ಮಸ್ಕತ್‌ನಲ್ಲಿ ತುಳುನಾಡನ್ನು ಮರು ಸೃಷ್ಟಿಸಿದ BOSS

Upayuktha
0


ಮಸ್ಕತ್: ಬಂಟ್ಸ್ ಓಮಾನ್ ಸಾಂಸ್ಕೃತಿಕ ಸಂಘದ (BOSS) ನೆರಳಲ್ಲಿ "ಸಾಂಸ್ಕೃತಿಕ ಸಮ್ಮಿಲನ" ಕೆಸರು ಗದ್ದೆ ಗೋಲ್ಡ್ ಫೀಲ್ಡ್ (KGF)-  ಗ್ರಾಮೀಣ ಕ್ರಿಡೋತ್ಸವವು ಕಳೆದ ಶುಕ್ರವಾರ ಮಸ್ಕತ್ ನ "ಬರ್ಕ ಗುತ್ತಿ"ನ ಅಗೋಳಿ ಮಂಜಣ್ಣ ಅಂಗಣದಲ್ಲಿ ಜರಗಿತು. ತುಳುನಾಡಿನ ಬಂಟರ ಸಂಸ್ಕೃತಿ, ನಂಬಿಕೆ, ಆಚರಣೆಗಳ, ನಡವಳಿಕೆಗಳ ನೆನಪಿನ ಮೆಲುಕು ಹಾಕಲು "ತುಳುನಾಡಿನ ಪ್ರತಿಕೃತಿ" ಸೃಷ್ಟಿಸಲಾಗಿತ್ತು.


ಮಸ್ಕತ್ ಹೊರವಲಯದಲ್ಲಿರುವ ಉದ್ಯಮಿ ಅಶ್ವಿನಿ ದರಂಸಿ ಭಾಯ್ ಅವರ ಫಾರ್ಮ್ ಹೌಸ್‌ನಲ್ಲಿ ದಿವಾಕರ ಶೆಟ್ಟಿ ಮಲ್ಲಾರ್ ಅವರ ಪರಿಕಲ್ಪನೆ ಯಲ್ಲಿ "ಬರ್ಕ ಗುತ್ತು ಮನೆ", ಸಾವಿರ ಮಂದಿ ಕುಳಿತುಕೊಳ್ಳಬಹುದಾದ "ಬಂಟರ ಭವನ" ನಿರ್ಮಿಸಲಾಗಿತ್ತು.


ಗುತ್ತಿನ ಪಡಸಾಲೆ, ರಾಟೆ ಅಳವಡಿಸಿದ ಭಾವಿ, ಸಿರಿ ತುಪ್ಪೆ -ಭತ್ತದ ಕಣಜ, ಪಡಿ ಮಂಚ, ಭತ್ತ ಕುಟ್ಟುವ "ಬಾರ ಕಲ" ದಲ್ಲಿರಿಸಿದ ಒನಕೆಗಳು, ಮಡಲು ತಟ್ಟಿಯ ಹಳ್ಳಿಯ ಬಚ್ಚಲು ಮನೆ, ಉತ್ತು ಹದಗೊಳಿಸಿದ ಸುಮಾರು 60 ಮೀಟರ್ ಉದ್ದದ ಕೆಸರು ನೀರು ತುಂಬಿದ ವಿಶಾಲವಾದ ಕಂಬಳ ಗದ್ದೆ, ಸೆಗಣಿ ಸಾರಿಸಿದ ವಿಸ್ತರವಾದ ಅಂಗಳ, ತೆಂಗಿನ ಸೋಗೆ ಹೆಣೆದು ಮಾಡಿದ ವಿಶಾಲವಾದ ಚಪ್ಪರ (ಶಾಮಿಯಾನದ ಬಳಕೆ ಮಾಡಲಿಲ್ಲ), ಏಕ ಕಾಲದಲ್ಲಿ 200 ಮಂದಿ ಕುಳಿತು ಊಟ ಮಾಡುವ ವ್ಯವಸ್ಥೆಯ ಭೋಜನ ಶಾಲೆ, ಖರ್ಜೂರದ ಮರಕ್ಕೆ ಎಳನೀರು ಗೊಂಚಲುಗಳನ್ನು ಕಸಿಕಟ್ಟಿ ಅಳವಡಿಸಿದ ಶೇಂದಿ ಮೂರ್ತೆಯ ಮಡಿಕೆ, ಸಂತೆಯ ಗದ್ದೆಯಲ್ಲಿ ಎಲೆ ಮಡಲು ಕಟ್ಟಿ ನಿರ್ಮಿಸಿದ ಗೂಡಂಗಡಿಗಳು.... ಸಮ್ಮಿಲನಕ್ಕಾಗಿ ಅಣಿಗೊಳಿಸಲಾಗಿತ್ತು.



ಕೊಡೆತ್ತೂರಿನಿಂದ ತರಿಸಿದ್ದ ಭತ್ತದ ತೆನೆಗಳನ್ನು ಗುತ್ತಿನ ಯಜಮಾನ ಶಶಿಧರ ಶೆಟ್ಟಿ ಮಲ್ಲಾರ್ ಅವರು ತೊಳಸಿ ಕಟ್ಟೆಯ ಬಳಿಯಿಂದ ಹೊತ್ತುಕೊಂಡು ಪರಿವಾರದೊಂದಿಗೆ ಗುತ್ತಿನ ಚಾವಡಿ ಪ್ರವೇಶಿಸಿದರು. ದೀಪ ಬೆಳಗಿಸಿ, ಪ್ರಾರ್ಥನೆ ಮಾಡಿ ಕೊರಲ್ ಪರ್ಬ (ಕದಿರು ಹಬ್ಬ) ಆಚರಿಸಲಾಯಿತು. 


ಬೆಳಗ್ಗಿನ ಉಪಹಾರ ಕ್ಕೆ ತುಳುನಾಡಿನ ಸಾಂಪ್ರದಾಯಿಕ  ಪದೆಂಗಿ, ಸಜ್ಜಿಗೆ ಬಜಿಲ್, ಮೂಡೆ ಚಟ್ನಿ, ಶೀರ... ಮತ್ತು ಗೂಡಂಗಡಿಗಳಲ್ಲಿ ನಿರಂತರ ವಾಗಿ ಎಳನೀರು, ಬಚ್ಚಂಗಾಯಿ, ಕಬ್ಬಿನ ರಸ, ಮಜ್ಜಿಗೆ, ಪಾನಕ, ಚರುಂಬುರಿ, ಬಾಳೆ ಹಣ್ಣು, ಐಸ್ ಕ್ಯಾಂಡಿ, ಸಬಿ ತಿಂಡಿಗಳ ವಿತರಣೆ ಮಾಡಲಾಗಿತ್ತು. ಸಂಜೆ ಮೊಟ್ಟೆ ಆಮ್ಲೆಟ್, ಪೋಡಿ, ಗೋಳಿಬಜೆಯ ವ್ಯವಸ್ಥೆ ಇತ್ತು.


ಬಂಟ ಪರಿವಾರದವರೇ ಸಿದ್ದ ಪಡಿಸಿದ ಶುಚಿ ರುಚಿಯಾದ ತುಳುನಾಡಿನ ಕೋಳಿ ತಮ್ಮನ ದ ಊಟವನ್ನು ತುದಿ ಬಾಳೆಎಲೆಯಲ್ಲಿ ಬಡಿಸಲಾಯಿತು.


ಮಸ್ಕತ್ ನ ಬರ್ಕಗುತ್ತು ಕಂಬಳ

ಶಿಬಿರಗಳಲ್ಲಿ ಕೋಣಗಳನ್ನು ಸಜ್ಜುಗೊಳಿಸಿ ಕೊಂಬು, ಡೋಲು ವಾದ್ಯ, ಕೀಲು ಕುದುರೆ, ಗೊಂಬೆ ಕುಣಿತ ದೊಂದಿಗೆ ಬರ್ಕ ಗುತ್ತಿನ ಅಂಗಳಕ್ಕೆ ಉತ್ಸಾಹದಿಂದ ಆಗಮಿಸುವ ನೊಗ ಕಟ್ಟಿದ ಓಟದ ಕೋಣಗಳ ಅಬ್ಬರ, ಯಜಮಾನ ಪರಿವಾರ ವನ್ನು ಬರ್ಕ ಗುತ್ತಿನ ಏಳು ಪ್ರಮುಖರು ಜೋಡು ಬೊಂಡ ಕೊಟ್ಟು ಸ್ವಾಗತ ನೀಡಿ ಬರಮಾಡಿ ಕೊಳ್ಳುವ, ಕೋಣಗಳು ಸಾಲಾಗಿ ಗದ್ದೆಗೆ ಇಳಿಯುವ, ಗಂತಿನಲ್ಲಿ ಪುoಡಾಟ ಮಾಡುವ, ಕೋಣಗಳನ್ನು ಓಡಿಸುವ ದೃಶ್ಯ ಗಳು ರಂಜನೀಯವಾಗಿತ್ತು.


ಕೋಣಗಳ ಪ್ರತಿಕೃತಿಗಳನ್ನು ರಚಿಸಿ, ಅದರೊಳಗೆ ಸೇರಿ ನಿಜ ಕೋಣಗಳ ಹಾವಭಾವಗಳನ್ನು ಪ್ರದರ್ಶನ ಮಾಡುವಾಗ ಸಂಪ್ರದಾಯಿಕ ಕಂಬಳದ ಉಡುಗೆ ಉಟ್ಟು, ಮುಂಡಾಸು ಕಟ್ಟಿ, ಬೆತ್ತ ಹಿಡಿದು ಅಣಕು ಕಂಬಳ ದೃಶ್ಯ ನಿರ್ಮಿಸಿ ಸಂಭ್ರಮಿಸುವ ಬಳಗದ ಸದಸ್ಯರ ಉತ್ಸಾಹವು ಮಸ್ಕತ್ ನಲ್ಲಿ ತುಳುನಾಡಿನ ಕಂಬಳದ ಮರು ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಯಿತು.


1. ಕಾಪು ಮಲ್ಲಾರ್ ಸಹೋದರರ ಮಾಲಕತ್ವದ, ಕಿನ್ನಿಗೋಳಿ ಮುಕ್ಕಮನೆಯ ಚೆನ್ನೆ ಮತ್ತು ಪಾಂಡು ಕೋಣಗಳು.


2. ಗೋಬ್ರ ಗುತ್ತು ಸುರೇಂದ್ರ ಶೆಟ್ಟಿ ಮತ್ತು ರುವಿ ಗುತ್ತು ಜಯರಾಜ್ ಶೆಟ್ಟಿ ಯವರ ಚಾಂಪಿಯನ್ ದೋಣಿ  ಮತ್ತು ರಾಕೆಟ್ ಬೊಲ್ಲೇ ಕೋಣಗಳು.


3. ಸೋಹರ್ ಗುತ್ತಿನವರ ಬರ್ಗಿ ಮತ್ತು ಲಕ್ಕಿ ಕೋಣಗಳು.


4. ಮಸ್ಕತ್ ಗುತ್ತು ಕಿಶನ್ ಶೆಟ್ಟಿ ಕಿನ್ನಿಗೋಳಿಯವರ ಕಾಲೆ ಮತ್ತು ದೂಜೆ ಕೋಣಗಳು

5. ಅಭಿಮನ್ಯು ಗೆಳೆಯರ ಬಳಗ ಮಸ್ಕತ್ ರವರ ಕರಿಯೆ ಮತ್ತು ತಾಟೆ ಕೋಣಗಳು

ಒಟ್ಟು ಐದು ಜೊತೆ ಕೋಣಗಳು ಭಾಗವಹಿಸಿದ್ದವು.


ಗದ್ದೆ ಹುಣಿಯಲ್ಲಿ ಐಸಿರದ ಜೋಕುಲು (ಚಿಯರ್ ಗರ್ಲ್ಸ್) ಹುಲ್ಲು ಸೂಡಿ ಹಿಡಿದು ನಲಿದು ಹುರಿದುಂಬಿಸಿದರು.


ಕೆಸರು ಗದ್ದೆಯಲ್ಲಿ ಗ್ರಾಮೀಣ ಕ್ರೀಡೋತ್ಸವ

ಬಂಗಾರದ ನರ್ತೆ ಹೆಕ್ಕುವ ನಿಧಿ ಶೋಧ, ಹಗ್ಗ ಜಗ್ಗಾಟ, ಕೈಚೆಂಡು, ಮೊಸರು ಕುಡಿಕೆ ಗೋಪುರ ರಚನೆ, ಬೊಂಡ ಗುಂಡು ಎಸತ, ಕೆಸರು ಗದ್ದೆ ಓಟ -ಮಕ್ಕಳಾಟದಲ್ಲಿ ನೂರಾರು ಮಕ್ಕಳು, ಮಹಿಳೆಯರು, ಯುವಕರು, ಹಿರಿಯರು ಪಾಲ್ಗೊಂಡು ಸಂಭ್ರಮಿಸಿದರು. ಬಾಳ್ ಕಟ್ಟದೆ, ಜೂಜು ಇಲ್ಲದ ಕೋಳಿ ಅಂಕದಲ್ಲಿ ಹತ್ತಾರು ಕಟ್ಟದ ಹುಂಜಗಳ ಕೋಳಿ ಕಾಳಗ ನಡೆಸಲಾಯಿತು.


ಕೆಸರು ಗದ್ದೆಯಲ್ಲಿ ಜಾನಪದ ಕುಣಿತ, ಗುತ್ತಿನ ಅಂಗಳದಲ್ಲಿ ಕಂಗಿಲು ಕುಣಿತ, ನೃತ್ಯ ಭಜನೆ ನಡೆಯಿತು. ಗೂಡು ದೀಪ ಸ್ಪರ್ಧೆಯಲ್ಲಿ ಸಾಂಪ್ರದಾಯಕ ಹಾಗೂ ಆಧುನಿಕ ಗೂಡು ದೀಪಗಳು ಇದ್ದವು. ರಂಗೋಲಿ, ಮಡಲು ಹೆಣೆಯುವ, ಭತ್ತ ಕುಟ್ಟುವ ಸ್ಪರ್ಧೆಗಳಲ್ಲಿಯೂ ತುರುಸಿನ ಸ್ಪರ್ಧೆ ಇತ್ತು.


ಕದ್ರಿ ನವನೀತ ಶೆಟ್ಟಿ ಅವರು ವಿಶೇಷ ಅತಿಥಿಯಾಗಿ ಆಗಮಿಸಿ ನಿರಂತರ 16 ಗಂಟೆಗಳ ಕಾಲ ಕಾರ್ಯಕ್ರಮ ನಿರ್ವಹಣೆ ಮಾಡಿದರು.


ಸರೋಜ ಶಶಿಧರ ಶೆಟ್ಟಿ ಮಲ್ಲಾರ್, ಸುಧೀರಾ ದಿವಾಕರ್ ಶೆಟ್ಟಿ ಮಲ್ಲಾರ್, ಶೈನಾ ಗಣೇಶ್ ಶೆಟ್ಟಿ, ವಾಣಿಶ್ರೀ ನಾಗೇಶ್ ಶೆಟ್ಟಿ, ಶ್ರೇಯ ಮನೋಜ್ ಜಯರಾಮ್ ಶೆಟ್ಟಿ, ಅನುಷಾ ಶಿಶಿರ್ ರೈ, ಸುರಕ್ಷಾ ಹರ್ಷಿತ್ ರೈ ದಂಪತಿಗಳ ತಂಡವು ಸಾವಿರಾರು ಬಂಟರನ್ನು ಒಂದೇ ಸೂರಿನಡಿಯಲ್ಲಿ ಸೇರಿಸಿದ ಈ ಚಾರಿತ್ರಿಕ ಸಮ್ಮೇಳನವನ್ನು ಸಂಘಟಿಸಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top