ಹಿರಿಯ ವಿದ್ಯಾರ್ಥಿಗಳಾದ ಕೇಂದ್ರ ಸರಕಾರದ ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ಸೆಂಟ್ರಲ್ ಬ್ಯುರೋ ಆಫ್ ಕಮ್ಯೂನಿಕೇಶನ್ ನ ಮಂಗಳೂರು ಕ್ಷೇತ್ರ ಪ್ರಚಾರ ಅಧಿಕಾರಿ ಜಿ. ತುಕಾರಾಮ್ ನಿಡ್ಲೆ (ಜಿತು ನಿಡ್ಲೆ), ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕ, ಉಜಿರೆ ಶ್ರೀ ಧ.ಮಂ. ಕಾಲೇಜಿನ ವಿಶ್ರಾಂತ ಕುಲಸಚಿವ ಡಾ. ಬಿ.ಪಿ. ಸಂಪತ್ ಕುಮಾರ ಹಾಗೂ ಮಂಗಳೂರಿನ ನ್ಯಾಶನಲ್ ಟ್ಯುಟೋರಿಯರ್ ಕಾಲೇಜಿನ ಪ್ರಾಂಶುಪಾಲ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯು.ಹೆಚ್. ಖಾಲಿದ್ ಮುಖ್ಯ ಅತಿಥಿಗಳಾಗಿದ್ದರು.
ಜಿ. ತುಕಾರಾಮ್ ನಿಡ್ಲೆ ಮಾತನಾಡಿ, “ನೆನಪು ಮಾಡಿಕೊಳ್ಳುವುದಕ್ಕಿಂತ, ನೆನಪಿನ ಜೊತೆ ಬದುಕುವವರು ನಾವು. ಎಸ್.ಡಿ.ಎಂ. ಕಾಲೇಜಿನ ನೆನಪು ನನಗೆ ಮತ್ತೆ ಮತ್ತೆ ಆಗುತ್ತಿರುತ್ತದೆ” ಎಂದರು.
“ಆ ಕಾಲದಲ್ಲಿ ಇಲ್ಲಿನಷ್ಟು ಸುಸಜ್ಜಿತ ಗ್ರಂಥಾಲಯ ಬೇರೆ ಎಲ್ಲೂ ಇರಲಿಲ್ಲ. ಸಾಹಿತಿ ಕೆ.ಟಿ. ಗಟ್ಟಿ ಅವರ ಪ್ರೇರಣೆಯಿಂದ ನಾನು ಇಂಗ್ಲಿಷ್ ಪುಸ್ತಕ ಓದಲು ಆರಂಭಿಸಿದೆ. ನಾವು ‘ಲಹರಿ’ ಎಂಬ ಕೈ ಬರಹದ ಪತ್ರಿಕೆ ಪ್ರಾರಂಭಿಸಿದ್ದೆವು. ಕಾಲೇಜು ನನಗೆ ರಂಗಭೂಮಿ ಕ್ಷೇತ್ರದಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕವಾಗಿ ಬೆಳೆಯಲು ಹೇರಳ ಅವಕಾಶ ಕೊಟ್ಟಿದೆ” ಎಂದರು.
ಡಾ. ಬಿ.ಪಿ. ಸಂಪತ್ ಕುಮಾರ ಮಾತನಾಡಿ, “ಬೀಜವು ಭೂಮಿಗೆ ಬಿದ್ದು ಬೃಹತ್ ವೃಕ್ಷವಾಗುವ ರೀತಿಯಲ್ಲಿಯೇ ವಿದ್ಯೆ ಕೂಡ. ಅನ್ನದಾನಕ್ಕಿಂತ ಶ್ರೇಷ್ಠದಾನ ವಿದ್ಯಾದಾನ. ಓದಬೇಕು, ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹಂಬಲ ಮೂಡಿದ್ದೇ ಈ ಕಾಲೇಜಿಗೆ ಬಂದ ಬಳಿಕ. ಈ ಕಾಲೇಜು, ಸಿದ್ಧವನ ಗುರುಕುಲ ವಿದ್ಯೆಯನ್ನು ನೀಡಿ ನಮ್ಮ ಜೀವನ ರೂಪಿಸಿದೆ” ಎಂದರು.
“ನಿಮ್ಮ ಜೀವನದ ಯಶಸ್ಸು ಯಾವುದೆಂದರೆ ಅದು ನಿಮಗೆ ಸಿಗುವ ಅವಕಾಶವನ್ನು ಬಳಸಿಕೊಳ್ಳುವುದು. ನೀವು ಉತ್ತಮ ಕೆಲಸ ಮಾಡಿ. ಇದರಿಂದ ನಿಮಗೂ ನಿಮ್ಮ ಮುಂದಿನವರಿಗೂ ಶ್ರೇಯಸ್ಸು ಸಿಗುತ್ತದೆ” ಎಂದು ಕಿವಿಮಾತು ಹೇಳಿದರು. ಯು.ಹೆಚ್. ಖಾಲಿದ್ ಮಾತನಾಡಿ, “ನನ್ನೆಲ್ಲಾ ಸಾಧನೆಗೆ ಕಾರಣ ಎಸ್.ಡಿ.ಎಂ. ಕಾಲೇಜು. ನನ್ನ ಬದುಕನ್ನು ಬೆಳಗಿಸಿ ನನ್ನ ಮುಂದಿನ ಬದುಕಿಗೆ ದಾರಿ ಮಾಡಿಕೊಟ್ಟಿದೆ” ಎಂದರು.
“ಇಂದಿನ ಮಕ್ಕಳು ನಾಳೆಯ ಪ್ರಜೆಗಳು ಎಂಬ ಮಾತಿದೆ. ಹಾಗೆಯೇ ನಮ್ಮ ಶಕ್ತಿ, ಆಸಕ್ತಿ, ಕಾಳಜಿ, ಪ್ರಯತ್ನವನ್ನು ನಾವೇ ಮೆಚ್ಚಿಕೊಳ್ಳಬೇಕು. ವಿದ್ಯಾವಂತರಾಗಿ ನೀವು ಏನು ಬೇಕಾದರೂ ಮಾಡಿ. ಆದರೆ ಸುಳ್ಳುಗಾರರು, ಪುಂಡರು, ವಂಚಕರು, ಕುಡುಕರು, ಕಟುಕರು ಆಗಬೇಡಿ” ಎಂದರು.ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೀತಾಂಬರ ಹೆರಾಜೆ ಮಾತನಾಡಿ, “ಏನೇ ಆಗುವ ಮೊದಲು ನೀವು ಉತ್ತಮ ಮನುಷ್ಯರಾಗಿ, ನಿಮ್ಮ ಜೀವನದಲ್ಲಿ ಶಿಸ್ತು, ಗುರಿ ಇರಲಿ” ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಈಗಿನ ಮಕ್ಕಳ ಓದಿಗೆ ಸಹಾಯವಾಗಲಿ ಎಂದು ಸಹಾಯಧನ ನೀಡುತ್ತಿದ್ದಾರೆ. ಮಧ್ಯಾಹ್ನದ ಬಿಸಿ ಊಟಕ್ಕೆ ನೆರವು ನೀಡುತ್ತಿದ್ದಾರೆ. ಅವರು ನೀಡಿದ ಹಣದ ಮೌಲ್ಯವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.ಅತಿಥಿಗಳನ್ನು ಸನ್ಮಾನಿಸಲಾಯಿತು.ಸಂಘದ ಉಪಾಧ್ಯಕ್ಷ ಗುರುನಾಥ ಪ್ರಭು, ಕಾಲೇಜಿನ ಪ್ರಾಧ್ಯಾಪಕರು ಉಪಸ್ಥಿತರಿದ್ದರು.ಸಂಘದ ಕಾರ್ಯಕ್ರಮ ಸಂಯೋಜಕ ಡಾ. ಎಂ. ಪಿ. ಶ್ರೀನಾಥ್ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಅಭಿಲಾಷ್ ವಂದಿಸಿ, ಡಾ. ದಿವಾಕರ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ