ಶತಮಾನ ಸಂದ ಕರುನಾಡ ಶ್ರೀಗಂಧದ ಸುಗಂಧ

Upayuktha
0



ಇಂದು ಭಾರತ 21ನೇ ಶತಮಾನದಲ್ಲಿ ದಶಕಗಳು ಉರುಳಿದ ನಂತರ ಆತ್ಮ ನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಕುರಿತಾಗಿ ಜಾಗೃತಗೊಳ್ಳುತ್ತಿದೆ. ಆದರೆ ಇದರ ಬುನಾದಿ ಎಂಬಂತೆ ಸ್ವಾತಂತ್ರ್ಯ ಹೋರಾಟದ ಆ ಕಾಲಘಟ್ಟದಲ್ಲೇ ಸ್ವದೇಶಿ ಉತ್ಪನ್ನಗಳ ಬಳಕೆಯ ಕುರಿತು ಬಾಲಗಂಗಾಧರ್ ತಿಲಕ್ ಮೊದಲಾದವರು ಜನಮನಗಳಲ್ಲಿ ಬಿತ್ತಿದ್ದರು. ಅದೇ ಕಾಲಘಟ್ಟದಲ್ಲಿ ರಾಷ್ಟ್ರದಲ್ಲಿ ಪ್ರಾರಂಭವಾಗಿದ್ದ ಕೆಲವೇ ಕೆಲವು ಕೈಗಾರಿಕೆಗಳಲ್ಲಿ ಕರುನಾಡಿನ ಹೆಮ್ಮೆ ಎಂಬಂತೆ ಪ್ರಾರಂಭಗೊಂಡಿದ್ದು ಮೈಸೂರ್ ಸ್ಯಾಂಡಲ್ ಸೋಪು ಹಾಗೂ ಇದರ ಉತ್ಪಾದನೆ.


ಅದಾಗಲೇ ಬ್ರಿಟಿಷರ ಸಾರ್ವಭೌಮತ್ವ ಭಾರತದ ಬಹುಪಾಲು ಭಾಗವನ್ನು ಆವರಿಸಿತ್ತು. ಬಹುತೇಕ ರಾಜ ಮನೆತನಗಳು ಬ್ರಿಟಿಷ್ ರಾಣಿಯ ಸಾಮಂತರೆಂದು ಅಂಗೀಕರಿಸುವ ಅನಿವಾರ್ಯತೆಯನ್ನು ಅನುಭವಿಸಿದ್ದರು. ನಮ್ಮ ಮೈಸೂರು ಸಂಸ್ಥಾನವು ಇದಕ್ಕೆ ಹೊರತಾಗಿರಲಿಲ್ಲ.


ಬ್ರಿಟಿಷರು ತಮ್ಮ ಕೈಗಾರಿಕಾ ಕ್ರಾಂತಿಯ ನಂತರ ಭಾರತ ಮೊದಲಾದ ದೇಶಗಳನ್ನು ತಮ್ಮ ವಸಾಹತುಗಳನ್ನಾಗಿಸಿಕೊಳ್ಳಲು ಒಂದು ಮುಖ್ಯ ಕಾರಣವೇ ತಮ್ಮ ದೇಶದ ಸಿದ್ಧ ವಸ್ತುಗಳ ಮಾರಾಟ ಹಾಗೂ ವಸಾಹತುಗಳಿಂದ ಮನ ಬಂದಂತೆ ಕಚ್ಚಾ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಆಮದು. ಹೀಗಿರುವಾಗ ಅವರು ಭಾರತದ ಬಹುತೇಕ ಕೈಗಾರಿಕೆಗಳನ್ನು ಇನ್ನಿಲ್ಲದಂತೆ ದಮನ ಮಾಡಿದ್ದರು. ಆ ಕಾಲಘಟ್ಟದಲ್ಲಿ ಹುಟ್ಟಿಕೊಂಡ ಭಾರತದ ಕೆಲವೇ ಕೆಲವು ಕೈಗಾರಿಕೆಗಳಲ್ಲಿ ಬ್ರಿಟಿಷರ ಅಧೀನ ಸಂಸ್ಥಾನದ ಮೈಸೂರ್ ಸ್ಯಾಂಡಲ್ ಸೋಪ್ ಕಾರ್ಖಾನೆಯೂ ಒಂದು!


ಈ ಸಂದರ್ಭವನ್ನು ಊಹಿಸಿಕೊಂಡರೆ ಹೀಗೊಂದು ಕಾರ್ಖಾನೆ ಹೇಗೆ ಸ್ಥಾಪನೆಯಾಯಿತು? ಇದಕ್ಕೆ ಯಾವ ಅಡ್ಡಿಯು ಎದುರಾಗಲಿಲ್ಲವೇ? ಎಂಬಂತಹ ಪ್ರಶ್ನೆಗಳು ಮೂಡುವುದು ಸಹಜ. ಹೌದು, ಈ ಕಾರ್ಖಾನೆ ಆರಂಭಗೊಳ್ಳಲು ಒಂದು ಸಂದರ್ಭ ಸಂಪೂರ್ಣವಾಗಿ ನೆರವನ್ನು ತಂದು ಕೊಟ್ಟಿತು. ಅದೇ ಮೊದಲನೇ ಮಹಾಯುದ್ಧದ ಪ್ರಕ್ಷುಬ್ಧ ಪರಿಸ್ಥಿತಿ. ಮೊದಲನೇ ಮಹಾಯುದ್ಧದ ತರುವಾಯ ಬ್ರಿಟಿಷರು ಸಾವು ನೋವುಗಳನ್ನು ಕಂಡು ನರಳಿದ್ದರು. ವಿಶ್ವದ ವ್ಯಾಪಾರವು ಕುಸಿತವನ್ನು ಕಂಡಿತ್ತು. ಅಷ್ಟು ಕಾಲದವರೆಗೆ ನಿರಂತರವಾಗಿ ಭಾರತದಿಂದ ರಪ್ತಾಗುತ್ತಿದ್ದ ವಸ್ತುಗಳಲ್ಲಿ ಭಾರತದ ಶ್ರೀಗಂಧವು ಒಂದು. ಆದರೆ ಒಂದನೇ ಮಹಾಯುದ್ಧದ ಬಳಿಕ ಈ ಉತ್ಪನ್ನಕ್ಕೆ ಮಾರುಕಟ್ಟೆ ಇಲ್ಲದಂತಾಯಿತು. ಆದರೆ ರಾಜ್ಯದಲ್ಲಿ ಶ್ರೀಗಂಧ ಅಪಾರವಾಗಿ ದೊರೆಯುತ್ತಿದ್ದು, ಅದರ ಉತ್ಪಾದಕರು ಕಂಗಾಲಾಗುವ ಪರಿಸ್ಥಿತಿ ಎದುರಾಯಿತು. ಹೀಗಿರುವಾಗ ನಿರುಪಯುಕ್ತವಾಗಿ ಉಳಿದಿದ್ದ ಶ್ರೀಗಂಧದ ಬಳಕೆಯ ಜೊತೆಗೆ ಹಲವಾರು ಕುಟುಂಬಗಳಿಗೆ ದಾರಿದೀಪವಾದ ಯೋಜನೆ ಮೈಸೂರ್ ಸ್ಯಾಂಡಲ್ ಸೋಪ್‌ನ ಉತ್ಪಾದನೆ.


ನಾಲ್ಮಡಿ ಕೃಷ್ಣರಾಜ ಒಡೆಯರ್ ರವರು ಅವರ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಇನ್ನೋರ್ವ ಮೇಧಾವಿ ಜಿ.ಎಸ್ ಶಾಸ್ತ್ರಿ ರವರೊಡಗೂಡಿ 1916 ಸೆಪ್ಟೆಂಬರ್ ನಲ್ಲಿ ಚಿಕ್ಕದಾಗಿ ಪ್ರಾರಂಭಿಸಿದ ಕಾರ್ಖಾನೆ ಕೇವಲ ಹತ್ತಾರು ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿ ಕೊಟ್ಟಿತು. ಬಳಿಕ 1924ರಲ್ಲಿ ದೊಡ್ಡ ಮಟ್ಟದಲ್ಲಿ ಈ ಕಾರ್ಖಾನೆಯನ್ನು ಪ್ರಾರಂಭಿಸಿ ನೂರಾರು ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿ ಕೊಡುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಯಿತು. ಅಲ್ಲದೆ ರಪ್ತು ಆಗದೆ ನಿರುಪಯುಕ್ತವಾಗಿ ಉಳಿದಿದ್ದ ಶ್ರೀಗಂಧದ ಸದ್ಬಳಕೆಯು ಇಲ್ಲಿ ಆಯಿತು. ಸಂಪೂರ್ಣವಾಗಿ ಸ್ವದೇಶಿ  ಕಚ್ಚಾ ವಸ್ತುಗಳನ್ನು ಬಳಸಿ ವಿದೇಶಿಯರೇ ಸ್ವದೇಶಿಯರಿಗಾಗಿ ಈ ಉತ್ಪನ್ನವನ್ನು ತಯಾರಿಸಲು ಪ್ರಾರಂಭಿಸಿದರು. ಇದು ಭಾರತೀಯರು ತಯಾರಿಸಿದ ಮೊಟ್ಟಮೊದಲ ಸಾಬೂನು ಎಂಬ ಖ್ಯಾತಿಯನ್ನು ಪಡೆಯಿತು. ವಿದೇಶಗಳಲ್ಲಿಯೂ ಆ ಕಾಲದಲ್ಲಿಯೇ ಉತ್ತಮ ಬೇಡಿಕೆಯನ್ನು ಗಳಿಸಿತು. ಇಂದಿಗೂ ಇದು ಸರ್ಕಾರಿ ಸ್ವಾಮ್ಯದ ಕಂಪನಿಯಾಗಿ ಉಳಿದಿದೆ.


1980ರಲ್ಲಿ ಸರ್ಕಾರಿ ಸೋಪ್ ಕಾರ್ಖಾನೆ ಮತ್ತು ಶಿವಮೊಗ್ಗದ ಗಂಧದೆಣ್ಣೆ ಕಾರ್ಖಾನೆಗಳನ್ನು ಮಿಳಿತಗೊಳಿಸಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಕಂಪನಿ ಮಾಡಲಾಯಿತು. ಇಂದಿಗೂ ಈ ಕಂಪನಿಯು ಹಲವಾರು ಉತ್ಪನ್ನಗಳನ್ನು ತಯಾರಿಸುತ್ತಿದ್ದರೂ, ಸುಮಾರು 40% ದಷ್ಟು ಆದಾಯ ಕೇವಲ ಸಾಬೂನಿನಿಂದಲೇ ಬರುತ್ತಿದೆ. ಇಂದಿಗೂ ಇದರ ನೈಸರ್ಗಿಕತೆ ಹಾಗೂ ಆಯುರ್ವೇದಿಕ ಗುಣಗಳನ್ನು ಅಲ್ಲಗಳೆಯುವಂತಿಲ್ಲ.


ಹೀಗೆ ಶತಮಾನದ ಹೊಸ್ತಿಲಿನಲ್ಲಿರುವ ಕನ್ನಡಿಗರ ಆತ್ಮ ನಿರ್ಭರತೆಗೆ ಸಾಕ್ಷಿಯಾಗಿರುವ ಮೈಸೂರ್ ಸ್ಯಾಂಡಲ್ ಸೋಪ್ ನ ಉತ್ಪಾದನೆಯ ಆರಂಭವು ನಿಜಕ್ಕೂ ರೋಮಾಂಚನಕಾರಿಯಾದ ಸಂಗತಿಯಾಗಿದೆ. ಈ ಸಾಬೂನಿನ ಉತ್ಪಾದನೆಯ ಆರಂಭದ ಕಥೆಯು ಎಂದೆಂದಿಗೂ ಗಂಧದ ಬೀಡಾದ ಕರುನಾಡಿನ ಹೆಮ್ಮೆ ಎಂದರೂ ತಪ್ಪಾಗಲಾರದು.


- ಅಭಿಜ್ಞಾ ಉಪಾಧ್ಯಾಯ 

ಇತಿಹಾಸ ಪ್ರಾಧ್ಯಾಪಕಿ

SDM ಕಾಲೇಜು, ಉಜಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top