ಶ್ರೀ ಸತ್ಯಾತ್ಮವಾಣಿ - 20: ಅಹಂಕಾರ, ಅಸೂಯೆಯಿಂದ ಏಳಿಗೆಯಿಲ್ಲ

Upayuktha
0


ನುಷ್ಯ ತಾನು ಧರ್ಮ ಮಾರ್ಗದಿಂದ ಸದಾಚಾರಿಯಾಗಿ ಇರಬೇಕು ಎನ್ನುವುದು ಮಹತ್ವದ್ದು. ಇನ್ನೊಬ್ಬರ ಪಾವಿತ್ರ್ಯತೆ, ಶುದ್ಧಿ, ನಿಷ್ಠೆ, ಪುಣ್ಯ ಕಾರ್ಯಗಳಿಗೆ ಅಡ್ಡಿಯಾಗಬಾರದು. ಕೆಲವರಿಗೆ ತಾವು ಧರ್ಮಿಷ್ಠರು ಎಂಬ ಅಹಂಕಾರ ಇರುತ್ತದೆ. ತಾವು ಆಚರಿಸುತ್ತಿರುವ ಧರ್ಮ ಶ್ರೇಷ್ಠ ಮಿಕ್ಕವರು ಅವರಿಗಿಂತ ಕನಿಷ್ಠ ಎಂದು ನಡೆದುಕೊಳ್ಳುವವರಿಗೆ ಧರ್ಮ ಮಾರ್ಗದಲ್ಲಿ ಏಳಿಗೆ ಆಗುವುದಿಲ್ಲ. ಇನ್ನೊಬ್ಬರು ಪೂಜೆ ಮಾಡಲು ಬಯಸಿದರೆ ಅವರನ್ನು ಪ್ರೋತ್ಸಾಹಿಸದೇ ಅವರಿಗೆ ಅಷ್ಟೆಲ್ಲ ಯಾಕೆ ಮಾಡಬೇಕು ನಿನ್ನ ಕೈ ಲಿ ಆಗಬೇಕಲ್ಲ ಎಂಬ ಮಾತುಗಳಿಂದ ಹಿಂದೆಳೆಯುವ ಪ್ರಯತ್ನ ಮಾಡುತ್ತಾರೆ. ಏಕೆಂದರೆ ತಮಗಿಂತ ಹೆಚ್ಚು ಸಾಧನೆ ಮಾಡಬಾರದು ಎಂಬ ಉದ್ದೇಶ ಅವರ ಮನದಲ್ಲಿರುತ್ತದೆ. ಧರ್ಮ ಕಾರ್ಯ ಮಾಡ ಬಯಸುವವರ ಶಕ್ತಿ, ಯೋಗ್ಯತೆ ಇದ್ದವರಿಗೆ ಅಸೂಯೆಯಿಂದ ಅಡ್ಡಗಾಲು ಆಗಬಾರದು ಎಂದು ಮಹಾಭಾರತ ಹೇಳುತ್ತದೆ.


ಧರ್ಮ ಕಾರ್ಯ ಮಾಡಬೇಕು ಎಂಬ ಸಂಕಲ್ಪವನ್ನು ಮನುಷ್ಯ ಮಾಡಿದರೆ ಅವನಿಗೆ ದೇವರು ಸ್ವತಃ ಎಲ್ಲ ಅನುಕೂಲತೆಗಳನ್ನು ಮಾಡಿಕೊಡುತ್ತಾನೆ. ಆ ಧಾರ್ಮಿಕ ವ್ಯಕ್ತಿಯ ಮೇಲೆ ವಿಶೇಷ ಅನುಗ್ರಹ ತೋರಿಸುತ್ತಾನೆ. ಒಬ್ಬ ವ್ಯಕ್ತಿ ಅನ್ನದಾನ ಮಾಡಬೇಕು ಎಂಬ ಸಂಕಲ್ಪ ಮಾಡಿದ್ದಾರೆ ಎಂದರೆ ಅವರಿಗೆ ಸಕಲ ಅನುಕೂಲತೆ ಮಾಡಿಕೊಟ್ಟು ಅವರ ಮೂಲಕ ಅನ್ನದಾನ ಮಾಡಿಸಿರುತ್ತಾನೆ.


ಧರ್ಮ ಕಾರ್ಯ ಮಾಡುವಾಗ ಇನ್ನೊಬ್ಬರ ಸಹಾಯ ಇಲ್ಲದೇ ಮಾಡುತ್ತೇವೆ ಎನ್ನಲು ಬರುವುದಿಲ್ಲ. ಯಾವ ಕೆಲಸಕ್ಕೆ ದೇವರ ಸಲಹೆ ಸಹಕಾರ ಅವಶ್ಯಕತೆ ಇದ್ದಾಗ ದೇವರು ತಾನೆ ಒದಗಿಸುತ್ತಾನೆ. ಆದರೆ ಎಲ್ಲ ಕಡೆಯೂ ಬೇರೆಯವರ ಸಲಹೆ ಸಹಕಾರದ ಅವಶ್ಯಕತೆ ಇದ್ದೇ ಇದೇ ಎಂದೇನಿಲ್ಲ. ಇಂದಿನ ಕಾಲದಲ್ಲಿ ಲೌಕಿಕ ಕೆಲಸದಲ್ಲಿ ನಿರತರಾಗಿದ್ದೂ ಕೂಡ ಧಾರ್ಮಿಕ ಕಾರ್ಯ, ಸಮಾಜಸೇವೆಯಲ್ಲಿ ಕೂಡ ಮಾಡುತ್ತಿರುತ್ತಾರೆ.


ಮಾನಸ ಪೂಜೆ ಮತ್ತು ಅನುಸಂಧಾನ ಮಾಡಲು ಯಾರ ಸಹಾಯವು ಬೇಕಿಲ್ಲ ಎಂದು ಮಹಾಭಾರತ ಹೇಳುತ್ತದೆ. ಪೂತನೀ ರಾಕ್ಷಸಿ ದೇಹದಲ್ಲಿ ಊರ್ವಶಿ ಅಪ್ಸರೆಯು ಸನ್ನಿಹಿತಳಾಗಿದ್ದಳು. ಅವಳ ದೇಹದಲ್ಲಿದ್ದ ರಾಕ್ಷಸಿ ವಿಷ ಉಣಿಸಿದರು ಅವಳ ದೇಹದಲ್ಲಿದ್ದ ಊರ್ವಶಿಗೆ ಉತ್ತಮ ಗತಿಯಾಗುತ್ತದೆ. ಇದರಿಂದ ಪರಮಾತ್ಮನ ಕಾರುಣ್ಯ ಹಾಗೂ ಅನುಗ್ರಹವನ್ನು ಕಾಣಬಹುದು. ಒಂದೇ ದೇಹದಲ್ಲಿ 2 ಮನಸ್ಸು ಒಂದು ಶುದ್ಧ ಹಾಗೂ ಇನ್ನೊಂದು ಅಶುದ್ಧ ಊರ್ವಶಿ ಮನಃ ಪೂರ್ವಕವಾಗಿ ಯಾವುದೇ ಕೆಟ್ಟ ಕೆಲಸ ಮಾಡದೇ ಇರುವುದರಿಂದ ಅವಳ ಮನಸ್ಸು ಪರಿಶುದ್ಧವಾದ ಕಾರಣ ಅವಳಿಗೆ ಸದ್ಗತಿಯಾಯಿತು. ಅನಾದಿ ಕಾಲದಿಂದಲೂ ಪರಿಶುದ್ಧ ಭಕ್ತಿಗೆ ಸಮ ನಾದ ಶ್ರೇಷ್ಠ ಧರ್ಮ ಮತ್ತೊಂದು ಇಲ್ಲ. ಇಂದಿನ ಕಾಲದಲ್ಲಿ ಧರ್ಮ ಮಾಡಲು ನೂರೆಂಟು ಸಬೂಬು ಹೇಳುತ್ತಾರೆ. ಊರ್ವಶಿಯ  ಮನಸ್ಸು ಪೂತನೆಯ ದೇಹದೊಳಗೆ ಇದ್ದರೂ ಕೂಡ ಅವಳು ಪರಿಶುದ್ಧಳು ಎಂದು ಹೇಳುತ್ತಾರೆ. 


ಪರಿಶುದ್ಧ ಮನಸ್ಸಿನಿಂದ ದೇವರ ಸ್ಮರಣೆ ಮಾಡಲು ಸಾಧ್ಯವಿದೆ. ಧರ್ಮಕಾರ್ಯಗಳನ್ನು ಮಾಡಲು ದೇವರಲ್ಲಿ ಸಂಪೂರ್ಣ ವಿಶ್ವಾಸ ಬೇಕು. ಕೆಲವರಿಗೆ ಏಕಾಂತದಲ್ಲಿ ದೇವರ ಸೇವೆ ಮತ್ತು ಪೂಜೆಯನ್ನು ಮಾಡುವ ಅವಕಾಶ ಇಲ್ಲ, ಅಂತಹ ಜನರು ಮಾನಸಿಕವಾಗಿ ಧರ್ಮ ಕಾರ್ಯವನ್ನು ಪೂಜೆಯನ್ನು ಮಾಡಬೇಕು. ಶಾಸ್ತ್ರದಲ್ಲಿ ಹೇಳಿರುವ ಮಾತುಗಳಂತೆ ನಡೆದರೆ ಧರ್ಮ ಕಾರ್ಯಗಳನ್ನು ಮನಸಿನಿಂದ  ಅನುಷ್ಠಾನ ಮಾಡಿದರೆ , ನಾವು ಆಡುವ ಮಾತುಗಳೆಲ್ಲ ದೇವರ ಸ್ಮರಣೆ ಹರಿ ವಾಯುಗುರುಗಳ ಅನುಗ್ರಹದಿಂದ ನಾವು ಎಲ್ಲಿಯೇ ಇದ್ದರೂ ನಮಗೆ ಧರ್ಮ ಕಾರ್ಯ ಮಾಡಲು ಅವಕಾಶ ಕಲ್ಪಿಸಿಕೊಟ್ಟಿರುತ್ತಾನೆ. ಅವನ ಕಾರುಣ್ಯ ಎಷ್ಟಿದೆ ಎಂದರೆ ಬದುಕಿನ ನಿರ್ವಹಣೆಗೆ ಅನಿವಾರ್ಯವಾಗಿ ಮಾಡಬೇಕಾದ ಕಾರ್ಯಗಳನ್ನು ಮಾಡಿ ಉಳಿದ ಸಮಯದಲ್ಲಿ ಧರ್ಮ ಕಾರ್ಯಗಳನ್ನು ಮಾಡಿದರೂ , ಕೆಲಸದ ಸಮಯದಲ್ಲಿ ದೇವರ ಸ್ಮರಣೆ ಮಾಡಿ   ಎಲ್ಲವೂ ಅವನ ಕಾರ್ಯಗಳೆ ಎಂಬ ಅನುಸಂಧಾನ ಇದ್ದರೂ ಫಲವನ್ನು ಕೊಡುತ್ತೇನೆ ಎಂದು ಸ್ವತಃ ಪರಮಾತ್ಮ ಹೇಳುತ್ತಾನೆ.


ಪ್ರಪಂಚದಲ್ಲಿ ಮಾತನಾಡುವ ಎಲ್ಲ ಶಬ್ದಗಳು ಯಾವುದೇ ಶಬ್ದ ಇರಲಿ ಅವೆಲ್ಲವೂ ಪರಮಾತ್ಮ ವಾಚಕ ಎಂದು ತಿಳಿಯಬೇಕು. ಆಡಿದ ಮಾತುಗಳೆಲ್ಲವೂ ಪರಮಾತ್ಮನ ನಾಮ ಎಂಬ ಅನುಸಂಧಾನವಿರಬೇಕು. ನಮಗೆ ಎಷ್ಟು ಸಾಧ್ಯವಿದೆಯೋ ಅಷ್ಟೂ ಧರ್ಮ ಕಾರ್ಯ ಮಾಡಬೇಕು. ಸ್ವಲ್ಪವೇ ಧರ್ಮ ಕಾರ್ಯ ಮಾಡಿ ಆಡುವ ಮಾತುಗಳಲ್ಲಿ ಪರಮಾತ್ಮನ ಚಿಂತನೆ ಮಾಡಿದಾಗ ಪುಣ್ಯ ಸಂಪಾದನೆ ಆಗುತ್ತದೆ. ಪರಮಾತ್ಮನೇ ಎಲ್ಲ ಧಾನ್ಯಗಳಲ್ಲಿ ಇರುವನು, ಅವನೇ ಎಲ್ಲದರಲ್ಲಿ ನಿಂತು ಅನುಗ್ರಹ ಮಾಡುತ್ತಾನೆ ಎಂಬ ಅನುಸಂಧಾನ ಇರಬೇಕು. ಎಲ್ಲ ಕಣ ಕಣಗಳಲ್ಲೂ ತಾನೇ ಇದ್ದೂ ತೃಪ್ತಿ ಕೊಡುವ ಕಾರಣ ಪರಮಾತ್ಮ ನಿಂದಲೇ ಎಲ್ಲವೂ ಸಾಧ್ಯ ಎಂಬ ಅನು ಸಂಧಾನ ನಮ್ಮ ನಂಬಿಕೆ ವಿಶ್ವಾಸ ಅವನ ಅನುಗ್ರಹಕ್ಕೆ ಪಾತ್ರರನ್ನಾಗಿ ಮಾಡುತ್ತದೆ.


ದೇವರೇ ಎಲ್ಲವನ್ನೂ ಕೊಟ್ಟು ಊಟ ಹಾಕಿಸಿ ನಮ್ಮನ್ನು ಸುಖವಾಗಿ ಇಟ್ಟಿದಾನೆ. ಎಷ್ಟೋ ಜನರಿಗೆ ಒಂದು ಹೊತ್ತಿಗೆ ಊಟವಿರುವುದಿಲ್ಲ. ನಮಗೆ ಕಷ್ಟವಿಲ್ಲದೇ ಗೌರವ ಪ್ರೀತಿ ಅದರಗಳಿಂದ ಊಟ ಹಾಕಿಸುತ್ತಿದ್ದಾನೆ ಅಂದರೆ ಅದು ಅವನ ಕೃಪೆ. ಭಗವಂತನ ಕೃಪೆ ಎಷ್ಟಿದೆ ಅಂದರೆ ನಾವು ಹರಟೆ ಹೊಡೆಯುವಾಗ ಕೂಡ ಅವನ ಅನುಸಂಧಾನ ಇದ್ದರೆ ಪುಣ್ಯ ಪ್ರಾಪ್ತಿ ಆಗುತ್ತದೆ. ಕೆಲವರು ಬಾಯಿಯಿಂದ ನಾಮ ಸ್ಮರಣೆ ಮಾಡುತ್ತಾ ಮನಸ್ಸು ಎಲ್ಲೋ ಇರುತ್ತದೆ. ಇನ್ನೂ ಕೆಲವರು ಮನದಲ್ಲಿ ಏಕಾಗ್ರತೆಯಿಂದ ಭಗವಂತನ ಸ್ಮರಣೆ ಮಾಡುತ್ತಾರೆ. ಅವರು ಅನುಸಂಧಾನ  ಪೂರ್ವಕ ಮಾಡಿದ ಪೂಜೆಗೆ ಅನುಗ್ರಹ ಪಡೆಯುತ್ತಾರೆ. 


ಅಕ್ಷರ ರೂಪ : ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top