ಸಹಸ್ರಾಧಿಕ ವರ್ಷಗಳ ಇತಿಹಾಸಕ್ಕೆ ಸಾಕ್ಷಿಯಾಗಿರುವ ಗಜಪೃಷ್ಠಾಕಾರದ ಸುಂದರ ದೇಗುಲ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ. ಉಜಿರೆಯ ಪ್ರಧಾನ ಕೇಂದ್ರದಿಂದ ಅನತಿ ದೂರದಲ್ಲಿನ ಈ ದೇಗುಲದಲ್ಲಿ ಆಚಾರ್ಯ ಮಧ್ವರು "ಕಾರ್ಯನಿರ್ಣಯ" ಎಂಬ ಗ್ರಂಥವನ್ನು ಬರೆದರೆಂದು ಪ್ರತೀತಿ. ಶಂಖ-ಚಕ್ರ-ಗಧಾ- ಪದ್ಮ ಧಾರಿಯಾಗಿರುವ ಶ್ರೀ ಜನಾರ್ದನ ಸ್ವಾಮಿ ಇಲ್ಲಿಯ ಪ್ರಧಾನ ದೇವತೆ. ಅಲ್ಲದೆ ಇಲ್ಲಿ ಶಿವ ಲಿಂಗ, ಬಲಮುರಿ ಗಣಪತಿ ಹಾಗೂ ಜಗನ್ಮಾತೆಯ ಸನ್ನಿಧಾನಗಳಲ್ಲೂ ತ್ರಿಕಾಲ ಪೂಜೆ ನೆರವೇರುತ್ತದೆ. ಪೊಸಳಿತ್ತಾಯಿ, ಕುಮಾರ ಶಾಸ್ತಾರಗಳ ಆರಾಧನೆ ಅಲ್ಲದೆ ಕೊಡಮಣಿತ್ತಾಯಿ ನೆತ್ತಾರ್ ಮುಗುಳಿ ಎಂಬ ರಕ್ತೇಶ್ವರಿಯರ ಆರಾಧನೆಯು ಇಲ್ಲಿ ನಡೆಯುತ್ತದೆ.
ಸಹಸ್ರಾಧಿಕ ವರ್ಷದ ಇತಿಹಾಸ ಎಂದಾಕ್ಷಣ ಆ ಗತದ ಕುರಿತಾದ ಆಸಕ್ತಿದಾಯಕ ಲಘು ಶೋಧ ಅತ್ಯಗತ್ಯ. ಶ್ರೀ ಜನಾರ್ದನ ದೇವರ ಪ್ರಭಾವಳಿಯ ಹಿಂಭಾಗದ ಬರವಣಿಗೆ ಕ್ರಿ.ಶ. 1060 ರಷ್ಟು ಹಿಂದಕ್ಕೆ ನಮ್ಮನ್ನು ಕರೆದೊಯುತ್ತದೆ. ಆ ಪ್ರಭಾವಳಿಯನ್ನು ವಸುದೇವನೆಂಬ ಕದಂಬ ಆಳರಸ ಕೊಡ ಮಾಡಲ್ಪಟ್ಟಿರುವುದೆಂದು ಅಲ್ಲಿ ಉಲ್ಲೇಖವಿದೆ. ಅಂದರೆ ಕ್ರಿ.ಶ. 1060ರಲ್ಲೇ ಈ ದೇಗುಲ ಪಾರಮ್ಯದ ಸ್ಥಿತಿಯಲ್ಲಿತ್ತು ಎಂದು ವೇದ್ಯವಾಗುತ್ತದೆ. ಈ ದೇಗುಲದ ಗರ್ಭಗೃಹದ ಗಜಪೃಷ್ಠಾಕಾರ ಅಥವಾ ಆನೆಯ ಬೆನ್ನಿನ ಆಕ್ರತಿಯು ಈ ದೇಗುಲದ ಪ್ರಾಚೀನತೆಯನ್ನು ಸಾರಿ ಸಾರಿ ಹೇಳುತ್ತದೆ. ಇದು ಬಾದಾಮಿ ಚಾಲುಕ್ಯರ ಅಂದರೆ ಕ್ರಿ.ಶ. 6 ರಿಂದ 12ನೇ ಶತಮಾನದ ಅವಧಿಯಲ್ಲಿ ಖ್ಯಾತಿಯಲ್ಲಿದ್ದ ಶೈಲಿ. ಬಳಿಕ ಈ ಶೈಲಿಯ ಹಲವು ನ್ಯೂನತೆಗಳಿಂದಾಗಿ ಈ ಶೈಲಿಯನ್ನು ಕೈ ಬಿಡಲಾಯಿತು. (ಬೇಗನೆ ಶಿಥಿಲಗೊಳ್ಳುವುದು ಮತ್ತು ಹಿಂಭಾಗದ ಕಲ್ಲುಗಳ ಮಧ್ಯೆ ಸ್ಥಳಾವಕಾಶ ಸೃಷ್ಟಿಯಾಗಿ ಗಾಳಿ ಒಳ ಸಂಚಾರ ಇತ್ಯಾದಿ ನ್ಯೂನತೆಗಳು) ಆದ್ದರಿಂದ ಈ ದೇಗುಲ ಅನಂತರ ಜೀರ್ಣೋದ್ಧಾರಗೊಂಡಿದ್ದರೂ ನಿರ್ಮಾಣ ಕಾರ್ಯವು ಕ್ರಿ.ಶ. 12ನೇ ಶತಮಾನಕ್ಕಿಂತ ಮೊದಲೇ ಆಗಿತ್ತೆಂದು ದೃಢಪಡಿಸಬಹುದು.
ಇನ್ನು ಮಧ್ವಾಚಾರ್ಯರು ಇಲ್ಲಿ ಕುಳಿತು "ಕಾರ್ಯ ನಿರ್ಣಯ" ಎಂಬ ಗ್ರಂಥ ಬರೆದರೆಂದ ಮೇಲೆ ಇದು ಮಧ್ವರ ಕಾಲಕ್ಕಿಂತ ಮೊದಲೇ ನಿರ್ಮಾಣಗೊಂಡ ದೇಗುಲವೆಂಬುದು ಗಮನಾರ್ಹ.
ಈ ಪ್ರಾಚೀನ ದೇಗುಲದಲ್ಲಿ ದೊರೆತ ಶಿಲಾ ಶಾಸನದಲ್ಲಿರುವುದಂತು ಅಚ್ಚರಿ ಮೂಡಿಸುವ ಕಥೆಯೇ ಸರಿ. ಈ ಶಾಸನವನ್ನು ಶಾಲಿವಾಹನ ಶಕ ವರ್ಷ 1391ರಲ್ಲಿ ಅಂದರೆ ಕ್ರಿ.ಶ. 1469ರಲ್ಲಿ ಸ್ಥಳೀಯ ಬಂಗವಾಡಿಯ ಅರಸ ಕಾವಿರಾಯ ಬಂಗ ಹಾಗೂ ಕೊಠಾರಿ ದೇವಣ್ಣ ಎಂಬವರು ಈ ದೇವರ ಸನ್ನಿಧಿಯಲ್ಲಿ ಉಜಿರೆಯ ಜನರಿಗಾಗಿ ಈ ಶಾಸನವನ್ನು ಕೆತ್ತಿಸಿದರಂತೆ. ಈ ಶಾಸನದ ಪ್ರಕಾರ ಮಂಗಳೂರಿನ ರಾಜ್ಯಪಾಲ ವಿಠ್ಠರಸ ವೊಡೆಯನೆಂಬವನು ಬಂಗರಸರ ಕೈಯಲ್ಲಿದ್ದ ಮಂಗಳೂರಿನ ಕೊಡಿಯಾಲದ ನೀರುಮಾರ್ಗ ಎಂಬ ಗ್ರಾಮವನ್ನು ಸುಟ್ಟುಹಾಕಿ ಹಾಳು ಗೈದನು. ಇದಕ್ಕೆ ಪರಿಹಾರವೆಂಬಂತೆ ಬಂಗ ಅರಸನಿಗೆ ಉಜಿರೆ ಗ್ರಾಮ ಉಂಬಳಿಯಾಗಿ ದೊರೆಯಿತು. ಆದ್ದರಿಂದ ತೆರಿಗೆ ಸಂಗ್ರಹಾದಿ ಕಾರ್ಯಗಳನ್ನು ಬಂಗರಸರು ಮುಂದಕ್ಕೆ ಮಾಡುವುದಾಗಿಯೂ, ಈ ಭಾಗದವರು ಬಂಗರಸರಿಗೆ ರಾಜ ಮರ್ಯಾದೆ ನೀಡಬೇಕೆಂಬುದಾಗಿಯೂ ಇಲ್ಲಿ ಉಲ್ಲೇಖಿಸಲಾಗಿದೆ.
ಒಟ್ಟಿನಲ್ಲಿ ಈ ಶಾಸನದಿಂದ ಅಂದು ಉಜಿರೆಯ ಮುಖ್ಯ ದೇವಸ್ಥಾನ ಇದೇ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನವಾಗಿತ್ತೆಂದು, ಹಾಗಿದ್ದರೆ ಆ ಕಾಲಕ್ಕಿಂತ ಬಹು ಪ್ರಾಚೀನವಾದ ದೇಗುಲ ಇದು ಎಂದೂ ಅತಿ ಸರಳ ರೀತಿಯಲ್ಲಿ ತಿಳಿದುಕೊಳ್ಳಬಹುದು. ಅಂದಿನಿಂದ ಇಂದಿನವರೆಗೂ ಎಂದಿಗೂ ಲೋಪ ಬಾರದಂತೆ ತ್ರಿಕಾಲ ಪೂಜೆಗೆ ಈ ದೇಗುಲ ಸಾಕ್ಷಿಯಾಗಿದೆ. 2001ರಲ್ಲಿ ಪುನರ್ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವ, 2013ರಲ್ಲಿ ಮತ್ತೊಮ್ಮೆ ಬ್ರಹ್ಮಕಲೋತ್ಸವ, ಜಾತ್ರೆ ಅಲ್ಲದೆ ಹಲವು ಆಚರಣೆಗಳನ್ನು ಲೋಪವಿಲ್ಲದಂತೆ ನೆರವೇರಿಸಲಾಗುತ್ತಿದೆ ಇಲ್ಲಿ. ಸದಾ ಆಸ್ತಿಕ ಶಕ್ತಿಯ ನೆಲೆವೀಡಾಗಿರುವ ಈ ದೇಗುಲ ಹಲವು ರೋಗಗಳ ಉಪಶಮನಕ್ಕೆ, ಹೊತ್ತ ಹರಕೆಗೆ ಯೋಗ್ಯ ಫಲವನ್ನು ತಂದು ಕೊಟ್ಟಿದೆ. ಉಜಿರೆಯ ಹಿಂದಿನ ಹೆಸರು "ಉಚ್ಚಭೂತಿ" ಎಂದಿತ್ತಂತೆ. ಇಂದಿಗೂ ಈ ಗ್ರಾಮವನ್ನು ಉಚ್ಛ ಸ್ಥಾನದಲ್ಲಿಟ್ಟು ಮುನ್ನಡೆಸುತ್ತಿರುವುದು ಇದೇ ಪ್ರಾಚೀನ ದೇವಾಲಯದ ಆರಾಧ್ಯ ದೇವರಾದ ಶ್ರೀ ಜನಾರ್ದನ ಸ್ವಾಮಿ.
-ಅಭಿಜ್ಞಾ ಉಪಾಧ್ಯಾಯ
ಇತಿಹಾಸ ಪ್ರಾಧ್ಯಾಪಕಿ
SDM ಕಾಲೇಜು, ಉಜಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ