ಶ್ರೀ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷರಾಗಿ ಡಾ. ಗಿರಿಧರ ಕಜೆ 10 ನೆಯ ಬಾರಿಗೆ ಪುನರಾಯ್ಕೆ
81ನೆಯ ವರ್ಷದ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಸಂಪನ್ನ
ಬೆಂಗಳೂರು: 81 ವರ್ಷ ಎಂದರೆ ಸಹಸ್ರ ಚಂದ್ರ ದರ್ಶನದ ಸಂಧಿ ಕಾಲ. ಹವ್ಯಕ ಮಹಾಸಭೆ ಈ ಪರ್ವಕಾಲಕ್ಕೆ ಹೆಜ್ಜೆಹಾಕುತ್ತಾ ಇದ್ದು, ಈ ಸಂದರ್ಭದಲ್ಲಿ ಮಹಾಸಭೆ ಐತಿಹಾಸಿಕ ತೃತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಆಯೋಜಿಸುತ್ತಿದೆ. ಇದು ಜಾತಿಯ ಸಮ್ಮೇಳನವಾಗಿರದೇ, ಹವ್ಯಕ ಸಮುದಾಯದ ವೈಶಿಷ್ಟ್ಯವನ್ನು ಜಗತ್ತಿಗೆ ತೆರೆದಿಡುವ ಕಾರ್ಯವಾಗಿದೆ ಎಂದು ಡಾ.ಗಿರಿಧರ ಕಜೆ ಹೇಳಿದರು.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ನಡೆದ ಅಖಿಲ ಹವ್ಯಕ ಮಹಾಸಭೆಯ 81ನೇ ವರ್ಷದ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಡಾ.ಕಜೆಯವರು, ಸಮಾವೇಶಗಳು ನಡೆಯುವುದು ಸಮಾಜ ಸಂಘಟನೆಗಾಗಿಯೇ ಆಗಿದ್ದು, ಶ್ರೀರಾಮಚಂದ್ರಾಪುರಮಠ, ಶ್ರೀಸ್ವರ್ಣವಲ್ಲಿ ಮಠ ಹಾಗೂ ಶ್ರೀಮನ್ನೆಲಮಾವಿನಮಠಗಳ ಯತಿಗಳು ಒಂದೇ ವೇದಿಕೆಯಲ್ಲಿ ಸೇರುವ ಮೂಲಕ ಸಮಾಜದ ಸಂಘಟನೆಗೆ ಬಲತುಂಬ ಬೇಕು ಎಂಬುದು ಮಹಾಸಭೆಯ ಆಶಯವಾಗಿದೆ ಎಂದರು.
ಸಮಾಜದ ಜನಸಂಖ್ಯೆ ಕುಸಿಯುತ್ತಿರುವುದು ಆತಂಕಕಾರಿ ವಿಚಾರವಾಗಿದ್ದು, ಜನಸಂಖ್ಯೆ ಕುಸಿದಂತೆ ನಮ್ಮ ಸಂಸ್ಕೃತಿ ಕುಂದುತ್ತಾ ಹೋಗುತ್ತದೆ. ಜನಸಂಖ್ಯೆ ಕಡಿಮೆಯಾದಂತೆ ನಮ್ಮ ಸಂಸ್ಕಾರಗಳು ಇಲ್ಲವಾಗುವಂತಾ ಸಾಧ್ಯತೆ ಇದೆ. ಈ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳಬೇಕು ಎಂದು ಕರೆನೀಡಿದರು.
ಡಿಸೆಂಬರ್ 27, 28 ಹಾಗೂ 29 ರಂದು ಎಲ್ಲಾ ಹವ್ಯಕರು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಇದು ಎಲ್ಲಾ ಹವ್ಯಕರಿಗೆ ಬಹಿರಂಗ ಆಮಂತ್ರಣವಾಗಿದ್ದು, ಈ ಕಾರ್ಯಕ್ರಮ ಕೇವಲ ಹವ್ಯಕರಿಗೆ ಮಾತ್ರ ಸೀಮಿತವಾಗಿರದೇ, ಎಲ್ಲಾ ಸಮುದಾಯದವರಿಗೂ ಪಾಲ್ಗೊಳ್ಳಲು ಮುಕ್ತ ಅವಕಾಸವಿರಲಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ ಸಭೆಯನ್ನು ನಡೆಸಿ; ಸದಸ್ಯರ ಪ್ರಶ್ನೆಗಳಿಗೆ ಸಮಜಾಯಿಷಿ ನೀಡಿ, ಮಹಾಸಭೆಯ ಕಾರ್ಯಗಳಿಗೆ ಪದಾಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ನೀಡುತ್ತಿರುವ ಬೆಂಬಲಕ್ಕೆ ಅಭಿನಂದನೆ ಸಲ್ಲಿಸಿದರು.
ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ ಆಯವ್ಯಯ ಮಂಡಿಸಿ; ಖರ್ಚು ವೆಚ್ಚಗಳ ಮಾಹಿತಿ ನೀಡಿದರು. ಮಹಾಸಭೆಯಲ್ಲಿ ಆರ್ಥಿಕ ಶಿಸ್ತಿಗಾಗಿ ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಿದರು. ಉಪಾಧ್ಯಕ್ಷ ಆರ್ ಎಂ ಹೆಗಡೆ ಬಾಳೆಸರ, ಶ್ರೀಧರ ಭಟ್ಟ ಕೆಕ್ಕಾರು, ಕಾರ್ಯದರ್ಶಿ ಪ್ರಶಾಂತ್ ಭಟ್ಟ ಮಲವಳ್ಳಿ, ಆದಿತ್ಯ ಕಲಗಾರು ಹಾಗೂ ಸಾಗರ, ಮಂಗಳೂರು, ಬೆಂಗಳೂರು, ಉತ್ತರ ಕನ್ನಡ, ಕಾಸರಗೋಡು ಸೇರಿದಂತೆ ಬೇರೆಬೇರೆ ಪ್ರಾಂತಗಳ ನಿರ್ದೇಶಕರು - ಸದಸ್ಯರು ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಭಾಗವಹಿಸಿದ್ದರು.
~~~~~~~~~~~~~~~~~~~
ನೂತನ ಆಡಳಿತ ಮಂಡಳಿ:
ನಿರ್ದೇಶಕರ ಸಭೆಯಲ್ಲಿ ನೂತನವಾಗಿ ಸರ್ವಾನುಮತದಿಂದ ಆಯ್ಕೆಯಾದ ಆಡಳಿತ ಮಂಡಳಿ
ಡಾ. ಗಿರಿಧರ ಕಜೆ - ಅಧ್ಯಕ್ಷರು
ಆರ್ ಎಂ ಹೆಗಡೆ ಬಾಳೆಸರ - ಉಪಾಧ್ಯಕ್ಷರು
ಶ್ರೀಧರ ಜೆ ಭಟ್ಟ ಕೆಕ್ಕಾರು - ಉಪಾಧ್ಯಕ್ಷರು
ಸಿಎ. ವೇಣುವಿಘ್ನೇಶ ಸಂಪ - ಪ್ರಧಾನ ಕಾರ್ಯದರ್ಶಿ
ಪ್ರಶಾಂತ ಕುಮಾರ ಜಿ ಭಟ್ಟ ಮಲವಳ್ಳಿ - ಕಾರ್ಯದರ್ಶಿ
ಆದಿತ್ಯ ಹೆಗಡೆ ಕಲಗಾರು - ಕಾರ್ಯದರ್ಶಿ
ಕೃಷ್ಣಮೂರ್ತಿ ಎಸ್ ಭಟ್ ಯಲಹಂಕ - ಕೋಶಾಧಿಕಾರಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ