ವ್ಯಾಸಪೀಠ-10: ಕನ್ನಡ ಕಾವ್ಯದ ಶ್ರೀಮಂತಿಕೆ ತೋರುಗಂಬ- ಕನ್ನಡ ಕಾವ್ಯಗಳ ಗೆಜ್ಜೆನಾದ

Upayuktha
0


ಕೃತಿ ನಿಜಕ್ಕೂ ವಿಶಿಷ್ಟ ಎನಿಸುವಂಥದ್ದು, ಈ ವೈಶಿಷ್ಟ್ಯ ಬಹುಮುಖಿ ಆದದ್ದು, ಇದೊಂದು ಸಂಕಲನ ಕೃತಿಯಾದರು ವಾರ್ಷಿಕ ಪರೀಕ್ಷೆಯ ಪಠ್ಯಪುಸ್ತಕದಂತೆ ಕೇವಲ ನಾಲ್ಕಾರು ಕವಿಗಳ ಕವನಗಳ ಕಿರು ಸಂಕಲನವಲ್ಲ. 5ನೇ ಶತಮಾನದಿಂದ 20ನೇ ಶತಮಾನದ ಆಚೆಗೂ ಮೊರೆಯುತ್ತಾ ಹರಿಯುತ್ತಿರುವ ಕನ್ನಡ ಕಾವ್ಯ ವಾಹಿನಿಯ ಜೀವಂತಿಕೆಯನ್ನು ಬೆಡಗು ಬಿನ್ನಾಣಗಳನ್ನು ರಸಸ್ಯಂದಿ ಆದ ಆಪ್ತತೆ ಅರ್ಧತೆ ವೈಶಾಲ್ಯ ಮುಂಗಾಣ್ಕೆಗಳನ್ನು ಹೃದಯಸ್ಪರ್ಶಿಯಾಗಿಸುವ ಬೃಹತ್ ಸಂಪುಟ ಇದು.


ಏನುಂಟು ಏನಿಲ್ಲ, ಈ ಕನ್ನಡ ಶಾರದೆ ಗೆಜ್ಜೆನಾದದಲ್ಲಿ ಹೀಗಾಗಿ ಈ ಕೃತಿ ನಿಜಕ್ಕೂ ಸುಕೃತಿ,ತನ್ನ ಬೃಹತ್ತು ಮಹತ್ವ ಹಾಗೂ ದರ್ಶನದ ವೈಭವದಲ್ಲಿ ಉತ್ತಮ ಆಕರ ಗ್ರಂಥ. ಮುಂದಿನ ಸಂಶೋಧನೆ ಪರಿಶೀಲನೆ ಸೂಕ್ಷ್ಮತಿ ಸೂಕ್ಷ್ಮ ಅಧ್ಯಯನ, ವಿಮರ್ಶೆ, ನಿಬಂಧ, ಮಹಾಪ್ರಬಂಧಗಳಿಗಾಗಿ ಸಮೃದ್ಧ ಆಹಾರ ಈ ಸಂಕಲನದಲ್ಲಿ ದೊರೆಯುತ್ತದೆ.


ಇಂತಹ ಮೇರು ಗಾತ್ರದ ಕೃತಿಯ ಕನಸು ಕಂಡವರು ವೃತ್ತಿಯಿಂದ ವಾಣಿಜ್ಯ ತೆರಿಗೆ ಯಂತಹ ಅಪ್ಪಟ ವ್ಯವಹಾರದ ಸರ್ಕಾರಿ ನೌಕರಿಯಲ್ಲಿದ್ದ ಎಚ್ ಎಸ್ ಗೋವಿಂದೇಗೌಡರ ಸಾರಸ್ವತ ತಪಸ್ಸು. ಕನ್ನಡದ ಕೀರ್ತಿಪುಂಜ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ ಎ ವಿ ಸೂರ್ಯನಾರಾಯಣ ಸ್ವಾಮಿಗಳ ದೈಹಿಕ ಮತ್ತು ಮಾನಸಿಕ ಶ್ರಮದ ಒಂದೊಂದು ಬೆವರಿನ ಹನಿಯೂ ಮುತ್ತಾಗಿ ಆ ಮುತ್ತುಗಳು ಕನ್ನಡಾಂಬೆಯ ಕೊರಳಿಗೆ ಹಾರವಾಗಿ ಕಾಲ ಗೆಜ್ಜೆಯ ಕಿಂಕಿಣಿ ನಾದವಾಗಿ ಹೊರಹೊಮ್ಮಿದೆ.


ನಾಡು ನುಡಿಗಳ ಬಗೆಗೆ ಅಭಿಮಾನ ಮೂಡಿಸುವ ಪಂಕ್ತಿಗಳು ಶಾಸನ ಮಹಾಕಾವ್ಯ ಬಿಡಿ ಕಾವ್ಯ ಆಧುನಿಕ ಭಾವಗೀತೆಗಳಿಂದ ಆಯ್ಕೆ ಶಾಸನಗಳ ಅಥವಾ ಕವಿಗಳ ಹೆಸರು ಕಾಲದ ಉಪಯುಕ್ತ ಅಡಿ ಮಾಹಿತಿ ಇವುಗಳನ್ನು ತೋರಣ ಎಂಬ ಸಾರ್ಥಕ ಪದದಿಂದ ಅಂಚು ಕಟ್ಟಿದ್ದಾರೆ. ಪರ್ಪಂಚ ಇರೋತನಕ ಮುಂದೆ ಕನ್ನಡ ಪದಗೊಳ್ ನುಗ್ಲಿ ಎಂಬ ಕವಿ ರಾಜರತ್ನಂ ರವರ ಭರತ ವಾಕ್ಯ ಒಂದನೇ ಗೆಜ್ಜೆ ವಿಭಾಗಕ್ಕೆ ಇದೆ. ಎರಡನೆಯ ಗೆಜ್ಜೆ ಕವಿ ಶೈಲಿಯ ಸೊಗಸು ಸೊಗಡುಗಳ ಪರಿಚಯ.


ಮೂರನೆಯ ಗೆಜ್ಜೆಯ ಲಾಸ್ಯವೇ ಬೇರೆ 11ನೇ ಶತಮಾನಕ್ಕೆ ಹೊರಳಿದ ಕನ್ನಡ ಕಾವ್ಯ, ವಚನ, ಕೀರ್ತನೆ, ಉಗಾಭೋಗ ಸುಳಾದಿ, ದಂಡಕ, ವೃತ್ತನಾಮ ಮುಖ್ಯವಾಗಿ ಸಮಾಜ ಪರವಾದ ಕವಿ ಮನೋಧರ್ಮ, ತತ್ವಪದ, ನೀತಿ ಪದ್ಯಗಳ ಅಂತರಂಗದ ಅನುಭಾವ ಬೆಡಗಿನ ಮಾತು, ಚುಟಕ, ಒಗಟು ಗೋಡೆ ಬರಹ, ಆಟೋ ಹಿಂಭಾಗದ ಬರಹ ಇಂತಹ ವೈವಿಧ್ಯ.


ನಾಲ್ಕನೆಯದು ಕಾವ್ಯರಸಾಯನವೇ ಸರಿ, ಲಾವಣಿ ಚಲನಚಿತ್ರ ಗೀತೆಗಳಿವೆ. ಐದನೇ ಲಾಸ್ಯದಲ್ಲಿ ಚಿತ್ರಕವಿತ್ವ ಸಮಸ್ಯ ಪೂರಣ ಬೌದ್ಧಿಕ ಚುರುಕು ಮುಟ್ಟಿಸುವ ಮುಂಡಿಗೆಗಳಿವೆ. ಜನಪದ ಗೀತೆಗಳ ಸಂಗ್ರಹ ಆರನೇ ಲಾಸ್ಯದಲ್ಲಿದೆ. ಏಳನೆಯ ಗೆಜ್ಜೆಯಲ್ಲಿ ಯಕ್ಷಗಾನ ರಂಗಗೀತೆಗಳ ಆಲಾಪನ. ಎಂಟನೇ ಗೆಜ್ಜೆ ಭಾವಗೀತೆಗಳ ಸುಗಂಧ ಸಿಂಚನ ಸಂಖ್ಯೆ ಸತ್ವ ಎರಡರಲ್ಲೂ ವಿಫುಲವಾಗಿರುವ ಭಾವಗೀತೆಯ ಸಾಗರದಿಂದ ಮುತ್ತುಗಳ ಆಯ್ಕೆ. 9ನೇ ಗೆಜ್ಜೆ ಕನ್ನಡ ಗಂಭೀರ ಹಾಸ್ಯ ಗೀತಾಂಜಲಿಯ ನಗುನಂದನ. ಹತ್ತನೆಯ ಗೆಜ್ಜೆ ಉಲ್ಲೇಖನೀಯ ಕವಿಸೂಕ್ತಿಗಳ ಮುತ್ತಿನ ಹರಳುಗಳು, ಇಲ್ಲಿಯೂ ಪರಂಪರೆಯ ಶ್ರುತಿ ನಿರಂತರ.


ಯಾವುದೇ ಭಾಷೆಗೆ ಭೂಷಣಪ್ರಾಯವಾದ ವಿಶಿಷ್ಟ ಕೃತಿ ಇದು ಎಂಬುದಂತೂ ನಿಜ. ಯಾವುದೇ ಪೂರ್ವಾಗ್ರಹಗಳಿಲ್ಲದೆ ಔದಾರ್ಯದ ಆಯ್ಕೆ ಆಕರ್ಷಕ ಶೀರ್ಷಿಕೆಗಳಿರುವ ಈ ಹೆಬ್ಬೊತ್ತಿಗೆಯ ಸಂಪುಟ ಒಂದು ಮತ್ತು ಎರಡಲ್ಲಿ ಒಟ್ಟು 2,526 ಪುಟಗಳಿವೆ. ಇಲ್ಲಿ ಹಳೆಯ ಹೊಸ ಪ್ರಸಿದ್ಧ ಅಪ್ರಸಿದ್ಧ ಭೇದವಿಲ್ಲದೆ ಕನ್ನಡದಲ್ಲಿ ಸಾರವತ್ತಾದ ರಚನೆಗಳು ಏನಿದೆಯೋ ಅವನ್ನೆಲ್ಲ ಸಾಹಿತ್ಯಪ್ರಿಯ ಸಹೃದಯರಿಗೆ ಸೊಗಸಾದ ಸವಿಯೂಟವನ್ನು ಇಲ್ಲಿ ಉಣಪಡಿಸಿದ್ದಾರೆ.


ಒಟ್ಟಾರೆ ಈ ಕೃತಿ ಅಕ್ಷರ ಶಾಸನ ಬಂಗಾರದ ಪುಟಗಳ ಕನ್ನಡ ಸಂಸ್ಕೃತಿಯ ಕನ್ನಡಿ. ಒಂದು ಸಂಸ್ಥೆ ಮಾಡಬೇಕಾದ ಕಾರ್ಯವನ್ನು ಅವಿರತ ಶ್ರಮದಿಂದ ಯಶಸ್ವಿಯಾಗಿ ಕನ್ನಡ ಸಾಹಿತ್ಯ ಪಿಪಾಸುಗಳಾದ ಇಬ್ಬರು ಸಂಗ್ರಾಹಕರು ಕನ್ನಡ ಸಾಹಿತ್ಯದ ವಿವಿಧ ಮಜಲನ್ನು ಕಾಲಕ್ರಮದಲ್ಲಿ ಸಂಯೋಜಿಸಿ ಸಿಂಹಾವಲೋಕನದ ಕೈಂಕರ್ಯ ಸಾರ್ಥಕವಾಗಿದೆ.


ಸುವರ್ಣ ಕರ್ನಾಟಕದ ಸಂಭ್ರಮಾಚರಣೆಯಲ್ಲಿ ಸಮಸ್ತ ಕನ್ನಡಿಗರ ಮನ ಮನೆಗಳಲ್ಲಿ ರಾರಾಜಿಸಿ ಸುನಾದದ ಗೆಜ್ಜೆಗಳ ನಾದ ಮೂಡಿ ಅವರಿಗೆ ಹರ್ಷಾನಂದ ಉಂಟುಮಾಡಲೆಂದು ಕನ್ನಡ ತಾಯಿಯಲ್ಲಿ ಪ್ರಾರ್ಥನೆ.


ಕೃತಿಯ ಹೆಸರು: ಕನ್ನಡ ಕಾವ್ಯಗಳ ಗೆಜ್ಜೆನಾದ (ಸಂಪುಟ  ಒಂದು ಮತ್ತು ಎರಡು)

ಸಂಗ್ರಹಕರು: ಪ್ರೊ ಎ ವಿ ನಾರಾಯಣಸ್ವಾಮಿ ಮತ್ತು ಎಚ್ ಎಸ್ ಗೋವಿಂದ ಗೌಡ 

ಪುಟಗಳು :1348+1138

ಬೆಲೆ: ರೂ 1400+1200

ಪ್ರಕಾಶಕರು :ಹನ್ಯಾಳು ಪ್ರಕಾಶನ, ಮೈಸೂರು 

ಪ್ರತಿಗಳಿಗೆ ಸಂಪರ್ಕಿಸಿ 9845861887


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top