾಜು ಸಹ, ನಿರ್ಮಾಪಕರಾಗಿ ಅಭಿನಯಿಸಿದ್ದರು. ಬಿ.ಆರ್. ಪಂತಲು, ನಿರ್ದೇಶನದ ಕಿತ್ತೂರು ಚೆನ್ನಮ್ಮ, ಶ್ರೀಕೃಷ್ಣದೇವರಾಯ (ತೆನಾಲಿ ರಾಮಕೃಷ್ಣ), ಆರ್.ನಾಗೇಂದ್ರರಾವ್ ನಿರ್ದೇಶನದ ವಿಜಯನಗರದ ವೀರಪುತ್ರ, ಅಮರಶಿಲ್ಪಿ ಜಕಣಚಾರಿ, ಇಮ್ಮಡಿಪುಲಿಕೇಶಿ ಮುಂತಾದವು.
ಪೌರಾಣಿಕ ಚಿತ್ರಗಳು: ಶಿವಭಕ್ತ ಮಾರ್ಕಂಡೇಯ, ಹರಿಭಕ್ತ, ರೇಣುಕಾ ಮಹಾತ್ಮೆ, ಭಕ್ತ ಪ್ರಹ್ಲಾದ, ಜಗಜ್ಯೋತಿ ಬಸವೇಶ್ವರ, ಧರ್ಮವಿಜಯ, ದಶಾವತಾರ, ಕೈವಾರ ಮಹಾತ್ಮೆ, ನಾಗಾರ್ಜುನ, ಸ್ವರ್ಣಗೌರಿ, ವಾಲ್ಮೀಕಿ, ಚಂದ್ರಕುಮಾರ, ಶಿವರಾತ್ರಿ ಮಹಾತ್ಮೆ, ಸತ್ಯಹರಿಚಂದ್ರ, ಭಕ್ತ ಕನಕದಾಸ, ಗಂಗೆಗೌರಿ, ಮಹಿಷಾಸುರಮರ್ದಿನಿ ಮುಂತಾದವು.
ಕಾದಂಬರಿ ಹಾಗೂ ಸಾಹಿತ್ಯ ಆಧರಿಸಿದ ಚಿತ್ರಗಳು: ಮೊಟ್ಟಮೊದಲ ಕಾದಂಬರಿ ಆಧಾರಿತ ಚಿತ್ರ: ಕರುಣೆಯೇ ಕುಟುಂಬದ ಕಣ್ಣು, ಕುಲವಧು, ಪ್ರಭುಲಿಂಗಲೀಲೆ, ಚಂದ್ರಹಾಸ, ಮಿಸ್ ಲೀಲಾವತಿ, ನಳ ದಮಯಂತಿ, ಅಬ್ಬಾ ಆ ಹುಡುಗಿ, ರಾಜಶೇಖರ ಮುಂತಾದವು.
ಜಾನಪದ ಹಾಗೂ ಕಾಲ್ಪನಿಕ ಚಿತ್ರಗಳು: ಸದಾರಮೆ, ರಾಣಿ ಹೊನ್ನಮ್ಮ, ವಿಧಿವಿಲಾಸ, ಸತಿಶಕ್ತಿ, ಶ್ರೀಕನ್ನಿಕಾಪರಮೇಶ್ವರಿ ಕಥಾ, ದೇವರಗೆದ್ದ ಮಾನವ ಸಿಂಹಸ್ವಪ್ನ ಮುಂತಾದವು.
ಸಾಮಾಜಿಕ ಹಾಗೂ ಕೌಟುಂಬಿಕ ಚಿತ್ರಗಳು: ಗಾಳಿಗೋಪುರ, ಭೂದಾನ, ನಂದಾದೀಪ, ಜೇನುಗೂಡು, ಚಿನ್ನದಗೊಂಬೆ, ಪ್ರತಿಜ್ಞೆ, ನವಜೀವನ, ವಾತ್ಸಲ್ಯ, ಲವ್ ಇನ್ ಬೆಂಗಳೂರು, ತೂಗುದೀಪ, ಮನಸ್ಸಿದ್ದರೆ ಮಾರ್ಗ, ಬಂಗಾರದ ಹೂವು, ಗಾಂಧಿನಗರ ಮುಂತಾದವು.
ಬಾಲಿಡ್‌ಚಿತ್ರಗಳು: ಜೇಡರ ಬಲೆ, ಗೋವಾದಲ್ಲಿ ಸಿ.ಐ.ಡಿ. 999, ಆಪರೇಷನ್ ಜಾಕ್‌ಪಾಟ್‌ನಲ್ಲಿ ಸಿ.ಐ.ಡಿ. 999. ಇವರ ಮಗಳು ಸುಧಾನರಸಿಂಹರಾಜು, ಟಿ.ವಿ., ಧಾರಾವಾಹಿ ಹಾಗೂ ಚಲನಚಿತ್ರ ಕಲಾವಿದರು. ಒಬ್ಬ ಮೊಮ್ಮಗ ಅವಿನಾಶ್ ನರಸಿಂಹರಾಜು ಕಲಾವಿದರಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ, ಇನ್ನೊಬ್ಬ ಮೊಮ್ಮಗ ನಿರ್ದೇಶಕರಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ