ಸಾಹಿತ್ಯದ ಸಂತನಿಗೆ ಗೌರವ ಡಾಕ್ಟರೇಟ್

Upayuktha
0


 ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮರೆಗುದ್ದಿ ಎಂಬ ಪುಟ್ಟ ಗ್ರಾಮದ ಶ್ರೀ ಅಡವಿಸಿದ್ದೇಶ್ವರ ಮಠದ ಪರಮಪೂಜ್ಯ ಶ್ರೀ ನಿರುಪಾದೀಶ ಮಹಾಸ್ವಾಮೀಜಿಗಳು ನೆಲದ ಮರೆಯ ನಿಧಾನದಂತೆ, ಎಲೆಯ ಮರೆಯ ಕಾಯಿಯ ಹಾಗೆ ಸದ್ದಿಲ್ಲದೆ ಸಾಹಿತ್ಯದ ಶಿಖರ ಕಟ್ಟಿದವರು. 12ನೇ ಶತಮಾನದ ಮಹಾಶರಣರ ಬದುಕನ್ನು ಕಣ್ಣೆದುರು ಕಟ್ಟುವ ಹಾಗೆ ಮಹಾಕಾವ್ಯಗಳನ್ನು ರಚಿಸಿ ಕನ್ನಡ ಸಾಹಿತ್ಯದ ಪರಿಮಳವನ್ನು ನಾಡಿನೆಲ್ಲೆಡೆ  ಪಸರಿಸಿದವರು . 


1942 ಮೇ 25ರಂದು ಜನಿಸಿದ ಪೂಜ್ಯರಿಗೆ ಈಗ  82 ವರ್ಷಗಳು ಆದರೂ ಇಷ್ಟು ಇಳಿವಯಸ್ಸಿನಲ್ಲಿಯೂ ಅವರ ಓದುವ ಆಸಕ್ತಿ ಕಿಂಚಿತ್ತೂ ಕಡಿಮೆಯಾಗಿಲ್ಲ ಮಹಾಕಾವ್ಯಗಳ ಬರವಣಿಗೆಯ ವೇಗ ಕುಗ್ಗಿಲ್ಲ. ಪೂಜ್ಯರ ಗ್ರಂಥಗಳು ಸರ್ವ ಓದುಗರನ್ನು ಆಯಸ್ಕಾಂತದಂತೆ ಆಕರ್ಷಿಸುತ್ತವೆ. ಅವು ಕಾಲ್ಪನಿಕ ಕಥೆಗಳನ್ನಾಧರಿಸಿದ ಗ್ರಂಥಗಳಲ್ಲ ಸತ್ಯಶೋಧನೆಯ ನೆಲೆಗಟ್ಟಿನಲ್ಲಿ ಕಟ್ಟಲ್ಪಟ್ಟ ಮುಂದಿನ ಶತಶತಮಾನಗಳವರೆಗೂ ತನ್ನ ಜ್ಞಾನ ಗಂಗೆಯನ್ನು ಪಸರಿಸುವ ಅಮೃತಧಾರೆಯ ಗ್ರಂಥಗಳು ಅವು.  ಪೂಜ್ಯರು ನೂರಕ್ಕೂ ಅಧಿಕ ಗ್ರಂಥಗಳನ್ನು ರಚಿಸಿರುವರು.ಅವರ ಪದಪುಂಜದಲ್ಲಿ 19 ಮಹಾಕಾವ್ಯಗಳು, 10,000ಕ್ಕೂ ಅಧಿಕ ಆಧುನಿಕ ವಚನಗಳು, ಸಾವಿರಾರು ತ್ರಿಪದಿಗಳು,ಅನೇಕ ಹಿಂದಿ ಗ್ರಂಥಗಳು ಶ್ರೀಗಳ ಬರವಣಿಗೆಯಲ್ಲಿ ಮೂಡಿಬಂದಿವೆ. 


ಅವರ ಸಾಹಿತ್ಯದ ವೈಶಿಷ್ಟ ಎಂದರೆ ಅವುಗಳೊಳಗೆ  ಒಂದು ತರ್ಕವಿರುತ್ತದೆ, ಒಂದೊಂದು ಪದಗಳು ಜ್ಞಾನದ ಹತ್ತಾರು ಮಾರ್ಗಗಳನ್ನ ಬಿಚ್ಚಿಡುತ್ತವೆ. ಅಲ್ಲಿ ಬಾಹ್ಯದ ಅರ್ಥವೊಂದಾದರೆ ಅದಕ್ಕೆ ವಿಭಿನ್ನ ಎನ್ನುವಂತೆ ಆಂತರ್ಯದಲ್ಲಿ ಮತ್ತೊಂದು ಅರ್ಥದ ಅನಾವರಣ ವಾಗಿರುತ್ತದೆ. ನಾಗಲಾಂಬಿಕೆ, ಗಂಗಾಂಬಿಕೆ, ನೀಲಾಂಬಿಕೆ, ಮುಕ್ತಾಯ, ಸಾಗರದೊಳಗಣ ಸೌರಭ, ನಿರಾಳ, ಬಯಲೋಲ್ಲಾಸ, ನೀನಾರು, ಪದ ಪದಾರ್ಥ, ಚಿನ್ನಿಧಿ, ಶ್ರೀ ಮಡಿವಾಳೆಶ್ವರ ಮಹಾಕಾವ್ಯ, ವಚನಪಲ್ಲವಿ, ಶಿವಯೋಗಿ ವೇಮನ ವಿಜಯ, ಕನಕ ವಿಜಯ, ಬಯಲಾಳ ಇವುಗಳು ಪೂಜ್ಯರ ಪ್ರಸಿದ್ಧ ಕೃತಿಗಳಾಗಿವೆ. ನಿರುಪಾದೀಶ, ನಿರಂಜನ ಎಂಬ ಗ್ರಂಥಗಳನ್ನು  ನಾಡಿನ ಸಾಹಿತ್ಯಗಳು ಪೂಜ್ಯರಿಗೆ ಅರ್ಪಿಸಿದ ಅಭಿನಂದನಾ ಕೃತಿಗಳಾಗಿವೆ.  ಶ್ರೀಗಳು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗಮನಿಸಿ ನಾಡಿನ ಅನೇಕ ಮಹಾಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಅವರ ಸಾಹಿತ್ಯದ ಮೇಲೆಯೇ ಅನೇಕ ಜನರು ಮಹಾಪ್ರಬಂಧಗಳನ್ನು ಮಂಡಿಸಿ ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ.  


ಗುರುದೇವರು ನಮ್ಮಂತ ಅನೇಕ ಯುವ ಸಾಹಿತಿಗಳು ಕೈಹಿಡಿದು ಮುನ್ನಡೆಸುತ್ತಿದ್ದಾರೆ. ಕನ್ನಡ ಸಾಹಿತ್ಯ ಲೋಕ ಎಂದು ಮರೆಯಲಾಗದಂತಹ ಜ್ಞಾನದ ಬೆಳಕು ಚೆಲ್ಲಿದ ಪರಮಪೂಜ್ಯರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು 2021 ರಲ್ಲಿ ತಾನು ಸ್ಥಾಪಿಸಿದ "ಅರಿವೇ ಗುರು" ಎನ್ನುವ ಮೊದಲ ಪ್ರಶಸ್ತಿಯನ್ನೇ ಪೂಜ್ಯರಿಗೆ ಅರ್ಪಿಸಿತ್ತು. ಇಂದು ಅದೇ ವಿಶ್ವವಿದ್ಯಾಲಯವು ಪೂಜ್ಯ ಗುರುಗಳಿಗೆ "ಗೌರವ ಡಾಕ್ಟರೇಟ್" ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದೆ. ಈ ಕಾರಣದಿಂದ ಆ ವಿಶ್ವವಿದ್ಯಾಲಯದ ಗೌರವವು ಇಮ್ಮಡಿಗೊಳ್ಳುತ್ತಿದೆ. ಯಾವತ್ತಿಗೂ ಪ್ರಶಸ್ತಿ ಪುರಸ್ಕಾರಗಳನ್ನು ಬಯಸದ ಆ ಜ್ಞಾನರತ್ನಕ್ಕೆ ಇದೆಲ್ಲವೂ ಸಹಜವಾದದ್ದೇ. ಆದರೆ ನಮ್ಮಂತ ಅನೇಕ ಅವರ ಭಕ್ತ ವೃಂದದ ಶಿಷ್ಯರಿಗೆ ನಾವೇ ಪ್ರಶಸ್ತಿ ಸ್ವೀಕರಿಸಿದಷ್ಟು ಮಹದಾನಂದವಾಗುತ್ತಿದೆ.


-ರಾಮಕೃಷ್ಣ ದೇವರು

ಶ್ರೀ ಷಣ್ಮುಖಾರೂಢ  ಮಠ.ವಿಜಯಪುರ   



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top