ಸೂರ್ಯ ಜಗತ್ತಿನ- ಜ್ಯೋತಿಷ್ಯದ ಆತ್ಮ: ರಾಘವೇಶ್ವರ ಶ್ರೀ

Upayuktha
0


ಗೋಕರ್ಣ: ಸೂರ್ಯ ಹೇಗೆ ಜಗತ್ತಿಗೆ ಆತ್ಮವೋ ಹಾಗೆ ಜ್ಯೋತಿಷ್ಯಕ್ಕೂ ಆತ್ಮ. ಜ್ಯೋತಿಷ್ಯದಲ್ಲಿ ಸೂರ್ಯಗ್ರಹ ಕೇಂದ್ರಬಿಂದು. ಆದ್ದರಿಂದಲೇ ಕವಡೆಶಾಸ್ತ್ರದಲ್ಲಿ ವಿಶೇಷವಾಗಿ ಸೂರ್ಯಸಂಬಂಧ ಲಕ್ಷಣಗಳನ್ನು ಕಾಣಬಹುದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.


ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು, 54ನೇ ದಿನವಾದ ಗುರುವಾರ ಮುಳ್ಳೇರಿಯಾ ಮಂಡಲದ ಸುಳ್ಯ, ಈಶ್ವರಮಂಗಲ, ನೀರ್ಚಾಲು, ಕುಂಬಳೆ, ಪಳ್ಳತ್ತಡ್ಕ ಮತ್ತು ಪೆರಡಾಲ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಕಾಲ ಸರಣಿಯ ಪ್ರವಚನ ಮಾಲಿಕೆಯಲ್ಲಿ ಆಶೀರ್ವಚನ ನೀಡಿದರು.


ಜ್ಯೋತಿಷ್ಯಕ್ಕೆ ಅತ್ಯಗತ್ಯವಾಗಿ ಬೇಕಾದ್ದು ದೈವಾನುಕೂಲ. ಆದ್ದರಿಂದಲೇ ಜ್ಯೋತಿಷಿಗಳನ್ನು ದೈವಜ್ಞ ಎಂದು ಕರೆಯಲಾಗುತ್ತದೆ. ಕವಡೆಶಾಸ್ತ್ರದಲ್ಲೂ ಗುರುಕವಡೆಗೆ ವಿಶೇಷ ಸ್ಥಾನವಿದೆ. ಇದಕ್ಕೆ ನಮಸ್ಕರಿಸಿಯೇ ಜ್ಯೋತಿಷ್ಯ ವಿಶ್ಲೇಷಣೆಯನ್ನು ದೈವಜ್ಞ ನಡೆಸುತ್ತಾರೆ ಎಂದು ಹೇಳಿದರು.


ಜ್ಯೋತಿಷದ ಮೂಲಕ ಎಲ್ಲರಿಗೂ ಒಂದೇ ಫಲ ಚಿಂತನೆ ನಡೆಸುವಂತಿಲ್ಲ. ಆಯಾ ಪರಿಸ್ಥಿತಿಗೆ ಅನುಗುಣವಾಗಿ ಅದು ಅನ್ವಯವಾಗುತ್ತದೆ. ಒಂದೇ ಕಾಲದಲ್ಲಿ ಹುಟ್ಟಿದ ಚಕ್ರವರ್ತಿಯ ಮಗನಿಗೂ, ಕೊಟ್ಟಿಗೆಯಲ್ಲಿ ಹುಟ್ಟುವ ಕರುವಿಗೂ ಫಲ ಒಂದೇ ಇರುವುದಿಲ್ಲ. ಹೋಲಿಕೆಗಳು ಇರಬಹುದೇ ವಿನಃ ಉಳಿದ ಅಂಶಗಳು ಪರಿಸರಕ್ಕೆ ಅನುಗುಣವಾಗಿ ಬದಲಾಗುತ್ತವೆ ಎಂದು ವಿಶ್ಲೇಷಿಸಿದರು.


ಜ್ಯೋತಿಷ್ಯಶಾಸ್ತ್ರದಲ್ಲಿ ದೈವಜ್ಞ ಲಗ್ನಸಾಧನೆ ಮಾಡುವುದು ಕವಡೆ ಶಾಸ್ತ್ರದ ಮೂಲಕ ಮಾತ್ರ. ಉಳಿದೆಲ್ಲ ವಿಧಾನದಲ್ಲಿ ಪೃಚ್ಛಕನ ಪ್ರಶ್ನೆಯ ಮೂಲಕವೇ ಲಗ್ನಸಾಧನೆ ಮಾಡಲಾಗುತ್ತದೆ. ಜಾತಕ ಎನ್ನುವುದು ಬ್ರಹ್ಮಾಂಡದಂತೆ. ದೈವಜ್ಞನಿಗೆ ಗೋಚರವಾದ ಅಂಶಗಳಿಗೆ ಅನುಗುಣವಾಗಿರುತ್ತದೆ. ಒಂದೇ ವಾಕ್ಯ ಬೇರೆಬೇರೆಯವರ ಮೇಲೆ ಬೇರೆ ಬೇರೆ ಫಲ ನೀಡಬಹುದು. ದೈವಜ್ಞನ ಚಿಂತನೆಗೂ ಇದು ಅನ್ವಯಿಸುತ್ತದೆ ಎಂದು ಬಣ್ಣಿದಸಿರು.


ಜ್ಯೋತಿಷ್ಯದಲ್ಲಿ ಕವಡೆಶಾಸ್ತ್ರ ಹೊರತುಪಡಿಸಿದರೆ ಉಳಿದೆಲ್ಲ ವಿಧಾನಗಳಲ್ಲಿ ಪ್ರಶ್ನೆಕೇಳುವ ವ್ಯಕ್ತಿಯನ್ನು ಆಧರಿಸಿ ಇದೆ. ಆದರೆ ಒಂದು ಶಾಸ್ತ್ರ ಮಾತ್ರ ದೈವಜ್ಞನ ಆಯುಧ. ಇದು ಕವಡೆಶಾಸ್ತ್ರ. ದೈವಜ್ಞನ ಈ ಕವಡೆಗಳಲ್ಲಿ ನಕ್ಷತ್ರ, ರಾಶಿ, ಗ್ರಹಗಳು ಎಲ್ಲವೂ ಅಡಗಿರುತ್ತವೆ. ಸತಿದೇವಿಯ ಆಭರಣಗಳು ಸಮುದ್ರದಲ್ಲಿ ಕವಡೆಗಳಾಗಿ ರೂಪುಗೊಂಡವು ಎಂಬ ಪ್ರತೀತಿ ಇದೆ ಎಂದು ಬಣ್ಣಿಸಿದರು.


ಎಂಟು ಮಂಗಲವಸ್ತುಗಳ ಸಮ್ಮುಖದಲ್ಲಿ ಪ್ರಶ್ನಚಿಂತನ ನಡೆಯುವುದೇ ಅಷ್ಟಮಂಗಲ. ತಾಂಬೂಲ, ಅಕ್ಷತೆ, ಕ್ರಮುಕ, ಧಾರುಭಾಜನ, ಅಂಬರ, ದರ್ಪಣ, ಗ್ರಂಥ, ದೀಪಗಳೇ ಅಷ್ಟಮಂಗಲಗಳು. ಇವುಗಳ ಸಾಕ್ಷಿತ್ವದಲ್ಲಿ ಅಷ್ಟಮಂಗಲ ನಡೆಯುತ್ತದೆ. ಇದು ಶಾಸ್ತ್ರದ ಶಿಖರವಿದ್ದಂತೆ ಎಂದು ಬಣ್ಣಿಸಿದರು.


ಇಂದಿನ ಅನಾವರಣದ ಬಗ್ಗೆ ಪ್ರಸ್ತಾವಿಸಿ ವ್ಯಕ್ತವಾಗಿ ಗುರು, ಅವ್ಯಕ್ತವಾಗಿ ಮಾತೆ ಮತ್ತು ನಾಗ ಸಾನ್ನಿಧ್ಯದ ಗುರುಕಟ್ಟೆಯೊಂದರ ಅನಾವರಣ ಇಂದು ನೆರವೇರಿದೆ. ಮುಂದಿನ ದಿನಗಳಲ್ಲಿ ಶಿಲಾಮಯ ಗುರುಪಾದುಕೆಗಳ ಪ್ರತಿಷ್ಠಾಪನೆಯಾಗಲಿದೆ. ವ್ಯಕ್ತವಾಗಿ ಗುರುಸಾನ್ನಿಧ್ಯ, ಅವ್ಯಕ್ತವಾಗಿ ದೇವಿ ಮತ್ತು ನಾಗಸನ್ನಿಧಿ ಇರುವ ಪವಿತ್ರ ಸ್ಥಾನವನ್ನು ಗಜಪೃಷ್ಠಾಕೃತಿಯಲ್ಲಿ ನಿರ್ಮಿಸಲಾಗಿದೆ. ಸಮೃದ್ಧವಾಗಿ, ಮಂಗಲಕರವಾಗಿ, ಸರ್ವತ್ರ ಮಂಗಲ ಪಸರಿಸುವ ಸಾನ್ನಿಧ್ಯವಾಗಿ ಬೆಳೆಯಲಿ, ಬೆಳಗಲಿ ಎಂದು ಆಶಿಸಿದರು.

ಗುರುಕಟ್ಟೆಯ ಅನಾವರಣವನ್ನು ಶ್ರೀಗಳ ಮಾತೃಶ್ರೀಯವರಾದ ಶ್ರೀಮತಿ ವಿಜಯಲಕ್ಷ್ಮಿ ನೆರವೇರಿಸಿದರು.


ವಿದ್ವಾನ್ ಉಮಾಕಾಂತ್ ಭಟ್ ಕೆರೆಕೈ ಮತ್ತು ಪತ್ರಕರ್ತ ನಾಗರಾಜ ಮತ್ತಿಗಾರ್ ಅವರು ಶ್ರೀಗಳಿಂದ ಆಶೀರ್ವಾದ ಮಂತ್ರಾಕ್ಷತೆ ಪಡೆದರು. ವಿವಿವಿ ಕೇಂದ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿದ್ಯಾರ್ಥಿ ಪ್ರಧಾನ ಈಶ್ವರ ಪ್ರಸಾದ್ ಕನ್ಯಾನ, ಯುವ ಪ್ರಧಾನ ಕೇಶವ ಪ್ರಕಾಶ್ ಎಂ, ಮುಳ್ಳೇರಿಯಾ ಮಂಡಲಾಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಚಾತುಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶ್ರೀಶ ಶಾಸ್ತ್ರಿ, ದೈವಜ್ಞರಾದ ಕೇಶವ ಭಟ್ ಮಿತ್ತೂರು, ಆರ್ಕೋಡ್ಲು ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top