ಮತ್ತೆ ಬಂದ ಗಣೇಶ... ಗಣಪನ ಹಬ್ಬಕ್ಕೊಂದು ನೆನಪುಗಳ ಸರಮಾಲೆ

Upayuktha
0


ಷ್ಟು ಬೇಗ ಒಂದು ವರ್ಷ ಕಳೆಯುತ್ತಾ ಬಂತು. ಮೊನ್ನೆ ಮೊನ್ನೆ ಗಣೇಶ ಚತುರ್ಥಿಯ ಮೆರವಣಿಗೆಯಲ್ಲಿ ಭಜನೆ ಹೇಳಿದ್ದು, ನಾಸಿಕ್ ಬ್ಯಾಂಡ್ ಬಾರಿಸಿದ್ದು, ಜೈ ಗಣೇಶ ಎಂದು ಕೂಗಿದ್ದು ಎಲ್ಲವೂ ನೆನಪಾಗುತ್ತದೆ. 


ಸೆಪ್ಟೆಂಬರ್ ತಿಂಗಳ ಕ್ಯಾಲೆಂಡರ್ ನೋಡಿದ್ದೇ ತಡ ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನೇನೂ ಕೆಲವೇ ದಿನಗಳು ಬಾಕಿ ಇವೆ ಎನ್ನುವಾಗಲೇ ಹಬ್ಬದ  ವಾತಾವರಣ ಸುತ್ತಲೂ ಆವರಿಸಲಾರಂಭಿಸಿತು. ಮನೆಯಲ್ಲಂತೂ ಚಕ್ಕುಲಿ, ಕೋಡುಬಳೆ ಮಾಡುವ ಮುಹೂರ್ತಕ್ಕಾಗಿ ಕಾಯುತ್ತಿದ್ದರು. ಅದನ್ನು ಸವಿಯುವ ತವಕ ನನಗಿಂತ ಅಕ್ಕನಿಗೆ ಜಾಸ್ತಿ ಇತ್ತು. ಈ ಸಂಭ್ರಮದ ವಾತಾವರಣ ನೋಡುವಾಗ ನನಗೆ ಬಾಲ್ಯದ ದಿನವಂತೂ ನೆನಪಾಗದಿರದು.


ಬಾಲ್ಯದಲ್ಲಂತೂ ಉಳಿದೆಲ್ಲಾ ಹಬ್ಬಗಳಿಗಿಂತ ಗಣೇಶ ಚತುರ್ಥಿಯನ್ನು ತುಂಬಾ ವಿಜೃಂಭಣೆಯಿಂದ ಆಚರಿಸುತ್ತಿದ್ದೆವು. ಕಾರಣ ಉಳಿದ ಹಬ್ಬಗಳಲ್ಲಿ ಇಲ್ಲದ ಮೆರವಣಿಗೆ, ಖಾದ್ಯ ತಿಂಡಿಗಳ ಸವಿ, ಹೊಸ ಬಟ್ಟೆಯ ಖರೀದಿಯ ಖುಷಿ, ಇವೆಲ್ಲವೂ ನನ್ನ ಸಂಭ್ರಮಕ್ಕೆ ಪುಷ್ಟಿ ನೀಡುತ್ತಿತ್ತು. ಹೌದು, ವರ್ಷಕ್ಕೆ ಎರಡರಿಂದ ಮೂರು ಬಾರಿ ಮಾತ್ರ ಹೊಸ ಬಟ್ಟೆ  ಮನೆಗೆ ತರುತ್ತಿದ್ದರು. ಚತುರ್ಥಿಗೆ ಒಂದು ಜೋಡಿ ಪ್ಯಾಂಟು- ಶರ್ಟು ಅಮ್ಮ ತರುತ್ತಿದ್ದರು. ಅದನ್ನು ಧರಿಸಿ ಮನೆ ತುಂಬಾ ಸುತ್ತಾಡುತ್ತಿದ್ದೆ. ಸಮೀಪದಲ್ಲಿ ಇದ್ದ ಗಣಪನ ಆಲಯಕ್ಕೆ ಭೇಟಿ ನೀಡುತ್ತಿದ್ದೆ.


ದುಂಡಗಿನ ದೇಹದ ಗಣಪನ ನೋಡಲು ಚೌತಿಯ ದಿನ ಅದೇನು ಸಂಭ್ರಮ. ದೇವಾಲಯದಲ್ಲಿ ಸಿಗುತ್ತಿದ್ದ ಅಪ್ಪಕಜ್ಜಾಯವನ್ನು ಸವಿಯುವುದೆಂದರೆ ಎಲ್ಲಿಲ್ಲದ ಖುಷಿ. ಪೂಜೆ ಮುಗಿದು ತುಂಬಾ ಸಮಯ ಕಳೆದರೂ ಇನ್ನು ಹೆಚ್ಚಿನ ಅಪ್ಪಕಜ್ಜಾಯಕ್ಕಾಗಿ ಸ್ನೇಹಿತರೊಂದಿಗೆ ಕಾಯುತ್ತಿದ್ದೆವು. ಸಿಗುತ್ತಿದ್ದ ಜಾಸ್ತಿ ಅಪ್ಪಕಜ್ಜಾಯವನ್ನು ಕಿಸೆಯಲ್ಲಿ ಹಾಕಿ ಮನೆ ಕಡೆ ನಡೆಯುತ್ತಿದ್ದೆ. ಮನೆಯಲ್ಲಿ ಹಬ್ಬದ ಬಾಳೆ ಎಲೆ ಊಟ ಸವಿದು ಸಣ್ಣ ನಿದ್ದೆಗೆ ಜಾರುತ್ತಿದ್ದೆ. 


ಹಬ್ಬದ ದಿನದ ಸಂಜೆಯಲ್ಲಿ ಮರುದಿನ ಗಣಪನ ಮೆರವಣಿಗೆಗಾಗಿ ಸಕಲ ಸಿದ್ಧತೆಗಳು ನಡೆಯಬೇಕಿತ್ತು. ಹಾಗಾಗಿ ಊರಿನ ರಾಜಮಾರ್ಗದ ಸ್ವಚ್ಛತೆಯ ಕೆಲಸವು ಬರದಿಂದ ಸಾಗುತ್ತಿತ್ತು. ಆ ಕ್ಷಣದಲ್ಲಿ ಅಣ್ಣನವರಿಗೆ ಹೋಗಿ ಸಹಾಯ ಮಾಡುತ್ತಿದ್ದೆ. ಕೇಸರಿ ಬಾವುಟವನ್ನು, ಹೂವಿನ ಅಲಂಕಾರ, ಬಣ್ಣ ಕಾಗದವು ಗಣಪನ ವಿಸರ್ಜನೆಯ ನದಿಯ ತನಕ ರಾರಾಜಿಸುತ್ತಿತ್ತು. 


ಮರುದಿನ ವಿನಾಯಕನ ವಿಸರ್ಜನಾ ಶೋಭ ಯಾತ್ರೆ. ಈ ಮೆರವಣಿಗೆಯು ಸಂತಸದಲ್ಲಿ ತೇಲಿಸಿ ನಂತರದಲ್ಲಿ ಭಾವುಕನಾಗಿ ಮಾಡಿಬಿಡುತ್ತಿತ್ತು. ನಮ್ಮ ಊರಿನಲ್ಲಿ ಯುವರಾಜನಂತೆ ಅಲಂಕರಿಸಿದ್ದ ಗಣಪನನ್ನು ನದಿಯಲ್ಲಿ ವಿಸರ್ಜಿಸುವ ಶೋಭಾ ಯಾತ್ರೆಯ ಆರಂಭವು ಖುಷಿಖುಷಿಯಾಗಿ ಸಾಗುತ್ತಿತ್ತು. ಭಜನೆಯ ತಾಳ, ನಾಸಿಕ್ ಬ್ಯಾಂಡ್‌ಗೆ ಕುಣಿಯುವ ಬಳಗ, ಪಟಾಕಿಯ ಸದ್ದು, ಜನಜಂಗುಳಿ ಈ ನಡುವೆ ವಿರಾಜಮಾನವಾಗಿ ಜಗವನ್ನು ಕಾಯುವ ಜಗತ್ ರಕ್ಷಕ ಗಣಪನನ್ನು ಪುಷ್ಪದಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ವಿಸರ್ಜನೆಯ ಶೋಭಾಯಾತ್ರೆಯು ನಡೆಯುತ್ತಿತ್ತು. ಗಣಪನನ್ನು ಇನ್ನೇನು ನದಿಗೆ ಬಿಡುವರು ಎನ್ನುವಾಗಲೇ ಕಣ್ಣಲ್ಲಿ ಕಂಬನಿ ಮೂಡುತಿತ್ತು. ಬಪ್ಪನನ್ನು ನೋಡಲು ಚೌತಿಯನ್ನು ಸಂಭ್ರಮಿಸಲು ಇನ್ನು ಒಂದು ವರ್ಷ ಕಾಯಬೇಕಲ್ಲವೇ ಎನಿಸುತ್ತಿತ್ತು.


ಬಾಲ್ಯದಲ್ಲಿ ಸಂಭ್ರಮಿಸುತ್ತಿದ್ದ ಆ ಕ್ಷಣಗಳು ಇಂದಿಗೆ ನೆನಪಾಗಿ ಉಳಿದಿದೆ. ಅಂದು ಆಗುತ್ತಿದ್ದ ಖುಷಿ ಉತ್ಸಾಹ ಇಂದು ಮಾಯವಾಗಿದೆ. ಕೆಲವು ಕಡೆಯಲ್ಲಿ ನಡೆಯುವುದು ಗಣೇಶನ ಶೋಭ ಯಾತ್ರೆ, ಡಿಜೆ ಯಾತ್ರೆಯಂತೆ ಭಾಸವಾಗುತ್ತದೆ. ಆರಂಭದಲ್ಲಿ ಸ್ವಾತಂತ್ರ್ಯ ಸೌಹಾರ್ದತೆಗಾಗಿ ಆಚರಿಸುತ್ತಿದ್ದ ಗಣೇಶೋತ್ಸವನ್ನು ಇಂದು ಕೆಲವೆಡೆ ಧಾರ್ಮಿಕ ಆಚರಣೆಯ ಎಲ್ಲೆ ಮೀರಿ ಆಚರಿಸುತ್ತಾರೆ. ಅದೇನೇ ಇರಲಿ. ಈ ಚೌತಿ ತರುವ ಸಂಭ್ರಮ, ನೆನಪುಗಳ ಸರಮಾಲೆ  ಅನನ್ಯ. ಜೈ ಗಣೇಶ...




- ಗಿರೀಶ್ ಪಿ. ಎಂ, ಕಾಸರಗೋಡು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top