- ರಾಜೀವ ಹೆಗಡೆ
ದಿನದ ಹತ್ತು ಗಂಟೆಗಳ ಕಾಲ ಒಂದು ಕ್ಷಣವನ್ನೂ ಬಿಡದೇ ಮನಸ್ಸು ತುಂಬಿ ನಗಾಡಿಕೊಂಡು, ಜಗತ್ತಿನ ಯಾವುದೇ ಜಂಜಾಟದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಹರಟೆಯನ್ನು ಹೊಡೆಯಬೇಕು ಎಂದಾದರೆ ನಿಮ್ಮಿಷ್ಟದ ಸ್ನೇಹಿತರು ಜತೆಯಾಗಬೇಕು. ನಮ್ಮ ಆ ಸ್ನೇಹಿತರು ನಮ್ಮ ನೆಚ್ಚಿನ ಕಾಲೇಜಿನ ಸಹಪಾಠಿಗಳಾಗಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂಥ ಸಂಭ್ರಮ ಮೂಡುತ್ತದೆ. ಇಂದು ಅಂತಹದೊಂದು ಅಪರೂಪದ ಕ್ಷಣವನ್ನು ಕಳೆದುಬಂದೆ. ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದು ನಮ್ಮ ಪ್ರೀತಿಯ ಉಜಿರೆ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ.
ಕೆಲ ದಿನಗಳ ಹಿಂದೆ ಇಂತಹದೊಂದು ಕಾರ್ಯಕ್ರಮ ಆಗುತ್ತಿದೆ ಎಂದು ಗೊತ್ತಾದ ಕ್ಷಣದಲ್ಲೇ ಈ ಭಾನುವಾರದಂದು ನಾನು ನಿಗದಿಮಾಡಿಕೊಂಡಿದ್ದ ಎಲ್ಲ ಕಾರ್ಯಕ್ರಮವನ್ನು ಮುಂದೂಡಿಕೊಂಡೆ. ಏಕೆಂದರೆ ನನ್ನ ಪಾಲಿಗೆ ಉಜಿರೆ ಎಸ್‌ಡಿಎಂ ಕಾಲೇಜು ಪತ್ರಿಕೋದ್ಯಮ ವಿಭಾಗ ಹಾಗೂ ಅಲ್ಲಿಯ ಸ್ನೇಹಿತರಿಗಿಂತ ದೊಡ್ಡ ವಿಚಾರ ಮತ್ತೊಂದಿರಲು ಸಾಧ್ಯವಿಲ್ಲ. ಜೀವನ ರೂಪಿಸಿದ ಕಾಲೇಜು ಹಾಗೂ ಸ್ನೇಹಿತರು ಇದೇ ಉಜಿರೆಯಿಂದ ನನಗೆ ದೊರೆತಿದ್ದು.
ಬೆಳಗ್ಗೆ 7:30ಕ್ಕೆ ನನ್ನ ಸ್ನೇಹಿತರಾದ ಕಾರ್ತಿಕ್, ಮಹೇಶ್ ಹಾಗೂ ವೇಣುಗೋಪಾಲ್ ಜತೆಗೆ ಕಾರು ಏರಿದ ಕ್ಷಣದಿಂದ ವಾಪಸ್ 7 ಗಂಟೆಗೆ ಮನೆಗೆ ಬರುವರೆಗೆ ಒಂದು ಕ್ಷಣವೂ ಸುಮ್ಮನೇ ಕೂತಿದ್ದಿಲ್ಲ. 2005ರಲ್ಲಿ ಉಜಿರೆ ಕಾಲೇಜಿಗೆ ಹೋಗುವ ಕ್ಷಣದಲ್ಲಿದ್ದ ವಿದ್ಯಾರ್ಥಿಗಳಂತೆ ಸ್ವಚ್ಛಂದ ಲೋಕದಲ್ಲಿ ವಿಹರಿಸಿ ಬಂದೆವು. ಕಾಲೇಜು ಹಾಗೂ ಸ್ನೇಹಿತರೊಂದಿಗಿನ ಬಾಂಧವ್ಯ ಹೇಗಿತ್ತೆಂದರೆ ಬೆಳಗ್ಗೆ 7 ರಿಂದ ಸಂಜೆ 7ರ ವರೆಗೆ ಫೋಟೋ ತೆಗೆಯಲು ಹೊರತುಪಡಿಸಿ ಒಂದು ಕ್ಷಣವೂ ಮೊಬೈಲ್ ಸ್ಕ್ರೀನ್‌ನಲ್ಲಿನ ನೋಟಿಫಿಕೇಷನ್ ನೋಡಬೇಕು ಎಂದು ಕೂಡ ಅನಿಸಲಿಲ್ಲ. ನಮ್ಮ ಕಾಲೇಜು ನಮ್ಮನ್ನು ಎಷ್ಟು ಎತ್ತರಕ್ಕೆ ಬೆಳಸಿದೆ, ಹಾಗೆಯೇ ನಮ್ಮ ಕಾಲೇಜಿನಿಂದ ಅದೆಷ್ಟೋ ಪ್ರತಿಭೆಗಳು ಎಷ್ಟೊಂದು ಎತ್ತರಕ್ಕೆ ಬೆಳೆದಿದ್ದಾರೆ, ಬೆಳೆಯುತ್ತಿದ್ದಾರೆ ಎನ್ನುವುದನ್ನು ಕೇಳಿಸಿಕೊಳ್ಳುವುದೇ ಕಿವಿಗೆ ಹಬ್ಬದಂತಿತ್ತು. ಒಬ್ಬೊಬ್ಬರ ವೃತ್ತಿ ಬದುಕಿನ ಪರಿಚಯ ಕೇಳಿದಾಗಲೆಲ್ಲ ನಮ್ಮ ಕುಟುಂಬದ ಕುಡಿಗಳು ಎನ್ನುವ ಭಾವನೆ ಬರುತ್ತಿತ್ತು. ಅದುವೇ ಉಜಿರೆ ಪತ್ರಿಕೋದ್ಯಮ ವಿಭಾಗದ ಹೆಮ್ಮೆ ಹಾಗೂ ಗರಿಮೆ.
ಬೆಂಗಳೂರಿನ ಹೊರವಲಯದ ನೆಲಮಂಗಲದ ಬಳಿಯ ಕ್ಷೇಮವನದಲ್ಲಿ ನಡೆದ ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮಕ್ಕಾಗಿ ಕಾಲಿಡುತ್ತಲೇ ನಮ್ಮ ನೆಚ್ಚಿನ ಭಾಸ್ಕರ ಸರ್ ಎದುರಾದರು. ನಮ್ಮನ್ನು ಪ್ರೀತಿಯಿಂದ ಅವರು ಸ್ವಾಗತಿಸಿದ ಆ ಕ್ಷಣವು ೨೦೦೫ರ ಆ ಗಳಿಗೆಯೇ ನೆನಪಾಯಿತು. ಅವರ ಕಾಳಜಿ ಹಾಗೂ ಅಕ್ಕರಯೇ ನನ್ನಂತಹ ನೂರಾರು ವಿದ್ಯಾರ್ಥಿಗಳ ಜೀವನವನ್ನು ರೂಪಿಸಿದೆ. ದಶಕದ ಬಳಿಕವೂ ಇವತ್ತು ಕೂಡ ಅದೇ ರೀತಿಯಿದ್ದಾರೆ. ಅವರ ಪ್ರತಿ ಹಾವ-ಭಾವವು ನಮ್ಮ ಮೂರು ವರ್ಷಗಳ ಪತ್ರಿಕೋದ್ಯಮ ಕಲಿಕೆಯ ದಿನಗಳನ್ನು ನೆನಪಿಸುತ್ತಿದ್ದವು. ಅವರ ಪ್ರತಿ ಬಾರಿ ಪೋಡಿಯಂ ಹತ್ತಿರ ಬಂದಾಗ ಹಳೆಯ ಪಾಠಗಳು ತಲೆಗೆ ಬರುತ್ತಿತ್ತು. ಇವೆಲ್ಲ ಕ್ಷಣಗಳನ್ನು ನಾವು ನಮ್ಮ ಸ್ನೇಹಿತರೊಂದಿಗೆ ಹಂಚುಕೊಳ್ಳುವಾಗಿದ್ದ ಖುಷಿಯು ಒಂದಿಡಿ ದಿನವನ್ನು ಹಬ್ಬದ ಸಂಭ್ರಮದಲ್ಲಿ ಕಳೆಯುವಂತೆ ಮಾಡಿತು. ಕಾರ್ಯಕ್ರಮ ಮುಗಿಸಿ ಮತ್ತೆ ಕಾರು ಹತ್ತುವಾಗ ಉಜಿರೆಯಲ್ಲಿನ ಕೊನೆಯ ಪರೀಕ್ಷೆ ಮುಗಿಸಿ ಮಳೆಯಲ್ಲಿ ನೆಂದುಕೊಂಡು ಬಂದ ದಿನಗಳು ನೆನಪಾದವು. ಕಾಕತಾಳೀಯ ಎನ್ನುವಂತೆ ಇವತ್ತು ಕೂಡ ಹೊರಡುವಾಗ ಮಳೆಯ ಸಿಂಚನವಾಯಿತು. ನಮ್ಮ ಖುಷಿಯನ್ನು ನೋಡಿ ವರುಣರಾಯ ಕೂಡ ಆನಂದಭಾಷ್ಪ ಹರಿಸಿದ ಎನಿಸಿತು.
ಆದರೆ ಕೊನೆಯಲ್ಲಿ ಆಗಿದ್ದು ಒಂದೇ ಒಂದು ಬೇಸರವೆಂದರೆ, ಈ ಸಂದರ್ಭದಲ್ಲಿ ನಮ್ಮೆಲ್ಲರ ಹೀರೋ ಆಗಿದ್ದ ಯಶೋವರ್ಮ ಸರ್ ಇರಬೇಕಿತ್ತು ಎನಿಸಿತು. ಅವರ ಆ ಪ್ರೀತಿಯ ಮಾತುಗಳನ್ನು ನಾವೆಲ್ಲ ಮಿಸ್ ಮಾಡಿಕೊಳ್ಳುತ್ತಿದ್ದೇವೆ.
ಇದನ್ನು ಹೊರತುಪಡಿಸಿ ಮತ್ತೊಮ್ಮೆ ಕಾಲೇಜು ದಿನಕ್ಕೆ ಕರೆದುಕೊಂಡು ಹೋದ ನಮ್ಮ ಹೆಮ್ಮೆಯ ಪತ್ರಿಕೋದ್ಯಮ ವಿಭಾಗಕ್ಕೊಂದು ಪ್ರೀತಿಯ ಧನ್ಯವಾದ. ವರ್ಷಕ್ಕೊಮ್ಮೆ ಇಂತಹ ದಿನ ಬೆಂಗಳೂರಿನಲ್ಲಿ ಸಿಗುವಂತಾಗಲಿ, ನಮ್ಮ ಮನಸ್ಸು ಆಗಾಗ ಉಜಿರೆಮಯವಾಗುತ್ತಲೇ ಇರುವ ಅವಕಾಶ ಬರಲಿ.
ಕೊನೆಯದಾಗಿ: ಅಂದ್ಹಾಗೆ ಈ ಅದ್ಭುತ ಕಾರ್ಯಕ್ರಮವು ನಮ್ಮ ಎಸ್‌ಡಿಎಂ ಸಮೂಹದ ಕ್ಷೇಮವನ ಸಂಸ್ಥೆಯಲ್ಲಿ ನಡೆಯಿತು. ಧರ್ಮಸ್ಥಳದ ಶಾಂತಿವನದ ರೀತಿಯಲ್ಲೇ ಇಲ್ಲಿಯೂ ಇನ್ನಷ್ಟು ಆಧುನಿಕ ಹಾಗೂ ವೈಜ್ಞಾನಿಕವಾಗಿ ಪ್ರಕೃತಿ ಚಿಕಿತ್ಸೆ ಕೇಂದ್ರ ಆರಂಭಿಸಲಾಗಿದೆ. ಇಂತಹ ಕಾರ್ಯಕ್ರಮದಿಂದ ಸಿಗುವಷ್ಟೇ ಮನಃಶಾಂತಿ, ಆರೋಗ್ಯದ ಖುಷಿಯನ್ನು ಪ್ರಕೃತಿ ಚಿಕಿತ್ಸೆ ಮೂಲಕ ಕ್ಷೇಮವನ ನೀಡುತ್ತಿದೆ. ನೆಲಮಂಗಲದ ಬಳಿ ಬೆಂಗಳೂರು-ಹಾಸನ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಈ ಪ್ರಕೃತಿ ಚಿಕಿತ್ಸೆ ಕೇಂದ್ರವಿದೆ. ನಾನು ಆಗಾಗ ತಮಾಷೆಗೆ ನನ್ನ ಸ್ನೇಹಿತರ ಬಳಿ ಹೇಳುವುದಿದೆ, ʼನಿಮ್ಮ ಗಾಡಿಯನ್ನು ಹೇಗೆ ಸರ್ವೀಸ್ ಮಾಡಿಸುತ್ತೀರೋ, ಅದೇ ರೀತಿ ಬಾಡಿಯನ್ನು ಕೂಡ ವರ್ಷ, ಎರಡು ವರ್ಷಕ್ಕೊಮ್ಮೆ ಪ್ರಕೃತಿ ಚಿಕಿತ್ಸೆ ಮೂಲಕ ಸರ್ವೀಸ್ ಮಾಡಿಸಿ. ಅದರಿಂದ ಸರ್ವೀಸ್ ಆದ ಗಾಡಿ ಹೇಗೆ ಸ್ಮೂಥ್ ಆಗಿ ಓಡುತ್ತದೋ, ಬಾಡಿ ಕೂಡ ಅದೇ ರೀತಿ ಲೈಟ್ ಆಗುತ್ತದೆʼ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ