ಉಜಿರೆ: ಎಸ್.ಡಿ.ಎಂ ಪಿ.ಜಿ ಸೆಂಟರ್ ಓರಿಯೆಂಟೇಶನ್ ಕಾರ್ಯಕ್ರಮ

Upayuktha
0


ಉಜಿರೆ:
ಕೌಶಲ್ಯಗಳನ್ನು ನವೀಕರಿಸಿಕೊಂಡು ಜ್ಞಾನಾಧಾರಿತ ಸಂಶೋಧನಾ ಪ್ರಜ್ಞೆ ಮತ್ತು ಅನ್ವಯಿಕ ಸಾಮರ್ಥ್ಯದೊಂದಿಗೆ ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರುಗೊಂಡಾಗ ಮಾತ್ರ ಅಚ್ಚಳಿಯದ ಪ್ರಭಾವ ಮೂಡಿಸಿ ಯಶಸ್ಸು ಗಳಿಸಲು ಸಾಧ್ಯ ಎಂದು ಬೆಂಗಳೂರಿನ ಸಿಗ್ಮಾ ಕಂಪನಿಯ ತಾಂತ್ರಿಕ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ, ಮುಖ್ಯಸ್ಥ ಡಾ.ರವೀಂದ್ರ ವಿಕ್ರಮ್ ಸಿಂಗ್ ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳಿಗೆ ಪ್ರವೇಶಾತಿ ಪಡೆದ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಉದ್ದೇಶದಿಂದ ಇಂದ್ರಪ್ರಸ್ಥ ಸಭಾಂಗಣದಲ್ಲಿ ಇಂದು ಆಯೋಜಿತವಾದ ಕಾರ್ಯಕ್ರಮದಲ್ಲಿ ನೂತನ ಶೈಕ್ಷಣಿಕ ವರ್ಷಕ್ಕೆ ಚಾಲನೆ ಸಿಕ್ಕಿತು. ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.  

ಹತ್ತು ವರ್ಷಗಳ ಹಿಂದಿನ ಕೌಶಲ್ಯಗಳು ಇದೀಗ ಅನ್ವಯಗೊಳ್ಳುವುದಿಲ್ಲ. ಕೋವಿಡ್ ನಂತರದ ಜಗತ್ತು ತಾಂತ್ರಿಕವಾಗಿ ಬದಲಾಗಿದೆ. ಹಳೆಯ ಕೌಶಲ್ಯಗಳ ನವೀಕರಣ ಇಂದಿನ ಅಗತ್ಯ. ತಂತ್ರಜ್ಞಾನವನ್ನು ನಿರಾಕರಿಸುವಂತಿಲ್ಲ. ಅದನ್ನು ಟೀಕಿಸಿ ದೂರ ನಿಲ್ಲುವಂತಿಲ್ಲ. ಬದುಕಿನ ಪ್ರತಿಯೊಂದು ಕ್ಷೇತ್ರಗಳಲ್ಲಿ ತಂತ್ರಜ್ಞಾನ ಹಾಸುಹೊಕ್ಕಾಗಿದೆ. ಅದರ ಮೇಲೆ ಅತಿಯಾದ ಅವಲಂಬನೆಯಾಗದೇ ಸ್ವಯಂ ಸಾಮರ್ಥ್ಯದ ಅಧಾರದಲ್ಲಿ ಮುನ್ನೆಡೆಯುವ ವಿವೇಕದೊಂದಿಗೆ ಇದ್ದಾಗ ಸಾರ್ವಕಾಲಿಕ ಗೆಲುವು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಆ ಕ್ಷಣದ ಅನಿವಾರ್ಯತೆ ಮತ್ತು ಅಗತ್ಯಗಳನ್ನು ದೃಷ್ಟಿಯಲ್ಲಿರಿಸಿಕೊಂಡು ವ್ಯಕ್ತಿಗತ ಮತ್ತು ವೃತ್ತಿಪರ ಬೆಳವಣಿಗೆಯನ್ನು ಕಂಡುಕೊಳ್ಳಬೇಕು. ತಂತ್ರಜ್ಞಾನದ ವೇಗವನ್ನು ಕಂಡುಕೊಂಡು ಅದಕ್ಕನುಗುಣವಾಗಿ ವೃತ್ತಿಪರತೆಯ ಶ್ರೇಷ್ಠತೆಯ ಮಜಲುಗಳನ್ನು ದಾಟಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.   

ಮುಖ್ಯ ಅತಿಥಿಯಾಗಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಮಾತನಾಡಿ ವಿದ್ಯಾರ್ಥಿಗಳು ಶೈಕ್ಷಣಿಕ ಹಂತದ ಕಲಿಕೆಯ ಹಾದಿಯನ್ನು ಯಶಸ್ವಿಯಾಗಿ ನಿರ್ವಹಿಸುವುದರ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಜ್ಞಾನ, ಸ್ಪರ್ಧಾತ್ಮಕತೆ, ತಾರ್ಕಿಕ ಚಿಂತನೆ, ಕೌಶಲ್ಯ ಮತ್ತು ವಿವೇಚನಾತ್ಮಕ ಎಚ್ಚರದ ಹೊಳಹುಗಳೊಂದಿಗೆ ವಿದ್ಯಾರ್ಥಿಗಳು ಸಾಧನೆಯ ಹಾದಿಯನ್ನು ಕ್ರಮಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ ಹೆಗ್ಡೆ ಮಾತನಾಡಿ ವಿದ್ಯಾರ್ಥಿಗಳು ಸ್ನಾತಕೋತ್ತರ ಹಂತದಲ್ಲಿ ವಿಸ್ತೃತ ಜ್ಞಾನಾರ್ಜನೆಯ ತುಡಿತ ಮತ್ತು ಪ್ರಾಯೋಗಿಕ ಅನ್ವಯಿಕತೆಯ ಪ್ರಜ್ಞೆಯೊಂದಿಗೆ ಕಲಿಕೆಯನ್ನು ಅರ್ಥಪೂರ್ಣಗೊಳಿಸಿಕೊಳ್ಳಬೇಕು ಎಂದು ನುಡಿದರು. 

ಎಸ್.ಡಿ.ಎಂ ಕಾಲೇಜಿನ ಉಪಪ್ರಾಂಶುಪಾಲರಾದ ಎಸ್.ಎನ್ ಕಾಕತ್ಕರ್ ಸ್ವಾಗತಿಸಿದರು. ಸ್ನಾತಕೋತ್ತರ ಕೇಂದ್ರದ ರಸಾಯನ ಶಾಸ್ತ್ರ ವಿಭಾಗದ ಸಹಪ್ರಾದ್ಯಾಪಕರಾದ ಡಾ.ನೆಫಿಸತ್ ಪಿ ಹಾಗೂ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸ್ವಾತಿ ಬಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ ವಂದಿಸಿದರು. ಇದೇ ಸಂದರ್ಭದಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಹೊರತಂದ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡುವ ಕಾರ್ಯಕ್ರಮದ ಸಮಗ್ರ ವಿವರಗಳನ್ನೊಳಗೊಂಡ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.  


                                                                                                                                                                      ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top