ಎಳವೆಯಲ್ಲಿ ನಮಗಿದ್ದ ಮನರಂಜನೆಯ ಮಾಧ್ಯಮವೆಂದರೆ ರೇಡಿಯೋ ಎಂಬ ಪುಟ್ಟ ಪೆಟ್ಟಿಗೆ ಮಾತ್ರ. ಅದರಲ್ಲೂ ‘ಕೋರಿಕೆ’ ಎಂಬ ಚಿತ್ರಗೀತೆಗಳ ಕಾರ್ಯಕ್ರಮ ಬಿತ್ತರವಾಗುತ್ತಿದ್ದ ಸಮಯವಂತೂ ಪ್ರೈಮ್ ಟೈಮ್ ಆಗಿದ್ದು ಆ ಅವಧಿಯಲ್ಲಿ ಎಷ್ಟೋ ಮನೆಗಳಲ್ಲಿ ಚಿತ್ರಗೀತೆಗಳ ಹೊರತು ಬೇರೊಂದು ಶಬ್ದವೂ ಕೇಳುತ್ತಿರಲಿಲ್ಲ. ಅಂಥದ್ದೊಂದು ಮಧುರ ಹೊತ್ತಿನಲ್ಲಿ ಉದ್ಘೋಷಕರು ಹಾಡು, ಚಲನ ಚಿತ್ರದ ವಿವರದ ಜೊತೆಗೆ ಸಂಗೀತ ಸಂಯೋಜನೆ ವಿಜಯಭಾಸ್ಕರ್ ಎಂದಾಗಲೇ ನಾನು ಮೊದಲ ಬಾರಿಗೆ ಅವರ ಹೆಸರು ಕೇಳಿದ್ದು. ಸಿನೆಮಾಗಳ ವ್ಯಾಮೋಹವಿಲ್ಲದ ನನಗೆ ಎಂಥ ದೊಡ್ಡ ಹೆಸರಾದಾರೂ ಬರಿಯ ಪದವಾಗಿತ್ತೇ ಹೊರತು ಅವರು ಸಂಗೀತ ಸಾಮ್ರಾಟ್ ಎಂದಾಗಲೀ, ಅವರ ವ್ಯಕ್ತಿತ್ವದ ವಜನಾಗಲೀ ರೇಡಿಯೋ ಮೇಲಾಣೆಗೂ ಗೊತ್ತಿರಲಿಲ್ಲ. ನಂತರದ ದಿನಗಳಲ್ಲಿ ಚಲನಚಿತ್ರದ ತೆರೆಯ ಹಿಂದಿನ ಕಲಾಕಾರರು, ಅವರ ಮಹತ್ವ ಅರಿವಿಗೆ ಬಂದಿದ್ದರೂ ಯಾಕೋ ಹೆಚ್ಚು ತಿಳಿದುಕೊಳ್ಳುವ ಕುತೂಹಲ ಹುಟ್ಟಿರಲಿಲ್ಲ. ಬಹುಕಾಲದ ಈ ಅಜ್ಞಾನವನ್ನು ತೊಡೆದು ಹಾಕಿದ್ದು ಶ್ರೀ ಎನ್. ಎಸ್. ಶ್ರೀಧರಮೂರ್ತಿಯವರು ಬರೆದ ‘ಎಲ್ಲೆಲ್ಲು ಸಂಗೀತವೇ’– ವಿಜಯಭಾಸ್ಕರ್ ಜೀವನ ಸಾಧನೆ ಎಂಬ ಪುಸ್ತಕ.
ಪುಸ್ತಕದ ಬಗ್ಗೆ ಹೇಳುವ ಮುನ್ನ ಈ ಲೇಖಕರ ಬಗ್ಗೆ ವಿಶೇಷ ವಿಷಯವೊಂದನ್ನು ಹೇಳಲೇಬೇಕು. ‘ಎಲ್ಲೆಲ್ಲು ಸಂಗೀತವೇ’ ಇವರ 53ನೆಯ ಪುಸ್ತಕ. ಇಷ್ಟರಲ್ಲಿ ಬಿಡುಗಡೆಯ ಕಾರ್ಯಕ್ರಮ ಆಗಿದ್ದು ಕೇವಲ 9-10 ಪುಸ್ತಕಗಳಿಗೆ ಮಾತ್ರ; ಅದೂ ಆರಂಭಿಕ ದಿನಗಳವು. ಕಾರ್ಯಕ್ರಮ ಬೇಡವೆಂದಲ್ಲ; ಪ್ರಕಟವಾಗಿ ಹೊರಬಂದ ಒಂದು ವಾರದೊಳಗೆ ಕೊನೆಯ ಪ್ರತಿಯೂ ಖಾಲಿಯಾಗುತ್ತಿತ್ತು ಮತ್ತು ಎಷ್ಟೋ ಸಲ 2-3ನೆಯ ಮುದ್ರಣದ ಕಥೆಯೂ ಹೀಗೇ ಆಗುತ್ತಿತ್ತು, ಹಾಗಾಗಿ ಬಿಡುಗಡೆಯ ಅವಶ್ಯಕತೆಯೇ ಬರುತ್ತಿರಲಿಲ್ಲ. ಇದರ ಹಿಂದಿನ ಕಾರಣವಿಷ್ಟೇ; ಇವರಷ್ಟೇ ಮೌನವಾಗಿ ಇವರ ಬರಹಗಳಿಗೆ ಕಾದು First day first show ಎಂಬ ಹಾಗೆ ಪುಸ್ತಕ ಪ್ರಕಟವಾದ ತಕ್ಷಣ ಕೊಳ್ಳುವ ಓದುಗರಿದ್ದಾರೆ. ಮತ್ತು ಈ ಗುಂಪು ರಮೇಶ್ ಅರವಿಂದ್ ಥರದ ಖ್ಯಾತರಿಂದ ಹಿಡಿದು ನನ್ನಂಥ ಅಜ್ಞಾತ ಓದುಗರನ್ನು ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಪುಸ್ತಕದ ನಾಯಕ ಮತ್ತು ಲೇಖಕರು ಇಬ್ಬರೂ ಬಹುಮಟ್ಟಿಗೆ ಸಮತೂಕದ ಹೀರೋಗಳು.
‘ಸಂಗೀತದ ವಿವಿಧ ಪ್ರಕಾರಗಳ ಹುಟ್ಟು ಮತ್ತು ಚಾರಿತ್ರಿಕ ಬೆಳವಣಿಗೆ’ ಎಂಬ ತಲೆಬರಹದೊಂದಿಗೆ ಶುರುವಾಗುವ ಪುಸ್ತಕದ ಈ ಅಧ್ಯಾಯದಲ್ಲಿ ಭಾರತೀಯ ಸಂಗೀತದ ಹಲವು ನೆಲೆಗಳ ಬಗ್ಗೆ ಹೇಳುತ್ತಾರೆ. ಇಲ್ಲಿ ಲೇಖಕರ ಸಂಗೀತ ಜ್ಞಾನ ಮತ್ತು ಆಳವಾದ ಅಧ್ಯಯನ ನಿಚ್ಚಳವಾಗಿದೆ. ‘ಕನ್ನಡ ಚಿತ್ರರಂಗದಲ್ಲಿ ಚಿತ್ರಗೀತೆಗಳ ಆರಂಭಿಕ ಘಟ್ಟ’ ಎಂಬುದರ ಅಡಿಯಲ್ಲಿ ಸಂಕ್ಷಿಪ್ತವಾಗಿ ಕನ್ನಡ ಚಿತ್ರಗೀತೆಗಳ, ಚಿತ್ರರಂಗದ ಇತಿಹಾಸ, ಜೊತೆಗೆ ಭಾರತೀಯ ಚಿತ್ರರಂಗದಲ್ಲಿನ ಸಂಗೀತ ಮತ್ತು ಸಂಬಂಧಿಸಿದ ಹಲವು ಆಯಾಮಗಳ ಬಗ್ಗೆ ವಿವರಗಳಿವೆ. ಇದರಲ್ಲಿ ಮೊದಲನೇ ದಿನದಿಂದ ಇವತ್ತಿನವರೆಗೆ ಗೀತೆಗಳ ರೆಕಾರ್ಡಿಂಗ್ ಬಗ್ಗೆ ಇರುವ ವಿವರಣೆಗಳು ಮತ್ತು ಬೆಳೆದು ಬಂದ ರೀತಿಯ ಸ್ಥೂಲ ಚಿತ್ರಣ ನನಗೆ ಬೆರಗೆನಿಸಿತು. ಇದು ಭಾರತೀಯ ಚಿತ್ರರಂಗದ ಬಗ್ಗೆ ಲೇಖಕರಿಗಿರುವ ಜ್ಞಾನವನ್ನೂ ಕಣ್ಣ ಮುಂದಿಟ್ಟಿತು.
ನಂತರ ಶುರುವಾಗುವುದು ವಿಜಯಭಾಸ್ಕರ್ ಅವರ ಬದುಕಿನ ನೋಟಗಳು ಮತ್ತು ಅವರ ಕಾರ್ಯ ವೈಖರಿಯ ವಿವರಗಳು. ಬಹಳಷ್ಟು ಮಂದಿಯ ಹಾಗೆ ವಿಜಯಭಾಸ್ಕರ್ ಎಂಬ ಸಂಗೀತ ಮಾಂತ್ರಿಕರು ಕೂಡ ಮೊದಲು ಮುಂಬೈಗೆ ಹೋದಾಗ ಆ ಮಹಾನಗರಿ ಅವರನ್ನು ಪೊರೆಯದೇ ಇದ್ದುದಕ್ಕೆ ಧನ್ಯವಾದ; ಹಾಗಾಗಿಯೇ ಅವರು ಕನ್ನಡಕ್ಕೆ ದಕ್ಕಿದರು.
ಸಿನೆಮಾದಂಥ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯಾರದೇ ಅವರ ಬದುಕಿನ ಎಳೆಗಳನ್ನು ಬಿಡಿಸುವುದೆಂದರೆ ಅದು ಅವರೊಬ್ಬರ ಕಥೆಯಾಗಿರುವುದಿಲ್ಲ; ಅದರ ಜೊತೆಗೆ ಇನ್ನೆಷ್ಟೋ ಹೆಸರುಗಳು, ಕಥೆಗಳು ಬೆಸೆದಿರುತ್ತವೆ. ಅಷ್ಟನ್ನಿಡೀ ಎಳೆತಂದರೆ ಆ ಹರಹು ಬೇಡದಷ್ಟು ಬೆಳೆಯುವ ಅಪಾಯವೂ ಇರುತ್ತದೆ. ಇಂಥದ್ದನ್ನು ಮಣಿಸಿ ಚೌಕಟ್ಟಿನೊಳಗೆ ಹಾಕಲು ಶ್ರೀಧರಮೂರ್ತಿಯವರಂಥ ʼಸಕಲ ಕಲಾ ವಲ್ಲಭನ್ʼಗಷ್ಟೇ ಸಾಧ್ಯವಿರಬಹುದು. ವಿಜಯಭಾಸ್ಕರ್ ಅವರ ಜೊತೆ ಬೆಸೆದುಕೊಂಡ ಚಿತ್ರಗಳ ಹೆಸರು ಮಾತ್ರವಲ್ಲ, ಪ್ರತಿ ಚಿತ್ರದ ಕಥೆ, ಆ ಹಾಡಿನ ಸನ್ನಿವೇಶ, ಅದರೊಳಗಿನ ಸೂಕ್ಷ್ಮ ಭಾವಗಳು ಎಲ್ಲವನ್ನೂ ತಿಳಿದು, ನೆನಪಿಟ್ಟುಕೊಂಡು ಬರೆಯುವುದು ಸುಲಭವಲ್ಲ. ಇಂಥ ನೆನಪಿನ ಶಕ್ತಿಗೊಂದು ಸಲಾಂ ಮತ್ತು 2-3 ಕೆ.ಜಿ ಅಸೂಯೆ ನನ್ನ ಕಡೆಯಿಂದ ಉಡುಗೊರೆ.
ಅಧ್ಯಾಯವೊಂದರಲ್ಲಿ ಬರೆಯುತ್ತಾರೆ - ವಿಜಯಭಾಸ್ಕರ್ ಅವರಿಗೆ ಸಿನಿಮಾ ವ್ಯಾಕರಣ ಚೆನ್ನಾಗಿ ಗೊತ್ತಿತ್ತು. ಕಲಾತ್ಮಕ ಸಿನಿಮಾಗಳ ಅಗತ್ಯವನ್ನು ಈ ಕಾರಣಕ್ಕಾಗಿಯೇ ಅವರು ಗುರುತಿಸಬಲ್ಲವರಾಗಿದ್ದರು. ಎಷ್ಟೋ ಕಲಾತ್ಮಕ ಚಿತ್ರಗಳ ನಿರ್ದೇಶಕರಿಗೆ ತಾಂತ್ರಿಕ ವಿಷಯಗಳು ಗೊತ್ತಿರುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ವಿಜಯಭಾಸ್ಕರ್ ಈ ಚಿತ್ರಗಳಿಗೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕನ್ನಡದ ಕಲಾತ್ಮಕ ಚಳುವಳಿ ರಾಷ್ಟ್ರಮಟ್ಟದ ಗಮನ ಸೆಳೆಯುವಂತೆ ಬೆಳೆಯುವಲ್ಲಿ ವಿಜಯಭಾಸ್ಕರ್ ಅವರ ಕೊಡುಗೆ ಕೂಡ ಇದೆ. – ಇಂಥ ಅನೇಕ ವಿಚಾರಗಳು ಕನ್ನಡ ಚಿತ್ರರಂಗದ ಬೆಳವಣಿಗೆಯ ಹಂತದಲ್ಲಿ ಅವರು ನೀಡಿದ ಕೊಡುಗೆಗೆ ಕನ್ನಡಿ ಹಿಡಿಯುತ್ತವೆ.
ಇನ್ನೊಂದೆಡೆ ಹೀಗಿದೆ - ವಿಜಯಭಾಸ್ಕರ್ ಈ ಚಿತ್ರದಲ್ಲಿಯೇ ತಮ್ಮದೇ ಆದ ಸ್ವಂತ ಆರ್ಕೆಸ್ಟಾ ಹೊಂದಿದ್ದ ಗಾಯಕಿ ಕಸ್ತೂರಿ ಶಂಕರ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.– ಇಲ್ಲಿ 'ಸ್ವಂತ ಆರ್ಕೆಸ್ಟಾ ಹೊಂದಿದ್ದʼ ಎಂಬುದನ್ನು ಹೇಳುವ ಮೂಲಕ ವಿಷಯದ ಜೊತೆಗೆ ಪುರುಷ ಮಾತ್ರವೇ ಪ್ರಧಾನವಾಗಿದ್ದ ಆ ಕಾಲದಲ್ಲಿ ಗಾಯಕಿಯೊಬ್ಬರು ಮಾಡಿದ ಸಾಧನೆಯ ಮೇಲೂ ಬೆಳಕು ಚೆಲ್ಲುತ್ತಾರೆ. ಇದು ಕಲೆ-ಕಲಾವಿದರನ್ನು ಅಪಾರವಾಗಿ ಗೌರವಿಸಬಲ್ಲ ಬರಹಗಾರ ಮಾತ್ರ ಮಾಡಲು ಸಾಧ್ಯ. ಇಂಥ ಅನೇಕ ವಿಚಾರಗಳು ಪುಸ್ತಕದಲ್ಲಿದೆ.
ಕೆಲವು ಮಹತ್ವದ ಚಿತ್ರಗಳು ಎಂಬ ಅಧ್ಯಾಯದಲ್ಲಿ ಮಲಯ ಮಾರುತ ಚಿತ್ರದ ಬಗ್ಗೆ ಬರೆಯುವಾಗ ಚಿತ್ರದ ಹೆಸರನ್ನಷ್ಟೇ ಬರೆದು ಆಲ್ʼರೈಟ್ ಮುಂದಕ್ಕೋಗಣಾ ಅಂದಿದ್ದರೆ ಯಾವ ಓದುಗ ಕೂಡಾ ಬೇಸರಿಸಿಕೊಳ್ಳುತ್ತಿರಲಿಲ್ಲ. ಆದರೆ ಲೇಖಕರು ಹಿನ್ನೆಲೆಯ ಬಗ್ಗೆ ಹೀಗೆ ಬರೆಯುತ್ತಾ ನಮಗೆ ಚಿತ್ರದ ಬಗ್ಗೆ ಹೊಸ ಹೊಳಹನ್ನು ನೀಡುತ್ತಾರೆ. - ʼಮಲಯ ಮಾರುತʼ ಎನ್ನುವುದು ʼವಿಷ್ಣುಪುರಾಣʼದಲ್ಲಿ ಕಂಡು ಬರುವ ಪರಿಕಲ್ಪನೆ. ಭಾರತದ ಪ್ರಮುಖ ಏಳು ಪರ್ವತಶ್ರೇಣಿಗಳ ಪೈಕಿ ಮಲಯ ಪರ್ವತ ದಕ್ಷಿಣ ದಿಕ್ಕಿನಲ್ಲಿದೆ. ಇಲ್ಲಿಂದ ಬೀಸುವ ಗಾಳಿ ಸಂಗೀತದ ಮಿಡಿತವನ್ನು ನೀಡುವಂತೆ ವಿರಹಿಗಳಲ್ಲಿ ಪ್ರೇಮ ಭಾವವನ್ನು ಚಿಮ್ಮಿಸುತ್ತದೆ ಎಂದು ಉಲ್ಲೇಖಿತವಾಗಿದೆ. - ಇದು ಸಾಧ್ಯವಾಗುವುದು ಓದುಗರ ಮೇಲೆ ಪ್ರೀತಿಯಿಟ್ಟು ಬರೆಯಬಲ್ಲ ಬರಹಗಾರರಿಗೆ ಮಾತ್ರ ಎಂದು ನನ್ನ ನಂಬಿಕೆ. ಇನ್ನೊಂದು ಚಿತ್ರದ ಬಗ್ಗೆ ಹೇಳುತ್ತಾ- ‘ಮಣ್ಣಿನ ಮಗ’ ಗೆದ್ದಿತು. ರಾಷ್ಟಪ್ರಶಸ್ತಿಯನ್ನೂ ಪಡೆಯಿತು. ವಿಜಯ ಭಾಸ್ಕರ್ ಅವರ ಸಂಗೀತ ಈ ಗೆಲುವಿಗೆ ಬೆಂಗಾವಲಾಗಿತ್ತು. – ಇಂಥ ಸಂದರ್ಭಗಳಲ್ಲಿ ಸಂಗೀತ ಮತ್ತು ಸಂಯೋಜಕರ ಪ್ರಾಮುಖ್ಯ ಆ ಚಿತ್ರಕ್ಕೆ ಎಷ್ಟು ಮುಖ್ಯವಾಯಿತೆಂದು ಹೇಳಲು ಮರೆಯುವುದಿಲ್ಲ.
ಜನಮಾನಸದಲ್ಲಿ ಇಂದಿಗೂ ಉಳಿದಿರುವ ಸಿನೆಮಾದ ಆಫರ್ ಅಂದಿನ ಬಹುಬೇಡಿಕೆಯ ತಾರೆ ಕಲ್ಪನಾ ಅವರಿಗೆ ಬಂದಾಗ ಬೇರೆ ಚಿತ್ರಗಳಲ್ಲಿ ವ್ಯಸ್ತರಾಗಿದ್ದ ಅವರು ತನ್ನ ಬದಲಿಗೆ ಮಂಜುಳಾ ಅವರನ್ನು ನಾಯಕಿಯಾಗಿಸಲು ಹೇಳಿದ್ದಲ್ಲದೇ “ಎರಡು ಕನಸು ಚಿತ್ರದಲ್ಲಿ ನಾನು ಗಮನಿಸಿದ್ದೇನೆ. ಆಕೆ ಸೂಕ್ಷ್ಮಗಳನ್ನು ಹಿಡಿಯಬಲ್ಲ ಕಲಾವಿದೆ. ಈ ಸವಾಲನ್ನು ಖಂಡಿತ ಎದುರಿಸಬಲ್ಲಳು” ಎನ್ನುತ್ತಾರೆ. ಈ ಮಾತನ್ನು ಕಲ್ಪನಾ ಆತ್ಮವಿಶ್ವಾಸದಿಂದ ಹೇಳಿದಾಗ ಆಕೆಯ ಬಗ್ಗೆ ಗೌರವವನ್ನು ಇಟ್ಟುಕೊಂಡಿದ್ದ ಗೀತಪ್ರಿಯ ಈ ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸಿದರು. ʼಬೆಸುಗೆʼ ಚಿತ್ರ ಬಿಡುಗಡೆಯಾದ ನಂತರದ್ದು ಇತಿಹಾಸ. ಇಂಥವುಗಳು ನಟಿಯರ ನಡುವಿನ ಸೌಹಾರ್ದ, ಅವರೊಳಗಿದ್ದ ಮಾರ್ದವತೆಗಳನ್ನೂ ನಮ್ಮೆದುರಿಡುತ್ತವೆ.
ವಿಜಯಭಾಸ್ಕರ್ ‘ಪಂಚಮ ವೇದ ಪ್ರೇಮದ ನಾದ’ ಗೀತೆಯಲ್ಲಿ ಚತುಶ್ರುತ ರಿಷಭದ ಬದಲು ಶುದ್ಧ ರಿಷಭ ಬಳಸಿದರು. ಈ ಗೀತೆ ಸಂಯೋಜಿತವಾಗಿರುವ ಅಭೇರಿ ಅಥವಾ ಭೀಮ್ ಪಲಾಸ್ ಶ್ರೀಕೃಷ್ಣನೇ ಸೃಷ್ಟಿಸಿದ ಎಂದು ನಂಬಲಾದ ದೈವಿಕ ಪ್ರೇಮವನ್ನು ಹೇಳುತ್ತದೆ ಎಂದು ನಂಬಲಾದ ರಾಗ. ಚಿತ್ರದಲ್ಲಿ ಪ್ರೇಮ ಅಪೂರ್ಣವಾಗುತ್ತದೆ ಎನ್ನುವುದನ್ನು ಸೂಚಿಸುವ ಸಲುವಾಗಿ ಈ ಪ್ರಯೋಗವನ್ನೇ ಮಾಡಿದರು. – ಇಂಥ ಪ್ರಯೋಗಗಳನ್ನು ಮಾಡಿದ ವಿಜಯಭಾಸ್ಕರ್ ಅವರದ್ದು ಅಧ್ಬುತ ನೈಪುಣ್ಯವಾದರೆ, ಅವರು ನಮ್ಮೊಡನಿಲ್ಲದೇ ಇಷ್ಟು ವರ್ಷಗಳ ನಂತರವೂ ಇದನ್ನು ನೆನಪಿಟ್ಟುಕೊಂಡು ಬರೆದ ಲೇಖಕರದ್ದೂ ಅಮಿತ ಪ್ರತಿಭೆಯೇ.
ವಿಜಯಭಾಸ್ಕರ್ ‘ಸಿನಿ ಮ್ಯೂಸಿಶಿಯನ್ಸ್ ಅಸೋಸಿಯೇಷನ್ʼನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಾಡಿದ ಹಲವಾರು ಉತ್ತಮ ಕೆಲಸಗಳು ಅವರ ದೂರದೃಷ್ಟಿಗೆ ಉದಾಹರಣೆಯೂ ಹೌದು. ಆಗ ಅವರು ಕೈಗೊಂಡ ಹಲವಾರು ನಿರ್ಧಾರಗಳಿಂದ ಸಿನಿಮಾ ಸಂಗೀತ ವಿಭಾಗದಲ್ಲಿ ದುಡಿಯುತ್ತಿದ್ದ ಕಾರ್ಮಿಕರ ಮಕ್ಕಳು ಶಿಕ್ಷಣ ಪಡೆಯುವುದು ಸಾಧ್ಯವಾಯಿತು. ವಿಜಯಭಾಸ್ಕರ್ ಅವರ ಸಿನಿಪಯಣ ಮಾತ್ರವಲ್ಲದೇ ಅವರ ಸಾಮಾಜಿಕ ಕಾಳಜಿಯನ್ನೂ ಎತ್ತಿ ತೋರಿದ್ದು ಲೇಖಕರ ಸೂಕ್ಷ್ಮ ಒಳನೋಟಕ್ಕೆ ಸಾಕ್ಷಿ. ಇದಲ್ಲದೇ ಪುಸ್ತಕದಲ್ಲಿ ಬರಹಗಾರ ವಿಜಯಭಾಸ್ಕರ್ ವ್ಯಕ್ತಿತ್ವದ ಇನ್ನೊಂದು ಆಯಾಮವನ್ನೂ ಅನಾವರಣ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯರು ಒಬ್ಬೊಬ್ಬರಾಗಿ ತೆರಳುತ್ತಿರುವ ಹೊತ್ತಿನಲ್ಲಿ ಇಂಥ ಪುಸ್ತಕಗಳು ಹಿರಿಯರ ಸಾಧನೆಯನ್ನು, ವ್ಯಕ್ತಿತ್ವವನ್ನು ನಾಡಿನ ಮುಂದೆ ತೆರೆದಿಡುವ ಮೂಲಕ ವಿಶೇಷ ಮಹತ್ವವನ್ನು ಪಡೆಯುತ್ತವೆ. ಜೊತೆಗೆ ಈ ಕ್ಷೇತ್ರದಲ್ಲಿ ಅಧ್ಯಯನ ಮಾಡುವವರಿಗೆ, ಸಂಶೋಧನೆ ಕೈಗೊಳ್ಳುವವರಿಗೆ ಕೂಡಾ ಅನನ್ಯ ಆಕರ ಗ್ರಂಥವಾಗಬಲ್ಲದು. ಅಲ್ಲಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಿದ್ದು ಅವುಗಳಿಗೆ ಅಡಿಬರಹ ಇದ್ದರೆ ಚೆನ್ನಿತ್ತು.
ಕೊಸರು:
• ಪುಸ್ತಕದ ತುಂಬಾ ಹರಡಿರುವ ಕಾಗುಣಿತ ಮತ್ತು ಅಕ್ಷರ ದೋಷಗಳು ಕರಡು ತಿದ್ದಿದವರ (ಅವರ್ಯಾರು ಎಂಬುದು ನನಗೆ ಗೊತ್ತಿಲ್ಲ) ನಿರ್ಲಕ್ಷ್ಯವನ್ನು, ಭಾಷೆಯ ಬಗ್ಗೆ ಇರುವ ಉಪೇಕ್ಷೆಯನ್ನು ಎತ್ತಿ ತೋರಿಸುತ್ತಿವೆ. ಕೆಲವೆಡೆಯಂತೂ ಭಾಷೆ ಕಲಿಕೆಯ ಪ್ರಾಥಮಿಕ ಹಂತದಲ್ಲಿರುವವರೂ ಗುರುತಿಸಬಹುದಾದ ತಪ್ಪುಗಳಿವೆ.
• ವಿಜ್ಞಾನದ ಬರಹ ತಿದ್ದುವವರಿಗೆ ವಿಜ್ಞಾನ ಗೊತ್ತಿರಬೇಕು ಎಂದ ಹಾಗೆ, ಇಂಥ ಪುಸ್ತಕಗಳ ಕರಡು ತಿದ್ದುವವರಿಗೆ ಭಾಷೆ ಗೊತ್ತಿದ್ದರೆ ಸಾಲದು, ಆ ಕ್ಷೇತ್ರದ ಬಗ್ಗೆ ಕನಿಷ್ಠ ತಿಳುವಳಿಕೆಯಾದರೂ ಇರಬೇಕು ಎಂದು ಅರಿವಾಯಿತು. ಇಲ್ಲದಿದ್ದರೆ ನಾಮಪದಗಳನ್ನು ಕೂಡಾ ತಪ್ಪಾಗಿಯೇ ಓದಬೇಕಾದ ನೋವು ಓದುಗರಿಗೆ ಅನಿವಾರ್ಯವಾಗುತ್ತದೆ.
• ಮೇಲಿನ ಎರಡೂ ಕೊಸರುಗಳನ್ನು ಪ್ರಕಾಶಕರು ಗಮನಿಸಿದರೆ ಕನ್ನಡಸೇವೆ ಎಂಬ ಶಬ್ದ ಹೆಚ್ಚು ಅರ್ಥಪೂರ್ಣವಾಗುತ್ತದೆ.
- ಶಮಾ ನಂದಿಬೆಟ್ಟ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ