'ಸ್ನೇಹ' ಎಂಬ ಪದ ನಮ್ಮ ಕಿವಿಗೆ ಬಿದ್ದ ಕೂಡಲೇ ನಮ್ಮ ಮನದಲ್ಲೇನೋ ಪುಳಕ, ಆತ್ಮೀಯತೆಯ ಅನುಭೂತಿ. ಅತ್ಯಂತ ಸಮೀಪದ ಸಂಬಂಧಿಗಳಲ್ಲೂ ಕೊನೆಗೆ ಹೆತ್ತವರ ಬಳಿಯೂ ಹೇಳಿಕೊಳ್ಳದ ಮನದ ಮಾತುಗಳೆಲ್ಲ ಗೆಳೆಯ ಗೆಳತಿಯರ ಬಳಿ ಹೇಳಿಕೊಳ್ಳುವಷ್ಟರ ಮಟ್ಟಿಗಿನ ಆಪ್ತತೆ. ಸ್ನೇಹ ಲೋಕದಲ್ಲಿ ವಿಹರಿಸುವ ಜೀವಗಳಿಗೆ ವಯಸ್ಸು, ಜಾತಿ, ಅಂತಸ್ತು, ಲಿಂಗ, ಮಡಿಮೈಲಿಗೆ ಯಾವುದರ ಹಂಗೂ ಇರದು. ಇಂತಹ ಪರಿಶುದ್ಧ ಸ್ನೇಹಕ್ಕೆ ನಿದರ್ಶನವಾಗಿ ಹೆಸರಾದ ಅನೇಕರು ನಮ್ಮ ಇತಿಹಾಸ ಪರಂಪರೆಯಲ್ಲಿ ಕಾಣಸಿಗುತ್ತಾರೆ. ಕೃಷ್ಣ-ಸುಧಾಮ, ದುರ್ಯೋಧನ-ಕರ್ಣ, ಭೋಜರಾಜ-ಕಾಳಿದಾಸ ಇತ್ಯಾದಿ. ಆದರೆ ಗೆಳೆತನಕ್ಕೆ ಹೆಸರಾದ ಮಹಿಳೆಯರಿಲ್ಲವೇ ಎಂಬ ಪ್ರಶ್ನೆ ಬಂದಾಗ ಅಲ್ಲೊಂದು ಇಲ್ಲೊಂದು ಸ್ನೇಹಕ್ಕೆ ಹೆಸರಾದ ಜೀವದ ಗೆಳತಿಯರ ಹೆಸರೂ ನೆನಪಿಗೆ ಬರುವುದು. ಅವುಗಳಲ್ಲಿ ಪ್ರಮುಖವಾದದ್ದು ಶಿವಗಂಗೆಯ ರಾಣಿ ವೇಲು ನಾಚ್ಚಿಯಾರ್ ಮತ್ತು ಅವಳ ಆಪ್ತೆ ಉಡೈಯಲ್ ರ ನಡುವಿನ ಸ್ನೇಹ ಸಂಬಂಧ ಹಾಗೂ ನಾಚ್ಚಿಯಾರ್ ಸೈನ್ಯದಲ್ಲಿ ಸೇನಾನಿಯಾಗಿದ್ದ ಕುಯಿಲಿ, ರಾಣಿ ನಾಚ್ಚಿಯಾರಳೊಂದಿಗೆ ಹೊಂದಿದ್ದ ಸ್ನೇಹ ಬಾಂಧವ್ಯ.
ಆಗ ಬ್ರಿಟಿಷರ ಆಡಳಿತದ ಕಾಲ.ಅವರು ಕುತಂತ್ರಗಳಿಂದ ದಕ್ಷಿಣದ ಭಾರತದ ಆರ್ಕಾಟ್ ಸಂಸ್ಥಾನದ ನವಾಬನನ್ನು ತಮ್ಮೆಡೆಗೆ ಸೆಳೆದುಕೊಂಡು ತಮಿಳುನಾಡಿನ ಶಿವಗಂಗೆಯನ್ನು ವಶಪಡಿಸಿಕೊಳ್ಳಲು ಮುಂದಾದರು. ಆದರೆ ಅಲ್ಲಿನ ಪರಾಕ್ರಮಿ ರಾಜ ಮುತ್ತು ವಡುಗನಾಥ ಉದೈಯ ತೇವರ್ ಇದಕ್ಕೆ ಆಸ್ಪದ ಕೊಡಲಿಲ್ಲ. ಇದರಿಂದ ಕೆರಳಿದ ಬ್ರಿಟಿಷರು ನವಾಬನೊಂದಿಗೆ ಸೇರಿ ರಾಜನನ್ನು ಆತ ದೇವಸ್ಥಾನಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ ಇದ್ದಕ್ಕಿದಂತೆ ದಾಳಿ ಮಾಡಿ ಹತ್ಯೆ ಮಾಡುತ್ತಾರೆ. ದೇವಾಲಯವನ್ನು ಕೊಳ್ಳೆಹೊಡೆಯುತ್ತಾರೆ.ರಾಜನ ರಕ್ಷಣೆಗೆ ನಿಯುಕ್ತರಾಗಿದ್ದ ಮರುದು ಸೋದರರು ರಾಣಿ ವೇಲು ನಾಚ್ಚಿಯಾರ್ ಹಾಗೂ ಅವರ ಪುಟ್ಟ ಕಂದ ವೆಲ್ಲಾಚಿಯನ್ನು ಸುರಕ್ಷಿತವಾದ ಗುಪ್ತ ಸ್ಥಳ 'ವಿರೂಪಾಕ್ಷಿ'ಗೆ ಕಳುಹಿಸುತ್ತಾರೆ. ಇಲ್ಲಿ ಆಕೆಯನ್ನು ಯಾರ ಕಣ್ಣಿಗೂ ಬೀಳದಂತೆ ಕಾಯುತ್ತಾರೆ. ಹೀಗಾಗಿ ರಾಣಿ ವೇಲು ಸಾಮಾನ್ಯ ಮಹಿಳೆಯಂತೆ ಕಾಲ ಕಳೆಯಬೇಕಾಗುತ್ತದೆ. ಆದರೆ ರಾಣಿ ರಹಸ್ಯವಾಗಿ ಶಿವಗಂಗೆಯ ಎಲ್ಲ ಮಾಹಿತಿ ಪಡೆದುಕೊಳ್ಳುತ್ತಿದ್ದಳು.
ಇದೇ ಸಮಯದಲ್ಲಿ ನಾಚ್ವಿಯಾರ್ ಳನ್ನು ಕೊಲ್ಲಲು, ಅವಳನ್ನು ಹುಡುಕುತ್ತಿದ್ದ ಬ್ರಿಟೀಷರ ಕೈಗೆ ರಾಣಿಯ ಅತ್ಯಂತ ಆಪ್ತ ಗೆಳತಿಯಾಗಿದ್ದ ಉಡೈಯಲ್ ಸಿಕ್ಕಿ ಬೀಳುತ್ತಾಳೆ.ರಾಣಿಯಿರುವ ಸ್ಥಳದ ಪತ್ತೆಗಾಗಿ ಬ್ರಿಟಿಷರು, ನವಾಬ ಉಡೈಯಲ್ ಗೆ ನಾನಾ ಹಿಂಸೆಗಳನ್ನು ನೀಡುತ್ತಾರೆ. ಆದರೆ ಗೆಳತಿಯ ಪ್ರಾಣ ರಕ್ಷಣೆಗೆ ಪಣ ತೊಟ್ಟಿದ್ದ ಉಡೈಯಲ್ ಯಾವುದಕ್ಕೂ ಬಗ್ಗುವುದಿಲ್ಲ. ಇದರಿಂದ ಆಕ್ರೋಶಗೊಂಡ ನವಾಬನ ಸೈನಿಕರು ಅವಳ ದೇಹವನ್ನು ಸೀಳಿಹಾಕುತ್ತಾರೆ. ಗೆಳತಿಗಾಗಿ ಉಡೈಯಲ್ ಪ್ರಾಣವನ್ನೇ ತ್ಯಜಿಸುತ್ತಾಳೆ. ಈ ಸುದ್ಧಿ ಕೇಳಿ ನಾಚಿಯಾರ್ ಕುದ್ದುಹೋಗುತ್ತಾಳೆ. ಗುಪ್ತವಾಗಿ ಸೇನೆಯೊಂದನ್ನು ಕಟ್ಟುತ್ತಾಳೆ. ಈ ಸಮಯದಲ್ಲಿ ರಾಣಿಗೆ ಜೊತೆಯಾದವಳೇ ಕುಯಿಲಿ. ಅಪರಿಮಿತ ಧೈರ್ಯ ಶೌರ್ಯ, ಸಾಹಸ ಮನೋಭಾವ, ದೈಹಿಕ ಸಾಮರ್ಥ್ಯಗಳಿಂದ ಕುಯಿಲಿ ಬಲುಬೇಗ ರಾಣಿಯ ಆಪ್ತಳಾಗಿಬಿಟ್ಟಳು. ಶಿವಗಂಗೆಯ ಸ್ವಾತಂತ್ರ್ಯಕ್ಕೆ ರಾಣಿಯ ಬೆನ್ನೆಲುಬಾಗಿ ಕುಯಿಲಿ ದುಡಿಯತೊಡಗಿದಳು. ಸೇನೆಯ ಮುಖ್ಯಸ್ಥಳಾಗಿ ಅವಳ ನಿಷ್ಠೆ, ಪರಿಶ್ರಮಗಳು ಕುಯಿಲಿಯನ್ನು ರಾಣಿಯ ಆಪ್ತ ಗೆಳತಿಯಾಗಿಸಿಬಿಟ್ಟಿತ್ತು. ಅವರಿಬ್ಬರ ನಡುವೆ ಪರಿಶುದ್ಧ ಸ್ನೇಹದ ಬಾಂಧವ್ಯ ತಾನಾಗಿಯೇ ಬೆಸೆದುಕೊಂಡಿತು.
ಸರಿ ಸುಮಾರು ಐದು ಸಾವಿರ ಮಹಿಳೆಯರಿದ್ದ ಸೇನೆಗೆ ಯುದ್ಧ ಕ್ಕೆ ತರಬೇತಿ ನೀಡುವ ಮಹತ್ವದ ಹೊಣೆಗಾರಿಕೆ ಕುಯಿಲಿ ಹೆಗಲಿಗೆ ಬಿದ್ದಿತು.ಅದನ್ನು ಕುಯಿಲಿ ಬಹು ಸಮರ್ಥವಾಗಿ ನಿಭಾಯಿಸತೊಡಗಿದಳು. ಸೇನೆ ಸಿದ್ಧಗೊಂಡ ನಂತರ ಬ್ರಿಟಿಷರನ್ನು ಹಣಿಯಲು ಹವಣಿಸತೊಡಗಿದಳು. ಆದರೆ ಬ್ರಿಟೀಷರ ಮದ್ದುಗುಂಡುಗಳ ಮುಂದೆ ಯಾವುದೂ ನಿಲ್ಲದು ಎಂಬುದನ್ನು ಅರಿತಿದ್ದ ರಾಣಿ ಅವರ ಮದ್ದುಗುಂಡುಗಳನ್ನು ನಾಶಪಡಿಸುವ ಬಗೆಯನ್ನು ಚಿಂತಿಸತೊಡಗಿದಳು. ಚಾಣಾಕ್ಷತನವೇ ಮೈವೆತ್ತಂತಿದ್ದ ಕುಯಿಲಿ ಇದಕ್ಕಾಗಿ ಉಪಾಯವೊಂದನ್ನು ಹುಡುಕಿ ರಾಣಿಯ ಮನವೊಲಿಸಿ ಕಷ್ಟದಿಂದ ಅನುಮತಿಯನ್ನೂ ಪಡೆದಳು.ಆ ಉಪಾಯವಾದರೂ ಏನು?ತನ್ನದೇ ಬಲಿದಾನ ಬೇಡುವ ಮಹತ್ಕಾರ್ಯ!.
ಬ್ರಿಟಿಷರು ಶಿವಗಂಗೆಯ ರಾಜರಾಜೇಶ್ವರಿ ದೇವಳದ ನೆಲಮಾಳಿಗೆಯಲ್ಲಿ ಮದ್ದುಗುಂಡುಗಳನ್ನು ಅಡಗಿಸಿಟ್ಟಿದ್ದಾರೆಂಬ ಮಾಹಿತಿ ಪಡೆದ ಕುಯಿಲಿ ದೇವಳದೊಳಗೆ ಪ್ರವೇಶ ಪಡೆಯಲು ಉಪಾಯವೊಂದನ್ನು ಕಂಡುಹಿಡಿದಳು. ಯೋಜಿಸಿದಂತೆ ಕುಯಿಲಿ ತನ್ನ ಮಹಿಳಾ ಸೈನಿಕರನ್ನು ತುಪ್ಪ ತುಂಬಿದ ಕೊಡಗಳ ಸಹಿತವಾಗಿ ಪೂಜೆಯ ನೆಪದಲ್ಲಿ ದೇವಳಕ್ಕೆ ಕಳುಹಿಸಿ ತಾನೂ ಹಾಗೆಯೇ ಅವರೊಂದಿಗೆ ಒಳ ಪ್ರವೇಶಿಸಿದಳು. ಅಲ್ಲಿ ಕಾವಲಿದ್ದ ಸೈನಿಕರು ಈ ಮಹಿಳಾ ಸೈನಿಕರನ್ನು ಪೂಜೆಗೆಂದು ಬಂದ ಸಾಮಾನ್ಯ ಮಹಿಳೆಯರೆಂದೇ ಬಗೆದು ಒಳ ಪ್ರವೇಶಿಸಲು ಅನುಮತಿ ನೀಡಿದರು. ಸಂಭ್ರಮದಿಂದ ಪೂಜೆ ಸಂಪನ್ನಗೊಳ್ಳುತ್ತಲೇ ಅಲ್ಲೇ ಇದ್ದ ಕುಯಿಲಿ ಏಕಾಏಕಿ ಯುದ್ಧ ಘೋಷ ಮಾಡಿದಳು. ಅಲ್ಲಿ ಬಂದಿದ್ದ ಮಹಿಳಾ ಸೈನಿಕರು ತುಪ್ಪ ಗಡಿಗೆಗಳನ್ನು ಕೆಳಗಿಟ್ಟು ಖಡ್ಗ ಗುರಾಣಿಗಳನ್ನು ತೆಗೆದುಕೊಂಡು ಅಲ್ಲಿದ್ದ ಸೈನಿಕರ ಮೇಲೆ ಮುಗಿಬಿದ್ದರು. ದೇವಿಯ ಪೂಜೆ ಇದ್ದುದ್ದರಿಂದ ಹೆಚ್ಚು ಸೈನಿಕರನ್ನು ನಿಯೋಜಿಸಲಾಗಿರಲಿಲ್ಲ. ಅಲ್ಲಿದ್ದಷ್ಟು ಸೈನಿಕರನ್ನು ಮಹಿಳಾ ಸೈನಿಕರು ಹೊಡೆದುರುಳಿಸಿದರು. ಅಳಿದುಳಿದ ಸೈನಿಕರು ಕುಯಿಲಿಯತ್ತ ಧಾವಿಸಿದರು.
ಅಷ್ಟರಲ್ಲಾಗಲೇ ರಣಚಂಡಿಯ ರೂಪ ತಾಳಿದ್ದ ಕುಯಿಲಿ ಮಹಿಳಾ ಸೈನಿಕರಿಗೆ ಗಡಿಗೆಗಳಲ್ಲಿ ತಂದಿದ್ದ ತುಪ್ಪವನ್ನು ತನ್ನ ಮೇಲೆ ಸುರಿಯುವಂತೆ ಆಜ್ಞಾಪಿಸಿದಳು. ತುಪ್ಪದಲ್ಲಿ ತೊಯ್ದ ಕುಯಿಲಿ ತನ್ನ ಕೈಯಲ್ಲಿದ್ದ ದೀಪವನ್ನು ತನ್ನ ಮೇಲೆ ಹಾಕಿಕೊಂಡಳು. ಮೊದಲೇ ತುಪ್ಪದಿಂದ ತೊಯ್ದಿದ್ದ ಕುಯಿಲಿಯ ದೇಹಕ್ಕೆ ಭಗ್ಗನೆ ಬೆಂಕಿ ಹೊತ್ತಿ ದೊಡ್ಡ ಜ್ವಾಲೆ ನಿರ್ಮಾಣವಾಯಿತು. ಬೆಂಕಿಯಿಂದ ದೇಹ ದಗ್ಧವಾಗುತ್ತಿದ್ದರೂ ಯಾವ ಒಂದು ಸಣ್ಣ ಚೀತ್ಕಾರವೂ ಇಲ್ಲದೆ ಕುಯಿಲಿ ವೀರಾವೇಶದಿಂದ ಓಡಿ ಮದ್ದುಗುಂಡುಗಳಿಟ್ಟಿದ್ದ ಉಗ್ರಾಣಕ್ಕೆ ಹಾರಿದಳು. ಕ್ಷಣ ಮಾತ್ರದಲ್ಲಿ ಅಲ್ಲಿ ಸಂಗ್ರಹಿಸಿಡಲಾಗಿದ್ದ ಮದ್ದು ಗುಂಡುಗಳು ಭಾರೀ ಸದ್ದಿನೊಂದಿಗೆ ಸಿಡಿದು ಭಸ್ಮವಾಯಿತು. ತನ್ನ ಜೀವದ ಗೆಳತಿಗಾಗಿ, ರಾಜನಿಷ್ಠೆಗಾಗಿ ಕುಯಿಲಿ ತನ್ನನ್ನೇ ಅಗ್ನಿಗಾಹುತಿಯಾಗಿಸಿಕೊಂಡಳು. ಇದನ್ನು ಕಂಡ ಉಳಿದ ಸೈನಿಕರು ಸ್ತಂಭೀಭೂತರಾದರು. ಈ ಸುದ್ಧಿ ಮುಟ್ಟುತ್ತಿದ್ದಂತೆ ಅತ್ತ ರಾಣಿ ನಾಚ್ಚಿಯಾರ್ ಬ್ರಿಟೀಷರ ವಶದಲ್ಲಿದ್ದ ತನ್ನ ಶಿವಗಂಗೆ ಕೋಟೆಗೆ ಮುತ್ತಿಗೆ ಹಾಕಿದಳು. ದಾಸ್ತಾನು ಕಳೆದುಕೊಂಡಿದ್ದ ಬ್ರಿಟಿಷರು ರಾಣಿಗೆ ಶರಣಾದರು. ನವಾಬನ ಸೈನಿಕರನ್ನು ರಾಣಿ ಚೆಂಡಾಡಿದಳು. ಮರುದು ಸೋದರರು ಈ ಕದನದಲ್ಲಿ ರಾಣಿಗೆ ಬೆಂಗಾವಲಾಗಿ ನಿಂತರು. ತನ್ನ ಅಸೀಮ ಸಾಹಸ ಶೌರ್ಯದಿಂದ ರಾಣಿ ನಾಚ್ಚಿಯಾರ್ ಶಿವಗಂಗೆ ಕೋಟೆಯನ್ನು ಮತ್ತೆ ವಶಪಡಿಸಿಕೊಂಡಳು. ತಾನು ಬದುಕಿರುವವರೆಗೂ ರಾಣಿ ಎಂದಿಗೂ ಬ್ರಿಟಿಷರಿಗೆ ತಲೆಬಾಗಿಸದೆ ಸ್ವತಂತ್ರವಾಗಿ ಆಳಿದ್ದು ಆಕೆಯ ಹಿರಿಮೆಗೆ ಸಾಕ್ಷಿ.
ತನಗಾಗಿ ತಮ್ಮ ಜೀವವನ್ನೇ ಸಮರ್ಪಿಸಿದ ತನ್ನ ಜೀವದ ಗೆಳತಿಯರ ನೆನಪಿಗಾಗಿ ನಾಚ್ಚಿಯಾರ್, ಉಡೈಯಲ್ ಸ್ಮರಣಾರ್ಥ ತನ್ನ ಸೇನೆಗೆ 'ಉಡೈಯಲ್ ಸೇನೆ'ಎಂದು ನಾಮಕರಣ ಮಾಡಿದರೆ,ಕುಯಿಲಿ ನೆನಪಿಗೆ ಒಂದು ಭವ್ಯ ಸ್ಮಾರಕ ನಿರ್ಮಿಸಿದಳೆಂದು ಇತಿಹಾಸ ಹೇಳುತ್ತದೆ.
ಗೆಳತಿಗಾಗಿ ಬರ್ಬರ ಕೊಲೆಗೀಡಾದ ಉಡೈಯಲ್ ಹಾಗೂ ಆತ್ಮಾಹುತಿ ಮಾಡಿಕೊಂಡ ಕುಯಿಲಿ ಇತಿಹಾಸದಲ್ಲಿ ಸ್ನೇಹಕ್ಕಾಗಿ, ರಾಜನಿಷ್ಠೆಗಾಗಿ ತಮ್ಮನ್ನೇ ಸಮರ್ಪಿಸಿಕೊಂಡ ಧೀರೋದಾತ್ತ ಮಹಿಳೆಯರಾಗಿ ನಮಗೆ ಕಾಣಸಿಗುತ್ತಾರೆ. ಸ್ನೇಹ ದಿನದ ಈ ಸಂದರ್ಭದಲ್ಲಿ ಹಾಗೂ ಸ್ವಾತಂತ್ರ್ಯ ದಿನವೂ ಸಮೀಪಿಸುತ್ತಿರುವ ಈ ಶುಭ ಸಮಯದಲ್ಲಿ ಈ ಮಹಾನ್ ಸ್ತ್ರೀ ಮೂರ್ತಿಗಳ ತ್ಯಾಗ ಬಲಿದಾನಗಳು ಗೌರವಾರ್ಹ ಹಾಗೂ ಸ್ಮರಣಾರ್ಹವಾಗಿವೆ.
- ಎಸ್.ಎಲ್.ವರಲಕ್ಷ್ಮೀಮಂಜುನಾಥ್, ನಂಜನಗೂಡು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ