ಮಣ್ಣಿನ ಗಣೇಶಮೂರ್ತಿಯನ್ನೇ ಪೂಜಿಸಿ

Upayuktha
0


ಶ್ರೀ ಗಣೇಶನ ಮೂರ್ತಿಯನ್ನು ಜೇಡಿಮಣ್ಣಿನಿಂದ ಅಥವಾ ಆವೆಮಣ್ಣಿನಿಂದ ತಯಾರಿಸಬೇಕು. ಇತ್ತೀಚೆಗೆ ಭಾರ ಕಡಿಮೆಯಾಗಬೇಕು ಮತ್ತು ಅದು ಹೆಚ್ಚು ಆಕರ್ಷಕವಾಗಿ ಕಾಣಿಸಬೇಕೆಂದು ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನಿಂದ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಮಣ್ಣಿನ ಮತ್ತು ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಗಣೇಶ ಮೂರ್ತಿಯಲ್ಲಿ ವ್ಯತ್ಯಾಸವಿದೆ. ಪಾರ್ವತಿಯು ತಯಾರಿಸಿದ ಶ್ರೀ ಗಣೇಶನು ಮಹಾಗಣಪತಿಯ ಅವತಾರವಾಗಿದ್ದಾನೆ. ಅವಳು ಮೃತ್ತಿಕೆಯ (ಮಣ್ಣಿನ) ಆಕಾರ ಮಾಡಿ ಅದರಲ್ಲಿ ಶ್ರೀ ಗಣೇಶನ ಆವಾಹನೆಯನ್ನು ಮಾಡಿದಳು. (ಪುರಾಣದಲ್ಲಿ ಶ್ರೀ ಗಣೇಶನು ಮಣ್ಣಿನಿಂದ ನಿರ್ಮಾಣವಾಗಿದ್ದಾನೆ ಎಂದು ಹೇಳಲಾಗಿದೆ.) ‘ಭಾದ್ರಪದ ಶುಕ್ಲ ಚತುರ್ಥಿಯಂದು ಮಣ್ಣಿನ ಗಣೇಶಮೂರ್ತಿಯನ್ನು ತಯಾರಿಸಬೇಕು’, ಎಂದು ಶಾಸ್ತ್ರವಿಧಿಯಿದೆ.


1. ಮಣ್ಣಿನ ಮೂರ್ತಿಯಿಂದಾಗುವ ಲಾಭಗಳು :

 ಮಣ್ಣಿನ ಮೂರ್ತಿಯಲ್ಲಿ ಶ್ರೀ ಗಣೇಶನ ಪವಿತ್ರಕಗಳು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಿ ಕಾರ್ಯನಿರತವಾಗಿರುತ್ತವೆ: ‘ಮಣ್ಣಿನಲ್ಲಿರುವ ಪೃಥ್ವಿತತ್ತ್ವದಿಂದಾಗಿ ಮೂರ್ತಿಯು ಬ್ರಹ್ಮಾಂಡ ಮಂಡಲದಿಂದ ಆಕರ್ಷಿಸಿದ ದೇವತೆಯ ತತ್ತ್ವವು ಮೂರ್ತಿಯಲ್ಲಿ ದೀರ್ಘಕಾಲ ಕಾರ್ಯನಿರತವಾಗಿರುತ್ತದೆ. ತದ್ವಿರುದ್ಧವಾಗಿ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಮೂರ್ತಿಯಲ್ಲಿ ದೇವತೆಯ ತತ್ತ್ವವನ್ನು ಆಕರ್ಷಿಸುವ ಮತ್ತು ಕಾರ್ಯನಿರತವಾಗಿಡುವ ಕ್ಷಮತೆಯು ಕಡಿಮೆಯಿರುತ್ತದೆ. ಆದ್ದರಿಂದ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಮೂರ್ತಿಯಿಂದ ಆಧ್ಯಾತ್ಮಿಕ ಸ್ತರದಲ್ಲಿ ಹೆಚ್ಚೇನೂ ಲಾಭವಾಗುವುದಿಲ್ಲ !


ಮಣ್ಣಿನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ವಾಯುಮಂಡಲವು ಶುದ್ಧವಾಗುತ್ತದೆ !

‘ಮಣ್ಣಿನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ಅದು ಕೂಡಲೇ ನೀರಿನಲ್ಲಿ ಕರಗಿ, ಹರಿಯುವ ನೀರಿನಿಂದ ಸುತ್ತ ಮುತ್ತಲಿನ ಪರಿಸರದಲ್ಲಿ ದೂರದವರೆಗೆ ದೇವತೆಗಳ ಸಾತ್ತ್ವಿಕ ಲಹರಿಗಳನ್ನು ಕಡಿಮೆ ಕಾಲಾವಧಿಯಲ್ಲಿ ಪ್ರಕ್ಷೇಪಿಸುತ್ತದೆ. ಇದರಿಂದ ಸಂಪೂರ್ಣ ಪರಿಸರದ ವಾಯುಮಂಡಲ ಶುದ್ಧವಾಗುತ್ತದೆ. ಈ ಪ್ರಕ್ರಿಯೆಯಿಂದ ಸಮಷ್ಟಿ ಸ್ತರದಲ್ಲಿ ಲಾಭವಾಗಲು ಸಹಾಯವಾಗುತ್ತದೆ. !


ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಮೂರ್ತಿಯಿಂದಾಗುವ ಹಾನಿ !

ಮೂರ್ತಿಯ ವಿಸರ್ಜನೆಯು ಸರಿಯಾಗಿ ಆಗುವುದಿಲ್ಲ:

‘ಪ್ಲಾಸ್ಟರ್ ಆಫ್ ಪ್ಯಾರಿಸ್’ ನೀರಿನಲ್ಲಿ ಸಹಜವಾಗಿ ಕರಗದಿರುವುದರಿಂದ ವಿಸರ್ಜನೆಯ ನಂತರ ಮೂರ್ತಿಯು ನೀರಿನ ಮೇಲೆ ತೇಲುತ್ತದೆ. ಅನೇಕ ಕಡೆಗಳಲ್ಲಿ ವಿಸರ್ಜಿತವಾಗದ ಮೂರ್ತಿಗಳ ಅವಶೇಷಗಳನ್ನು ಕೆಲವೊಮ್ಮೆ ಒಟ್ಟು ಮಾಡಿ ಅವುಗಳ ಮೇಲೆ ‘ಬುಲ್ಡೋಝರ್’ನ್ನು ಚಲಾಯಿಸಲಾಗುತ್ತದೆ. ಹೀಗೆ ಮಾಡುವುದು ಶ್ರೀ ಗಣಪತಿಯ ಘೋರ ವಿಡಂಬನೆಯೇ ಆಗಿದೆ. ಯಾವ ಸನ್ಮಾನದಿಂದ ನಾವು ಶ್ರೀ ಗಣಪತಿಯನ್ನು ಆವಾಹನೆ ಮಾಡುತ್ತೇವೆಯೋ, ಅದೇ ಸನ್ಮಾನದಿಂದ ಅವನನ್ನು ಬೀಳ್ಕೊಡುವುದೂ ಆವಶ್ಯಕವಾಗಿದೆ. ಶ್ರೀ ಗಣಪತಿಯ ಘೋರ ವಿಡಂಬನೆಯಾಗುವುದರಿಂದ ಘೋರ ಪಾಪ ತಗಲುತ್ತದೆ.


ಜೇಡಿಮಣ್ಣು ಅಥವಾ ಆವೆಮಣ್ಣನ್ನು ಬಿಟ್ಟು ಬೇರೆ ವಸ್ತುಗಳಿಂದ ಮೂರ್ತಿಯನ್ನು ತಯಾರಿಸುವುದು ಧರ್ಮಶಾಸ್ತ್ರದ ವಿರುದ್ಧವಾಗಿದೆ!

ಇತ್ತೀಚೆಗೆ ತೆಂಗಿನಕಾಯಿ, ಬಾಳೆಹಣ್ಣು, ಅಡಿಕೆ, ನಾಣ್ಯ, ‘ಸಿರಿಂಜ್’ ಮುಂತಾದ ವಸ್ತುಗಳಿಂದಲೂ ಶ್ರೀ ಗಣೇಶಮೂರ್ತಿಯನ್ನು ತಯಾರಿಸುತ್ತಾರೆ. ಇಂತಹ ವಸ್ತುಗಳಿಂದ ಮೂರ್ತಿಯನ್ನು ತಯಾರಿಸುವುದು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ. ಇಂತಹ ಮೂರ್ತಿಯ ಕಡೆಗೆ ಶ್ರೀ ಗಣೇಶನ ಪವಿತ್ರಕಗಳು ಆಕರ್ಷಿಸುವುದಿಲ್ಲ.


‘ಇಕೋ ಫ್ರೆಂಡ್ಲಿ’ ಗಣೇಶಮೂರ್ತಿಗಳ ಬಗೆಗಿನ ವಂಚನೆಯಿಂದ ಎಚ್ಚರ!

ಇತ್ತೀಚೆಗೆ ಕೆಲವು ಸಂಸ್ಥೆಗಳು ‘ಇಕೋ-ಫ್ರೆಂಡ್ಲಿ (‘ಇಕಾಲಾಜಿಕಲ್ ಫ್ರೆಂಡ್ಲಿ’, ಅಂದರೆ ಪರಿಸರ ಸ್ನೇಹಿ) ಶ್ರೀ ಗಣೇಶಮೂರ್ತಿ’ಗಳನ್ನು ತಯಾರಿಸಲು ಆಹ್ವಾನಿಸುತ್ತಾರೆ. ಅವುಗಳಲ್ಲಿ ಕೆಲವು ಮೂರ್ತಿಗಳನ್ನು ಕಾಗದದ ಮುದ್ದೆಗಳಿಂದ ತಯಾರಿಸಲಾಗುತ್ತದೆ. ಇದು ಅಶಾಸ್ತ್ರೀಯವಂತೂ ಆಗಿದೆ, ಹಾಗೆಯೇ ಪರಿಸರಕ್ಕೆ ಹಾನಿಕರಕವೂ ಆಗಿದೆ; ಏಕೆಂದರೆ ಕಾಗದದ ಮುದ್ದೆಗಳು ನೀರಿನಲ್ಲಿರುವ ಪ್ರಾಣವಾಯುವನ್ನು ಹೀರುತ್ತವೆ ಮತ್ತು ಜೀವಗಳಿಗೆ ಹಾನಿಕರವಾದ ‘ಮಿಥೇನ್’ ವಾಯುವನ್ನು ನಿರ್ಮಿಸುತ್ತವೆ. ಇಂತಹ ಸಂಸ್ಥೆಗಳಿಂದ ಮಾಡಲಾಗಿರುವ ನಿಸರ್ಗದ ವಿಚಾರವು ಕೇವಲ ಮೇಲುಮೇಲಿನದ್ದಾಗಿರುತ್ತದೆ. ಹಿಂದೂ ಧರ್ಮಶಾಸ್ತ್ರವು ನಿಸರ್ಗದ ರಕ್ಷಣೆಯೊಂದಿಗೆ ಮಾನವನ ಸರ್ವಾಂಗೀಣ ಉನ್ನತಿಯ ವಿಚಾರವನ್ನೂ ಮಾಡಿರುತ್ತದೆ ಎಂಬುದನ್ನು ಗಮನದಲ್ಲಿಡಿ.


ಧರ್ಮಶಾಸ್ತ್ರಕ್ಕನುಸಾರ ತರಬೇಕಾದ ಜೇಡಿಮಣ್ಣಿನ ಮೂರ್ತಿಯು ದುಬಾರಿಯಾಗಿರುತ್ತದೆ, ಈ ರೀತಿ ಹೇಳುವುದು ಕುಂಟುನೆಪವಾಗಿದೆ. ಪ್ರತಿಯೊಂದು ಕುಟುಂಬದಲ್ಲಿ ಗಣೇಶೋತ್ಸವಕ್ಕಾಗಿ ಆಗುವ ಒಟ್ಟು ಖರ್ಚಿನಲ್ಲಿ (ಉದಾ.ಆಧುನಿಕ ಅಲಂಕಾರ, ಕುಟುಂಬದವರಿಗೆ ಬಟ್ಟೆಗಳ ಖರೀದಿ ಇತ್ಯಾದಿ) ಮೂರ್ತಿಯ ಖರೀದಿಗಾಗಿ ಆಗುವ ಖರ್ಚು ಅತ್ಯಲ್ಪವಾಗಿರುತ್ತದೆ. ಶ್ರೀ ಗಣೇಶನನ್ನು ಪೂಜಿಸುವುದರ ಉದ್ದೇಶವು ಕುಟುಂಬದಲ್ಲಿನ ಸದಸ್ಯರಿಗೆ ಮೂರ್ತಿಯಿಂದ ಗಣೇಶತತ್ತ್ವ ಸಿಗುವುದಾಗಿದೆ. ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಮೂರ್ತಿಯಿಂದ ಈ ಲಾಭ ಸಿಗುವುದು ಸಾಧ್ಯವಿಲ್ಲ.


(ಆಧಾರ: ಸನಾತನ ಸಂಸ್ಥೆ ನಿರ್ಮಿಸಿದ ಕಿರುಗ್ರಂಥ ‘ಶ್ರೀ ಗಣೇಶಮೂರ್ತಿ ಶಾಸ್ತ್ರಾನುಸಾರ ಇರಬೇಕು’)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top