ಮಣ್ಣು ಮಣ್ಣೆಂದು ಹೀಗಳೆಯಬಾರದು

Upayuktha
0


ವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಆಗ ಮನಸ್ಸು ಉನ್ನತವಾದ ಸಾಧನೆಗೈಯಲು ಮೊದಲಿಗನಾಗುತ್ತದೆ. ಈ ದೇಶ, ಈ ಮಣ್ಣು, ಈ ಪ್ರಕೃತಿ, ಗಿಡ ಮರಗಳೊಂದಿಗೆ ಒಡನಾಡಿಗಳಾಗಬೇಕು. ಏನೋ ಸಾಧನೆ ಮಾಡಿ ಮೆರೆಯುವುದು ಇದ್ದೇ ಇದೆ. ಆದರೆ ಕಾಲಡಿಯಲ್ಲಿರುವ ಈ ಮಣ್ಣಿನ ಅಂತರಾಳದ ನುಡಿಗಳಿಗೆ ಕಿವಿಯಾಗಬೇಕು. ಮಣ್ಣಿಗೂ ಜೀವವಿದೆ. ಒಂದು ಸಣ್ಣ ಮುಳ್ಳು ಚುಚ್ಚಿದರೂ ವ್ಯಥೆಪಡುವ ನಾವು ಈ ಮಣ್ಣಿನ ತುಂಬಾ ಹೆಜ್ಜೆ ಇಡುವಾಗ ಅದಕ್ಕೂ ಒಂದು ಚೇತನವಿದೆ ಎಂಬುದನ್ನು ಮರೆತುಬಿಡಬಾರದು. ಭೂಮಿತಾಯಿ ಭೂದೇವಿ ವಿಷ್ಣುಪ್ರಿಯೆ ಅವಳು. ಅವನಿ, ಜನನಿ, ಹೊತ್ತ ಮಾತೆ ಎಂಬುದನ್ನು ನೆನಪಲ್ಲಿಡಬೇಕು. ಭಾವದ ಸುಳಿಯೊಳಗೆ ಸಿಲುಕಿ ಉದಾತ್ತವಾದ ಚಿಂತನೆಯನ್ನು ಸಮರ್ಥವಾಗಿ ನಿಭಾಯಿಸಬೇಕು. ಕೆಲವೊಮ್ಮೆ ಮನದೊಳಗಿನ ಆಲೋಚನೆಗಳು ಶೀಘ್ರವಾಗಿ ಸ್ಪಂದಿಸಿ ಅದಮ್ಯ ಉತ್ಸಾಹ ತೋರಿದರೂ, ಮರುಕ್ಷಣ ಅಥವಾ ಸಮಯ ಸರಿದಂತೆ ನಾನಾ ಆಲೋಚನೆಗಳು ಒಂದರ ಮೇಲೊಂದರಂತೆ ತರ್ಕಕ್ಕಿಳಿದು ಆ ಉತ್ಸಾಹವನ್ನು ತಾತ್ಸಾರ ಮಾಡಿಬಿಡುತ್ತದೆ. ಆಗ ಯಾವುದೂ ಬೇಡ, ಆ ಕಾರ್ಯಗಳೂ ಬೇಡ, ಮನರಂಜನೆಯೂ ಬೇಡ, ಮಹತ್ವಾಕಾಂಕ್ಷೆಯೂ ಬೇಡ ಎಂದು ಸುಮ್ಮನಾಗಿಬಿಡುತ್ತದೆ. ಬದುಕೆಂದರೆ ಚಲನೆ. ಆ ಚಲನೆಗೆ ಈ ದೈಹಿಕ ದೇಹ. ಮನಸ್ಸಿಗೆ ದೇಹವಿಲ್ಲವಲ್ಲ. ಆದರೆ ದೇವರು ಅದನ್ನು ಈ ದೇಹದೊಳಗೆ ಐಕ್ಯಗೊಳಿಸಿದ್ದಾರೆ. ಹಾಗಾಗಿ ಅದುವೇ ಮನಸಾಕ್ಷಿಯಂತೆ ವರ್ತಿಸುತ್ತದೆ. ನಾಗಾಲೋಟದಿಂದ ಕುದುರೆ ಓಡುವಂತೆ ಮನಸ್ಸು ಓಡುತ್ತದೆ. ಆದರೆ ಅದರ ಹತೋಟಿ ಆತ್ಮಸಾಕ್ಷಿಯೇ ಆಗಿರುತ್ತದೆ.


ಆನಂದವಾಗಿರಲು ಏನು ಬೇಕು? ಅಪ್ಪ ಅಮ್ಮನೆಂಬ ಭದ್ರವಾದ ತೋಳುಗಳು ಸಮಾಜದಲ್ಲಿ ನಮ್ಮನ್ನು ಸುಸಂಸ್ಕೃತರನ್ನಾಗಿ ಬೆಳೆಯುವಂತೆ ಮಾಡುತ್ತದೆ. ಇರುವುದರ ಬಗ್ಗೆ ಅಭಿಮಾನ ಪಡಬೇಕು. ನೆಲೆಸಲೊಂದು ಸೂರು, ತಿನ್ನಲು ಸಾದಾ ಆಹಾರ, ಉಡಲು ಸಂಪ್ರದಾಯದ ಬಟ್ಟೆ ಇವಿಷ್ಟಿದ್ದರೆ ಬಾಳು ಧನ್ಯ. ಆದರೆ ಅಪ್ಪ ಅಮ್ಮರನ್ನೇ ಆಶ್ರಮದೊಳಗಿರಿಸಿ ಕಾಪಿಡುವ ಮಕ್ಕಳೂ ಇದ್ದಾರೆ!! ಬದುಕೆಂದರೆ ಹಾಗಲ್ಲವಲ್ಲ. ಎಲ್ಲಾ ಸಂಬಂಧಗಳನ್ನು ಬಿಸುಟು ಬಾಳುವುದಲ್ಲ. ಹೆತ್ತ, ಹೊತ್ತ ನೆನಪುಗಳೊಂದಿಗೆ ಅವರದೇ ದಾರಿಯಲ್ಲಿ ಸಾಗುತ್ತಿರುವುದನ್ನು ಸಹಿಸಲಾಗದೇ ಆಶ್ರಮಗಳಲ್ಲಿ ಶ್ರಮದಾಯಕರಾಗುವಂತೆ ಮಾಡುವುದು ಎಷ್ಟು ಸರಿ? ಪಾಲನೆ, ಪೋಷಣೆ ಮಾಡಿ ಬೆಳೆಸಿದ ಆ ಮಮತಾಮಯಿ ಕೈಗಳನ್ನು ಕೂಡಿ ಹಾಕುವುದು ಸಲ್ಲದು. ಬದುಕಿನ ಗೋಡೆಗಳು ಶಿಥಿಲಗೊಂಡಾಗ ಅದಕ್ಕೆ ಆಧಾರ ಸ್ತಂಭಗಳನ್ನು ಇಡುತ್ತಾರೆ. ಮಕ್ಕಳು ಅಂತಹ ಆಧಾರ ಸ್ತಂಭಗಳಾಗಬೇಕು. ಬದುಕು ಬಿನ್ನಾಣಗಿತ್ತಿಯಲ್ಲ. ಅನುಭವಗಳ ಮೂಟೆ. ಆ ಮೂಟೆಗಳ ಹೊರೆಯನ್ನು ಸಹಿಸಲಾಗದೇ ಓಡಲು ಸಾಧ್ಯವಾಗುವುದಿಲ್ಲ. ಬತ್ತಳಿಕೆಯಲ್ಲಿ ರುವ ಬಾಣಗಳಂತೆ ಸದಾ ಅವರು ಮಕ್ಕಳ ಒಳಿತಿಗೆ ಶ್ರಮಿಸಿದವರು ಎಂಬುದನ್ನು ನೆನಪಿನಲ್ಲಿಟ್ಟು ಕೊಳ್ಳಬೇಕು.   


ಸ್ವಾರ್ಥವಿಲ್ಲದ ಮನಸ್ಸಿಗೆ ಕರ್ತವ್ಯಗಳೇ ದೇವರಾಗಿ ಬಿಡುತ್ತವೆ. ಕಾಯಾ ವಾಚಾ ಮನಸಾ ಆ ಕರ್ತವ್ಯಗಳಿಗೆ ಎಂದೂ ಚ್ಯುತಿ ತಾರದೇ  ಪೂರೈಸುವುದು, ಬಾಳಿನ ಬಂಡಿಯಲ್ಲಿ ಉತ್ತಮ ಫಲಗಳನ್ನು ಹೊತ್ತುಕೊಂಡ ಹಾಗೆಯೇ ಹೌದು. ಬದುಕು ಜೀವಂತವಿರುವಾಗ ಆದರ್ಶಗಳ ಭದ್ರ ಪಂಚಾಂಗದಲ್ಲಿ ಕವಡೆಗಳನೆಣಿಸುವ ಕುತೂಹಲದಂತೆ ಬದುಕಿನ ನಂತರದ ಆ ಚೈತನ್ಯಕೂ ಅದೇ ಅವಸ್ಥೆ ಕೂಡಿ ಬರಬೇಕು. ಹೇಳುವುದೊಂದು ಮಾಡುವುದೊಂದು ಆದರೆ ಬದುಕು ಹೇಳ ಹೆಸರಿಲ್ಲದ ಹಾಗೆ ಅವನತಿಗೆ ಸರಿಯುತ್ತದೆ. ಕಾಲ ಚಕ್ರದ ಸುಳಿಯೊಳಗೆ ಸಿಲುಕಿದ ಮೇಲೆ ಬದುಕಿನಲ್ಲಿ ಉಂಟಾಗುವ ಅಥವಾ ಒದಗುವ ಏರುಪೇರುಗಳು ಮಾನಸಿಕ ಧೈರ್ಯವನ್ನು ನೀಡುವಂತಹವುಗಳಾಗಿರುತ್ತವೆ. "ಈ ಕ್ಷಣ" ಕಳೆದ ಹಾಗೆ ಮನಸ್ಸು ಕೋಟಿ ಕೊಟ್ಟರೂ ಸಿಗದ ಅಮೂಲ್ಯ ನಿಧಿಯನ್ನು ಕಳೆದುಕೊಂಡ ಅನುಭವಕ್ಕೆ ಸಾಕ್ಷಿಯಾಗುತ್ತದೆ. 


ಆಗುವುದಾದರೆ ಉಪಕಾರ ಮಾಡಬೇಕು. ಇಲ್ಲವೇ ತೆಪ್ಪಗಿರಬೇಕು. ಯುವ ಮನಸ್ಸುಗಳು ಹದಿಹರೆಯದ ಹೊತ್ತು ತಮ್ಮದೇ ಸ್ವರಾಜ್ಯ ಎಂದು ಏನು ಮಾಡಿದರೂ ಎಲ್ಲವೂ ದಕ್ಕುತ್ತದೆ ಎಂಬ ಭಾವದಿಂದ ಮನದ ಮೇಲೆ ಅಡ್ಡಗೋಡೆಯಿಡಲು ಹೋಗಬಾರದು. ಹಿಂದೆಲ್ಲಾ ದಾರಿ ಕಾಣಲೆಂದು ಕಂಬದ ಮೇಲೋ ಅಥವಾ ಅಡ್ಡಗೋಡೆಯ ಮೇಲೋ ಬೆಳಕಿನ ಕಂದೀಲು ತೂಗು ಹಾಕುತ್ತಿದ್ದರು, ಇಲ್ಲವೇ ಇಟ್ಟು ಬಿಡುತ್ತಿದ್ದರು. ರಾತ್ರಿಯಲ್ಲಿ ಒಂದೂರಿನಿಂದ ಇನ್ನೊಂದು ಊರಿಗೆ ಹೋಗಬೇಕಾದ ಸಂದರ್ಭ ನಡಿಗೆಯೇ ಆಗಿತ್ತು. ವಾಹನಗಳು ಆಗ ಇದ್ದಿರಲಿಲ್ಲ. ಒಂದೂರಿನಿಂದ ಇನ್ನೊಂದು ಊರಿಗೆ ಹೋಗಿ ತಲುಪಬೇಕಾದಾಗ ರಾತ್ರಿ ಆಗಿಯೇ ಆಗುತ್ತಿತ್ತು. ಆಗ ಯಾರೂ  ದಾರಿ ತಿಳಿಯದೇ ಆತಂಕಕ್ಕೊಳಗಾಗ ದಿರಲಿ ಎಂಬ ಉದಾರತೆಯ ಮನೋಭಾವವಿತ್ತು. ಈಗೆಲ್ಲಾ ಬರೀ ಕೊಳಕು ತುಂಬಿದ ಮನಗಳೇ ಸೃಷ್ಟಿಯಾಗುತ್ತವೆ ಎಂದರೆ ಯಾರು ಇದಕ್ಕೆ ಹೊಣೆ? 


ಪ್ರಾಥಮಿಕ ಮಟ್ಟದಲ್ಲಿ ಓದು, ಆಟದ ಜೊತೆಗೆ ತಪ್ಪು ಮಾಡಿದುದಕ್ಕೆ ಶಿಕ್ಷೆಯು ಅನಿವಾರ್ಯವಾಗಿರಲೇ ಬೇಕು. ತಿದ್ದುವ ತಿದ್ದಿಕೊಳ್ಳುವ ರಹಸ್ಯವೇ ಏಟು.  ಆ ಏಟು ಈಗಿಲ್ಲ. ಹಾಗಾಗಿ ಈ ಸನ್ನಿವೇಶದಲ್ಲಿ ಇದಿರೇಟು ಬಂದಂತಾಗಿದೆ. ಏನೇ ಮಾಡಿದರೂ  ನಡೆಯುತ್ತದೆ ಅನ್ನುವ ಹದಿ ಹರೆಯದ ಮಕ್ಕಳ ಹುಂಬತನ ಎತ್ತ ಕಡೆಗೆ ಕೊಂಡೊಯ್ಯುತ್ತಿದೆ? ಸಂಸ್ಕಾರ, ಸುಳ್ಳು ಹೇಳದಿರುವುದು, ಇನ್ನೊಬ್ಬರ ಮೇಲೆ ವಿನಃಕಾರಣ ಆಪಾದನೆ ಮಾಡುವುದು ಕೊಂದ ಪಾಪಕ್ಕಿಂತಲೂ ಹೆಚ್ಚಲ್ಲವೇ? ಕೈಲಾಗದವರು ಮೈ ಪರಚಿಕೊಂಡರು ಎಂಬಂತೆ ಬಾಯೊಳಗಿನ ನಾಲಿಗೆ ಯಾವಾಗಲೂ ಜಾರುವುದೆಂದು ಅರಿತಿದ್ದರೂ ಜಾಗ್ರತೆ ವಹಿಸುವ ಮನಗಳು ನಾಲಿಗೆಯನ್ನು ಬೇಕು ಬೇಕಾದ ಹಾಗೆ ಜಾರಿಸುವುದು ಎಷ್ಟು ಸರಿ. ಮಾನವೀಯತೆ ಮರೆಯಾಗುತ್ತಿದೆ ಏಕೆ? 

 

ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವುದು ಆ ಮುಗ್ಧ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರಬಹುದು ಆಲೋಚಿಸಬೇಕಾಗಿದೆ. ಯಾರದೋ ತೆವಲಿಗೆ ಹುಟ್ಟಿದ ರೀತಿಯಲ್ಲಿ ಆಡಬಾರದಲ್ಲ? ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ ಎಳೆಯ ಕೈಗಳು ಅದನ್ನೇ ಆಯುಧವನ್ನಾಗಿ ಹಿಡಿದು ಹೊರಟಂತಿದೆ! ಹಾಗಾಗಿ ಅಂದದ್ದು ಬದುಕು ಬಿನ್ನಾಣಗಿತ್ತಿಯಲ್ಲ. ಮೇಲೊಬ್ಬ ಅಂಬಿಗನಿದ್ದಾನೆ. ಅವನಲ್ಲಿ ಎಲ್ಲಾ ಸಾಕ್ಷಿ ಆಧಾರಗಳು ಇದ್ದೇ ಇರುತ್ತವೆ. ಚಾಲನೆ ಮಾಡುವವನಿಗೆ ಎಲ್ಲಾ ಆಧಾರಗಳು ಬೇಕಿರುವಂತೆಯೇ ಇದು. ಒಂದೇ ಒಂದು ಆಧಾರವು ಕಡಿಮೆಯಾಯಿತು ಎಂದರೆ ದಂಡನೆ ಇದ್ದೇ ಇರುತ್ತದೆ. ಅದೇ ರೀತಿ ಎಲ್ಲಾ ಇದ್ದು ಎಲ್ಲೆ ಮೀರಿ ವರ್ತಿಸಿದರೆ ಬಾಳಿನ ಮುಳ್ಳು ನಮ್ಮನ್ನೇ ಚುಚ್ಚುವುದೆಂಬ ಸಣ್ಣ ಅರಿವು ಇರಲೇಬೇಕಲ್ಲ. ಬೂದಿ ಮುಚ್ಚಿದ ಕೆಂಡ ಆಗಬಾರದಲ್ಲ. ಅದಕ್ಕೆ ತರಗೆಲೆ ಕಸ ಕಡ್ಡಿಗಳನ್ನು ಹಾಕಿದಾಗ ನಿಜ ಸ್ವರೂಪ ಬಯಲಾಗಿ ಬಿಡುತ್ತದೆ. ಬದುಕು ಬಯಲಿನಂತೆಯೇ ಸ್ವಚ್ಛವಾಗಿರಲಿ. ವಿಶಾಲವಾದ ಗಾಳಿಯು ಬಂದು ಹೋಗುತ್ತಾ ಮನಸ್ಸಿನ ಕೊಳೆಯನ್ನು ಎಸೆದು ಬಿಡುವಂತಾಗಲಿ.




- ಮಲ್ಲಿಕಾ ಜೆ ಆರ್ ರೈ ಪುತ್ತೂರು 

ಅಧ್ಯಕ್ಷರು ಎಸ್ ಸಿ ಐ ಪುತ್ತೂರು ಘಟಕ.

mallikajrai8@gmail.com


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top