ಸಂಗೀತದ ಆಕರ್ಷಣೆಯಿಂದ ಬದಲಾದ ಬದುಕು: ಡಾ.ಗುರುಕಿರಣ್

Upayuktha
0


ಮಂಗಳೂರು: ವೈದ್ಯನಾಗಬೇಕೆಂದು ಹೆತ್ತವರು ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿಸಿದ್ದರು. ವೈದ್ಯಕೀಯ ಕಾಲೇಜು ಆರಂಭಕ್ಕೆ ಸ್ವಲ್ಪ ಸಮಯವಿದೆ ಎಂದು ಸಮಯ ಕಳೆಯಲು ಮಂಗಳೂರಿನ ಸರ್ಕಾರಿ ಕಾಲೇಜಿಗೆ ಸೇರಿದೆ. ಅಲ್ಲಿ ಕಲಾ ಕ್ಷೇತ್ರ ಆಕರ್ಷಿಸಿತು. ಹಾಡುಗಾರನಾದೆ, ನಟನಾದೆ, ಸಂಗೀತ ನಿರ್ದೇಶಕನಾದೆ. ಸಂಗೀತದ ಆಕರ್ಷಣೆಯಿಂದ ಬದುಕೇ ಬದಲಾಯಿತು ಎಂದು ಸಂಗೀತ ನಿರ್ದೇಶಕ, ಬೆಂಗಳೂರು ವಿ.ವಿ. ಗೌರವ ಡಾಕ್ಟರೇಟ್ ಪುರಸ್ಕೃತರಾದ ಗುರುಕಿರಣ್ ತಮ್ಮ ಸಾಧನೆಯ ಹಾದಿಯನ್ನು ತೆರೆದಿಟ್ಟರು.


ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ‘ನಮ್ಮ ಬದುಕನ್ನು ನಾವೇ ವಿನ್ಯಾಸಗೊಳಿಸಬೇಕು. ಕನಸು ಕಟ್ಟುವ ಬದಲು ಇಷ್ಟವಾದ ಕೆಲಸವನ್ನು ಮಾಡುತ್ತಾ ಹೋಗಬೇಕು. ಸಂಗೀತವೇ ನನ್ನ ಮನಸ್ಸಿಗೆ ಖುಷಿ ನೀಡುವ ಕೆಲಸ. ಅದನ್ನು ನಿಷ್ಠೆಯಿಂದ ಮಾಡಿದ ಕಾರಣ ಯಶಸ್ಸು ಸಾಧ್ಯವಾಯಿತು ಎಂದರು.


ಸರ್ಕಾರಿ ಕಾಲೇಜಿನಲ್ಲಿ ಕಲಿತ ಕಾರಣ ಎಲ್ಲರೊಂದಿಗೆ ಬೆರೆಯುವ ಗುಣ ಹಾಗೂ ಬದುಕಿನ ಸವಾಲುಗಳನ್ನು ಎದುರಿಸುವ ಛಲ ಬೆಳೆಯಿತು. ನನ್ನದೇ ಆದ ಸಂಗೀತ ತಂಡ ಕಟ್ಟಿ ರಸಮಂಜರಿ ಕಾರ್ಯಕ್ರಮ ನಡೆಸುತಿದ್ದೆ. ಮಾವನ ಹೋಟೆಲ್‌ನ ಆರ್ಕೆಸ್ಟ್ರಾದಲ್ಲಿ ಹಾಡಲು ಅವಕಾಶ ದೊರೆತ ಕಾರಣ ಸಂಗೀತದ ಎಲ್ಲ ಉಪಕರಣಗಳನ್ನು ನುಡಿಸಲು ಅಭ್ಯಾಸ ನಡೆಸಿದೆ. ಅಲ್ಲಿಂದ ಸಂಗೀತವನ್ನೇ ವೃತ್ತಿಯಾಗಿಸುವ ಬಯಕೆ ಮೂಡಿತು. ನಾನು ಸಂಗೀತದ ಶಿಕ್ಷಣ ಪಡೆದವನಲ್ಲ. ಸಂಗೀತದ ಪಯಣದಲ್ಲಿ ಹಂತಹಂತವಾಗಿ ಕಲಿಯುತ್ತಾ ಬಂದವನು. ನಾನು ಗಾಯಕ ಆಗಲು ಹೋದೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿತು. ಮುಂದೆ ಬದುಕು ಅರಿಸಿ ಬೆಂಗಳೂರಿಗೆ ಬಂದಾಗ ವಿ.ಮನೋಹರ್, ಉಪೇಂದ್ರ ಮುಂತಾದವರು ಗೆಳೆಯರಾದರು. ನನ್ನೊಳಗಿನ ಸಂಗೀತಗಾರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು ಎಂದು ಗುರುಕಿರಣ್ ಹೇಳಿದರು.


ಪ್ರತಿಭೆ ಇದ್ದವರಿಗೆ ಸಂಗೀತ ಕ್ಷೇತ್ರದಲ್ಲಿ ಭವಿಷ್ಯ ಇದೆ. ಮಂಗಳೂರಿನ ಪ್ರತಿಭೆಗಳು ಸೇರಿದಂತೆ 16ಕ್ಕೂ ಅಧಿಕ ಹೊಸ ಗಾಯಕ, ಗಾಯಕಿಯರನ್ನು ರನ್ನು ಸಿನಿಮಾಕ್ಕೆ ಪರಿಚಯಿಸಿದ್ದೇನೆ. ಅತ್ಯಾಧುನಿಕ ತಂತ್ರಜ್ಞಾನ ಬಂದ ಬಳಿಕ ಸಿನಿಮಾ ಹಾಗೂ ಹಿನ್ನೆಲೆ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹೊಸತನಕ್ಕೆ ನಮ್ಮನ್ನು ತೆರೆದುಕೊಳ್ಳಬೇಕು. ದೊರೆತ ಅವಕಾಶವನ್ನು ಬಳಸಿ ಯಶಸ್ಸಿನ ಹಾದಿಯಲ್ಲಿ ಸಾಗಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.


ಸಿನಿಮಾದಲ್ಲಿ ಶೋಷಣೆ ತಡೆಯಲು ಕೇರಳ ಮಾದರಿ ಸಮಿತಿ ರಚಿಸ ಬೇಕು ಎನ್ನುವ ಆಗ್ರಹ ಇರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಶೋಷಣೆ ಎಲ್ಲ ರಂಗದಲ್ಲೂ ಇದೆ. ಸಿನಿಮಾಕ್ಕೆ ಮಾತ್ರ ಸಮಿತಿ ರಚಿಸುವುದರಲ್ಲಿ ಅರ್ಥವಿಲ್ಲ. ಪ್ರತಿಯೊಂದಕ್ಕೂ ಕಮಿಟಿ ಮಾಡಿದ್ರೆ ಕೆಲಸ ಮಾಡೋಕ್ಕೆ ಆಗಲ್ಲ. ಅಲ್ಲಿಂದ ಸಮಸ್ಯೆಗಳು ಶುರುವಾಗುತ್ತೆ. ಭ್ರಷ್ಟಾಚಾರ ಜಾಸ್ತಿ ಆಗುತ್ತೆ ಅಷ್ಟೇ. ಕೆಲಸ ಇದ್ದವರು ಯಾರೂ ಇಂತಹ ಒತ್ತಾಯ ಮಾಡಲ್ಲ ಎಂದರು.


ಹಿರಿಯ ಛಾಯಾಗ್ರಾಹಕ ಯಜ್ಞ ಮಂಗಳೂರು ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್‌ರೈ ಅಧ್ಯಕ್ಷತೆ ವಹಿಸಿದ್ದರು.  ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು. ಖಜಾಂಜಿ ಪುಷ್ಪರಾಜ್.ಬಿ.ಎನ್. ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top