ಕನ್ನಡ ಕಲಾಸರಸ್ವತಿ ಧರಿಸಿರುವ ಕಲಾಮಾಲಿಕೆಯಲ್ಲಿ ಅರಳಿರುವ ಕಲಾಪುಷ್ಪಗಳು, ಆಕೆ ಧರಿಸಿರುವ ಶಿರೋರತ್ನ ಕಂಠಾಭರಣಗಳಾಗಿರುವ ಕಲಾವಿದರು, ಎಷ್ಟೋ ಜನ!.
ಇಂಥವರನ್ನೆಲ್ಲ, ನನ್ನ ತಂದೆ ಆಕಾಶವಾಣಿಯ, ನಾಟಕದ ಎನ್.ಎಸ್.ವಾಮನ್ ಅವರ ಮೂಲಕ, ನನ್ನ 7ನೇ ವರ್ಷದಿಂದ ಅನೇಕ ಬಾರಿ ಭೇಟಿಯಾಗಿ, ಅವರ ನಾಟಕಗಳನ್ನ, ಚಲನಚಿತ್ರಗಳನ್ನ, ಚಿತ್ರೀಕರಣವನ್ನ ಸತತವಾಗಿ ನೋಡಿ ಇವರೆಲ್ಲರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಭಾಗ್ಯ ನನ್ನದು. ಇವರೆಲ್ಲರ ವಿವರವಾದ ಸಂದರ್ಶನಗಳನ್ನು ಧ್ವನಿಮುದ್ರಿಸಿ ನನ್ನ ಬಳಿ ಕಾದಿರಿಸಿಕೊಂಡಿದ್ದೇನೆ. ಅವುಗಳನ್ನು ಆಧರಿಸಿ ಈ ಲೇಖನ ಬರೆಯುತ್ತಿದ್ದೇನೆ. ಗುಬ್ಬಿ ವೀರಣ್ಣ ಹಾಗೂ ಬಿ.ಜಯಮ್ಮ ಶತಮಾನೋತ್ಸವ ಆಚರಿಸಿದ ಗುಬ್ಬಿ ಕಂಪನಿಯ ಚರಿತ್ರೆ ಕನ್ನಡ ರಂಗಭೂಮಿಯ ಚರಿತ್ರೆಯೋ ಎಂಬAತೆ, ಅದನ್ನು ಮುನ್ನಡೆಸಿದವರು, ಪ್ರಯೋಗಶೀಲ ಮಾಲೀಕರೂ ವಿಖ್ಯಾತ ಹಾಸ್ಯ ಕಲಾವಿದರೂ ಆಗಿದ್ದ, ಗುಬ್ಬಿ ವೀರಣ್ಣನವರು. ಇವರು ರಂಗಭೂಮಿಯಲ್ಲಿ ನಾಟಕಗಳನ್ನು ಆಡುತ್ತಲೇ, ಕನ್ನಡ ಚಲನಚಿತ್ರರಂಗದಲ್ಲಿ ಕೆಲವು ಮೂಕಿ ಹಾಗೂ ಕೆಲವು ಟಾಕಿ ಚಲನಚಿತ್ರಗಳನ್ನು ನಿರ್ಮಿಸಿ ಅಭಿನಯಿಸಿದರು.
ಗುಬ್ಬಿ ವೀರಣ್ಣ:-ಗುಬ್ಬಿ ವೀರಣ್ಣ ಕನ್ನಡ ನಾಡು ಕಂಡ ಅತಿ ಶ್ರೇಷ್ಠ ರಂಗಕರ್ಮಿಗಳೊಲೊಬ್ಬರು. ನಟ, ನಿರ್ಮಾಪಕ, ನಿರ್ದೇಶಕ ಮತ್ತು ನಾಟಕ ಮಂಡಳಿಯ ವ್ಯವಸ್ಥಾಪಕರಾಗಿದ್ದ ವೀರಣ್ಣನವರು ಅನೇಕ ಕಲಾವಿದರಿಗೆ ಉದ್ಯೋಗವಕಾಶ ಕಲ್ಪಿಸಿ, ಹಲವಾರು ಹೊಸ ರಂಗ ಪ್ರಯೋಗಳನ್ನು ಮಾಡಿ ಹಾಗು ಹಲವಾರು ರಂಗಮAದಿರಗಳನ್ನು ಕಟ್ಟಿಸಿ, ಕನ್ನಡ ಹಾಗು ಕನ್ನಡ ರಂಗಭೂಮಿಯನ್ನು ಸಲುಹಿದ ಕರ್ಮಜೀವಿ. ಒಂದು ಕಾಲದಲ್ಲಿ ಮೆನೆಮಾತಾಗಿದ್ದ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ವ್ಯವಸ್ಥಾಪಕರಾಗಿದ್ದ ವೀರಣ್ಣನವರು, ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ರಂಗಭೂಮಿಯ ಎಳಿಗೆಗಾಗಿ ನಿರಂತರವಾಗಿ ದುಡಿದವರು.
ಜೀವನ: 1890ರಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ಗ್ರಾಮದಲ್ಲಿ(ಈಗ ತಾಲೂಕು ಕೇಂದ್ರ) ವೀರಣ್ಣನವರು ರುದ್ರಾಂಬೆ ಹಾಗು ಹಂಪಣ್ಣ ದಂಪತಿಗಳ ಮೂರನೆ ಮಗುವಾಗಿ ಜನಿಸಿದರು. ತಮ್ಮ 6ನೆ ವಯಸ್ಸಿನಲ್ಲಿಯೆ (1896) ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ಮೂಲಕ ಬಾಲ ಕಲಾವಿದನಾಗಿ ರಂಗಭೂಮಿಗೆ ಪಾದಾರ್ಪಣೆ ಮಾಡಿದ ವೀರಣ್ಣ, ಕೆಲ ವರ್ಷಗಳ ನಂತರ ಸ್ತ್ರೀ ಪಾತ್ರಕ್ಕೆ ಬಡ್ತಿ ಪಡೆದರು. ಯೌವ್ವನಾವಸ್ಠೆ ತಲುಪುತಿದ್ದಂತೆ ಧ್ವನಿ ಬದಲಾದ ಕಾರಣ ವೀರಣ್ಣನವರು ಸ್ತ್ರೀ ಪಾತ್ರಗಳನ್ನು ತ್ಯಜಿಸಿ ಕೆವಲ ಗಂಡು ಪಾತ್ರಗಳನ್ನು ಮಾತ್ರ ಹಾಕತೊಡಗಿದರು. ಅಂದಿನ ರಂಗಭೂಮಿಯ ನಟರಿಗೆ ಅಗತ್ಯ ಕಲೆಗಳಾದ ಹಾಡುಗಾರಿಕೆ, ತಬಲಾ, ಪಿಟೀಲು, ಇತ್ಯಾದಿಗಳನ್ನು ಕೂಡ ವೀರಣ್ಣ ಕಲಿತರು. ಹಾಸ್ಯ ಪಾತ್ರಗಳಲ್ಲಿ ಮಿಂಚುತ್ತಿದ್ದ ವೀರಣ್ಣನವರನ್ನು 1912ರಲ್ಲಿ ಮೈಸೂರಿನ ಜನತೆ ಚಿನ್ನದ ಪದಕವನ್ನಿತ್ತು ಗೌರವಿಸಿತು.
ದಕ್ಷಿಣ ಭಾರತದ ಹಲವಾರು ನಗರಗಳ ಪ್ರವಾಸ ಮಾಡಿ ಯಶಸ್ವಿ ಪ್ರದರ್ಶನಗಳನ್ನು ನೀಡುತ್ತ ಪ್ರಸಿದ್ದಿಗೆ ಬಂದರು ವೀರಣ್ಣ. 1921ರಲ್ಲಿ ಬೆಂಗಳೂರಿನಲ್ಲಿ ಕನ್ನಡ ನಾಟಕಗಳ ಪಿತಾಮಹ ಎಂದು ನಾಮಾಂಕಿತರಾಗಿದ್ದ ಟಿ.ಪಿ.ಕೈಲಾಸಂ ವೀರಣ್ಣನವರ ಪ್ರದರ್ಶನ ಮೆಚ್ಚಿ ಕೈಗಡಿಯಾರವನ್ನು ನೀಡಿ ಸನ್ಮಾನಿಸಿದರು. 1923ರಲ್ಲಿ ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ವೀರಣ್ಣನವರ ನಾಟಕಗಳನ್ನು ನೋಡಿ ಹಾಗು ಅವರ ಆಭಿನಯ ಮೆಚ್ಚಿ 'ವರ್ಸಟೈಲ್ ಕಮೇಡಿಯನ್' ಎಂಬ ಬಿರುದು ನೀಡಿ ಸನ್ಮಾನಿಸಿದರು. ಮುಂದಿನ ಪೀಳಿಗೆ ರಂಗಕಲೆಯನ್ನು ಇನ್ನು ಎತ್ತರಕ್ಕೆ ಕೊಂಡೋಯ್ಯಲಿ ಎಂಬ ಆಸೆ ಹೊತ್ತ ವೀರಣ್ಣನವರು 1925ರಲ್ಲಿ 14 ವರ್ಷದೊಳಗಿನ ಹುಡುಗರಿಗೆ ನಾಟಕ ತರಬೇತಿ ನೀಡಿ 'ಬಾಲಕ ವಿವರ್ಧಿನಿ' ಎಂಬ ಸಂಘ ಸ್ಥಾಪಿಸಿದರು. 1926ರಲ್ಲಿ, ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಾಟಕದಲ್ಲಿ ವಿದ್ಯುತ್ ದೀಪ ಬಳಸಿದ ಕೀರ್ತಿ ವೀರಣ್ಣನವರಿಗೆ ಸಂದಾಯವಾಗುತ್ತದೆ.
'ಸದಾರಮೆ' ನಾಟಕದಲ್ಲಿ ಸದಾರಮೆಯಾಗಿ ಬಿ.ಜಯಮ್ಮನವರು, ಕಳ್ಳನ ಪಾತ್ರದ ವೀರಣ್ಣನವರೊಂದಿಗೆ ಹಾಡುತ್ತಿದ್ದ ಗೀತೆ.
ಜಯಮ್ಮ ಸರಸಿಜಾತನಯನ ಗುಣಸದನ
ಸರಸರೂಪಮದನ ತ್ರಿಭುವದನ
(ವೀರಣ್ಣ) ಸರಸಿಜಾರನಯನೆ ಗುಣಸದನೆ
ಕಮಲಜಾತವದನೆ ಜಯಭವನೆ
ಇದೇ ನಾಟಕದಲ್ಲಿ ವೀರಣ್ಣನವರು ಮುಂದೆ ಆಡುತ್ತಿದ್ದ ಮಾತು ಬಹುಭಾಷೆಯ ಹಾಡು ಅವರ್ಣನೀಯ.
ನೀ ಬಂದೆ ನಾ ಕರಕೊಂಡು ಬಂದೆ. ಕೇಸ್ ಡಿಸ್‌ಮಿಸ್ (ನಗು)
ನಿನ್ನ ಕಂಡು ನಾ ಬಂದೆ ನಿಂತು ಮಾತಾಡೆಲೆ
ಕೋಪವೇಕೆನ್ನೊಳು ಕೋಮಲಾಂಗಿ
ನೀ ಪೇಳು ಅಡಗಿತೇ ಕೋಪಮು ನ್ಯಾಯಮೇ
ನಿಂತು ಮಾತಾಡೆಲೇ ನೀಲವೇಣಿ
ಉನ್ನಯಾರ್ ಎಲ್ಲಮುಮ್ ಎನ್ನೋಳು ಸೊಲ್ಲು ನೀ
ಓ ಪ್ಯಾರಿ ಏಕ್ ಬಾತ್ ಹೈ ಮೈ ತೋ ಕ್ಯಾ ಕರೂಂ
ಮೇರಾ ದಿಲ್ ಹೈ ತೇರೀ ಪಾಸ್
My dear come here why do you so fear
stop and talk to one lovely lady
'ಕಂಸವಧೆ' ನಾಟಕದಲ್ಲಿ ಅಗಸ-ಅಗಸಗಿತ್ತಿಯರಾಗಿ ಇವರು ಹಾಡುತ್ತಿದ್ದ ಹಾಡು.
ಬತ್ತೀನ್ ಕಣೋ ಬುಡಬುಡು ಬತ್ತೀನ್ ಕಣೋ
ಬಾರೇ ಹುಡುಗಿ ಬಾರೆ ಬಾರೆ ಹುಡುಗಿ
ಮಾರಾಜರ ಮನೆಗ್ಹೋಗಿ ಮರ್ವಾದೆ ತಗೊಂಡಬರೋಣ
ಬಾರೆ ಹುಡುಗಿ
ಗುಬ್ಬಿ ಕಂಪನಿಯ 'ದಶಾವತಾರ' ನಾಟಕದಲ್ಲಿ, ಸುಮಾರು 1956ರಲ್ಲಿ ರಂಗದ ಮೇಲೆ ತಂದ ಆನೆ, ಕುದುರೆ, ರಥ, ವಿಶೇಷ ಝಗಮಗಿಸುವ ರಂಗಸಜ್ಜಿಕೆ, ದೀಪಾಲಂಕಾರ, ಜನರನ್ನು ಮಂತ್ರಮುಗ್ಧ ಮಾಡಿದವು.
ಇವರು ಕನ್ನಡ ಚಲನಚಿತ್ರ ರಂಗದ ಆರಂಭದ ಚಲನಚಿತ್ರಗಳಲ್ಲು ತಮ್ಮ ಕೈಚಲಕ ತೋರಿಸಿದ್ದಾರೆ. ಇವರ ಗುಬ್ಬಿ ಕಂಪನಿ ಶತಮಾನೋತ್ಸವ ಆಚರಿಸಿದ ವೃತ್ತಿ ರಂಗಭೂಮಿಯ ನಾಟಕ ಕಂಪನಿಯಾಗಿತ್ತು ಎಂಬುದು ಜನಜನಿತ ಮಾತು. ಇವರ ಕಂಪನಿಯಲ್ಲೇ ಅರಳಿದ ಕಲಾ ಪುಷ್ಪಗಳು ಮುಂದೆ ಕನ್ನಡ ಚಲನಚಿತ್ರರಂಗದ ಜನಪ್ರಿಯ ಪ್ರಭಾವಿ ಕಲಾವಿದರಾದರು ಎಂಬುದು ಇವರ ಹೆಗ್ಗಳಿಕೆ. ನನ್ನ ತಂದೆ ಎನ್.ಎಸ್.ವಾಮನ್ ಅವರು ತಮ್ಮ ಪ್ರತ್ಯಕ್ಷ ದರ್ಶನ ಹಾಗೂ ಆ ಕಲಾವಿದರಿಂದಲೇ ಕೇಳಿ ತಿಳಿದ ಹಾಗೂ ನಾನು ಸಂದರ್ಶನಗಳಲ್ಲಿ ಸಂಗ್ರಹಿಸಿದ ಮಾಹಿತಿಯಂತೆ ಗುಬ್ಬಿ ಕಂಪನಿಯ ನಾಟಕಗಳ ವಾಲ್‌ಪೋಸ್ಟರ್‌ಗಳನ್ನು ಅನೇಕ ರಾತ್ರಿಗಳು ಡಾ.ರಾಜಕುಮಾರ್, ಜಿ.ವಿ.ಅಯ್ಯರ್, ಟಿ.ಎನ್. ಬಾಲಕೃಷ್ಣ, ಟಿ.ಆರ್.ನರಸಿಂಹರಾಜು ಮುಂತಾದವರು ಗೋಡೆಗಳಿಗೆ ಅಂಟಿಸಿ ಪ್ರಚಾರ ಕೊಡುತ್ತಿದ್ದರಂತೆ.
ಸಿನಿಮಾ ಜೀವನ:- 1926ರಲ್ಲಿ ಖ್ಯಾತ ಲೇಖಕ ದೇವುಡು ನರಸಿಂಹ ಶಾಸ್ತ್ರಿಯವರ ಸಹಕಾರದೊಂದಿಗೆ 'ಹರಿಮಯ', 'ಹಿಸ್ ಲವ್ ಅಫೈರ್' ಮತ್ತು 'ಕಳ್ಳರ ಕೂಟ' ಎಂಬ ಮೂರು ಚಲನ ಚಿತ್ರಗಳನ್ನು ವೀರಣ್ಣ ನಿರ್ಮಿಸಿದರು. ವೀರಣ್ಣ 1934ರ ಡಿಸೆಂಬರ್ 31ರೊಂದು ಬೆಂಗಳೂರಿನಲ್ಲಿ "ಕುರುಕ್ಷೇತ್ರ" ಎಂಬ ಅಭೂತಪೂರ್ವ ನಾಟಕ ಪ್ರದರ್ಶಿಸಿದರು. ವೈಭವಪೇರಿತ ಈ ನಾಟಕದಲ್ಲಿ ಜೀವಂತ ಆನೆ ಕುದುರೆಗಳನ್ನು ಬಳಸಲಾಗಿತ್ತು. ಆಗಿನಕಾಲದಲ್ಲಿ ಈ ನಾಟಕ ಬಹಳ ಜನಪ್ರಿಯವಾಗಿತ್ತು. 1935ರಲ್ಲಿ ವೀರಣ್ಣನವರು ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ 'ಸಾಗರ್ ಟಾಕೀಸ್' ಎಂಬ ಚಿತ್ರಮಂದಿರ ಸ್ಥಾಪಿಸಿದರು. ಹೀಗೆ ರಂಗಭೂಮಿ ಹಾಗು ಚಿತ್ರರಂಗಕ್ಕೆ ಕಾಣಿಕೆ ನೀಡುತ್ತಾ ಬಂದಿದ್ದ ವೀರಣ್ಣನವರಿಗೆ 1942ರ ಮೈಸೂರು ದಸರಾ ಉತ್ಸವದಲ್ಲಿ ಮಹಾರಾಜರಾದ ಜಯಚಾಮರಾಜ ಒಡೆಯರ್ 'ನಾಟಕ ರತ್ನ' ಎಂಬ ಬಿರುದು ನೀಡಿ ಸನ್ಮಾನಿಸಿದರು. 1943ರಲ್ಲಿ ಬೆಂಗಳೂರಿನ ಗಾಂಧಿನಗರದಲ್ಲಿ ವೀರಣ್ಣನವರು 'ಗುಬ್ಬಿ ಥಿಯೆಟರ್' ಎಂಬ ರಂಗಮAದಿರ ಪ್ರಾರಂಭಿಸಿದರು. ತಮ್ಮ ಸುಕೃತ್ಯಗಳಿಂದಾಗಿ ವೀರಣ್ಣನವರು ಕೇಂದ್ರ ಸರ್ಕಾರದ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿಯನ್ನು(1955) ಹಾಗೂ ಪದ್ಮಶ್ರೀ ಪ್ರಶಸ್ತಿಯನ್ನು(1972) ಕೂಡಾ ಪಡೆದರು. ಕನ್ನಡ ರಂಗಭೂಮಿಗೆ ಅಪೂರ್ವ ಕಾಣಿಕೆಯಿತ್ತ ಗುಬ್ಬಿ ವೀರಣ್ಣನವರು ಅಕ್ಟೊಬರ್ 18 1972ರೊಂದು ತಮ್ಮ ಕೊನೆಯುಸಿರೆಳೆದರು.ಪ್ರಸಿದ್ದ ನಟಿ ಬಿ.ಜಯಮ್ಮನವರು ಗುಬ್ಬಿ ವೀರಣ್ಣನವರ ಪತ್ನಿಯಾಗಿದ್ದರು.
ವೀರಣ್ಣನವರು ನಿರ್ಮಿಸಿದ/ಅಭಿನಯಿಸಿದ ಕೆಲವು ನಾಟಕಗಳು ಹಾಗು ಚಿತ್ರಗಳು :- ನಾಟಕಗಳು- ಸದಾರಮೆ, ಕುರುಕ್ಷೇತ್ರ, ಜೀವನ ನಾಟಕ, ದಶಾವತಾರ, ಪ್ರಭಾಮಣಿ ವಿಜಯ, ಕಬೀರ್, ಗುಲೇಬಕಾವಲಿ, ಅಣ್ಣ ತಮ್ಮ, ಲವ ಕುಶ
ಚಲನ ಚಿತ್ರಗಳು:- ಹರಿಮಯ, ಹೀಸ್ ಲವ್ ಅಫೈರ್, ಕಳ್ಳರ ಕೂಟ, ಜೀವನ ನಾಟಕ, ಹೇಮರೆಡ್ಡಿ ಮಲ್ಲಮ್ಮ, ಗುಣಸಾಗರಿ,
ದೊರಕಿದ ಪ್ರಶಸ್ತಿಗಳು:- ನಾಟಕ ರತ್ನ, ವರ್ಸಟೈಲ್ ಕಮೇಡಿಯನ್, ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಪದ್ಮಶ್ರೀ, ಮೈಸೂರು ವಿಶ್ವವಿದ್ಯಾಲಯದ ಡಿ. ಲಿಟ್, ಕರ್ಣಾಟಕಾಂಧ್ರ ನಾಟಕ ಸಾರ್ವಭೌಮ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ