‘ಎಸ್ ಡಿ ಎಂ ನೆನಪಿನಂಗಳ’ದ ಹದಿನಾಲ್ಕನೇ ಕಂತಿನ ಕಾರ್ಯಕ್ರಮ
ಉಜಿರೆ: ದುಡಿಯುವ ಸಂಕಲ್ಪ, ಸಾಧಿಸುವ ದೃಢ ನಿಶ್ಚಯವಿದ್ದಲ್ಲಿ ನಿರುದ್ಯೋಗವೆಂಬುದು ಒಂದು ಸಮಸ್ಯೆಯೇ ಅಲ್ಲ ಎಂದು ಉದ್ಯಮಿ (ಉಜಿರೆಯ ದಿಶಾ ಹೋಟೆಲ್ ಮಾಲಕ), ಉಜಿರೆ ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿ ಅರುಣ್ ಕುಮಾರ್ ಎಂ. ಎಸ್. ಅಭಿಪ್ರಾಯಪಟ್ಟರು.
ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಆ.1 ರಂದು ಆಯೋಜಿಸಲಾಗಿದ್ದ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ಸರಣಿ ‘ಎಸ್‌ಡಿಎಂ ನೆನಪಿನಂಗಳ’ದ 14ನೇ ಕಂತಿನ ಕಾರ್ಯಕ್ರಮದಲ್ಲಿ ಅವರು ತೃತೀಯ ಬಿಎ ವಿದ್ಯಾರ್ಥಿನಿ ಅಪೇಕ್ಷಾ ಬಿ.ಕೆ. ಅವರಿಗೆ ಸಹಾಯಧನ (5,000 ರೂ.) ಹಸ್ತಾಂತರಿಸಿ ಅವರು ಮಾತನಾಡಿದರು.
ಪ್ರಸ್ತುತ ದುಡಿಯುವುದಕ್ಕೆ ಅವಕಾಶಗಳು ಹೇರಳವಾಗಿವೆ. ಆದರೆ ನುರಿತ ಕೆಲಸಗಾರರೂ ದುಡಿಯದೆ ಮನೆಯಲ್ಲಿರುವ ಉದಾಹರಣೆಗಳಿವೆ. ಸಂಪಾದನೆಗೆ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ತಾಳ್ಮೆ, ಪರಿಶ್ರಮದಿಂದ ಸ್ವಾವಲಂಬಿಗಳಾಗಿ ಬೆಳೆದು, ಸಮಾಜಕ್ಕೆ ನೆರವಾಗಬೇಕು ಎಂದು ಅವರು ಕಿವಿಮಾತು ಹೇಳಿದರು.
ಅನೇಕ ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಕೆಲಸ ಮಾಡುತ್ತ ತಮ್ಮ ಖರ್ಚಿಗೆ ತಾವೇ ಸಂಪಾದನೆ ಮಾಡುತ್ತಾರೆ. ಅನಗತ್ಯ ಶೋಕಿ ಮಾಡದೆ, ತಮ್ಮ ವಿದ್ಯಾಭ್ಯಾಸ, ಬಟ್ಟೆ ಖರ್ಚು ಸ್ವತಃ ನೋಡಿಕೊಳ್ಳುತ್ತಾರೆ. ಕೆಲವು ವಿದ್ಯಾರ್ಥಿಗಳಿಗೆ ಆರ್ಥಿಕ ಸಮಸ್ಯೆಯಿಂದ ಕಾಲೇಜು ಬಿಡುವ ಪರಿಸ್ಥಿತಿಯೂ ಎದುರಾಗುತ್ತದೆ. ಅಂಥವರಿಗೆ ನೆರವಾಗುವುದು ಅಗತ್ಯ ಎಂದು ಅವರು ಹೇಳಿದರು.
ತಮ್ಮ ಕಾಲೇಜು ಜೀವನದ ಅನುಭವಗಳನ್ನು ಹಂಚಿಕೊಂಡ ಅವರು, “ಉಜಿರೆಯಲ್ಲಿ ಪೂಜ್ಯ ರತ್ನವರ್ಮ ಹೆಗ್ಗಡೆ ಅವರು ಕಾಲೇಜು ಆರಂಭಿಸಿದ್ದು ನಮ್ಮಂತಹ ಗ್ರಾಮೀಣ ವಿದ್ಯಾರ್ಥಿಗಳಿಗೆ ದೊಡ್ಡ ಸುಯೋಗ. ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರೇರಣೆಯಿಂದ ನಾನು ಉಜಿರೆಯಲ್ಲಿ ದಿಶಾ ಫುಡ್ ಪ್ರೊಡಕ್ಟ್ ಆರಂಭಿಸಿ ಯಶಸ್ವೀ ಉದ್ಯಮಿಯಾಗಲು ಸಾಧ್ಯವಾಯಿತು. ಡಾ. ಬಿ. ಯಶೋವರ್ಮ ಅವರ ಪ್ರೋತ್ಸಾಹ, ಎಸ್.ಡಿ.ಎಂ. ಕಾಲೇಜಿನ ನಿರಂತರ ಬೆಂಬಲದಿಂದ ಉದ್ಯಮ ಬೆಳೆಸಿ ಉದ್ಯೋಗದಾತ ನಾಗಲು ಸಾಧ್ಯವಾಗಿದೆ” ಎಂದು ಅವರು ಸ್ಮರಿಸಿಕೊಂಡರು.
ಕಾಲೇಜು ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿದರು. ವಿದ್ಯಾಸಂಸ್ಥೆ ಕೇವಲ ಔಪಚಾರಿಕ ಬೋಧನೆಗೆ ಸೀಮಿತವಾಗದೆ ಜೀವಂತಿಕೆಯ ಸೆಲೆ- ನೆಲೆಯಾಗಬೇಕು, ಸಂಸ್ಥೆ ಹಾಗೂ ವಿದ್ಯಾರ್ಥಿಗಳ ನಡುವಣ ಬಾಂಧವ್ಯ ಮುಂದುವರಿಯಬೇಕು ಎಂಬ ಉದ್ದೇಶದಿಂದ, ಹಿರಿಯ ವಿದ್ಯಾರ್ಥಿ ಗಳು ಸಮಾಜದಲ್ಲಿ ಮೌಲ್ಯಾಧಾರಿತ ಜೀವನ ನಡೆಸುತ್ತ ಪ್ರಸ್ತುತ ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚುವುದು ಸಂತಸದ ಸಂಗತಿ. ‘ಎಸ್ ಡಿ ಎಂ ನೆನಪಿನಂಗಳ’ವು ಹಿರಿಯ ವಿದ್ಯಾರ್ಥಿಗಳ ವಿಶೇಷ ಅನುಬಂಧದ, ಹೆಮ್ಮೆಯ ಕಾರ್ಯಕ್ರಮ ಎಂದರು.
ಸಂಸ್ಥೆಯ ಹಿರಿಯ ವಿದ್ಯಾರ್ಥಿ ಅರುಣ್ ಕುಮಾರ್ ಅವರು ತಮ್ಮ ಕರ್ತೃತ್ವ ಶಕ್ತಿಯಿಂದ ಉಜಿರೆಯಲ್ಲಿ ಬೃಹತ್ ಉದ್ಯಮ ಆರಂಭಿಸಿದ್ದಾರೆ. ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಉದಾರಹೃದಯಿಯಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂದರು.
ಅರುಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ, ವಕೀಲ ಧನಂಜಯ ರಾವ್ ಪ್ರಸ್ತಾವಿಸಿ ಸ್ವಾಗತಿಸಿದರು. ಸಂಘದ ವಾರ್ಷಿಕ ಸಮ್ಮಿಲನ ಕಾರ್ಯಕ್ರಮವು ಆ.24ರಂದು ಎಸ್.ಡಿ.ಎಂ. ಕಾಲೇಜಿನ ಇಂದ್ರಪ್ರಸ್ಥ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಸಂಯೋಜಕ ಡಾ. ಎಂ.ಪಿ. ಶ್ರೀನಾಥ್ ವಂದಿಸಿದರು. ಕನ್ನಡ ಪ್ರಾಧ್ಯಾಪಕ ಡಾ. ದಿವಾಕರ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ