ಕೃಷಿ ವಿಜ್ಞಾನ ಸಮಾವೇಶದ ವಿಷಯದ ಕುರಿತು ಒಂದು ಜಿಜ್ಞಾಸೆ

Upayuktha
0


ನಿನ್ನೆ ಕೃಷಿ ವಿಜ್ಞಾನ ಸಮಾವೇಶ ವ್ಯವಸ್ಥಿತ  ರೀತಿಯಲ್ಲಿಯೇ ನಡೆದಿತ್ತು. ಬೆಳಗಿನ ಕಾರ್ಯಕ್ರಮ, ಅಧಿಕ ಇಳುವರಿ, ರೋಗಗಳು, ರೋಗಕ್ಕೆ ಪರಿಹಾರಗಳು, ಮಣ್ಣು ಮಣ್ಣಿನ ಫಲವತ್ತತೆ ಈ ಕುರಿತಾಗಿಯೇ ಇತ್ತು. ಮಧ್ಯಾಹ್ನ ನಂತರ ಇಂತಹ ಸಲಹೆಗಳ ರೂಪದಲ್ಲಿ ಸಂಗ್ರಹಿತ ವಿಷಯಗಳನ್ನು ಭೂಮಿಗೆ ಇಳಿಸಿದ ಸಾಧಕರ ಸಾಧನೆಯ ಬಗ್ಗೆ ವಿವರಣೆ ಸುಂದರವಾಗಿ ಮೂಡಿ ಬಂದಿತ್ತು.


ಓರ್ವ ಗೋ ಆಧಾರಿತ ಕೃಷಿಕನಾಗಿ ವಿಷಯ ಜ್ಞಾನದ ದೃಷ್ಟಿಯಿಂದ ನಾನು ಇಡೀ ದಿನ ಸಂಪೂರ್ಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ರೋಗಗಳು ಮತ್ತು ಹತೋಟಿಯ ಬಗ್ಗೆ ವಿಷಯ ತಜ್ಞರಾದ ಪಿಎನ್ ಭಟ್ಟರು ಅನೇಕ ಸಲಹೆಗಳನ್ನು ಮತ್ತು ರಾಸಾಯನಿಕ ಪರಿಹಾರಗಳನ್ನು ಸೂಚಿಸಿದ್ದರು. ಕಳೆದ 30 ವರ್ಷಗಳಿಂದ ಯಾವುದೇ ರಾಸಾಯನಿಕ ಪರಿಹಾರಗಳನ್ನು ನಾನು ಬಳಸದ ಕಾರಣ ಅವರು ಹೇಳಿದ ಹೆಸರುಗಳ ಮೇಲೆ ನನಗೆ ವಿಶೇಷ ಆಸಕ್ತಿ ಮೂಡಿರಲಿಲ್ಲ ಮತ್ತು ನೆನಪಲ್ಲೂ ಉಳಿಯಲಿಲ್ಲ. ಆದರೆ ಬುದ್ಧಿಯನ್ನು ಒರೆಗೆ ಹಚ್ಚಿ ಕೃಷಿ ಮಾಡಿ ಮತ್ತು ಕತ್ತಿಯ ಅಲುಗನ್ನು ಮಸಿಯದಿದ್ದರೆ ಅದು ಹೇಗೆ ಉಪಯೋಗಕ್ಕೆ ಬಾರದಂತಾಗುವುದೋ ಹಾಗೆ  ಮಾಡದಿರಿ ಎಂಬ ಸಲಹೆಯನ್ನು ಇತ್ತಿದ್ದರು. ಬುದ್ಧಿಯನ್ನು ಒರೆಗೆ ಹಚ್ಚಿದಾಗ ನನಗೆ ಹಳೆಯ ಹಲವು ಘಟನೆಗಳು ಕಣ್ಣ ಮುಂದೆ ಬಂದವು.


ಕಳೆದ 45 ವರ್ಷಗಳ ಹಿಂದೆ ಗದ್ದೆ ಬೇಸಾಯಕ್ಕೆ ಇದೇ ರೀತಿಯ ಸಲಹೆಗಳು ಭಾರಿಯಾಗಿ ಬಂದಿತ್ತು. ಅದನ್ನು ಸಂಪೂರ್ಣವಾಗಿ ಜಾರಿಗೊಳಿಸಿದವರು ನನ್ನಪ್ಪ. ಆ ಕಾಲದಲ್ಲಿಯೇ ಪ್ರಗತಿಪರ ಕೃಷಿಕ. ಜಿಲ್ಲಾ ಮಟ್ಟದಲ್ಲಿಯೂ ಗದ್ದೆ ಬೇಸಾಯದಲ್ಲಿ ನಂಬರ್ ವನ್ ಪ್ರಶಸ್ತಿಗಳು ಮುಡಿಗೇರಿತ್ತು. ಕೆಲವು ವರ್ಷಗಳಲ್ಲಿ ಗದ್ದೆಗೆ ಕೀಟಬಾಧೆ, ರೋಗಬಾಧೆ ಅಪ್ಪನನ್ನು ಹೈರಾಣಾಗಿಸಿತ್ತು. ಆದರೂ ನಿರಂತರ ಹೋರಾಟ ನನ್ನವರೆಗೂ ಬಂದಿತ್ತು. ನಾನೂ ಕೆಲವು ವರ್ಷ ಮುಂದುವರಿಸಿದೆ. ಅನುದಿನವೂ ಗದ್ದೆಯ ಮೇಲೆ ನಮ್ಮ ಗಮನ ಇರಲೇಬೇಕು. ಯಾವ ರೋಗ ಯಾವ ಸಮಯದಲ್ಲಿ ವಕ್ಕರಿಸುವುದು, ಯಾವ ಕೀಟಗಳ ಧಾಳಿ ಈ ಕುರಿತಾಗಿಯೇ ಚಿಂತಿಸುವುದು ಮತ್ತು ಅದರ ಪರಿಹಾರ, ಖರ್ಚಿನ ಲೆಕ್ಕ ಭತ್ತದ ಆದಾಯಕ್ಕಿಂತ ದುಪ್ಪಟ್ಟು. ಕೈ ಮೀರಿದ ಮೇಲೆ ಅನಿಸಿದ್ದು. ಒಂದೋ ಗದ್ದೆಗೆ ವಿದಾಯ ಅಥವಾ ಸಂಪೂರ್ಣ ಶರಣಾಗತಿ ಆಗಿ ಬಂದದ್ದಕ್ಕೆ ತೃಪ್ತಿಪಡೋಣ ಅನ್ನುವ ಕೃಷಿ. ಎರಡರಲ್ಲಿ ಒಂದರ ಆಯ್ಕೆ ಮಾಡಲೇ ಬೇಕಿತ್ತು. ಎರಡನೇದನ್ನು ಆಯ್ದುಕೊಂಡೆ. ಇಂದಿನವರೆಗೂ ಗದ್ದೆ ಬೇಸಾಯವನ್ನು ಮುಂದುವರಿಸುತ್ತಿದ್ದೇನೆ. ರೋಗ ಕೀಟಗಳ ಧಾಳಿ ಇಲ್ಲ. ಅಲ್ಪ ಸ್ವಲ್ಪ ಇದ್ದರೂ ಅಲ್ಲಲ್ಲಿಯೇ ಪ್ರಕೃತಿಯೇ ಪರಿಹಾರ ಕಂಡುಕೊಳ್ಳುತ್ತದೆ. ಕೆಲವೊಮ್ಮೆ ಬೂದಿಯ ಮೂಲಕ ಸಹಜ ಪರಿಹಾರ ಕಂಡದ್ದಿದೆ. ನಂಬರ್ ವನ್ ಜಾಗಕ್ಕೆ ಎಂದೆಂದೂ ಬರಲಾರೆ. ಖರ್ಚು ಮತ್ತು ಆದಾಯ ಹೆಚ್ಚು ಕಮ್ಮಿ ಸಮಲೆಕ್ಕ. ಇದು ಇಂದಿನ ಪರಿಸ್ಥಿತಿ.


ಈ ಗದ್ದೆ ಬೇಸಾಯದ ಪುನರಾವರ್ತನೆಯೇ ಇಂದಿನ ಅಡಿಕೆ ಮತ್ತು ಕಾಳುಮೆಣಸುಗಳ ವಿಷಯದಲ್ಲಿ ನಡೆಯುತ್ತಿದೆಯೇ? ಎಂಬಂತೆ ನನಗೆ ಭಾಸವಾಯಿತು. ಅಡಿಕೆಗೆ ಬೇಸಿಗೆಯಲ್ಲಿ ಕನಿಷ್ಠ ಏಳು ಸ್ಪ್ರೇ ಮತ್ತು ಮಳೆಗಾಲದ ಮೂರು ಸ್ಪ್ರೇ ಒಟ್ಟಿನ ಹತ್ತಕ್ಕೆ ಒಂದು ಸಾಮಾನ್ಯ ಲೆಕ್ಕ ಈ ರೀತಿ ಬರಬಹುದು.

ಒಂದು ಎಕ್ರೆಗೆ 500 ಮರ ಧೋಟಿಯಲ್ಲಿ ಬಿಟ್ಟಲ್ಲಿ ಒಂದು ಮರಕ್ಕೆ ರೂ ಹತ್ತರಂತೆ 500 ಮರಕ್ಕೆ 5,000. ಔಷಧಿ ಮತ್ತು ಇತರ ಖರ್ಚು 3000. ಒಟ್ಟು ಎಂಟು ಸಾವಿರ ಹತ್ತು ಸರ್ತಿಗೆ 80000. ಒಂದು ಆಳಿಗೆ ರೂ 600ರಂತೆ ರೂ 2,16,000 ವರ್ಷಕ್ಕೆ ಬರುತ್ತದೆ. ಅಲ್ಲಿಗೆ ಇವೆರಡಕ್ಕೆ ಒಟ್ಟಾಗಿ 2,96,000.

ಎಕರೆಯ ಅಡಿಕೆ ಆದಾಯ ರೂ.1,000 ಕೆಜಿ ಹಿಡಿಯಬಹುದು. ಈಗಿನ 400 ದರವಿದ್ದರೂ ಕೋಕಾ ಪಠೋರ ಇರುವ ಕಾರಣ ಸರಾಸರಿ 350  ಧಾರಣೆ ಸಿಕ್ಕಿದಲ್ಲಿ350000 ಆಗುವುದು.


ಉಳಿಕೆ ಐವತ್ತು ಸಾವಿರದಲ್ಲಿ ನೀರು ಗೊಬ್ಬರ ಮತ್ತು ವ್ಯಕ್ತಿಯ ಜೀವನ ಸಾಧ್ಯವೇ? ಎಂಬುದನ್ನು ಊಹನೆ ಮಾಡಿ. ಎಲ್ಲಾ ವಿಷಯಗಳಿಗೂ ಇಂತಹ ಲೆಕ್ಕಾಚಾರವನ್ನೇ ಮಾಡಿಕೊಳ್ಳಬಹುದು..


ನಿನ್ನೆಯ ದಿನ ವಿಷಯ ತಜ್ಞರು ಹಂಚಿಕೊಂಡ ಮಾಹಿತಿಯಲ್ಲಿ ನಾನು ಹೆಕ್ಕಿಕೊಂಡದ್ದು ಹಟ್ಟಿಗೊಬ್ಬರ, ಸೊಪ್ಪು, ಸುಡುಮಣ್ಣು ಧಾರಾಳವಾಗಿ ಬೀಳುತ್ತಿದ್ದ ಕಾಲದಲ್ಲಿ ಸಮಸ್ಯೆ ಇರಲಿಲ್ಲ ಎಂಬುದನ್ನು. ಅಂದರೆ ರಾಸಾಯನಿಕ ಕೃಷಿಯ ಪರಿಣಾಮವಾಗಿ ಮಣ್ಣಿನ ಫಲವತ್ತತೆ ನಾಶವಾಗಿದೆ ಅಂತ ಅರ್ಥ. ಮೂಲವನ್ನು ಸರಿಪಡಿಸದೆ ಮತ್ತು ಪ್ರಕೃತಿ ಮೂಲ ವಸ್ತುಗಳನ್ನು ಬಳಸದೆ ಮತ್ತೆ ಮತ್ತೆ ಮಣ್ಣು ಪರೀಕ್ಷೆಯ ಮೂಲಕ ರಾಸಾಯನಿಕದ ಪರಿಹಾರ ಎಷ್ಟು ಸಮಂಜಸ ಆಗಬಹುದು ಮತ್ತು ಎಷ್ಟು ಸುಸ್ಥಿರತೆಯನ್ನು ಕಾಣಬಹುದು ಅಂತ ನನಗೆ ಅರ್ಥ ಆಗಿಲ್ಲ.


ವ್ಯಕ್ತಿಗೊಬ್ಬನಿಗೆ ಶೀತ ಕೆಮ್ಮು ಜ್ವರ ಬಂದಿದೆ. ಔಷಧಿಯನ್ನು ತೆಗೆದುಕೊಂಡು ಐಸ್ ಕ್ರೀಮ್ ತಿಂದಲ್ಲಿ ಕಡಿಮೆಯಾಗಬಹುದೇ?

ಹೊಟ್ಟೆ ಹಾಳಾಗಿದೆ ಎಂದು ಆಂಟಿಬಯೋಟಿಕ್ ಸೇವಿಸಿಕೊಂಡು ಉರಿದದ್ದು ಕರಿದದ್ದು ತಿಂದಲ್ಲಿ ಪರಿಸ್ಥಿತಿ ಏನಾಗಬಹುದು? ಅದುವೇ ಅಲ್ಲವೇ ಈ ತರದ ಪರಿಹಾರಗಳು ಅಂತ ನನ್ನ ಮನಸ್ಸಿಗೆ ತೋಚಿತು. ಸುಸ್ಥಿರ ಕೃಷಿಗೆ ಬೇಕಾದ ಮೂಲಗಳನ್ನು ಉಳಿಸಿಕೊಳ್ಳದೆ, ಅದನ್ನು ಸ್ವತಃ ತಯಾರಿಸಿಕೊಳ್ಳದೆ ಬೇರೆ ಮೂಲಗಳಿಂದ ನಿರೀಕ್ಷೆ ಮಾಡಿದರೆ ಅದು ಸುಸ್ಥಿರ ಕೃಷಿಯ ಬದಲು ಅಸ್ಥಿರ ಕೃಷಿ ಅಂತ ಅನಿಸಿಕೊಳ್ಳದೆ? 


ಪ್ರಕೃತಿಯಲ್ಲಿ ಸ್ವಲ್ಪ ತಾಳ್ಮೆಯಿಂದ ಇದ್ದರೆ ತನ್ನಿಂದ ತಾನೇ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯ. ಒಂದೆರಡು ಉದಾಹರಣೆಗಳನ್ನು ಕೆಳಗೆ ಕೊಡುವೆ.

1) ಗದ್ದೆ ಬೇಸಾಯದ ಬಗ್ಗೆ ಮೇಲೆ ಹೇಳಿರುವೆ.

2) ತೆಂಗಿನ ಕಪ್ಪು ತಲೆ ಹುಳ ವಿಜ್ಞಾನಿಗಳ ಮತ್ತು ಕೃಷಿಕರ ತಲೆ ಕೊರೆದಿತ್ತು. ನಾನಾ ಹಾರಾಟ ಮತ್ತು ಹೋರಾಟಗಳ ನಂತರ ತನ್ನಷ್ಟಕ್ಕೆ ತಾನೇ ಸರಿಯಾಗಿಲ್ಲವೇ?

3) ಅತ್ಯಂತ ಕಡಿಮೆ ರೋಗ ಇರುವ ಕದಳಿ ಬಾಳೆ ಮುಂಡುತಿರಿ, ತಿರಿ ಕೊಳೆಯುವುದು, ಎಲೆ ತಿಂದು ಸುರುಳಿ ಸುತ್ತುವ ಕೀಟಬಾಧೆ ಕಿತ್ತದ್ದು, ಸುಟ್ಟದ್ದು, ಬೇಯಿಸಿದ್ದು, ವಿಷ ಪ್ರಯೋಗ ಮಾಡಿದ್ದು ಯಾವುದಕ್ಕೂ ಬಗ್ಗದೆ ಕೈ ಸೋತ ಮೇಲೆ ತನ್ನಷ್ಟಕ್ಕೆ ಕಡಿವಾಣ ಬಿದ್ದಿಲ್ಲವೇ?  

ಇಂತಹ ಉದಾಹರಣೆಗಳು ಅಲ್ಲಲ್ಲಿ ಬೇರೆ ಬೇರೆ ರೂಪದಲ್ಲಿ ಅನೇಕರು ಕಂಡಿರಬಹುದು. 

  

ನನ್ನ ಅನಿಸಿಕೆ ಏನೆಂದರೆ ಮೂಲವನ್ನು ಸರಿಪಡಿಸಲು ನಮ್ಮ ಹೋರಾಟ ಮಾಡದೆ ಮರೆತು ಹೋದ ಗೋ ಆಧಾರಿತ ಕೃಷಿಯನ್ನು ಮತ್ತೆ ಜಾರಿಗೆ ತಾರದೆ ಕ್ಷಣಿಕ  ಪರಿಹಾರಗಳು ಕೆಲವು ವರ್ಷಕ್ಕೆ ಸರಿ ಅಂತ ಅನಿಸಿದರೂ ದೀರ್ಘಕಾಲಕ್ಕೆ ಸಮಂಜಸ ಆಗಲಾರದು. ಹೋರಾಟವೇ ಜೀವನವಾದರೆ ನಾವು ಈಗಾಗಲೇ ಕಳೆದುಕೊಂಡ ಗದ್ದೆ ಬೇಸಾಯ, ದನಗಳು, ಪೂರಕ ಕಾಡುಗಳಂತೆ ಅಡಿಕೆ ಮತ್ತು ಕಾಳುಮೆಣಸು ಕೃಷಿಗೂ ವಿದಾಯ ಹೇಳುವ ಪರಿಸ್ಥಿತಿ ಬರಬಹುದೇ?


ಮಹಾಭಾರತದ ಮಾತೊಂದು ಈ ಸಂದರ್ಭದಲ್ಲಿ ನೆನಪಿಗೆ ಬಂತು. ಯಶಸ್ವಿ ಜೀವನಕ್ಕಿಂತ ಸಂತೃಪ್ತ ಜೀವನ ಲೇಸು ಏಕೆಂದರೆ ಯಶಸ್ಸನ್ನು ಬೇರೆಯವರು ಅಳೆಯುತ್ತಾರೆ. ಆದರೆ ಸಂತೃಪ್ತಿಯನ್ನು ಅಳೆಯುವುದು ನಮ್ಮ ಹೃದಯ ನಮ್ಮ ಮನಸ್ಸು.


-ಎ.ಪಿ. ಸದಾಶಿವ ಮರಿಕೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top