ಬೆಂಗಳೂರು: ಕಾಸರಗೋಡಿನ ಕನ್ನಡಿಗರ ಹಿತಕ್ಕಾಗಿ ಬೆಂಗಳೂರಿನಲ್ಲಿ ಶ್ರಮಿಸುತ್ತಿರುವ ವಿಕಾಸ ಟ್ರಸ್ಟ್ (ಬೆಂಗಳೂರು ನಿವಾಸಿ ಕಾಸರಗೋಡು ಕನ್ನಡಿಗರ ಸಂಘಟನೆ) ವತಿಯಿಂದ ಕರ್ನಾಟಕ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಇಂದು ಮನವಿ ಪತ್ರ ಸಲ್ಲಿಸಲಾಯಿತು.
ಟ್ರಸ್ಟ್‌ನ ರೂವಾರಿ, ಸಂಘಟಕ ರವಿನಾರಾಯಣ ಗುಣಾಜೆ ಅವರು ಇಂದು ಬೆಳಗ್ಗೆ ಸಚಿವರನ್ನು ಭೇಟಿ ಮಾಡಿ ಮಂಗಳೂರು-ಕಾಸರಗೋಡು ಸಾರಿಗೆ ವ್ಯವಸ್ಥೆಯನ್ನು ಜನರ ಅನುಕೂಲಕ್ಕೆ ತಕ್ಕಂತೆ ಮತ್ತಷ್ಟು ಸುಧಾರಿಸುವ ಹಾಗೂ ಕಾಸರಗೋಡು ಬೆಂಗಳೂರು ನಡುವೆ ಸ್ಥಗಿತಗೊಂಡಿರುವ ಸಾರಿಗೆ ವ್ಯವಸ್ಥೆಯನ್ನು ಪುನರಾರಂಭಿಸುವಂತೆ ಕೋರಿ ಮನವಿ ಸಲ್ಲಿಸಿದರು.
ಪತ್ರದ ಪೂರ್ಣಪಾಠ ಇಂತಿದೆ:
ರಿಗೆ, ದಿನಾಂಕ: 04-09-2024
ಶ್ರೀ ರಾಮಲಿಂಗಾ ರೆಡ್ಡಿ,
ಸನ್ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು,
ಕರ್ನಾಟಕ ಸರ್ಕಾರ, ಬೆಂಗಳೂರು - 560 001
ವಿಷಯ: ಕಾಸರಗೋಡು-ಮಂಗಳೂರು ಮತ್ತು ಕಾಸರಗೋಡು-ಬೆಂಗಳೂರು ಬಸ್ ಸಂಚಾರ ಸಮಸ್ಯೆಗಳ ಪರಿಹಾರಕ್ಕೆ ಮನವಿ
ಮಾನ್ಯರೇ,
ಬೆಂಗಳೂರಿನಲ್ಲಿ ನೆಲೆಸಿರುವ ಕಾಸರಗೋಡು ಮೂಲದ ಜನರನ್ನು ಸಂಘಟಿಸುವ ಉದ್ದೇಶದಿಂದ ವಿಕಾಸ ಟ್ರಸ್ಟ್ (ರಿ.) ಎಂಬ ಸ್ವಯಂಸೇವಾ ಸಂಸ್ಥೆಯನ್ನು 2021ರಲ್ಲಿ ಸ್ಥಾಪಿಸಲಾಗಿದ್ದು, ಅಚ್ಚ ಕನ್ನಡ ಪ್ರದೇಶವಾದ ಕಾಸರಗೋಡಿನ ಸಮಗ್ರ ಅಭಿವೃದ್ಧಿ ನಮ್ಮ ಸಂಸ್ಥೆಯ ಮುಖ್ಯ ಗುರಿಯಾಗಿದೆ.
ತಮಗೆ ತಿಳಿದಿರುವಂತೆ, ಕಾಸರಗೋಡಿನ ಬಹಳಷ್ಟು ಜನರು ದಕ್ಷಿಣ ಕನ್ನಡ ಜಿಲ್ಲೆಯನ್ನು ಅದರಲ್ಲೂ, ಮಂಗಳೂರು ನಗರವನ್ನು ಆಶ್ರಯಿಸಿದ್ದಾರೆ. ಈಗ ಉಭಯ ಜಿಲ್ಲೆಗಳ ನಡುವೆ ಓಡಾಡುತ್ತಿರುವ ಎರಡೂ ರಾಜ್ಯಗಳ ಸರ್ಕಾರಿ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಬಹು ನಿಲುಗಡೆಯ ಬಸ್ಸುಗಳಾಗಿವೆ ಮತ್ತು ಇದರಿಂದಾಗಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಕಛೇರಿ ಹಾಗೂ ತರಗತಿಗಳನ್ನು ಕ್ಲಪ್ತ ಸಮಯದಲ್ಲಿ ತಲುಪಲು ತೊಂದರೆಯಾಗುತ್ತಿದೆ. ಪ್ರಸ್ತುತ ಕಾಸರಗೋಡು-ಮಂಗಳೂರು ನಡುವಿನ 50 ಕಿ.ಮೀ.ಪ್ರಯಾಣ ಸಂದರ್ಭದಲ್ಲಿ ಈ ಬಸ್ಸುಗಳು ಸುಮಾರು 35 ನಿಲುಗಡೆಗಳನ್ನು ಮಾಡುತ್ತಿದ್ದು, ಈ ದೂರವನ್ನು ಕ್ರಮಿಸಲು 120-150 ನಿಮಿಷಗಳನ್ನು ತೆಗೆದುಕೊಳ್ಳುತ್ತಿವೆ. ಈ ನಿಧಾನಗತಿಯ ಪ್ರಯಾಣವು ವಿದ್ಯಾರ್ಥಿಗಳ ಹಾಗೂ ಉದ್ಯೋಗಿಗಳ ಬಹಳಷ್ಟು ಸಮಯವನ್ನು ವ್ಯರ್ಥ ಮಾಡುತ್ತಿದೆ. ಇಂದಿನ ಕ್ಷಿಪ್ರಗತಿಯ ಯುಗದಲ್ಲಿ, ಗಂಟೆಗೆ 25-30 ಕಿ.ಮೀ.ಗಳನ್ನು ಮಾತ್ರ ಕ್ರಮಿಸುವ ಸಾರಿಗೆ ವ್ಯವಸ್ಥೆ ವೇಗವನ್ನು ಪಡೆದುಕೊಳ್ಳಬೇಕಾದ ತುರ್ತು ಅವಶ್ಯಕತೆ ಇದೆ.
ಹಿರಿಯ ಮತ್ತು ಅನುಭವೀ ಜನಪ್ರತಿನಿಧಿಗಳಾದ ತಾವು, ನಮ್ಮ ಈ ಕೆಳಗಿನ ಬೇಡಿಕೆಗಳನ್ನು ತುರ್ತಾಗಿ ಈಡೇರಿಸಲು ಸಂಬಂಧಪಟ್ಟವರಿಗೆ ಆದೇಶವನ್ನು ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ನಮ್ಮ ಬೇಡಿಕೆಗಳು:
1. ಈಗ ಕಾಸರಗೋಡು-ಮಂಗಳೂರು ನಡುವೆ ಸರ್ವೀಸ್ ನಡೆಸುತ್ತಿರುವ ಬಸ್ಸುಗಳ ಪೈಕಿ ಅರ್ಧದಷ್ಟನ್ನಾದರೂ ನಿಜಾರ್ಥದ ಮಿತ ನಿಲುಗಡೆಯ (10-12 ನಿಲುಗಡೆ ಇರುವ) ಸೇವೆಯನ್ನಾಗಿ ಪರಿವರ್ತಿಸಬೇಕು.
2. ಕಾಸರಗೋಡು-ಮಂಗಳೂರು ನಡುವಿನ ನಿತ್ಯ ಪ್ರಯಾಣಿಕರ ಅನುಕೂಲಕ್ಕಾಗಿ ಎರಡೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಜಂಟಿ ಮಾಸಿಕ ಪಾಸ್ ವ್ಯವಸ್ಥೆ ಮಾಡಬೇಕು
3. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಿಗೆ ಹೈಡ್ರಾಲಿಕ್ ಬಾಗಿಲು ವ್ಯವಸ್ಥೆ ಮಾಡಬೇಕು.
4. ಕೋವಿಡ್ ಸಮಯದಲ್ಲಿ ಸ್ಥಗಿತವಾಗಿದ್ದ ಬೆಂಗಳೂರು-ಕಾಸರಗೋಡು (ಪುತ್ತೂರು, ವಿಟ್ಲ, ಪೆರ್ಲ, ಬದಿಯಡ್ಕ ಮಾರ್ಗವಾಗಿ) ರಾಜಹಂಸ ಬಸ್ ವ್ಯವಸ್ಥೆಯನ್ನು ನಾನ್ ಎಸಿ ಸ್ಲೀಪರ್ ಬಸ್ ಆಗಿ ಪರಿವರ್ತಿಸಿ ಪುನರಾರಂಭಿಸಬೇಕು
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ,
ರವಿನಾರಾಯಣ ಗುಣಾಜೆ
ಅಧ್ಯಕ್ಷರು ಮತ್ತು ಸರ್ವ ಸದಸ್ಯರು,
ವಿಕಾಸ ಟ್ರಸ್ಟ್ (ರಿ.), +91 99 00 23 55 55
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ