ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 14ನೇ ಪದವಿ ಪ್ರದಾನ ಸಮಾರಂಭ

Upayuktha
0


 


ಬೆಂಗಳೂರು: ‘ತಂತ್ರಜ್ಞಾನ ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆಯ ಅನುಷ್ಠಾನ ಶರವೇಗದಲ್ಲಿ ನಡೆಯುತ್ತಿದೆ. ಇದರ ಫಲವಾಗಿ ನಿತ್ಯದ ಜೀವನದಲ್ಲಿ ನಾವೆಲ್ಲರೂ ಸುಲಭವಾಗಿ ಅಗತ್ಯ ಮಾಹಿತಿ ಹಾಗೂ ನಿರ್ದಿಷ್ಟ ಮಾರ್ಗದರ್ಶನ ಪಡೆಯಲು ಸಾಧ್ಯವಾಗುತ್ತಿದೆ. ಇದಕ್ಕಾಗಿ ನಾವು ತಂತ್ರಜ್ಞರನ್ನು ಅಭಿನಂದಿಸಲೇಬೇಕು. ಏಕೆಂದರೆ ಅವರೇ ಈ ಕೃತಕ ಬುದ್ದಿಮತ್ತೆಯ ಸೃಷ್ಟಿಕರ್ತರು. ಆದರೆ ಕೃತಕ ಬುದ್ದಿಮತ್ತೆಯನ್ನು ಸೃಷ್ಟಿಸುವ, ಸುಧಾರಿಸುವ ಹಾಗೂ ಜನೋಪಯೋಗಿಯಾಗಿಸುವ ಪ್ರಕ್ರಿಯೆಯಲ್ಲಿ ಅವರಿಗೆ ಅತ್ಯವಶ್ಯವಿರುವುದು ಭಾರತದ ಪ್ರಾಚೀನ ಜ್ಞಾನದ ಅಂತಃಪ್ರಜ್ಞೆ ಅಥವಾ ಸಾಕ್ಷಾತ್ಕಾರ. ಏಕೆಂದರೆ ನಮ್ಮ ಪೂರ್ವಿಕರು ಜ್ಞಾನದ ವಿವಿಧ ಕ್ಷೇತ್ರದಲ್ಲಿ ಮಾಡಿರುವ ಅಪೂರ್ವ ಸಾಧನೆ ನಿಜಕ್ಕೂ ಅದ್ಭುತ ಎಂದು ಧಾರವಾಡದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಡಾ. ವೆಂಕಪ್ಪಯ್ಯ ಆರ್. ದೇಸಾಯಿ ನುಡಿದರು.



ಅವರು ಬೆಂಗಳೂರಿನ ಯಲಹಂಕದಲ್ಲಿರುವ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ 14ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.


ಲೋಹಶಾಸ್ತ್ರ, ಕಟ್ಟಡ ನಿರ್ಮಾಣ, ಗಣಿತ, ವೈದ್ಯಕೀಯ ಕ್ಷೇತ್ರಗಳಲ್ಲಿ ನಮ್ಮ ಪ್ರಾಚೀನ ಭಾರತದಲ್ಲಿ ಅತ್ಯದ್ಭುತ ಸಂಶೋಧನೆಗಳು ನಡೆದಿದ್ದವು. ಅದರಿಂದ ಕೃತಕ ಬುದ್ದಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಅಧ್ಯಯನದ ಜತೆ ಪ್ರಾಚೀನ ಅಂತಃಪ್ರಜ್ಞೆ (ಏನ್ಶಿಯಂಟ್ ಇನ್‌ಟ್ಯೂಶನ್) ಕಲಿಕೆ ಬಹಳ ಮುಖ್ಯ. ಆಗ ಮಾತ್ರ ಭಾರತದ ತಂತ್ರಜ್ಞರು ಇಡೀ ಜಗತ್ತಿನಲ್ಲಿಯೇ ಮೇಲುಗೈ ಸಾಧಿಸುತ್ತಾರೆ’, ಎಂದು ಅವರು ಹೇಳಿದರು.



‘ನಮ್ಮ ಪ್ರಾಚೀನ ಭಾರತದ ದೇಗುಲಗಳನ್ನು ನೋಡಿದರೆ ಅಚ್ಚರಿಯಾಗುತ್ತದೆ. ಕೇವಲ ನಾಲ್ಕು ಅಡಿ ತಳಪಾಯ ಹೊಂದಿರುವ ಬೃಹದೇಶ್ವರ ದೇಗುಲ ನೂರಾರು ವರ್ಷಗಳಿಂದ ಭೂಕಂಪಗಳಿಗಾಗಲೀ ಸುನಾಮಿಗಳಿಗಾಗಲೀ ಅಲುಗಾಡಿಲ್ಲ. ಇದಕ್ಕೆ ಕಾರಣ ನಮ್ಮ ಪ್ರಾಚೀನ ತಂತ್ರಜ್ಞರು ಬಳಸುತ್ತಿದ್ದ ವಿವಿಧ ‘ಸಂಕಲನ ಹಾಗೂ ವ್ಯವಕಲನ’ ಉತ್ಪಾದನಾ ತಂತ್ರಗಳು. ಅಲ್ಲದೆ ಒಂದು ಕಟ್ಟಡ ಕೆಡವಿದರೆ ಅದರ ಅವಶೇಷಗಳನ್ನು ಸಮರ್ಥವಾಗಿ ಬಳಸಿ ಮತ್ತೊಂದನ್ನು ಸೃಷ್ಟಿಸುತ್ತಿದ್ದರು. ಹೀಗೆ ಕಸದ ಸಮರ್ಪಕ ನಿರ್ವಹಣೆಯಲ್ಲೂ ಅವರು ಅಪೂರ್ವ ಸಾಧನೆ ಮಾಡಿದ್ದರು. ಆದರೆ ಈ ಆಧುನಿಕ ಯುಗದಲ್ಲಿ ನಿರ್ನಾಮವಾದ ಕಟ್ಟಡಗಳ ಅವಶೇಷಗಳ ಸೂಕ್ತ ನಿರ್ವಹಣೆ (ವಿಲೇವಾರಿ) ಮಾಡುವಲ್ಲಿಯೂ ನಾವು ವಿಫಲರಾಗಿದ್ದೇವೆ. ಏಕೆಂದರೆ ನಾವು ನಮ್ಮ ಪ್ರಾಚೀನ ತಂತ್ರಜ್ಞಾನದಿಂದ ವಿಮುಖರಾಗಿರುವುದು. ನಮ್ಮ ಯುವ ತಂತ್ರಜ್ಞರು ಈ ನಿಟ್ಟಿನಲ್ಲಿ ಆಸಕ್ತಿ ತಳೆಯಬೇಕು ಎಂಬುದು ನನ್ನ ಕಳಕಳಿಯ ಮನವಿ’ ಎಂದರು.


ನಿಟ್ಟೆ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಹಾಗೂ ಗೋವಾ ಮತ್ತು ಅಗರ್ತಲದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಡಾ|| ಗೋಪಾಲ್ ಮುಗೆರಾಯ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಪದವಿ ಪ್ರದಾನ ಸಮಾರಂಭಕ್ಕೆ ಅಧಿಕೃತ ಚಾಲನೆ ನೀಡಿದರು.


‘ಶಿಕ್ಷಣ ಸಂಸ್ಥೆಗಳು ಯಶಸ್ವಿಯಾಗುವುದು ಅವುಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡುವ ಗುಣಮಟ್ಟದ ಶಿಕ್ಷಕರಿಂದ ಮಾತ್ರವೇ ಹೊರತು ಅವುಗಳ ಬಾಹ್ಯ ಆಕಾರ ಹಾಗೂ ಗಾತ್ರಗಳಿಂದಲ್ಲ, ಅದರಿಂದ ಪ್ರತಿ ಯುವ ತಂತ್ರಜ್ಞರೂ ತಮ್ಮ ಜ್ಞಾನದ ಪರಿಧಿಯನ್ನು ಹಾಗೂ ಕೌಶಲ್ಯವನ್ನು ಸದಾ ಹೆಚ್ಚಿಸಿಕೊಳ್ಳಬೇಕು. ಆಗ ಖಂಡಿತವಾಗಿ ಅವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡುತ್ತಾರೆ’, ಎಂದು ಅವರು ತಿಳಿಸಿದರು.


ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ. ವಿ. ಶ್ರೀಧರ್, ಬಿ.ಇ, ಎಂ.ಟೆಕ್, ಎಂ.ಬಿ.ಎ ಹಾಗೂ ಎಂ.ಸಿ.ಎ ಪದವಿಗಳಿಗೆ ಅರ್ಹರಾದ ವಿದ್ಯಾರ್ಥಿಗಳ ಪಟ್ಟಿಯನ್ನು ಸಲ್ಲಿಸಿದರು. 


ಪ್ರತಿ ವರ್ಷದಂತೆ ಈ ವರ್ಷವೂ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ವಿತರಿಸಲಾಯಿತು. ಅತ್ಯುತ್ತಮ ಶೈಕ್ಷಣಿಕ ಕ್ಷಮತೆ ದಾಖಲಿಸಿದ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಸಿ.ಎನ್. ನಾಗಭೂಷಣ್ ಪ್ರತಿಷ್ಠಿತ ನಿಟ್ಟೆ ಗುಲಾಬಿಶೆಟ್ಟಿ ಸ್ಮರಣಾರ್ಥ ಚಿನ್ನದ ಪದಕವನ್ನು ಸ್ವೀಕರಿಸಿದರು.


ಅತ್ಯುತ್ತಮ ವಿದ್ಯಾರ್ಥಿನಿಗೆ ಸಲ್ಲುವ ನಿಟ್ಟೆ ಮೀನಾಕ್ಷಿ ಹೆಗ್ಡೆ ಸ್ಮರಣಾರ್ಥ ಚಿನ್ನದ ಪದಕ ಎಲೆಕ್ಟಾçನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಸುದೀಕ್ಷಾ ಕೆ ಅವರಿಗೆ ಲಭಿಸಿತು. ಅತ್ಯುತ್ತಮ ವಿದ್ಯಾರ್ಥಿಗೆ ಮೀಸಲಿರುವ ಜಸ್ಟಿಸ್ ಕೆ.ಎಸ್. ಹೆಗ್ಡೆ ಸ್ಮರಣಾರ್ಥ ಚಿನ್ನದ ಪದಕವನ್ನು ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ಅಶ್ವಿನ್ ಆರ್.ಬಿ ಪಡೆದರು. ಪ್ರತಿ ವಿಭಾಗಗಳಲ್ಲಿ ಒಟ್ಟು 14 ಪ್ರತಿಭಾನ್ವಿತರಿಗೆ ಚಿನ್ನದ ಪದಕಗಳನ್ನು (ಸ್ನಾತಕ: 7 ಚಿನ್ನದ ಪದಕ ಹಾಗೂ ಸ್ನಾತಕೋತ್ತರ: 7 ಚಿನ್ನದ ಪದಕ) ವಿತರಿಸಲಾಯಿತು. ಪ್ರತಿ ವಿಭಾಗದ ಪ್ರಥಮ 10 ರ‍್ಯಾಂಕ್‌ಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ರ‍್ಯಾಂಕ್ ಸರ್ಟಿಫಿಕೇಟ್‌ಗಳನ್ನು ನೀಡಲಾಯಿತು. 


ಪ್ರಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ಸ್ವಾಗತಿಸಿದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ ನೂತನ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ. ಸಂದೀಪ್ ಶಾಸ್ತ್ರಿ; ಪರೀಕ್ಷಾ ನಿಯಂತ್ರಕರಾದ ಡಾ. ಪ್ರಶಾಂತ ಹಾಗೂ ಇತರ ಶಿಕ್ಷಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top