ಪಣಜಿ: ಪ್ರಸಕ್ತ 2024 ರ ಡಿಸೆಂಬರ್ ನಲ್ಲಿ ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ತಾಯಿ ಭುವನೇಶ್ವರಿಯ ರಥವು ಸಪ್ಟೆಂಬರ್ 22 ರಂದು ಭಾನುವಾರ ಮೂಲತಃ ಭುವನೇಶ್ವರಿಯ ಮೂಲ ಸ್ಥಾನ ಸಿದ್ಧಾಪುರಕ್ಕೆ (ಸಿರಸಿ) ಆಗಮಿಸಲಿದ್ದು, ಸೆಪ್ಟೆಂಬರ್ 23 ರಂದು ಸೋಮವಾರ ಮಧ್ಯಾಹ್ನ 3 ಗಂಟೆಗೆ ಕಾರವಾರ ಮಾರ್ಗವಾಗಿ ಗೋವಾ ರಾಜ್ಯದ ಕಾಣಕೋಣಕ್ಕೆ ತಾಯಿ ಭುವನೇಶ್ವರಿಯ ರಥವು ಆಗಮಿಸಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ಮಾಹಿತಿ ನೀಡಿದ್ದಾರೆ.
ತಾಯಿ ಭುವನೇಶ್ವರಿಯ ರಥಕ್ಕೆ ಅಂದು ಸ್ವಾಗತ ಕೋರಿ ಬರಮಾಡಿಕೊಂಡು ಪೂಜೆ ಸಲ್ಲಿಸಲಾಗುವುದು. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯ ಘಟಕದ ಪದಾಧಿಕಾರಿಗಳು, ದಕ್ಷಿಣ ಮತ್ತು ಉತ್ತರ ಗೋವಾ ಜಿಲ್ಲಾ ಘಟಕದ ಪದಾಧಿಕಾರಿಗಳು, ತಾಲೂಕು ಘಟಕದ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳು, ಕನ್ನಡಿಗರು, ಮಠಾಧೀಶರ ಉಪಸ್ಥಿತಿಯಲ್ಲಿ ಎಲ್ಲರೂ ಪೂಜೆ ಸಲ್ಲಿಸೋಣ ಎಂದು ಸಿದ್ಧಣ್ಣ ಮೇಟಿ ನುಡಿದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ಸಾಹಿತ್ಯ ಲೋಕದ ದಿಗ್ಗಜರು, ಸಾಹಿತ್ಯಾಸಕ್ತರು, ಕನ್ನಡ ಅಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಒಂದೆಡೆ ಸೇರಿ ಪ್ರಚಲಿತ ಸಾಹಿತ್ಯದ ಸ್ಥಿತಿಗತಿಗಳನ್ನು ಚರ್ಚಿಸುವಂತಹ ಬಹು ದೊಡ್ಡ ವೇದಿಕೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರತಿ ವರ್ಷ ನಾಡಿನ ಬೇರೆ ಬೇರೆ ಸ್ಥಳಗಳಲ್ಲಿ ಆಯೋಜಿಸಲಾಗುತ್ತದೆ. ಪ್ರಸಕ್ತ ವರ್ಷ ಮಂಡ್ಯದಲ್ಲಿ ಈ ಬೃಹತ್ ಸಮ್ಮೇಳನ ಡಿಸೆಂಬರ್ 20, 21, 22 ಈ ಮೂರು ದಿನಗಳ ಕಾಲ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ್ ಜೋಶಿ ರವರು ಗೋವಾ ರಾಜ್ಯಕ್ಕೆ ತಾಯಿ ಭುವನೇಶ್ವರಿಯ ರಥವನ್ನು ಕಳುಹಿಸಿಕೊಡುತ್ತಿರುವುದು ನಮ್ಮ ಸೌಭಾಗ್ಯವೇ ಆಗಿದೆ. ಇದಕ್ಕೆ ಗೋವಾ ಕನ್ನಡಿಗರ ಪರವಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಸೆಪ್ಟೆಂಬರ್ 23 ರಂದು ಕಾಣಕೋಣದಲ್ಲಿ ತಾಯಿ ಭುವನೇಶ್ವರಿಯ ರಥವನ್ನು ಬರಮಾಡಿಕೊಂಡು ನಾವೆಲ್ಲ ಕನ್ನಡಿಗರು ಸೇರಿ ಪೂಜೆ ಸಲ್ಲಿಸೋಣ. ಈ ಸಂದರ್ಭದಲ್ಲಿ ಗೋವಾ ರಾಜ್ಯದ ಕಸಾಪ ಎಲ್ಲ ಘಟಕದ ಪದಾಧಿಕಾರಿಗಳು, ಕನ್ನಡ ಪರ ಸಂಘಟನೆಗಳು, ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕೋರುತ್ತೇನೆ ಎಂದು ಸಿದ್ಧಣ್ಣ ಮೇಟಿ ಮನವಿ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ