ಭಾರತೀಯ ಸಾಂಸ್ಕೃತಿಕ ಪರಂಪರೆ ಅತ್ಯಂತ ಶ್ರೀಮಂತವಾದದ್ದು. ಇಲ್ಲಿನ ಇತಿಹಾಸ, ಪರಂಪರೆ, ಹಬ್ಬ ಹರಿದಿನಗಳು, ಆಚರಣೆಗಳು ವಿಶಿಷ್ಟವಾದದ್ದು.
ಇಂತಹ ಭವ್ಯ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಹಬ್ಬಗಳಿಗೂ ಹೆಂಗಳೆಯರಿಗೂ ಅವಿನಾಭಾವ ಸಂಬಂಧ. ಹಾಗೆ ನೋಡಲು ಹೋದರೆ ಭಾರತದ ವಿವಿಧ ಪ್ರಾಂತ್ಯಗಳಲ್ಲಿ ವರ್ಷದ ಮುನ್ನೂರ ಅರವತ್ತೈದು ದಿನಗಳೂ ಯಾವುದಾದರೂ ವ್ರತ ಹಾಗೂ ಹಬ್ಬಗಳಿಗೆ ಸಂಬಂಧಿಸಿರುತ್ತವೆ ಯಾದರೂ ಭಾದ್ರಪದ ಮಾಸದಲ್ಲಿ ಬರುವ ಗೌರಿ ಹಾಗೂ ಗಣಪತಿ ಹಬ್ಬಗಳು ಇಡೀ ಭಾರತಾದ್ಯಂತ ಆಚರಿಸಲ್ಪಡುವ ಜನಪ್ರಿಯ ಹಬ್ಬವೆನಿಸಿ ಕೊಂಡಿದೆ. ಅದರಲ್ಲೂ ಗೌರಿ ಹಬ್ಬದಲ್ಲಂತೂ ಹೆಂಗಳೆಯರ ಸಡಗರ ಮುಗಿಲುಮುಟ್ಟುತ್ತದೆ. ಮದುವೆಯಾದ ಪ್ರತಿ ಹೆಣ್ಣುಮಗಳಿಗೂ ತವರು ಮನೆಗೆ ಹೋಗಿ ತನ್ನ ಹೆತ್ತವರನ್ನು ಒಡಹುಟ್ಟಿದವರನ್ನು ಕಾಣುವ ಹಂಬಲಕ್ಕೆ ಇಂಬು ನೀಡುವ ಗೌರಿ ಹಬ್ಬವೆಂದರೆ ಅತಿ ಪ್ರೀತಿ. ಪತಿಯಾದವನು ಪತ್ನಿಗೆ ಅದೆಷ್ಟೇ ಬೆಲೆಬಾಳುವ ಉಡುಗೊರೆ ನೀಡಿದ್ದರೂ ತವರಿನಿಂದ ತನಗೆ ಗೌರಿ ಹಬ್ಬಕ್ಕೆ ಸಿಗುವ ಉಡುಗೊರೆ ಬಗ್ಗೆ ಪ್ರತಿ ಹೆಣ್ಣಿನ ಮನದಲ್ಲಿ ಒಂದು ವಿಶೇಷ ಅಭಿಮಾನ ಪ್ರೀತಿ ಇರುವುದಂತೂ ಸುಳ್ಳಲ್ಲ!.
ಗೌರಿ ಹಬ್ಬದಲ್ಲಿ ನೀಡುವ ಗೌರಿ ಬಾಗಿನ ನಂಬಿಕೆಗಳ ಪ್ರಕಾರ ಮಂಗಳಪ್ರದ ಮಾತ್ರವಲ್ಲದೆ ಮನೆಮಗಳು ಮತ್ತು ತವರಿನ ನಡುವಿನ ಗಾಢ ವಾತ್ಸಲ್ಯ ಪ್ರೀತಿಗಳ ದ್ಯೋತಕವೂ ಹೌದು. ತವರಿನ ಪ್ರೀತಿಯ ಕರೆಯೋಲೆಗೆ ಓಡೋಡಿ ಬರುವ ಹೆಂಗಳೆಯರ ಸಂಭ್ರಮಕ್ಕಂತೂ ಎಣೆಯೇ ಇಲ್ಲ. ತವರಿನಿಂದ ತಂದ ಹೊಸ ಸೀರೆಯುಟ್ಟು ಮಂಗಳ ದ್ರವ್ಯಗಳನ್ನು ಧರಿಸಿ ಮನೆಯ ರೀತಿನೀತಿಗಳ ಪ್ರಕಾರ ಉತ್ಸಾಹದಿಂದ ತವರಿನ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವುದನ್ನು ಕಾಣುವುದೇ ಚೆಂದ. ಸಾಂಪ್ರದಾಯಿಕವಾಗಿ ಮಂಗಳ ವಾದ್ಯಗಳ ನಿನಾದದೊಂದಿಗೆ ಗೌರಿ ಗಣಪತಿಯ ಮೂರ್ತಿಗಳನ್ನು ತರುವಲ್ಲಿ, ಪ್ರತಿಷ್ಠಾಪನೆ ಮಾಡುವಲ್ಲಿ, ಅವುಗಳನ್ನು ಸಿಂಗರಿಸುವುದು, ಪೂಜೆ ಪುರಸ್ಕಾರಗಳ ಸಂಭ್ರಮದ ಆಚರಣೆಯಲ್ಲಿ ದಿನವೊಂದು ಕ್ಷಣವಾಗಿ ಕಳೆದು ಹೋಗುವುದು. ಇನ್ನು ಹೆಂಗಳೆಯರ ನಡುವಿನ ಬಾಗಿನದ ವಿನಿಮಯದ ದೃಶ್ಯಗಳನ್ನು ನೋಡುವುದೇ ಸೊಗಸು. ಕೈ ತುಂಬ ಬಳೆ ತೊಟ್ಟು, ಬಣ್ಣದ ಬಣ್ಣದ ಸೀರೆಗಳನುಟ್ಟು, ಮುಡಿಗೆ ಮಲ್ಲಿಗೆ ಮುಡಿದು ಸಡಗರದಿಂದ ಪರಸ್ಪರರ ಮನೆಗಳಿಗೆ ಕುಂಕುಮವನ್ನಿಟ್ಟುಕೊಳ್ಳಲು ಆಹ್ವಾನಿಸುವ ಹೆಂಗಳೆಯರ ಕಲರವ ಓಣಿಯಲ್ಲೆಲ್ಲ ತುಂಬುವುದು.
ಹೀಗೆ ನಡೆದಾಡುವ ಹೆಂಗಳೆಯರ ಕಾಲ್ಗೆಜ್ಜೆಯ ಸದ್ದು, ಕೈಬಳೆಗಳ ಕಲರವ, ಜರತಾರಿ ಸೀರೆಗಳ ಸರಬರ ಸದ್ದು ಅಲ್ಲೊಂದು ಹೊಸ ನಾದ ಲೋಕವನ್ನೇ ಸೃಷ್ಟಿಸುವುದು. ಗೌರಿ ಗಣಪತಿಯ ನೈವೇದ್ಯಕ್ಕೆಂದು ತಯಾರಿಸಿದ ಹೋಳಿಗೆ, ಕಡುಬು, ಪಾಯಸ, ಮೋದಕಗಳು, ಚಿಗಳಿ, ತಂಬಿಟ್ಟುಗಳ ಘಮ ಅಡುಗೆ ಮನೆಯಿಂದ ಹೊರಟು ಚಿಣ್ಣರ ದಂಡು ಅಡುಗೆ ಮನೆಗೆ ದಾಳಿಯಿಡುವಂತೆ ಮಾಡುವುದು.ಇನ್ನು ಗಣಪತಿ ಕೂರಿಸಿದವರ ಮನೆಗಳಿಗೆ ದರ್ಶನಕ್ಕೆಂದು ಬರುವ ಮಕ್ಕಳಿಗೆ ಚಕ್ಕುಲಿ, ಕೋಡುಬಳೆ, ತರತರದ ತಿಂಡಿತಿನಿಸುಗಳ ಕಾಣಿಕೆಯಂತೂ ಇದ್ದೇ ಇರುವುದು.
ಪೂಜೆ ವೇಳೆಯಲ್ಲಿ ಗೌರಿ ಗಣಪತಿಗೆ ಆರತಿ ಮಾಡುವಾಗ ತೇಲಿ ಬರುವ ಆರತಿ ಹಾಡುಗಳು ಗಾಳಿಯಲ್ಲಿ ಅಲೆ ಅಲೆಯಾಗಿ ತೇಲಿಬಂದು ಕರ್ಣಾನಂದವನ್ನುಂಟುವುದು ನಮ್ಮ ಸಂಸ್ಕೃತಿಯ ಶ್ರೀಮಂತ ಭಾಗವೇ ಆಗಿದೆ.ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಗಣಪತಿ ಗೌರಿ ಹಬ್ಬದ ಪ್ರಯುಕ್ತ ನಡೆಸಲಾಗುವ ನಾಟಕ, ಹರಿಕಥೆಗಳು ನೆರೆದವರ ಮನೆದಲ್ಲಿ ಭಕ್ತಿ ಭಾವ ಮೂಡಿಸುವುದರೊಂದಿಗೆ ನಮ್ಮ ಸಂಸ್ಕೃತಿ ಸಂಪ್ರದಾಯಗಳ ಪರಿಚಯವನ್ನೂ ಮಾಡಿಸುತ್ತವೆ. ಸಂತೋಷ ಸಂಭ್ರಮದಲ್ಲಿ ಮುಳಗಿದ ಮನಗಳಿಗೆ ಹಬ್ಬ ಮುಗಿದು ಪ್ರತಿಷ್ಠಾಪಿಸಿದ ಗಣಪತಿ ಗೌರಿ ಮೂರ್ತಿಗಳನ್ನು ವಿಸರ್ಜಿಸುವ ಸಮಯ ಬಂತೆಂದರೆ ಆತ್ಮೀಯರನ್ನು ಕಳಿಸಿಕೊಟ್ಟಷ್ಟೇ ದುಃಖ ನೋವು.ತಾವು ಚಿಕ್ಕವರಾಗಿದ್ದಾಗ ಗಣಪತಿ ಗೌರಿಯ ಮೂರ್ತಿಗಳನ್ನು ವಿಸರ್ಜಿಸುವಾಗ ಅತ್ತು ಕರೆದು ರಂಪ ಮಾಡಿದ್ದನ್ನು ಸ್ಮರಿಸಿಕೊಳ್ಳುವುದು, ಇದನ್ನೇ ಹೇಳಿ ಇಂದಿನ ಮಕ್ಕಳಿಗೆ ಸಮಾಧಾನ ಪಡಿಸುವುದೂ ಮನೆ ಮನೆಯಲ್ಲಿ ಕಾಣುವ ಸಾಮಾನ್ಯ ದೃಶ್ಯಗಳೇ. ಮೂರ್ತಿಗಳ ವಿಸರ್ಜನೆಯೊಂದಿಗೆ ಎಲ್ಲರ ಮನದಲ್ಲೂ ಶೂನ್ಯ ಭಾವವೊಂದು ಆವರಿಸುವುದು ಹಾಗೆಯೇ ಮುಂದಿನ ವರ್ಷದ ಸಂಭ್ರಮಕ್ಕೆ ಮನ ಕಾಯಲು ತೊಡಗುವುದು ಗೌರಿ ಗಣಪತಿ ಹಬ್ಬದೊಂದಿಗೆ ನಮಗೆ ಬೆಸೆದ ಅನುಪಮ ಬಾಂಧವ್ಯವೇ ಹೌದು. ಮತ್ತೆ ಗೌರಿ ಗಣಪರ ಆಗಮನದ ಕ್ಷಣ ಸಮೀಪಿಸಿದೆ. ನಾವೆಲ್ಲರೂ ಸಂಭ್ರಮಿಸೋಣವೇ?
- ಎಸ್.ಎಲ್. ವರಲಕ್ಷ್ಮೀ ಮಂಜುನಾಥ್,
ನಂಜನಗೂಡು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ