ವಿದ್ಯಾರ್ಥಿ ಮತ್ತು ಶಿಕ್ಷಕರನ್ನು ರೂಪಿಸುವಲ್ಲಿ ಗ್ರಂಥಪಾಲಕರ ಪಾತ್ರ ಮಹತ್ತರವಾದದ್ದು: ಡಾ. ಎನ್. ನರಸಿಂಹ ಮೂರ್ತಿ
ಮಂಗಳೂರು:ಯಾವುದೇ ವೃತ್ತಿ ಕೀಳಲ್ಲ. ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಗ್ರಂಥಪಾಲಕ ವೃತ್ತಿ ಶ್ರೇಷ್ಠವಾದದ್ದು. ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕನ ಸರ್ವತೋಮುಖ ಅಭಿವೃದ್ಧಿ ಮತ್ತು ಬದುಕಿನ ನಿರೂಪಣೆಗೆ ಗ್ರಂಥಪಾಲಕನ ಪಾತ್ರ ಹಿರಿದಾದುದು ಎಂದು ಮಂಗಳೂರು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಎನ್. ನರಸಿಂಹ ಮೂರ್ತಿ ತಿಳಿಸಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾ ಗ್ರಂಥಾಲಯ ಸಂಘ (ಲೈಬ್ರೆರಿ ಅಸೋಸಿಯೇಷನ್) ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶ ವತಿಯಿಂದ ನಡೆದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೃತ್ತಿಪರತೆ, ಪ್ರಾಮಾಣಿಕತೆ ಮತ್ತು ಸ್ವಸಾಮರ್ಥ್ಯದಿಂದ ಏನನ್ನೂ ಸಾಧಿಸಲು ಸಾಧ್ಯವಿದೆ. ಸಮಾಜದೊಂದಿಗೆ ಉತ್ತಮ ಸೌಹಾರ್ದ ಬೆಳೆಸಿಕೊಳ್ಳುವುದೇ ಅಷ್ಟೇ ಮುಖ್ಯವಾಗಿರುತ್ತದೆ. ವೃತ್ತಿ ಶ್ರೇಷ್ಠತೆ, ಪ್ರಾಮಾಣಿಕತೆ ಮತ್ತು ದೃಢ ವಿಶ್ವಾಸದಿಂದ ವೃತ್ತಿ ಮುಂದುವರೆಸುವಂತೆ ಗ್ರಂಥಪಾಲಕರನ್ನು ಹುರಿದುಂಬಿಸಿದರು.
ಗ್ರಂಥಾಪಾಲಕ ಎಸ್. ಎನ್. ರಂಗನಾಥನ್ ವಿಚಾರಗಳನ್ನು ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲಿ ಅಳವಡಿಸಿಕೊಂಡರೆ ಗ್ರಂಥಾಲಯದ ಜೊತೆಗೆ ನಾವು ಬೆಳವಣಿಗೆ ಹೊಂದಲು ಸಾಧ್ಯ ಎಂದು ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದ ಗ್ರಂಥಪಾಲಕ ಡಾ. ವಸಂತ ಎನ್. ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಗೌಡ, ವಿದ್ಯಾರ್ಥಿಗಳು ಗ್ರಂಥಾಲಯದಿಂದ ಸಿಗುವ ಜ್ಞಾನ ಗೂಗಲ್ ನೀಡುವ ಜ್ಞಾನಕ್ಕೆ ಸಮನಾಗಿದೆ ಎಂಬ ಮೂಢನಂಬಿಕೆ ಹೊಂದಿದ್ದಾರೆ. ವಿದ್ಯಾರ್ಥಿ ಸಮೂಹಕ್ಕೆ ಜ್ಞಾನ ಭಂಡಾರ ಒದಗಿಸುವ ನಿಟ್ಟಿನಲ್ಲಿ ಗ್ರಂಥಪಾಲಕರಾಗಿ ನಿರ್ವಹಿಸಬೇಕಾದ ಕರ್ತವ್ಯ ಬಹಳಷ್ಟಿದೆ. ಒಂದು ಗ್ರಂಥಾಲಯದ ಗ್ರಂಥಪಾಲಕ ವಿದ್ಯಾರ್ಥಿ ಮತ್ತು ಶಿಕ್ಷಕರ ಓದಿನ ಆಸಕ್ತಿ ಹೆಚ್ಚಿಸಲು ಕಾರಣಕರ್ತನಾಗಬೇಕು. ಗ್ರಂಥಾಲಯದಲ್ಲಿ ಸಾಕಷ್ಟು ಸವಾಲು ಹಾಗೂ ಜವಾಬ್ದಾರಿಗಳಿವೆ. ಅವುಗಳನ್ನು ಸಮರ್ಥವಾಗಿ ಎದುರಿಸಿದಾಗಲೇ ವ್ಯಕ್ತಿತ್ವ ಬಲಿಷ್ಠವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಗ್ರಂಥಪಾಲಕರು ಹಾಗೂ ಪದೋನ್ನತಿ ಪಡೆದ ಗ್ರಂಥಪಾಲಕರನ್ನು ಗೌರವಿಸಲಾಯಿತು. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾ ಗ್ರಂಥಾಲಯ ಸಂಘದ (ಲೈಬ್ರೆರಿ ಅಸೋಸಿಯೇಷನ್) ಅಧ್ಯಕ್ಷ ಡಾ. ವಾಸಪ್ಪ ಗೌಡ, ಕಾರ್ಯದರ್ಶಿ ರಾಮ ಕೆ., ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಡಾ. ಸಿದ್ಧರಾಜು ಎಂ. ಎನ್., ಗ್ರಂಥಪಾಲಕಿ ಡಾ. ವನಜಾ ಬೋಳೂರ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ