ಗಾಂಧಿ ವರ್ಸಸ್ ಗೋಡ್ಸೆ: ಯಾಕಾಯ್ತು ಹೀಗೆ?

Upayuktha
0



- ಟಿ. ದೇವಿದಾಸ್


ಗಾಂಧಿ ಎಂಬ ಹೆಸರು ಕೇಳಿದಾಕ್ಷಣ ಕರ ಜೋಡಿಸಿ ಜೈ ಎನ್ನುವ ಕಾಲಮಾನದಲ್ಲಿ ನಾವಿಲ್ಲ ಎಂಬ ಪ್ರಜ್ಞೆಯನ್ನು ಮೂಡಿಸಿದ ಕಾಲವಿದು. ಆಫ್ ಕೋರ್ಸ್ ಗಾಂಧಿಯ ಬಗ್ಗೆ ಅಸಂಖ್ಯ ಭಾರತೀಯರಲ್ಲಿ ಸತ್ಯದ ಅರಿವು ಮೂಡಿದ ಕಾಲವೂ ಅಹುದು. ಗಾಂಧಿ ಯಾಕೆ ಬೇಕು? ಗಾಂಧಿಯ ಮೌಲ್ಯಗಳು ಯಾಕೆ ಬೇಕು? ಗಾಂಧಿಯ ಒಟ್ಟೂ ಪ್ರಸ್ತುತತೆಯ ಬಗ್ಗೆಯೇ ಅನೇಕ ಗಂಭೀರವಾದ ಪ್ರಶ್ನೆಗಳಿವೆ. ಆಕ್ಷೇಪಗಳಿವೆ. ಆರೋಪಗಳಿವೆ. ವಿರೋಧಗಳಿವೆ. ಅನುಮಾನಗಳಿವೆ. ಖಂಡನೆಗಳಿವೆ. ಚರ್ಚೆಗಳಿವೆ. ವಿಭಿನ್ನ ಕುತೂಹಲಗಳಿವೆ. ಅಸಹನೆಗಳಿವೆ. ಸತ್ಯಗಳ ಹುಡುಕಾಟಗಳಿವೆ. ಇವೆಲ್ಲವೂಗಳು ಗಾಂಧಿಯ ವೈಯಕ್ತಿಕ, ಸಾಮಾಜಿಕ ಮತ್ತು ರಾಜಕೀಯ ಬದುಕಿನ ಸುತ್ತಲೂ ಗಿರಕಿ ಹೊಡೆಯುತ್ತಿವೆ; ಗಾಂಧಿಯನ್ನು ಪ್ರಶ್ನಿಸುತ್ತಲೇ!


ಗಾಂಧಿಯೆಂಬುದೇ ಒಂದು ಬದುಕು, ಅದೊಂದು ಮೆಟಫರ್ ಎಂದೆಲ್ಲ ಗಾಂಧಿಯನ್ನು ಇನ್ನಿಲ್ಲದಂತೆ ವೈಭವೀಕರಿಸುತ್ತ ಗಾಂಧಿಯನ್ನು ಗುತ್ತಿಗೆ ಕೊಂಡವರ ಹಾಗೆ ಮಾತಾಡಿದವರು, ಬರೆದವರು, ಹೊಗಳಿ ಹೊಗಳಿ ಅಟ್ಟದಲ್ಲಿ ಕೂರಿಸಿದವರೇನೂ ಈ ದೇಶದಲ್ಲಿ ಕಡಿಮೆಯಿಲ್ಲ. ಅದರಲ್ಲಿ ಸತ್ಯವೂ ಇದೆಯೆನ್ನಿ. ಸರಳತನಕ್ಕೆ ಗಾಂಧಿಯನ್ನು ಸಂಕೇತವಾಗಿಸಿಕೊಂಡ ನಮಗೆಲ್ಲರಿಗೂ ಸರಳತನವೆಂಬುದು ಅಷ್ಟಾಗಿ ರುಚಿಸುವುದಿಲ್ಲ. ಮತ್ತು ಗಾಂಧಿ ವೈಭವೀಕರಣ ಎಲ್ಲಿಯವರೆಗೆ ಅಂದರೆ ಅದನ್ನು ಹೇಳುತ್ತ ಹೋದರೆ ಅದಕ್ಕೆ ಕೊನೆಯೇ ಇಲ್ಲವೇನೋ ಎಂಬಷ್ಟು! ಈಗಲೂ ಗಾಂಧಿಯನ್ನು ಕುರಿತು ಕೃತಿಗಳು ಭಾರತದಲ್ಲಿ ಹುಟ್ಟುತ್ತಲೇ ಇದೆ. ಆದರೆ, ಗಾಂಧಿಯನ್ನು ಹೀಗೆ ವೈಭವೀಕರಿಸಿದವರು ಯಾರು ಗಾಂಧಿಯ ಮೌಲ್ಯಗಳನ್ನು ಸ್ವತಃ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ?


ಅಳವಡಿಸಿಕೊಂಡಂತೆ ಬದುಕಿದ್ದಾರೆಯೇ? ಅವರೇ ಉತ್ತರಿಸಬೇಕು. ವೇದಿಕೆಯಲ್ಲಿ ಗಾಂಧಿಯ ಬಗ್ಗೆ ಕೊರಳಸೆರೆ ಉಬ್ಬಿಸಿಕೊಂಡು ಉದ್ವೇಗದಲ್ಲಿ ಮಾತಾಡುವಾಗ ಗಾಂಧಿ ಪ್ರತಿಪಾದಿಸಿದ ಮೌಲ್ಯಗಳಲ್ಲಿ ಒಂದನ್ನಾದರೂ ಜೀವನದಲ್ಲಿ ಅಳವಡಿಸಿಕೊಳ್ಳುವ ನೈತಿಕತೆ ತೋರಬೇಕು. ಮತ್ತು ವೈಯಕ್ತಿಕವಾಗಿ, ಸಾರ್ವಜನಿಕವಾಗಿ ಹಾಗೆಯೇ ನಡೆದುಕೊಳ್ಳಬೇಕು. ಲಾಗಾಯ್ತಿನಿಂದಲೂ ಒಂದು ವರ್ಗ ಗಾಂಧಿಯನ್ನು ಅಧಿಕಾರ ರಾಜಕೀಯಕ್ಕೆ ಮತ್ತು ಸ್ವಾರ್ಥ ಸಾಧನೆಗೆ ಗುರಾಣಿಯನ್ನಾಗಿಸಿಕೊಂಡರು ಎಂಬುದು ಈಗೀಗ ಪಬ್ಲಿಕ್ ಸೀಕ್ರೆಟ್ಟು! ಹೀಗೆ ಹೇಳಿದರೆ ಸತ್ಯವನ್ನು ಪೂರ್ತಿಯಾಗಿ ಹೇಳಿದಂತಾಗುವುದಿಲ್ಲ ಎಂಬ ಅರಿವು ನನಗಿದೆ.


1914ರಲ್ಲಿ ಗಾಂಧಿ ಆಫ್ರಿಕಾದಿಂದ ಭಾರತಕ್ಕೆ ಬಂದರಂತೆ. ಇಲ್ಲಿಯ ಅಸ್ಪೃಶ್ಯತೆ ನೋಡಿ ಮರುಗಿದರಂತೆ! ಬಡವರನ್ನು ನೋಡಿ ಕಂಬನಿ ಸುರಿಸಿದರಂತೆ! ಮಹಾನ್ ಅಹಿಂಸಾವಾದಿಯಂತೆ. ಅಭೂತಪೂರ್ವ ಸತ್ಯಾಗ್ರಹಿಯಂತೆ. ಸ್ವಾತಂತ್ರ್ಯಕ್ಕಾಗಿ ಜೈಲು ಸೇರಿದರಂತೆ! ಬ್ರಿಟಿಷರಿಂದ ಹೊಡೆತ ತಿಂದರಂತೆ! ಸಂಸಾರ ತ್ಯಾಗ ಮಾಡಿದರಂತೆ! ಬಟ್ಟೆಯಿಲ್ಲದ ಬಾಲಕನನ್ನು ನೋಡಿ ಇನ್ಮುಂದೆ ತಾನು ಬರೀ ಪಂಚೆಯಲ್ಲೇ ಇರ್ತೀನಿ ಅಂದರಂತೆ! ಸಾವಿರಗಟ್ಟಲೆ ದಿನಗಳು ಉಪವಾಸ ಮಾಡಿದರಂತೆ! ಕಾಂಗ್ರೆಸ್ಸನ್ನು ಬಲಪಡಿಸಿದರಂತೆ! ಹೀಗೆ ಪುಂಖಾನುಪುಂಖವಾಗಿ ವಿಶ್ಲೇಷಣೆ ಮಾಡುವುದನ್ನು ಯಾರು ಕೇಳಲಿಲ್ಲ ಹೇಳಿ? ಇವೆಲ್ಲವೂ ಸತ್ಯವೂ ಅಹುದು! ವೈಭವೀಕರಣವೂ ಅಹುದು! ಹೀಗೆ ಗಾಂಧಿ ಬಗ್ಗೆ ಎಲ್ಲ ಒಳ್ಳೆಯದೇ ಆಗಿ ಬರೆದಿರುವ ಪುಸ್ತಕಗಳು, ಲೇಖನಗಳು ಲೆಕ್ಕವಿಲ್ಲದಷ್ಟು ಸಿಗುತ್ತವೆ. ಆದರೆ, ಗೋಡ್ಸೆ ಬಗ್ಗೆ ಬರೆಯುವಾಗ, ಗಾಂಧಿಯನ್ನು ಗೋಡ್ಸೆ ಗುಂಡಿಟ್ಟು ಕೊಂದ ಎಂದಷ್ಟೇ ಕೇವಲವಾಗಿ ಬರೆದು ಮುಗಿಸುತ್ತಾರೆ. ಸರಿಹೊತ್ತಿನವರೆಗೂ ಅದನ್ನೇ ಕಾಯ್ದುಕೊಳ್ಳಲಾಗಿದೆ.


ಗಾಂಧಿಯನ್ನು ಗೋಡ್ಸೆ ಗುಂಡಿಟ್ಟು ಕೊಂದ ಎಂಬುದನ್ನು ಬಹು ದೊಡ್ಡದಾಗಿಯೇ ಪ್ರಚಾರ ಮಾಡುತ್ತ ಬರಲಾಯಿತೇ ಹೊರತು ಗೋಡ್ಸೆಯ ಬಗ್ಗೆ ಕೊಂಚವಾದರೂ ವಾಸ್ತವವನ್ನು ಹೇಳಬೇಕಿತ್ತು, ಆದರೆ ಹೇಳಲಿಲ್ಲ. ತಾನು ಗಾಂಧಿಯನ್ನು ಕೊಂದುದೇಕೆ ಎಂದು ಅವನು ಕೊಟ್ಟ ಕಾರಣಗಳನ್ನೂ ದೇಶದ ಜನರಿಗೆ ತಿಳಿಯಪಡಿಸಲಿಲ್ಲ. ಅಂದು ವಿಚಾರಣೆಯನ್ನು ಕೆಂಪುಕೋಟೆಯಲ್ಲಿ ನಡೆಸುವಾಗ ಗೋಡ್ಸೆಯ ಮಾತುಗಳು ಮೈಕಿನಲ್ಲಿ ಎಲ್ಲರಿಗೂ ಕೇಳದ ಹಾಗೆ ತಡೆಯಲಾಗಿತ್ತು. ಅವನ ಹೇಳಿಕೆಗಳು ಹೊರಬರದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಯಿತು. ಇವೆಲ್ಲ ಅನುಮಾನವನ್ನು, ಪ್ರಶ್ನೆಗಳನ್ನು ಹುಟ್ಟುಹಾಕುವುದಿಲ್ಲವೆ? ಸತ್ಯವನ್ನು ಮುಚ್ಚಿಟ್ಟು ವ್ಯವಸ್ಥಿತವಾಗಿ ಗಾಂಧಿಯನ್ನು ಮೆರೆಸಲಾಯಿತು. ಗೋಡ್ಸೆಯನ್ನು ವಿಲನ್ ಆಗಿಯೇ ಉಳಿಸುವ ಕಾರ್ಯ ಲಾಗಾಯ್ತಿನಿಂದಲೂ ನಡೆಯುತ್ತಲೇ ಬಂದಿದೆ. ಈಗಲೂ ಮುಂದುವರೆದಿದೆ.


ರಾಮನನ್ನು ಹೀರೋ ಅಂತ ನಿರ್ಧರಿಸಿದ ಮೇಲೆ ರಾವಣ ವಿಲನ್ ಆಗಲೇಬೇಕಲ್ಲ. ಆಫ್ ಕೋರ್ಸ್ ರಾವಣ ವಿಲನ್ನೇ! ಅದರಲ್ಲಿ ಎರಡು ಮಾತಿಲ್ಲ. ಆದರೆ, ಅಂಥ ಮೆಂಟಾಲಿಟಿಯನ್ನೇ ಇಟ್ಟುಕೊಂಡು ಬೆಳೆದ ಪರಿಣಾಮವಾಗಿ ಗೋಡ್ಸೆ ಅಂದಾಕ್ಷಣ ನಮ್ಮ ಮನಸು ಬುದ್ಧಿ ಭಾವದಲ್ಲಿ ಹಂತಕ ಎಂಬ ವಿಲನ್ ಥಟ್ಟನೆ ನೆನಪಾಗುತ್ತಾನೆ. ರಾವಣನಲ್ಲೂ ಮೆಚ್ಚುವಂಥ ಗುಣಗಳಿದ್ದವೆ ಎಂಬುದನ್ನು ತಡಕಾಡುವ ಗೋಜಿಗೆ ಹೋಗುವುದೇ ಇಲ್ಲ. ಈ ಹಿನ್ನೆಲೆಯಲ್ಲಿ ಅನುಸರಣೀಯವೂ ಅನುಕರಣೀಯವೂ ಆದ ಆದರ್ಶ ವ್ಯಕ್ತಿತ್ವ ಯಾರದ್ದು ಎಂದು ವಿಶ್ಲೇಷಿಸಿದರೆ ಗಾಂಧಿಗಿಂತ ಗೋಡ್ಸೆಯಲ್ಲೇ ಒಂದು ಮುಷ್ಟಿತೂಕ ಹೆಚ್ಚು ಕಾಣುತ್ತದೆ. 

ಗಾಂಧಿ ಸ್ವಾತಂತ್ರ್ಯಕ್ಕಾಗಿ ಸಂಸಾರ ಸುಖವನ್ನು ತ್ಯಾಗ ಮಾಡಿದ್ದರೆ, ಗೋಡ್ಸೆ ಬದುಕಿನುದ್ದಕ್ಕೂ ಬ್ರಹ್ಮಚರ್ಯವನ್ನೇ ಪಾಲಿಸಿದವನು. ಸಂಸಾರದ ಎಲ್ಲ ಬಗೆಯ ಸುಖವನ್ನು ಅನುಭವಿಸಿ ಅನಂತರದ ಬ್ರಹ್ಮಚರ್ಯ(?) ಗಾಂಧಿಯದ್ದಾದರೆ, ಜೀವಮಾನವಿಡೀ ಹೆಣ್ಣಿನ ಸಹವಾಸದಿಂದ ದೂರವಿದ್ದ, ಕಠೋರ ಬ್ರಹ್ಮಚರ್ಯವಾಗಿತ್ತು ಗೋಡ್ಸೆಯದ್ದು! ದೇಶಕ್ಕಾಗಿ ಗಾಂಧಿ ಉಪವಾಸ ಮಾಡಿದ್ದರೆ, ಊಟವೇ ಇಲ್ಲದೆ ಗೋಡ್ಸೆ ಅದೆಷ್ಟೋ ದಿನಗಳನ್ನು ಕಳೆದದ್ದಿದೆ. ಗಾಂಧಿ ಜೈಲಿಗೆ ಹೋದರೆ, ಚಳವಳಿಯಲ್ಲೇ ಜೈಲುವಾಸ ಕಂಡವ ಗೋಡ್ಸೆ! ಅಸ್ಪೃಶ್ಯತೆ ವಿರುದ್ಧ ಗಾಂಧಿ ಹೋರಾಡಿದರೆ, ನಾಗರಿಕ ಅಸಹಕಾರ ಚಳವಳಿಯಲ್ಲಿ ಗೋಡ್ಸೆ ಭಾಗವಹಿಸಿದ್ದ.


ಅಸ್ಪೃಶ್ಯರ ಜೊತೆಯಲ್ಲಿ ಸಾಮೂಹಿಕ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಸಾವಿನ ಕೊನೆಯಲ್ಲೂ ಗಾಢ ಧ್ಯಾನದಲ್ಲಿ ಗೋಡ್ಸೆ ಕಳೆದವನು. ಗಾಂಧಿಗಿಂತ ಗೋಡ್ಸೆಯಲ್ಲಿ ಪ್ರಾಮಾಣಿಕತೆ ಎಂಬುದು ನಿಚ್ಚಳವಾಗಿ ಅವನ ಸಂಸ್ಕಾರದಲ್ಲಿತ್ತು. ಎಂಥಾ ಪರಿಸ್ಥಿತಿಯಲ್ಲೂ ಅವನು ನಿಶ್ಚಲಗೊಳ್ಳುತ್ತಿರಲಿಲ್ಲ. ವಿಹ್ವಲಗೊಳ್ಳುತ್ತಿರಲಿಲ್ಲ. ನೀವು ಅನುಮತಿ ನೀಡಿದರೆ ನಿಮ್ಮನ್ನು ನೇಣುಗಂಬದಿಂದ ತಪ್ಪಿಸಬಲ್ಲೆ ಎಂದು ವಿನಂತಿಸಿದರೂ, ಉಹುಂ, ನಾನು ಬದುಕಿದರೆ ಅದು ನನ್ನ ಸ್ವಾರ್ಥವಾದೀತು, ನನ್ನ ಸಾವು ಮುಂದಿನ ಪೀಳಿಗೆಗೆ ಗಾಂಧಿಯ ಇಬ್ಬಗೆ ನೀತಿ, ಮುಸ್ಲಿಂ ಪ್ರೇಮ ಮತ್ತು ಹಿಂದೂಗಳಿಗೆ ಮಾಡಿದ ಅನ್ಯಾಯಗಳ ಬಗ್ಗೆ ಪಾಠವಾಗಬೇಕು. ಹಾಗಾಗಿ ನನ್ನನ್ನು ಹುತಾತ್ಮನಾಗಲು ಬಿಡಿ ಎಂದು ಗೋಡ್ಸೆ ಹಠತೊಟ್ಟಿದ್ದು ಡಾ. ಬಾಬಾಸಾಹೇಬರಲ್ಲಿ! 


ಗಾಂಧಿ ಹತ್ಯೆಯ ಇಡಿಯ ಘಟನೆ ಮತ್ತು ಪ್ರಕರಣ "ಮಹಾಭಾರತ"ದಂತೆ ಕಂಡರೆ, ನ್ಯಾಯಾಲಯದಲ್ಲಿ ಗೋಡ್ಸೆ ಕೊಟ್ಟ ಸಮರ್ಥನೆಯ ಹೇಳಿಕೆ "ಭಗವದ್ಗೀತೆ"ಯಂತೆ ಅನಿಸುತ್ತದೆಂಬ ಅಭಿಪ್ರಾಯವಿದೆ. ಮರಣದಂಡನೆ ವಿಧಿಸಿದ ಮೂವರು ನ್ಯಾಯಾಧೀಶರ ಪೈಕಿ ಒಬ್ಬರಾದ ಜಿ.ಡಿ.ಖೋಸ್ಲಾರವರು ಗೋಡ್ಸೆ ಗಲ್ಲಿಗೇರಿದ ಅನಂತರ Murder of Mahatma ಪುಸ್ತಕ ಬರೆದಿದ್ದಾರೆ. ಅದರಲ್ಲೊಂದು ಮಾತಿದೆ: "ನೀವು ಗಾಂಧಿ ಕೊಲೆಯನ್ನು ವಿರೋಧಿಸಬಹುದು. ಆದರೆ, ಗೋಡ್ಸೆಯ ಸಮರ್ಥನೆಯನ್ನಲ್ಲ!" ಹಾಗಿತ್ತು ಗೋಡ್ಸೆಯ ವಾದ. ಗೋಡ್ಸೆಯದು ಅದೆಂತಹ ಮಾತುಗಾರಿಕೆ ಮತ್ತು ಎದೆಗಾರಿಕೆ ಎಂದರೆ, ನನ್ನ ಪರವಾಗಿ ನಾನೇ ವಾದ ಮಾಡುತ್ತೇನೆಂದು ಐದು ಗಂಟೆಗಳ ಕಾಲ ಮಾತಾಡಿದ್ದ. ಅದಕ್ಕಾಗಿ 93 ಪುಟಗಳಷ್ಟು ಹೇಳಿಕೆಯನ್ನು ಬರೆದು ತಂದಿದ್ದ. ತನ್ನ ಕಾಲ ಮೇಲೆ ನಿಂತು ಮಾತಾಡಿದ ಅವನ ಒಟ್ಟೂ ಹೇಳಿಕೆಯಲ್ಲಿ 35000 ಪದಗಳಿದ್ದವು. ಆದರೆ ಒಂದೇ ಒಂದು ಪದವೂ ಕೂಡ ತಾನು ಗಾಂಧಿಯನ್ನು "ಕೊಲೆ" ಮಾಡಿದ್ದೇನೆ ಎಂದು ಬರೆದಿರಲಿಲ್ಲ. ಅದೊಂದು ಕಾರ್ಯವೆಂದು ಅವನು ತಿಳಿದಿದ್ದ, ದೇಶಕ್ಕಾಗಿ ತಾನು ಮಾಡಿದ ಸೇವೆ ಅಂದುಕೊಂಡಿದ್ದವ ಗೋಡ್ಸೆ. ಆತನ ಪಾಲಿಗೆ ಅದೊಂದು ಚಾರಿತ್ರಿಕ ಅಗತ್ಯವಾಗಿತ್ತು. ಅನಿವಾರ್ಯವಾಗಿತ್ತು.


ಒಟ್ಟು ಒಂಬತ್ತು ಜನರ ಮೇಲೆ ಗಾಂಧಿ ಹತ್ಯೆಯ ವಿಚಾರದಲ್ಲಿ ಆರೋಪಿಗಳೆಂದು ದೂರು ದಾಖಲಾಗಿತ್ತು. ನಾಥೂರಾಮ್ ಘೋಡ್ಸೆ, ನಾರಾಯಣ ಆಪ್ಟೆ, ವಿಷ್ಣು ಕರ್ಕರೆ, ಮದನ್ ಲಾಲ್ ಪಹ್ವಾ, ಶಂಕರ್ ಕಿಸ್ಟಯ್ಯ, ಗೋಪಾಲ್ ಗೋಡ್ಸೆ (ಈತ ದೊಡ್ದ ಇತಿಹಾಸಕಾರ ಎಂಬುದೇ ನಮಗೆ ಗೊತ್ತಿಲ್ಲ), ಡಾ ಪರಚುರೇ, ದಿಗಂಬರ ಬಡ್ಗೆ ಮತ್ತು ವೀರ್ ಸಾವರ್ಕರ್! ಉಳಿದವರೆಲ್ಲರೂ ಪ್ರಕರಣದಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ನಾಥೂರಾಮ್ ಗೋಡ್ಸೆ ಮಾತ್ರ "ನಾನೇ ಕೊಲೆ ಮಾಡಿದ್ದು" ಎಂದು ಧೈರ್ಯವಾಗಿ ಒಪ್ಪಿಕೊಂಡಿದ್ದ. ಗಾಂಧಿ ಹತ್ಯೆಯನ್ನು ಮಾಡಿದ್ದು ತಾನಷ್ಟೇ, ಇದಕ್ಕಾಗಿ ಯಾರೂ ಸಹಾಯ ಮಾಡಿಲ್ಲ. ಅವರನ್ನೆಲ್ಲ ಬಿಡುಗಡೆ ಮಾಡಿ ಎಂದು ಪ್ರತಿಸಲವೂ ವಾದಿಸಿದ್ದ ಗೋಡ್ಸೆ! ಗೋಡ್ಸೆ ಮುಖದಲ್ಲಿ ಯಾವುದೇ ಅತೃಪ್ತಿಯಾಗಲಿ ತಪ್ಪಿತಸ್ಥ ಭಾವ  ಇರಲಿಲ್ಲ. ಅವರಲ್ಲೊಂದು ಹೆಮ್ಮೆಯಿತ್ತು, ಸಾಧಕನ ಛಾಯೆಯಿತ್ತು. ಸಂತೃಪ್ತಭಾವವಿತ್ತು. ಹತ್ಯೆಗೂ ಮುನ್ನ ಗೋಡ್ಸೆಯ ಆಲೋಚನೆಗಳಿವು: ಒಂದುವೇಳೆ ಗಾಂಧಿಯನ್ನು ಕೊಂದ ತಕ್ಷಣ ಅಲ್ಲಿರುವವರು ತನ್ನನ್ನು  ಕೊಂದುಬಿಟ್ಟರೆ? ಅಥವಾ ಪೊಲೀಸರು ಶೂಟ್ ಮಾಡಿ ಬಿಟ್ಟರೆ? ನನ್ನ ಉದ್ದೇಶ ಜನಗಳಿಗೆ ತಲುಪಿಸುವುದು ಹೇಗೆ? ತಾನು ಕೊಂದಿದ್ದು ಗಾಂಧಿವಾದವೇ ಹೊರತು ಗಾಂಧಿಯನ್ನಲ್ಲ ಎಂದು ಹೇಳುವುದು ಹೇಗೆ?  ಎಂಬ ಆತಂಕ. ದೇವರು ದೊಡ್ಡವನು ಆ ಸಮಯದಲ್ಲಿ ಯಾರೊಬ್ಬರೂ ಗಾಂಧಿಯ ಹತ್ತಿರ ಬರಲಿಲ್ಲ. ದಾಳಿ ಮಾಡಲು ಯತ್ನಿಸಲಿಲ್ಲ. ಗೋಡ್ಸೆ ಬಂಧನಕ್ಕೊಳಗಾದ. ಒಂಬತ್ತು ತಿಂಗಳ ಸುದೀರ್ಘ ವಿಚಾರಣೆಗೆ ಒಳಪಟ್ಟಿದ್ದರಿಂದ ದೇಶದ ಜನತೆಗೆ ಗಾಂಧಿಯೆಂಬ ನಕಲಿ ಅಹಿಂಸಾವಾದಿಯ ಮುಖವಾಡವನ್ನು  ಕಳಚಲು  ಸಾಧ್ಯವಾಯಿತು. ಅದಕ್ಕೆ ಅಲ್ಲವೆ ಗುಂಡು ಹಾರಿಸಿದ ಅರೆಕ್ಷಣದಲ್ಲಿ ಗನ್ ಕೆಳಗಿಳಿಸಿ ಮೌನವಾದದ್ದು, ಪೊಲೀಸರಿಗೆ ಸರೆಂಡರ್ ಆದದ್ದು. ಗಾಂಧಿಯನ್ನು ಹೊರತುಪಡಿಸಿ ಬೇರೆ ಯಾರಿಗೂ ಗಾಯ ಆಗಬಾರದೆಂದೇ ಹತ್ತಿರದಿಂದ ಗುಂಡು ಹಾರಿಸಿದ್ದು.



ಗ್ರಹಿಸಬೇಕಾದ ಸಂಗತಿಗಳೇನೆಂದರೆ, ಗೋಡ್ಸೆ, ಗಾಂಧಿಯನ್ನು ಹತ್ಯೆ ಮಾಡಿದ್ದು ಆವೇಶದಿಂದಲ್ಲ, ಆತುರದ ನಿರ್ಧಾರದಿಂದಲ್ಲ, ಹಿಂದೂ ಧರ್ಮದ ಅಂಧಭಕ್ತಿಯಿಂದಲ್ಲ, ಮುಸಲ್ಮಾನರ ಮೇಲಿನ ದ್ವೇಷದಿಂದಲ್ಲ. "ಮಹಾತ್ಮ ಗಾಂಧಿಯನ್ನು ದ್ವೇಷಿಸಿಯಲ್ಲ". ಹುಚ್ಚು ಮನಸಿನ ಆವೇಶದಿಂದಲ್ಲ. ಆವೇಶಕ್ಕೊಳಗಾಗಿಯಲ್ಲ, ಅಜ್ಞಾನದಿಂದಲ್ಲ, ದಾರಿ ತಪ್ಪಿದ ಯುವಕರಂತೂ ಮೊದಲೇ ಅಲ್ಲ. ಗೋಡ್ಸೆ ಮತ್ತು ನಾರಾಯಣ ಆಪ್ಟೆ ಅನಕ್ಷರಸ್ಥರಲ್ಲ. ಬುದ್ಧಿಹೀನರಲ್ಲ, ಬೌದ್ಧಿಕ ಅಪ್ರಬುದ್ದರಲ್ಲ. ಮೆಟ್ರಿಕ್ಯುಲೇಷನ್ ಪಾಸಾಗಿದ್ದ ಗೋಡ್ಸೆ ಅಗ್ರಣಿ (ಈಗ ಆ ಪತ್ರಿಕೆಯೂ ಇಲ್ಲ. ಅದರ ಸಂಚಿಕೆಗಳೂ ಇಲ್ಲ! ಪತ್ರಿಕೆಯ ಸಂಪಾದಕೀಯಗಳೂ ಇಲ್ಲ! ಅವೆಲ್ಲ ಎಲ್ಲಿ ಹೋದವು? ಯಾಕೆ ಅವುಗಳನ್ನು ಕತ್ತಲಲ್ಲಿ ಇಡಲಾಗಿದೆ? ಇಂಥ ಪ್ರಶ್ನೆಗಳಿಗೆ ಉತ್ತರವೇ ಇಲ್ಲ. ಅದೆಲ್ಲ ಬಿಡಿ, ಗೋಡ್ಸೆಯನ್ನು ಪತ್ರಕರ್ತ ಎಂಬ ವಿಚಾರವನ್ನೇ ಮರೆಮಾಚಿದ್ದು ಯಾಕೆ? ಇದು ಭಾರತೀಯ ಪತ್ರಿಕೋದ್ಯಮಕ್ಕೆ ಮಾಡಿದ ಅವಮಾನವಲ್ಲವೆ?) ಎಂಬ ಪತ್ರಿಕೆಯ ಮಾಲೀಕನಾಗಿದ್ದ. ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಿದ್ದ, ಸಂಘಟನಾ ಚತುರ, ಉತ್ತಮ ವಾಗ್ಮಿ, ಪ್ರಜ್ವಲ ವ್ಯಕ್ತಿತ್ವವನ್ನು ಹೊಂದಿದ್ದ. ನಾರಾಯಣ ಆಪ್ಟೆ ಬಾಂಬೆ ವಿವಿಯಲ್ಲಿ ಬಿಎಸ್ಸಿ ಮುಗಿಸಿ, ಅಮೆರಿಕನ್ ಮಿಷನ್ ಹೈಸ್ಕೂಲಿನಲ್ಲಿ ಏಳು ವರ್ಷ ಶಿಕ್ಷಕನಾಗಿದ್ದ, ಎರಡನೇ ಮಹಾಯುದ್ಧದಲ್ಲಿ ಬ್ರಿಟಿಷ್ ವಾಯುದಳದ ಅಧಿಕಾರಿಯಾಗಿದ್ದ! ಗಲ್ಲಿಗೇರುವ ಕೊನೆಯ ದಿನಗಳಲ್ಲಿ ಭಾರತದಂಥ ಒಂದು ದೇಶವನ್ನು ಆಳುವುದು ಹೇಗೆ? ಎಂಬ ವಿಷಯದ ಬಗ್ಗೆ ಸಾವಿರ ಪುಟದ Principles of successful Administration ಎಂಬ ಪುಸ್ತಕವನ್ನೇ ಬರೆದಿದ್ದ. ಅಂದಿನ ಸರಕಾರ ಪುಸ್ತಕವನ್ನು ಭೂಗತ ಮಾಡಿತ್ತು.


  

ಧರ್ಮಶ್ರದ್ಧೆಯ ಒಂದು ಬ್ರಾಹ್ಮಣದಲ್ಲಿ ಹುಟ್ಟಿದ್ದ ಗೋಡ್ಸೆ ಹಿಂದೂ ಧರ್ಮವನ್ನು, ಹಿಂದೂ ಚರಿತ್ರೆಯನ್ನು, ಹಿಂದೂ ಸಂಸ್ಕೃತಿಯನ್ನು ಮೆಚ್ಚುತ್ತ ಬೆಳೆದವನು. ಅಪಾರವಾದ ಪ್ರೀತಿ, ಗೌರವ ಹಿಂದೂ ಧರ್ಮದ ಬಗ್ಗೆ ತನ್ನಲ್ಲಿ ಬೆಳೆಯುತ್ತ ಎಲ್ಲ ಮೂಢನಂಬಿಕೆಗಳಿಂದ ತಾನು ಮುಕ್ತನಾದೆ. ಆದ್ದರಿಂದ ದಲಿತರನ್ನುಅಸ್ಪೃಶ್ಯರೆಂದು ಕಾಣುವುದನ್ನು ವಿರೋಧಿಸಿದೆ, ಜಾತಿಪದ್ಧತಿಯನ್ನು ಅದು ಕೇವಲ ಹುಟ್ಟಿದ ಮೇಲೆ ನಿಂತಿರುವುದರಿಂದ ವಿರೋಧಿಸಿದೆ. ಜಾತಿಪದ್ಧತಿಯನ್ನು ಅದು ಕೇವಲ ಹುಟ್ಟಿನ ಮೇಲೆ ನಿಂತಿರುವುದರಿಂದ ವಿರೋಧಿಸಿದೆ. ಎಲ್ಲ ಹಿಂದೂಗಳು ಧಾರ್ಮಿಕವಾಗಿಯೂ ಸಾಮಾಜಿಕವಾಗಿಯೂ ಸಮಾನ ಎಂದು ವಾದಿಸುತ್ತ ಬೆಳೆದಿದ್ದೇನೆ. ನಾನು ಸಾವಿರಾರು ಜಾತಿ ವಿರೋಧಿ ಹಿಂದೂಗಳ ಜೊತೆ ಕುಳಿತು ಊಟ ಮಾಡಿದ್ದೇನೆ. ನಾನು ದಾದಾಭಾಯಿ ನವರೋಜಿ, ವಿವೇಕಾನಂದ, ಗೋಖಲೆ, ತಿಲಕರನ್ನು ಮತ್ತು ಪ್ರಾಚೀನ ಹಿಂದೂ ಚರಿತ್ರೆಯನ್ನು ಓದಿಕೊಂಡಿದ್ದೆ. ಫ್ರಾನ್ಸ್, ಅಮೆರಿಕಾ, ರಷ್ಯಾ, ಇಂಗ್ಲೆಂಡಿನ ಮಹಾನುಭಾವರನ್ನು ಓದಿದ್ದೆ. ಮಾರ್ಕ್ಸಿಸಂ ಮತ್ತು ಸೋಷಿಯಲಿಸಂನ ಮೂಲ ತತ್ವಗಳನ್ನು ನಾನು ಅಭ್ಯಾಸ ಮಾಡಿದ್ದೆ. ಎಲ್ಲಕ್ಕಿಂತ ಹೆಚ್ಚಾಗಿ ವೀರ ಸಾವರ್ಕರರನ್ನು ಓದಿಕೊಂಡಿದ್ದೆ. ವೀರ ಸಾವರ್ಕರ್ ಗಾಂಧೀಜಿ ಬಗ್ಗೆ ಬರೆದದ್ದನ್ನು ಓದಿದ್ದೆ. ಹೀಗಾಗಿ ನನ್ನ ತಲೆಯಲ್ಲಿ ಎರಡು ತಾತ್ವಿಕ ಭಿನ್ನತೆಗಳು ನಮ್ಮ ಚರಿತ್ರೆಯಲ್ಲಿ ಮೂಡುತ್ತಿರುವಂತೆ ಕಂಡಿತ್ತು. ಈ ಇಬ್ಬರ ತಂತ್ರವೇ ಈ ಮೂವತ್ತು ವರ್ಷ ಕಾಲದ ಭಾರತದ ಚರಿತ್ರೆಯನ್ನು ರೂಪಿಸಿದಂಥದ್ದು. ಇದಾದ ನಂತರ ನನ್ನ ಮೂಲಧರ್ಮ ಹಿಂದುತ್ವವನ್ನು ಪ್ರತಿಪಾದಿಸುವುದು ಎಂದು ತಿಳಿದುಕೊಂಡೆ.


ಒಬ್ಬ ಹಿಂದೂ ಏಕಕಾಲಕ್ಕೆ ದೇಶಪ್ರೇಮಿಯೂ ಜಗತ್ತಿನ ಪ್ರಜೆಯೂ ಆಗಬಲ್ಲ. ಸುಮಾರು 30 ಕೋಟಿ ಹಿಂದೂಗಳನ್ನು ಎಚ್ಚರಿಸುವುದರ ಮುಖಾಂತರ, ಸ್ವತಂತ್ರಗೊಳಿಸುವುದರ ಮುಖಾಂತರ ಪ್ರಪಂಚದ ಜನರಲ್ಲಿ ಒಂದು ಪಾಲು ಜನರನ್ನು ಎಚ್ಚರಿಸಲು ಬಿಡುಗಡೆ ಮಾಡಿದಂತಾಗುತ್ತದೆ. ಇಡೀ ಮಾನವತೆ ಸತ್ಯ ಮತ್ತು ಅಹಿಂಸೆಯ ಮೇಲೆ ಬದುಕುತ್ತದೆ ಎಂದು ತಿಳಿಯುವುದು ಅಧ್ಯಾತ್ಮ. ನಮ್ಮ ಸ್ವಂತದವರನ್ನು ಪ್ರೀತಿಸುವುದು ನಮ್ಮ ಕರ್ತವ್ಯವೆಂದು ತಿಳಿಯುವುದು ದೇಶಪ್ರೇಮ. ದೇಶಪ್ರೇಮ ಅನೇಕ ಸಾರಿ ನಮ್ಮನ್ನು ಅಹಿಂಸಾ ತತ್ವದಿಂದ ದೂರ ಮಾಡಬಲ್ಲದು. ಬಲವನ್ನು ಉಪಯೋಗಿಸುವ ಅಗತ್ಯವನ್ನು ತರಬಲ್ಲದು. ಹೀಗೆ ಗೋಡ್ಸೆಯೇ ಹೇಳಿಕೊಂಡ ಅವನ ಚಿಂತನೆಗಳಿವೆ. ಇಲ್ಲಿ ಗಮನಾರ್ಹವೆಂದರೆ, ಅಹಿಂಸೆಯ ಬಗ್ಗೆ ಗಾಂಧಿಗಿಂತ ಹೆಚ್ಚು ಸ್ಪಷ್ಟತೆಯನ್ನು ಗೋಡ್ಸೆ ಹೊಂದಿದ್ದ. ಹಿಂಸೆಯನ್ನು ದಿಟ್ಟಿಸಿ ನೋಡದೆ ಅಹಿಂಸೆ ಅರ್ಥವಾಗದು ಎಂಬುದು ಗಾಂಧಿಗೆ ಅರ್ಥವಾಗಲಿಲ್ಲವೆ? ನೋ ಚಾನ್ಸ್!


1949, ನವೆಂಬರ್ 15ರಂದು ಬೆಳಗ್ಗೆ ಏಳೂವರೆಗೆ ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ ಆಪ್ಟೆ ಅಂಬಾಲಾ ಜೈಲಿನಲ್ಲಿ ಗಲ್ಲಿಗೆ ಏರುವ ಮೊದಲು ಗೀತೆಯ 11 ಮತ್ತು 15 ನೆಯ ಅಧ್ಯಾಯಗಳನ್ನು ಮತ್ತು ಆರೆಸ್ಸೆಸ್ಸಿನ ಪ್ರಾರ್ಥನೆಯ ಮೊದಲ ನಾಲ್ಕು ಸಾಲುಗಳನ್ನು ಪಠಿಸಿದರೆಂದು ಗೋಪಾಲ್ ಗೋಡ್ಸೆ ಹೇಳಿದ್ದು ದಾಖಲಾಗಿದೆ. ಅವನು ಅನುಮತಿ ಪಡೆದು ಏಳೂವರೆ ತನಕ ಅವರ ಕೋಣೆಯಲ್ಲಿದ್ದ. ಸೋಮನಾಥ ಮಂದಿರ ನಿರ್ಮಾಣಕ್ಕೆ ತಾನು ಉಳಿಸಿದ್ದ 101 ರೂಗಳನ್ನು ದೇಣಿಗೆಯಾಗಿ ನೀಡುವಂತೆ ಗೋಡ್ಸೆ ಅವನಿಗೆ ತಿಳಿಸಿದ್ದ. ಕೊನೆಯ ಆಸೆಯಾಗಿ "ತನ್ನ ಚಿತಾಭಸ್ಮವನ್ನು ಸಿಂಧೂ ನದಿಯಲ್ಲೇ ವಿಸರ್ಜಿಸಬೇಕೆಂದು" ಕೋರಿದ್ದ. ಸಿಂಧೂ ನದಿ ಈಗ ಪಾಕಿಸ್ತಾನದಲ್ಲಿ ಹರಿಯುತ್ತಿದೆ. ಮುಂದೊಂದು ದಿನ ಭಾರತ ಅಖಂಡ ಹಿಂದೂ ರಾಷ್ಟ್ರವಾಗುತ್ತದೆ. ಆಗ ಸಿಂಧೂ ನದಿ ಭಾರತದಲ್ಲಿ ಹರಿಯುತ್ತದೆ. ಅದಾಗಲು ನೂರು ಇನ್ನೂರು ವರ್ಷಗಳಾದರೂ ಸರಿ ಅವತ್ತು ತನ್ನ ಚಿತಾಭಸ್ಮವನ್ನು ವಿಸರ್ಜಿಸಿ ಇಲ್ಲವಾದರೆ ಹಾಗೆ ಕಾಯ್ದಿರಿಸಿ ಎಂದು ಗಲ್ಲಿಗೇರುವ ಹಿಂದಿನ ದಿನ ತನ್ನ ಸಹೋದರ ದತ್ತಾತ್ರೇಯನಿಗೆ ಬರೆದುಕೊಟ್ಟ ಉಯಿಲಿನಲ್ಲಿ ದಾಖಲಿಸಿದ್ದ. ಸಿಂಧೂನದಿಯೇ ಭಾರತವರ್ಷದ ಗಡಿ. ವೇದಗಳು ರಚನೆಯಾದದ್ದು ಅಲ್ಲಿಯೇ! ಆ ನದಿಯಲ್ಲಿ ನನ್ನ ದೇಹದ ಬೂದಿ ತೇಲಲಿ ಎಂದಿದ್ದ ಗೋಡ್ಸೆಗೆ ಅಖಂಡ ಭಾರತ ಕನಸಿತ್ತು.


ಕೊನೆಯ ಮಾತು: ಉಳಿದಂತೆ ಮನುಷ್ಯ ಸಹಜ ದೌರ್ಬಲ್ಯಗಳು ಗಾಂಧಿಗೂ ಇತ್ತು, ಗೋಡ್ಸೆಗೂ ಇತ್ತು. ಗಾಂಧಿಯ ಹಂತಕನೂ ಗಾಂಧಿಯೇ ಎಂದದ್ದು ಈ ಎಲ್ಲ ಹಿನ್ನೆಲೆಯಲ್ಲೇ!


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top