ನೆಲಮಂಗಲದ ಕ್ಷೇಮವನದಲ್ಲಿ ಉಜಿರೆ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ಹಳೆ ವಿದ್ಯಾರ್ಥಿಗಳ ಸಮ್ಮಿಲನ
ಬೆಂಗಳೂರು: "ಹಳೆಯ ಪತ್ರಿಕೋದ್ಯಮವನ್ನು ಮರೆತು, ಹೊಸ ಪತ್ರಿಕೋದ್ಯಮವನ್ನು ಕಲಿಯುವುದು ಪತ್ರಕರ್ತ ವೃತ್ತಿಗೆ ದೊಡ್ಡ ಸವಾಲಾಗಿದೆ. ಈ ಸವಾಲು ಎದುರಿಸದಿದ್ದಲ್ಲಿ ಈ ವೃತ್ತಿ ವಿನಾಶದಂಚಿನತ್ತ ಸರಿಯುವುದರಲ್ಲಿ ಸಂಶಯವಿಲ್ಲ" ಎಂದು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ನೆಲಮಂಗಲದ ‘ಕ್ಷೇಮವನ’ ವೆಲ್ನೆಸ್ ಸೆಂಟರ್'ನಲ್ಲಿ ಇಂದು (ಸೆ.29) ಉಜಿರೆ ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ 'ಸ್ನೇಹ ಸಂವಹನ' ಉದ್ಘಾಟಿಸಿ ಅವರು ಮಾತನಾಡಿದರು.
ಜನರ ಅಭಿರುಚಿಗಳು, ಆಸಕ್ತಿಗಳು ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತಿವೆ. ಆದರೆ, ಮಾಧ್ಯಮಗಳು ಸುದ್ದಿ ಪ್ರಸ್ತುತಿಯಲ್ಲಿ ಹಳೆಯ ಮಾದರಿಯನ್ನೇ ಮುಂದುವರಿಸುತ್ತಿವೆ. ಜನರಿಗೆ ಬೇಕಾದ ಮಾಹಿತಿ ಸೋಶಿಯಲ್ ಮೀಡಿಯಾಗಳಲ್ಲಿ ಲಭ್ಯವಾಗುತ್ತಿರುವ ಕಾಲದಲ್ಲಿ, ಸೋಶಿಯಲ್ ಮೀಡಿಯಾ ಟ್ರೆಂಡ್ ನಾಳಿನ ಪತ್ರಿಕೋದ್ಯಮವನ್ನು ನಿರ್ಧರಿಸುವ ಪ್ರಸ್ತುತ ಕಾಲದಲ್ಲಿ ಪ್ರಸ್ತುತ ಸ್ಥಿತಿಯನ್ನು ಪತ್ರಕರ್ತರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅವರು ಹೇಳಿದರು.
“ಪತ್ರಿಕೋದ್ಯಮ ವಾತಾವರಣ ಬದಲಾಗಿದೆ. ಆದರೆ ಪತ್ರಿಕೆಯ ಆದ್ಯತೆಗಳು ಬದಲಾಗಿಲ್ಲ. ಹೊಸ ಪತ್ರಿಕೋದ್ಯಮ ಬಂದಿದೆ. ಪ್ರತಿಯೊಬ್ಬರೂ ಒಂದೊಂದು ಚಾನಲ್ ಆಗಿದ್ದಾರೆ. ಪ್ರತಿಯೊಬ್ಬರೂ ಸೋಶಿಯಲ್ ಮೀಡಿಯಾ, ಪ್ರತಿಯೊಬ್ಬರೂ ತಮ್ಮ ರೀಲ್ಸ್'ನಲ್ಲಿ ಕ್ಯಾರೆಕ್ಟರ್ ಆಗಿದ್ದಾರೆ. ಸಮಯ ಬದಲಾಗುತ್ತಿದೆ, ಟ್ರೆಂಡ್ ಬದಲಾಗುತ್ತಿದೆ. ಪತ್ರಿಕೋದ್ಯಮ ಹೊರಳು ದಾರಿಯಲ್ಲಿದೆ. ಆದರೆ ಭವಿಷ್ಯ ಉಜ್ವಲವಾಗಿದೆ. ನಮ್ಮದೇ ವೇದಿಕೆ ಸೃಷ್ಟಿಸಿಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇಲ್ಲದೇ ಹೋದಲ್ಲಿ ಇನ್ಫ್ಲುಯೆನ್ಸರ್'ಗಳು ಪತ್ರಕರ್ತರ ಸ್ಥಾನವನ್ನು ಆಕ್ರಮಿಸಿಕೊಳ್ಳುವುದು ಖಚಿತ” ಎಂದು ಅವರು ಎಚ್ಚರಿಸಿದರು.
ಒಂದು ಪತ್ರಿಕೆಯ ನಿಜವಾದ ತಾಕತ್ತು ಸುದ್ದಿಮನೆಯಲ್ಲಿರುವ ಪತ್ರಕರ್ತರ ಕ್ರಿಯಾಶೀಲತೆಯಲ್ಲಿದೆ. ಮಾದರಿ ಪತ್ರಕರ್ತರು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಂಡು ಹೊರ ಪ್ರಪಂಚದ ಬದಲಾವಣೆಗಳನ್ನು ಗಮನಿಸಬೇಕು. ಓದುಗರನ್ನು ಹಿಡಿದಿಟ್ಟುಕೊಳ್ಳುವ ಹೊಸ ತಂತ್ರಗಳನ್ನು ಬರಹಗಳಲ್ಲಿ ಅಳವಡಿಸಿಕೊಳ್ಳಬೇಕು. ವೃತ್ತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ದಿನನಿತ್ಯದ ವಿದ್ಯಮಾನಗಳ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸಿ, ಪ್ರತಿಕ್ರಿಯಿಸಿ ಮತ್ತು ವಿಮರ್ಶೆ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇಂದಿನ ಆನ್ಲೈನ್ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇಂದಿನ ದಿನಗಳಲ್ಲಿ ಮನೋರಂಜನಾ ಮಾಧ್ಯಮಗಳಿಗಿರುವ ವೀಕ್ಷಕರು ಸುದ್ದಿ ಮಾಧ್ಯಮಗಳಿಗಿಲ್ಲ. ಬದಲಾದ ಕಾಲದಲ್ಲಿ ಪತ್ರಕರ್ತರ ಕೆಲಸಗಳನ್ನು ಪ್ರಶ್ನಿಸುವ ವರ್ಗ ಸೃಷ್ಟಿಯಾಗಿದೆ. ಈ ಸವಾಲುಗಳನ್ನು ಎದುರಿಸಿ ನಿಲ್ಲಲು ವೃತ್ತಿಪರತೆ ಮತ್ತು ವಿಶ್ವಾಸಾರ್ಹತೆ ಕಾಪಾಡಿಕೊಳ್ಳುವುದು ಅತ್ಯಗತ್ಯ. ಕಾಲ ಮತ್ತು ಬದಲಾಗುವ ಟ್ರೆಂಡ್‌ಗಳು ಪತ್ರಿಕೋದ್ಯಮದ ಗತಿಯನ್ನು ನಿರ್ಧರಿಸುತ್ತಿದೆ. ಅದನ್ನು ಅರ್ಥಮಾಡಿಕೊಳ್ಳದೆ ಸುದ್ದಿಮನೆಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದರು.
ಕೊರೋನಾ ಬಳಿಕ 60ಕ್ಕೂ ಹೆಚ್ಚು ಪತ್ರಕರ್ತರು ಸಾವಿಗೀಡಾಗಿದ್ದಾರೆ. ವೃತ್ತಿಯ ಗುಣವೇ ಹಾಗಿರುವ ಕಾರಣ ಅವರಿಗೆ ಆರೋಗ್ಯದ ಕಾಳಜಿ ವಹಿಸಲಾಗುತ್ತಿಲ್ಲ. ಕನ್ನಡ ಪತ್ರಿಕೋದ್ಯಮದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿ ಮತ್ತು ಲೇಖನ (ಹೆಲ್ತ್ ಬೀಟ್) ಕೊರತೆಯೂ ಇದೆ. ಹಾಗಿರುವಾಗ ಪ್ರಕೃತಿ ಚಿಕಿತ್ಸೆ ನೀಡುತ್ತಿರುವ ಕ್ಷೇಮವನದ ಮೂಲಕ ಆರೋಗ್ಯ ಪತ್ರಿಕೋದ್ಯಮ ಕುರಿತು ಉಪಕ್ರಮಗಳನ್ನು ಕೈಗೊಳ್ಳಬಹುದು ಎಂದು ಕ್ಷೇಮವನದ ನಿರ್ದೇಶಕಿ ಶ್ರದ್ಧಾ ಅಮಿತ್ ಅವರಿಗೆ ವಿಶ್ವೇಶ್ವರ ಭಟ್ ಸಲಹೆ ನೀಡಿದರು.
'ನಿರಂತರ' ಪತ್ರಿಕೆ ಮೂಲಕ ಧನಾತ್ಮಕ ಪತ್ರಿಕೋದ್ಯಮವನ್ನು ಧರ್ಮಸ್ಥಳ ನಡೆಸುತ್ತಿದೆ. ವೀರೇಂದ್ರ ಹೆಗ್ಗಡೆ ಅವರು ದೂರದೃಷ್ಟಿಯುಳ್ಳ ನಾಯಕ. ಶ್ರದ್ಧಾ ಧರ್ಮಸ್ಥಳದ ಭರವಸೆಯ ಚಿಗುರು ಎಂದು ಅವರು ಬಣ್ಣಿಸಿದರು.
ಬೆಂಗಳೂರು ಉತ್ತರ ವಿ.ವಿ. ಉಪಕುಲಪತಿ ಡಾ. ನಿರಂಜನ್ ವಾನಳ್ಳಿ ಮಾತನಾಡಿ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದವರಿಗೆ, ಬರೆಯಬೇಕು ಎಂಬ ಕನಸನ್ನು ಹೊತ್ತವರಿಗೆ ಉಜಿರೆಯ ಪರಿಸರವು ಹೆಜ್ಜೆ ಹೆಜ್ಜೆಗೂ ಸೂಕ್ತ ಅವಕಾಶಗಳನ್ನು ಒದಗಿಸುತ್ತದೆ, ಆದರೆ ಆಸಕ್ತಿಯಿಂದ ಗಮನಿಸುವ ಮನಸ್ಸಿರಬೇಕು ಎಂದರು.
ಉಜಿರೆಯಲ್ಲಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥರಾಗಿದ್ದಾಗಿನ ತಮ್ಮ ವೃತ್ತಿ ಜೀವನವನ್ನು ಸ್ಮರಿಸಿದರು. “ಪ್ರಸ್ತುತ ವಿಭಾಗದ ಚುಕ್ಕಾಣಿ ಹಿಡಿದಿರುವ ಮಾತೃಹೃದಯದ ಭಾಸ್ಕರ ಹೆಗಡೆ ಅವರ ಗರಡಿಯಲ್ಲಿ ಹಲವರು ಬೆಳೆಯುತ್ತಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಕೃತಿ ಚಿಕಿತ್ಸೆಯನ್ನು ಪ್ರಚುರಪಡಿಸುತ್ತಿರುವುದಕ್ಕಾಗಿ ಆಯುಷ್ ಟಿ.ವಿ.ಯಿಂದ ರಾಷ್ಟ್ರೀಯ ಆರೋಗ್ಯ ಪ್ರಶಸ್ತಿ ಪುರಸ್ಕೃತರಾದ ಹಿನ್ನೆಲೆಯಲ್ಲಿ ಶ್ರದ್ಧಾ ಅಮಿತ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪತ್ರಿಕೋದ್ಯಮ ವಿದ್ಯಾರ್ಥಿಗಳು ಹೊರತಂದ, 'ಕ್ಷೇಮವನ' ಕುರಿತ ಪತ್ರಿಕೆ 'ಕ್ಷೇಮ ಸಂವಹನ' ಹಾಗೂ ಚಿಗುರು ಪ್ರಾಯೋಗಿಕ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ಕ್ಷೇಮವನ ಚೀಫ್ ವೆಲ್ನೆಸ್ ಆಫೀಸರ್ ಡಾ. ನರೇಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಪ್ರಸ್ತಾವಿಸಿದರು. ಶ್ರದ್ಧಾ ಅಮಿತ್ ಸ್ವಾಗತಿಸಿದರು. ಮಾನಸಾ ಪ್ರಾರ್ಥಿಸಿದರು. ಡಾ. ವಾಹಿನಿ ಅರವಿಂದ್ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ