ಮಂಗಳೂರು: ಬ್ರಾಹ್ಮಣ ಸಮುದಾಯದ ನಡುವೆ ಆಚಾರ-ವಿಚಾರ ಬೇರೆ ಬೇರೆ ಇದ್ದರೂ, ಭಾರತೀಯ ಸಂಸ್ಕೃತಿ, ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮತ್ತು ಹಿಂದೂ ಧರ್ಮದ ರಕ್ಷಣೆಯ ದೃಷ್ಟಿಯಿಂದ ಒಂದಾಗಬೇಕಿದೆ ಎಂದು ಚಿತ್ರಾಪುರ ಮಠಾಧೀಶ ಶ್ರೀ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ಕರೆ ನೀಡಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿ ಹಾಗೂ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಜಂಟಿಯಾಗಿ ಮಂಗಳೂರಿನ ಚಿತ್ರಾಪುರ ಮಠದ ಸಹಕಾರದೊಂದಿಗೆ ಅ. 26 ಮತು 27ರಂದು ನಡೆಸಲು ಉದ್ದೇಶಿಸಿದ “ಗಾಯತ್ರಿ ಸಂಗಮ” ಸಾಂಘಿಕ ಕೋಟಿ ಗಾಯತ್ರೀ ಜಪಯಜ್ಞದ ಪೂರ್ವಾಭಾವಿಯಾಗಿ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ಸನ್ನಿಧಾನದಲ್ಲಿ ಭಾನುವಾರ ಸಂಕಲ್ಪ ದೀಕ್ಷೆಯನ್ನು ನೀಡಿದ ಬಳಿಕ ಮಾತನಾಡಿದರು.
ಮುಂದಿನ ಜನಾಂಕಕ್ಕೆ ಲೌಕಿಕ ಶಿಕ್ಷಣದೊಂದಿಗೆ ಕನಿಷ್ಠ ಧಾರ್ಮಿಕ ಶಿಕ್ಷಣ ನೀಡಬೇಕು. ಸನಾತನ ಧರ್ಮದ ರಕ್ಷಣೆಯ ಮೇಲೆ ಈ ಹಿಂದೆ ದಾಳಿಗಳು ನಡೆದಾಗ ಇಡೀ ಸಮಾಜ ಒಂದಾಗಿ ಹೋರಾಟ ಮಾಡಿದೆ. ಅಂತಹ ಹೋರಾಟ ಮಾಡುವ ಅನಿವಾರ್ಯ ಸ್ಥಿತಿಗೆ ನಾವು ಬಂದಿದ್ದೇವೆ. ನಮ್ಮ ಧ್ವನಿ ದೃಢವಾಗಬೇಕಿದೆ ಎಂದರು. ಸಂಕಲ್ಪ ದೀಕ್ಷೆಯ ಪೂರ್ವದಲ್ಲಿ ಶ್ರೀ ಕ್ಷೇತ್ರದಲ್ಲಿ ಕುಡುಪು ಕೃಷ್ಣರಾಜ ತಂತ್ರಿ ಅವರು ಗಣಯಾಗ ನೆರವೇರಿಸಿ, ಗಾಯತ್ರಿ ಹೋಮದ ಕುರಿತು ಮಹತ್ವವನ್ನು ಮತ್ತು ಇಂದಿನ ದಿನದಲ್ಲಿ ಇಂತಹ ಯಾಗವನ್ನು ಇಡೀ ಬ್ರಾಹ್ಮಣ್ಯ ಸಮುದಾಯವು ತಮ್ಮ ರಕ್ಷಣೆ ಹಾಗೂ ಬ್ರಾಹ್ಮಣ್ಯದ ರಕ್ಷಣೆಯ ದೃಷ್ಟಿಯಿಂದ ಕೈಗೆತ್ತಿಕೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆ ಮಾತನಾಡಿದರು.
ಮಾತೆಯರಿಗೆ ಸರ್ವಮಂಗಳ ಮಾಂಗಲ್ಯ ಸ್ತೋತ್ರ ಪಠಣ ಸಂಕಲ್ಪ ಮಾಡಿದ ರಾಜ್ಯ ಧಾರ್ಮಿಕ ಪರಿಷತ್‌ನ ಮಾಜಿ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ದನದ ಕೊಬ್ಬನ್ನು ಸೈನಿಕರು ಬಳಸುವ ಸಿಡಿತೋಪುಗಳಿಗೆ ಬಳಸಿದ್ದಕ್ಕಾಗಿ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಮ ಸಿಪಾಯಿ ಧಂಗೆ ನಡೆದರೆ, ಇಂದು ದನ, ಹಂದಿಯ ಕೊಬ್ಬನ್ನು ನಮ್ಮೆಲ್ಲರ ಆರಾಧ್ಯ ದೇವರು, ನಾವೆಲ್ಲರೂ ನಂಬಿರುವ ತಿರುಪತಿ ತಿಮ್ಮಪ್ಪನ ಲಡ್ಡುಗೆ ಬಳಸಿದರೆ ನಾವು ಯಾವ ರೀತಿಯ ಹೋರಾಟ ನಡೆಸಬೇಕಿದೆ. ನಮ್ಮಲ್ಲಿನ ಒಗ್ಗಟ್ಟು ಇಲ್ಲದಿರುವುದನ್ನೇ ಬಂಡವಾಳವಾಗಿಸಿಕೊಂಡು ನಮ್ಮ ಮೇಲೆ ದೈಹಿಕ, ಮಾನಸಿಕ, ಅಕ್ಷರ, ಸಾಮಾಜಿಕ, ಶೈಕ್ಷಣಿಕ ಹೀಗೆ ಎಲ್ಲ ರೀತಿಯ ದಾಳಿಯಾಗುತ್ತಿದೆ.
ನಮ್ಮನ್ನು ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿಸುವ ಕೆಲಸವಾಗುತ್ತದೆ ಎಂದರು. ಕರಾವಳಿ ಭಾಗದಲ್ಲಿ ಬ್ರಾಹ್ಮಣ ಸಮುದಾಯದಲ್ಲಿ 9 ಪಂಗಡವನ್ನು ಕಾಣುತ್ತೇವೆ. ಗಾಯತ್ರಿ ಯಾಗದ ಮೂಲಕ 9 ಪಂಗಡ ವನ್ನೂ ಒಂದೇ ವೇದಿಕೆಯಡಿಗೆ ತರಲು ಪ್ರಯತ್ನವಾಗುತ್ತಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿ ಉಪಾಧ್ಯಕ್ಷ ನ್ಯಾಯವಾದಿ ಮಹೇಶ್ ಕಜೆ ಹೇಳಿದರು. ಕೋಟಿ ಗಾಯತ್ರಿ ಜಪಯಜ್ಞ ಯಶಸ್ವಿಗಾಗಿ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಬ್ರಾಹ್ಮಣ ಸಮುದಾಯ ಸಂಕಲ್ಪ ಮಾಡಿ ಜಪ ಆರಂಭಿಸಿರುತ್ತಾರೆ.
ಯಶಸ್ವಿಗಾಗಿ ಹಲವು ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ ಹೇಳಿದರು. ಯಾಗ ಸಮಿತಿಯ ಸಂಚಾಲಕ ಕಟೀಲಿನ ಅನುವಂಶಿಕ ಅರ್ಚಕ ಶ್ರೀಹರಿ ನಾರಾಯಣ ದಾಸ ಆಸ್ರಣ್ಣ ಅವರು ಯಜ್ಞದ ಬಗ್ಗೆ ಮಾಹಿತಿ ನೀಡಿದರು.
ಶರವು ಕ್ಷೇತ್ರದ ಶಿಲೆಶಿಲೆ ಆಡಳಿತ ಮೊಕ್ತೇಸರ ಶರವು ಶ್ರೀ ರಾಘವೇಂದ್ರ ಶಾಸ್ತ್ರೀ, ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ಅನಂತ ಆಸ್ರಣ್ಣ, ಕರ್ನಾಟಕ ಬ್ಯಾಂಕಿನ ನಿಕಟ ಪೂರ್ವ ಅಧ್ಯಕ್ಷರಾದ ಎಂ.ಎಸ್. ಮಹಾಬಲೇಶ್ವರ ಭಟ್, ಧರ್ಮದರ್ಶಿ ಹರಿಕೃಷ್ಣ ಪುನರೂರು,ವೇದಮೂರ್ತಿ ವಾಸುದೇವ ಭಟ್, ಮಂಗಳಾದೇವಿ ದೇವಸ್ಥಾನದ ಚಂದ್ರಶೇಖರ ಐತಾಳ್, ಪ್ರೊ.ಎಂ.ಬಿ. ಪುರಾಣಿಕ್, ಪ್ರದೀಪ್ ಕುಮಾರ್ಕ ಲ್ಕೂರಾ, ಬಪ್ಪನಾಡು ಕ್ಷೇತ್ರದ ಶ್ರೀಪತಿ ಉಪಾಧ್ಯಾಯ, ಕೃಷ್ಣ ಭಟ್ ಕೆ. ಕದ್ರಿ, ಶಿಕಾರಿಪುರ ಕೃಷ್ಣಮೂರ್ತಿ ಜಿಲ್ಲೆಯ ಎಲ್ಲ ದೇವಾಲಯದ ಅರ್ಚಕರು, ಜಿಲ್ಲೆಯ ಪುರೋಹಿತರು, ಸಂಸ್ಕೃತ ಶಿರೋಮಣಿಗಳು, ವೇದಜ್ಞರು ಭಾಗವಹಿಸಲಿರುವರು. ಭುವನಾಭಿರಾಮ ಪೆಜತ್ತಾಯ ಅವರಿಂದ ಶಂಖನಾದ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ