ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ
ಚಿತ್ರಗಳು: ನೀರ್ನಳ್ಳಿ ಗಣಪತಿ; ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ
ಪ್ರವರ್ಷಣ ಪರ್ವತದ ಶಿಖರದಲ್ಲಿ ಕುಳಿತಿದ್ದ ರಾಮನಿಗೆ ಸೀತೆಯ ನೆನಪಾಗಿ ದುಃಖ ಉಮ್ಮಳಿಸಿ ಬಂತು. ಆಕೆಯ ಅಳಿವು-ಉಳಿವುಗಳ ಬಗೆಗೆ ಚಿಂತಿತನಾಗಿ ಲಕ್ಷ್ಮಣನಲ್ಲಿ ಹೇಳಿ ಅತ್ತನು. ರಾಕ್ಷಸನ ಸೆರೆಯಲ್ಲಿರುವ ಅವಳು ಹೇಗೆ ದಿನಗಳನ್ನು ಕಳೆಯುತ್ತಿರಬಹುದೆಂಬ ಚಿಂತೆಯೂ ಅವನನ್ನು ಬಾಧಿಸಿತು. ಅದರೊಂದಿಗೆ ಮಳೆಗಾಲ ಕಳೆದರೂ ನೆರವಿಗೆ ಬಾರದ ಸುಗ್ರೀವನ ಕೃತಘ್ನತೆಯು ಕಾಡಿತು, ಸಿಟ್ಟಿಗೆಬ್ಬಿಸಿತು. ಅಣ್ಣನ ನೋವಿನಿಂದ ನೊಂದ ಲಕ್ಷ್ಮಣನು ಸುಗ್ರೀವನನ್ನು ಈಗಲೇ ಕೊಂದು ಬರುತ್ತೇನೆಂದು ಬಿಲ್ಲು- ಬಾಣಗಳೊಂದಿಗೆ ಹೊರಟನು. ಸಿಟ್ಟಿಗೆದ್ದ ತಮ್ಮನನ್ನು ರಾಮನು ಸಂತೈಸಿ- ಸುಗ್ರೀವನು ನನ್ನ ಪ್ರಿಯ ಗೆಳೆಯ. ಅವನನ್ನು ಕೊಲ್ಲಬಾರದು. ಅದರ ಬದಲು 'ನೀನು ಉಪಕಾರವನ್ನು ಮರೆತೆ ಎಂದಾದರೆ ವಾಲಿಯು ಹೋದ ಲೋಕಕ್ಕೆ ನಿನ್ನನ್ನೂ ಕಳಿಸಬೇಕಾಗುತ್ತದೆ' ಎಂದು ಹೇಳಿ ಎಚ್ಚರಿಸಿದರೆ ಸಾಕು. ಅವನು ನಮ್ಮ ದಾರಿಗೆ ಬರುವನು- ಎಂದು ಲಕ್ಷ್ಮಣನಿಗೆ ತಿಳಿಯ ಹೇಳಿದ. ಲಕ್ಷ್ಮಣನಿಗೆ ಇದೇ ಸರಿಯಾದದ್ದೆನಿಸಿ ಹಿಡಿದ ಬಿಲ್ಲು-ಬಾಣಗಳೊಂದಿಗೆ ಕೋಪೋದ್ರಿಕ್ತನಾಗಿ ಕಿಷ್ಕಿಂಧೆಯತ್ತ ಹೊರಟನು.
ಕಿಷ್ಕಿಂಧೆಗೆ ಬಂದ ಲಕ್ಷ್ಮಣನು ಬಿಲ್ಲಿನ ಸಿಂಜಿನಿಯ ಝೇಂಕಾರವನ್ನು ಮಾಡಿದ. ಅವನನ್ನರಿಯದ ಕಪಿಗಳು ಅವನ ಮೇಲೆ ದಾಳಿಯಿಡಲು ಕಲ್ಲು- ಮರಗಳನ್ನೆತ್ತಿದಾಗ ಆ ಕಪಿಗಳನ್ನೆಲ್ಲ ಸಂಹರಿಸುವ ರೀತಿಯಲ್ಲಿ ಲಕ್ಷ್ಮಣನು ಬಾಣ ಹೂಡಿದ. ಅದೇ ಸಮಯದಲ್ಲಿ ಲಕ್ಷ್ಮಣನ ಆಗಮನವನ್ನು ತಿಳಿದ ಅಂಗದನು ಧಾವಿಸಿ ಬಂದು, ಕಪಿಗಳನ್ನು ತಡೆದು ನಿಲ್ಲಿಸಿ, ಲಕ್ಷ್ಮಣನಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿದ. ಲಕ್ಷ್ಮಣನು ಅವನನ್ನು ಬಿಗಿದಪ್ಪಿ, ರಾಮನ ಅಸಮಾಧಾನ- ಕೋಪಗಳನ್ನು ಸುಗ್ರೀವನಿಗೆ ತಿಳಿಸಲು ಹೇಳಿದ. ಅಂಗದನು ರಾಮ-ಲಕ್ಷ್ಮಣರ ಕೋಪದ ವಿಚಾರವನ್ನು ಹೇಳಿದಾಗ ಸುಗ್ರೀವನು ಭಯಗೊಂಡನು.
ಅವನು, ಹನುಮ-ತಾರೆಯರನ್ನು ಲಕ್ಷ್ಮಣನನ್ನು ಸಮಾಧಾನ ಪಡಿಸಿ ಅಂತಃಪುರಕ್ಕೆ ಕರೆತರಲು ಕಳಿಸಿದನು. ಅವರೊಂದಿಗೆ ಲಕ್ಷ್ಮಣನು ಬಂದಾಗ ಸುಗ್ರೀವನು ಪತ್ನಿ ರುಮೆಯೊಂದಿಗೆ ಹಾಸಿಗೆಯಲ್ಲಿದ್ದನು. ಸಿಟ್ಟಿಗೆದ್ದ ಲಕ್ಷ್ಮಣನು, ನಿನ್ನನೀಗಲೆ ಶಿಕ್ಷಿಸುತ್ತೇನೆಂದು ಗದರಿದಾಗ ಹನುಮನು ಸಂತೈಸಿ, ಕೋಟಿ ಸಂಖ್ಯೆಯ ಕಪಿಗಳು ಲೋಕದ ಮೂಲೆಮೂಲೆಗಳಿಂದ ರಾಮನಿಗೆ ನೆರವಾಗಲು ಕಿಷ್ಕಿಂಧೆಗೆ ಬರುತ್ತಿರುವ ವಿಷಯವನ್ನು ತಿಳಿಸಿದನು. ಸಮಾಧಾನಗೊಂಡ ಲಕ್ಷ್ಮಣನೊಡನೆ ಸುಗ್ರೀವನು ರಥವನ್ನೇರಿ ಶ್ರೀರಾಮನ ಬಳಿಗೆ ಬಂದನು. ಅವರೊಡನೆ ಕಪಿವೀರರು,ಕರಡಿವೀರರೂ ಇದ್ದರು.
ಸುಗ್ರೀವನು ಶ್ರೀರಾಮನಿಗೆ ನೀಲ, ನಳ, ಗವಯ, ಗವಾಕ್ಷ, ಮೈಂದ, ಸುಷೇಣ, ತಾರ, ಕೇಸರಿ, ಶರಭ, ಜಾಂಬವಂತ ಮುಂತಾದವರನ್ನು ಪರಿಚಯಿಸಿದನು. ಅವರ ಶಕ್ತಿ- ಸಾಮರ್ಥ್ಯಗಳನ್ನು ವಿವರಿಸಿದನು. ಒಂದು ಆನೆಯ ಬಲದಿಂದ ಹಿಡಿದು ಹತ್ತುಸಾವಿರ ಆನೆಗಳ ಬಲವಿರುವ ಕಪಿಗಳುಳ್ಳ ಕಪಿಸೇನೆಯ ಬಲ-ಬೆಂಬಲಗಳ ವಿಚಾರವನ್ನು ಮನದಟ್ಟು ಮಾಡಿ, ರಾಮನ ಮನವನ್ನೊಲಿಸಿಕೊಂಡನು. ರಾಮನಿಗೆ ಸಂತಸವಾಯಿತು. ಆನಂದದ ಕಣ್ಣೀರು ಹರಿಸುತ್ತಾ "ಸುಗ್ರೀವ, ನೀನೇ ಇವರನ್ನು ಸೀತಾನ್ವೇಷಣೆಗೆ ನಿಯೋಜಿಸಿ ಅಪ್ಪಣೆ ಮಾಡು" ಎಂದನು. ಸುಗ್ರೀವನು ಎಲ್ಲ ದಿಕ್ಕುಗಳಿಗೆ ಸೀತಾನ್ವೇಷಣೆಗಾಗಿ ಕಪಿವೀರರನ್ನು ಕಳಿಸಿದ. ದಕ್ಷಿಣ ದಿಕ್ಕಿನತ್ತ ಜಾಂಬವಂತ, ಅಂಗದ, ಹನುಮ, ನಲ, ಸುರೇಶ, ಮೈಂದ, ದ್ವಿವಿದರನ್ನು ನೇಮಿಸಿ" ನೀವುಗಳು ಪ್ರಯತ್ನಮಾಡಿ ಶುಭ ಲಕ್ಷಣಳಾದ ಸೀತೆಯನ್ನು ಹುಡುಕಿರಿ. ನನ್ನ ಆಜ್ಞೆಯನ್ನು ಗೌರವಿಸಿ, ಒಂದು ತಿಂಗಳೊಳಗಾಗಿ ಇಲ್ಲಿಗೆ ಬನ್ನಿರಿ. ಸೀತೆಯನ್ನು ಕಾಣದೆ, ಒಂದು ತಿಂಗಳು ಮೀರಿದ ಮೇಲೆ ನೀವು ಬರುವುದು ಒಂದು ದಿನ ತಡವಾದರೂ ನೀವು ಮರಣದಂಡನೆಗೆ ಒಳಗಾಗುತ್ತೀರಿ" ಎಂದು ಎಚ್ಚರಿಸಿ ಕಳಿಸಿದನು.
ಕಪಿಗಳೆಲ್ಲರೂ ಹೊರಟರು. ರಾಮನು ಹನುಮನನ್ನು ಕರೆದು ತನ್ನ ಮುದ್ರೆಯುಂಗುರವನ್ನು ಅವನಿಗೆ ಕೊಟ್ಟನು. ಅವನಲ್ಲಿ "ಹನುಮ, ನನ್ನ ನಾಮಾಂಕಿತ ಈ ಉಂಗುರವನ್ನು ಸೀತೆಗೆ ನಿನ್ನ ಗುರುತಿಗಾಗಿ ಕೊಡು. ನೀನು ಮಾತ್ರವೇ ಈ ಕೆಲಸದಲ್ಲಿ ವಿಶ್ವಾಸಾರ್ಹನು. ಯಾಕೆಂದರೆ ನಿನ್ನ ಬಲ-ಪರಾಕ್ರಮಗಳನ್ನು ನಾನು ಚೆನ್ನಾಗಿ ಬಲ್ಲೆನು. ಹೋಗಿ ಬನ್ನಿ, ಶುಭವಾಗಲಿ" ಎಂದು ಕಳಿಸಿಕೊಟ್ಟನು.
ಸೀತೆಯನ್ನು ಹುಡುಕುತ್ತ ಕಾಡು- ಮೇಡುಗಳನ್ನು ಸುತ್ತುತ್ತಾ ಇದ್ದ ಕಪಿಗಳು ಬಾಯಾರಿ ಬಸವಳಿದರು. ಆಗ ಅವರು ಗುಹೆಯೊಂದರಿಂದ ಒದ್ದೆರೆಕ್ಕೆಯ ಹಕ್ಕಿಗಳು ಹೊರಬರುವುದನ್ನು ನೋಡಿ ನೀರಿಗಾಗಿ ಒಳಹೊಕ್ಕರು. ಅದು ಒಂದು ಸ್ವರ್ಗಸಮಾನವಾದ ಉದ್ಯಾನವನವಾಗಿತ್ತು. ಅಲ್ಲಿ ಯುವತಿಯೊಬ್ಬಳು ಸಿಂಹಾಸನದಲ್ಲಿ ಕುಳಿತು ಯೋಗಾಭ್ಯಾಸದಲ್ಲಿ ನಿರತಳಾಗಿದ್ದಳು. ಅವಳಿಗೆ ವಂದಿಸಿದರು. ಅವಳು ಸ್ವಯಂಪ್ರಭೆ.ಅವಳಿಗೆ ಹನುಮನು ತಾವು ಬಂದ ವಿಚಾರವನ್ನು ತಿಳಿಸಿದ. ಬಳಲಿದ ಕಪಿಗಳನ್ನು ಅವರು ತೃಪ್ತಿಯಾಗುವಂತೆ ಅನ್ನಾಹಾರಗಳನ್ನಿತ್ತು ಉಪಚರಿಸಿದಳು. ಅವಳು "ನಾನು ವಿಶ್ವಕರ್ಮ ಮಗಳಾದ ಹೇಮೆಯ ಸಖಿ, ಅವಳ ಮಾರ್ಗದರ್ಶನದಂತೆ ಇಲ್ಲಿ ಮೋಕ್ಷಕ್ಕಾಗಿ ನಾರಾಯಣನನ್ನು ಕುರಿತು ತಪಸ್ಸು ಮಾಡುತ್ತಿದ್ದೇನೆ. ಅವಳು ನನ್ನಲ್ಲಿ- 'ಲೋಕರಕ್ಷಣೆಗಾಗಿ ನಾರಾಯಣನು ಮಾನವನಾಗಿ- ರಾಮನಾಗಿ ಜನಿಸುವನು. ಅಪಹರಿಸಲ್ಪಟ್ಟ ಅವನ ಪತ್ನಿಯನ್ನು ಹುಡುಕುತ್ತ ಕಪಿಗಳು ಇಲ್ಲಿಗೆ ಬಂದು ರಾಮನನ್ನು ತೋರಿಸುವರು. ಅವನ ದರ್ಶನವನ್ನು ಮಾಡಿ ನೀನು ಮುಕ್ತಳಾಗು' ಎಂದಿದ್ದಳು. ಅದರಂತೆ ನೀವು ಬಂದಿದ್ಡೀರಿ. ಉಂಡಿದ್ದೀರಿ. ಈಗ ಕಣ್ಮುಚ್ಚಿ. ನಿಮ್ಮನ್ನು ನೀವು ಬಂದ ಕಾಡಿಗೆ ಬಿಡುತ್ತೇನೆ" ಎಂದಳು. ಕಪಿಗಳು ಅವಳು ಹೇಳಿದಂತೆ ಮಾಡಿದರು, ಕಾಡನ್ನು ಸೇರಿದರು. ಸೀತಾನ್ವೇಷಣೆಯನ್ನು ಮುಂದುವರೆಸಿದರು.
ಸ್ವಯಂಪ್ರಭೆಯು ರಾಮನನ್ನು ಕಂಡು, ಭಕ್ತಿಯಿಂದ ಸ್ತುತಿಸುತ್ತಾ ವಂದಿಸಿದಳು. ರಾಮನು ಅವಳಿಗೆ ಬದರಿಕಾಶ್ರಮಕ್ಕೆ ಹೋಗಲು ಹೇಳಿದ. ಅವಳು ಅಲ್ಲಿಗೆ ಹೋಗಿ ತಪಸ್ಸು ಮಾಡಿ, ರಾಮನ ಧ್ಯಾನದಲ್ಲಿ ತಲ್ಲೀನಳಾಗಿ, ಶರೀರವನ್ನು ತ್ಯಜಿಸಿ ಪರಮಪದವನ್ನು ಪಡೆದಳು.
ಮುಂದುವರಿಯುವುದು....
- ವಿಶ್ವ ಉಂಡೆಮನೆ, ಬೆಳ್ತಂಗಡಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ