ಬಳ್ಳಾರಿ :ವಿಮ್ಸ್ನ ಬಿ.ಸಿ ರಾಯ್ ಸಭಾಂಗಣದಲ್ಲಿ ವಿಮ್ಸ್ ಗುತ್ತಿಗೆ ಕಾರ್ಮಿಕರ ಸಮ್ಮೇಳನ ಜರುಗಿತು. ಈ ಸಮ್ಮೇಳನಕ್ಕೆ ಅತಿಥಿಗಳಾಗಿ ಆಗಮಿಸಿದ ವಿಮ್ಸ್ ನಿರ್ದೇಶಕರಾದ ಡಾ.ಟಿ.ಗಂಗಾಧರ ಗೌಡ ಅವರು ಶುಭ ಹಾರೈಸಿ ಮಾತನಾಡಿದರು. ಮುಖ್ಯ ಭಾಷಣಕಾರರಾಗಿ ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿಗಳಾದ ಕೆ.ಸೋಮಶೇಖರ್ ಅವರು ಆಗಮಿಸಿದ್ದರು. ಸಮ್ಮೇಳನದ ಅಧ್ಯಕ್ಷತೆಯನ್ನು ಸಂಘದ ಕಾರ್ಯದರ್ಶಿ ಎ.ದೇವದಾಸ್ ಅವರು ವಹಿಸಿದ್ದರು.
ಸಭೆಗೂ ಮುನ್ನ ಕೋಲ್ಕತ್ತಾದ ಸ್ನಾತ್ತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ, ಅಪರಾಧಿಗಳನ್ನು ಬಂಧಿಸಿ ನಿದರ್ಶನೀಯ ಶಿಕ್ಷೆ ನೀಡುವಂತೆ ಒತ್ತಾಯಿಸಿ ಗೊತ್ತುವಳಿಯನ್ನು ಮಂಡಿಸಲಾಯಿತು ಹಾಗೂ ಮಡಿದ ವಿದ್ಯಾರ್ಥಿನಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮುಖ್ಯ ಭಾಷಣಕಾರರಾದ ಕೆ.ಸೋಮಶೇಖರ್ ಅವರು ಮಾತನಾಡುತ್ತಾ “ಇಂದು ದೇಶವ್ಯಾಪಿ ಕಾರ್ಮಿಕರ ಬದುಕು ದುಸ್ತರವಾಗಿದೆ.
ಎಲ್ಲಾ ಅಗತ್ಯವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಜೊತೆಗೆ ಆರೋಗ್ಯ ಹಾಗೂ ಶಿಕ್ಷಣದ ವೆಚ್ಚವೂ ಸಾಕಷ್ಟು ಪಟ್ಟು ಹೆಚ್ಚಾಗಿದೆ. ಆದರೆ ಬೆಲೆ ಏರಿಕೆ ತಕ್ಕನಂತೆ ಕಾರ್ಮಿಕರ ವೇತನ ಮಾತ್ರ ಹೆಚ್ಚಾಗಿಲ್ಲ. ಕಾರ್ಮಿಕರಿಗೆ ದೊರೆಯಬೇಕಾದ ಇನ್ನಿತರ ಸೌಲಭ್ಯಗಳಾದ ಪಿ.ಎಫ್, ಇಎಸ್‌ಐನಲ್ಲೂ ಖೋತಾ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರ ಪರವಾಗಿ ನೀತಿಗಳನ್ನು ಜಾರಿಗೆ ತರುವ ಬದಲಿಗೆ, ಕಾರ್ಮಿಕ ವಿರೋಧಿ ನೀತಿಗಳನ್ನು ಸರ್ಕಾರಗಳು ಜಾರಿಗೆ ತರುತ್ತಿವೆ. ಮತ್ತೊಂದೆಡೆ ದೊಡ್ಡ ಕಾರ್ಪೋರೇಟ್ ಮಾಲೀಕರ ಹಿತಾಸಕ್ತಿಯನ್ನು ಕಾಪಾಡುತ್ತಿವೆ. ಪ್ರಸಕ್ತ ಕೇಂದ್ರ ಬಿಜೆಪಿ ಸರ್ಕಾರ ಕಾರ್ಮಿಕ ಕಾಯ್ದೆಗಳಲ್ಲಿ ತಿದ್ದುಪಡಿ ತಂದು, ಕಾರ್ಮಿಕ ಹಕ್ಕುಗಳನ್ನು ಕಿತ್ತುಕೊಳ್ಳಲು ಹೊರಟಿದೆ.
ಈ ಹಿಂದೆ ಆಳ್ವಿಕೆ ಮಾಡಿದ ಕೇಂದ್ರ ಕಾಂಗ್ರೆಸ್ ಸರ್ಕಾರ ಜಾಗತೀಕರಣ-ಉದಾರೀಕರಣ ಹಾಗೂ ಖಾಸಗೀಕರಣ ನೀತಿಗಳನ್ನು ಜಾರಿಗೆ ತಂದು, ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿತು. ಖಾಯಂ ಉದ್ಯೋಗಗಳ ಬದಲಿಗೆ ಗುತಿಗೆ-ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ಪದ್ಧತಿಗೆ ನಾಂದಿ ಹಾಡಿತು. ದಿನಗಳೆದಂತೆ ಖಾಯಂ ನೇಮಕಾತಿಗಳೇ ಈಗ ಸಂಪೂರ್ಣವಾಗಿ ನಾಶವಾಗಿವೆ. ಹೊರಗುತ್ತಿಗೆ ಹೆಸರಲ್ಲಿ ಕಾರ್ಮಿಕರನ್ನು ಏಜೆನ್ಸಿಗಳ ಶೋಷಣೆಗೆ ದೂಡಲಾಗುತ್ತಿದೆ. ಹೊರಗುತ್ತಿಗೆ ಅಡಿಯಲ್ಲಿ ನ್ಯಾಯಸಮ್ಮತ ಹಕ್ಕುಗಳಿಂದ ವಂಚಿಸಿ, ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಇಂತಹ ನೀತಿಗಳ ವಿರುದ್ಧ ಕಾರ್ಮಿಕರಲ್ಲಿ ದಿನೇ ದಿನೇ ಆಕ್ರೋಶವು ಹೆಚ್ಚುತ್ತಲೇ ಇದೆ. ಆಕ್ರೋಶವು ಬಲಿಷ್ಠವಾದ ಹೋರಾಟದ ಶಕ್ತಿಯಾಗಿ ಪರಿವರ್ತನೆಯಾಗದಂತೆ ಸರ್ಕಾರಗಳು ಅನೇಕ ಕುತಂತ್ರಗಳನ್ನು ಮಾಡುತ್ತಿವೆ. ಜಾತಿ, ಧರ್ಮ, ಭಾಷೆ, ಪ್ರಾಂತ್ಯ ಇನ್ನಿತರ ವಿಭಜಕ ಪ್ರವೃತ್ತಿಗಳನ್ನು ತಂದು, ಕಾರ್ಮಿಕರನ್ನು ಒಡೆದಾಳುವ ಪಿತೂರಿಯನ್ನು ಮಾಡುತ್ತಿವೆ. ಈ ಸಂದರ್ಭದಲ್ಲಿ ಕಾರ್ಮಿಕರು ತಮ್ಮ ಒಗ್ಗಟ್ಟನ್ನು ಕಾಪಾಡಿಕೊಳ್ಳುತ್ತಾ, ಬಂಡವಾಳಶಾಹಿ ಪರವಾದ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಟವನ್ನು ಬಲಿಷ್ಠಗೊಳಿಸಬೇಕಿದೆ. ವಿಮ್ಸ್ ಗುತ್ತಿಗೆ ನೌಕರರು ತಮ್ಮ ಬೇಡಿಕೆಗಳಿಗಾಗಿ ಒಗ್ಗಟ್ಟಿನಿಂದ ಹೋರಾಟವನ್ನು ರೂಪಿಸುತ್ತಲೇ, ಇಡೀ ಕಾರ್ಮಿಕ ವರ್ಗದ ಚಳುವಳಿಯ ಭಾಗವಾಗಬೇಕೆಂದು” ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಸಂಘದ ಅಧ್ಯಕ್ಷರಾದ ಸೋಮಶೇಖರ ಗೌಡ ಅವರು ಮಾತನಾಡಿದರು. ವೇದಿಕೆಯ ಮೇಲೆ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್.ಎನ್, ಸಂಘದ ಉಪಾಧ್ಯಕ್ಷರಾದ ಎ.ಶಾಂತಾ, ಜಂಟಿ ಕಾರ್ಯದರ್ಶಿ ಸುರೇಶ್.ಜಿ ಉಪಸ್ಥಿತರಿದ್ದರು. ಸಮ್ಮೇಳನದ ಕೊನೆಯಲ್ಲಿ ನೂತನ ಸಮಿತಿ ಚುನಾಯಿಸಲಾಯಿತು. ಅಧ್ಯಕ್ಷರಾಗಿ ಎ.ದೇವದಾಸ್, ಕಾರ್ಯದರ್ಶಿಯಾಗಿ ಡಾ.ಪ್ರಮೋದ್.ಎನ್, ಉಪಾಧ್ಯಕ್ಷರಾಗಿ ಎ.ಶಾಂತಾ, ಎನ್ ಲಕ್ಷ್ಮಿ, ಟಿ.ಪಾರ್ವತಮ್ಮ, ಹೊನ್ನೂರ್ ಬೀ, ಆರೋಗ್ಯ ಮೇರಿ, ನೀಲಮ್ಮ, ಚಿಟ್ಟೆಮ್ಮ ಹಾಗೂ ಹುಲುಗಪ್ಪ, ಖಜಾಂಚಿಯಾಗಿ ಜಿ.ಸುರೇಶ್ಹಾ ಗೂ 26 ಸದಸ್ಯರುಳ್ಳ ಕಾರ್ಯಕಾರಿ ಸಮಿತಿ ಚುನಾಯಿಸಲಾಯಿತು.
ಬೇಡಿಕೆಗಳು:-
1. ಎಲ್ಲಾ ಹೊರಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು, ಸರ್ಕಾರಿ ನೌಕರರೆಂದು ಪರಿಗಣಿಸಬೇಕು.
2.ಖಾಯಂಗೊಳಿಸುವವರೆಗೂ ಕಾರ್ಮಿಕರನ್ನು ಹೊರಗುತ್ತಿಗೆ ಬದಲಿಗೆ, ನೇರ ಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುವಂತೆ ಕ್ರಮಕೈಗೊಳ್ಳಬೇಕು.
3.ಅವಶ್ಯಕತೆ ಅನುಗುಣವಾಗ ಸಂಖ್ಯೆಯನ್ನು ಹೆಚ್ಚಿಸಬೇಕು
.4.ಗುತ್ತಿಗೆದಾರರು ಬದಲಾದಾಗಲೆಲ್ಲ, ಸಂಘದ ಮುಖಂಡರೊಂದಿಗೆ ಸಭೆ ನಡೆಸಿ, ಶಾಸನಬದ್ಧ ಎಲ್ಲಾ ಸೌಲಭ್ಯಗಳನ್ನು ನೀಡಲು ಕ್ರಮಕೈಗೊಳ್ಳಬೇಕು.
5.ಹೊರಗುತ್ತಿಗೆ ಕಾರ್ಮಿಕರಿಗೆಕನಿಷ್ಠ ವೇತನ ರೂ.28,000 ನಿಗದಿಗೊಳಿಸಬೇಕು.
6.ಈಗಿರುವ ಗುತ್ತಿಗೆದಾರರು ವೇತನ, ನೇಮಕಾತಿ ಆದೇಶ, ಪೇಮೆಂಟ್ ಸ್ಲಿಪ್, ಪಿ.ಎಫ್, ಇಎಸ್‌ಐ ಇನ್ನಿತರ ಸೌಲಭ್ಯ ನಿಗದಿತವಾಗಿ ನೀಡಬೇಕು.
7.ಗುತ್ತಿಗೆ ಕಾರ್ಮಿಕರಿಗೆ ಬಾಕಿಯಿರುವ ಅರಿರ‍್ಸ್ ನೀಡಬೇಕು.8.ಉದ್ಯಾನವನಗಳನ್ನು ನಿರ್ವಹಣೆ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಅಕೌಂಟ್ ಮೂಲಕ ವೇತನ ಸಂದಾಯ ಮಾಡಬೇಕು.
ಅವರಿಗೆ ಕನಿಷ್ಠ ವೇತನ, ಪಿ.ಎಫ್, ಇಎಸ್‌ಐ, ನೇಮಕಾತಿ ಆದೇಶ, ಪೇಮೆಂಟ್ ಸ್ಲಿಪ್, ಗುರುತಿನ ಚೀಟಿ ಮುಂತಾದ ಶಾಸನಬದ್ಧ ಸೌಲಭ್ಯಗಳನ್ನು ನೀಡಬೇಕು ಎಂದು ಬೇಡಿಕೆ ಇಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ