ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ದೇಶದಾದ್ಯಂತ ಆಚರಿಸಲಾಗುತ್ತದೆಯಾದರೂ ಉಡುಪಿಯ ವಿಶ್ವಪ್ರಸಿದ್ಧ ಶ್ರೀಕೃಷ್ಣ ಮಠದಲ್ಲಿ ಆಚರಿಸಲಾಗುವ ಕೃಷ್ಣ ಜನ್ಮಾಷ್ಟಮಿಯು ಅತ್ಯಂತ ವಿಶೇಷ. ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಕೃಷ್ಣನ ಜನ್ಮ ದಿನದ ಸಂಭ್ರಮವು ಹಬ್ಬದ ವಾತಾವರಣವೇ ಅನನ್ಯ. ಅದರಲ್ಲೂ, ಶ್ರೀಕೃಷ್ಣ ಜನ್ಮಾಷ್ಟಮಿಯ ವಿಟ್ಲ ಪಿಂಡಿ ಅತ್ಯಂತ ವಿಶೇಷ. ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಸಲಾಗುವ ವಿಟ್ಲ ಪಿಂಡಿಯ ಮಹತ್ವ ಅಮೋಘವಾದುದು.
ಮೊಸರು ಕುಡಿಕೆ, ಹುಲಿವೇಷ ಇಲ್ಲದೇ ಸ್ಥಳೀಯರಿಗೆ ಜನ್ಮಾಷ್ಟಮಿ ಅಪೂರ್ಣ. ಇದನ್ನು ನಗರದೆಲ್ಲೆಡೆ ನಾಡ ಹಬ್ಬ ಎಂದು ಆಚರಿಸಲಾಗುತ್ತದೆ. ಉಡುಪಿಯಲ್ಲಿ ವಿಟ್ಲ ಪಿಂಡಿಯನ್ನು ಶ್ರೀಕೃಷ್ಣ ಲೀಲೋತ್ಸವ ಎಂತಲೂ ಕರೆಯಲಾಗುತ್ತದೆ. ಏಕೆಂದರೆ, ಇಲ್ಲಿ ಈ ದಿನ ನಡೆಯುವ ಮೆರವಣಿಗೆಯು ಮುಖ್ಯವಾಗಿ ಶ್ರೀಕೃಷ್ಣ ಬಾಲಲೀಲೆಗಳನ್ನು ಒಳಗೊಂಡಿರುತ್ತದೆ.ವಿಟ್ಲ ಪಿಂಡಿ ಎನ್ನುವ ಪದವು ಶ್ರೀಕೃಷ್ಣನ ಬಾಲ್ಯದ ಹೆಸರಾದ 'ವಿಟ್ಟಲ' ಎನ್ನುವ ಪದದಿಂದ ಬಂದಿದೆ. ಪಿಂಡಿ ಎಂದರೆ ‘ಬಂದ’ ಎನ್ನುವ ಅರ್ಥವನ್ನು ನೀಡುತ್ತದೆ. ಇದರರ್ಥ ಹಾಲು, ಮೊಸರು, ಬೆಣ್ಣೆ ಇತ್ಯಾದಿಗಳನ್ನು ಒಳಗೊಂಡಿರುವ ಮಣ್ಣಿನ ಮಡಿಕೆಯಾಗಿದೆ. ಶ್ರೀ ಕೃಷ್ಣನು ತನ್ನ ಬಾಲ್ಯದ ದಿನಗಳಲ್ಲಿ ಹಾಲು, ಬೆಣ್ಣೆ ಮತ್ತು ಮೊಸರು ಹೊಂದಿರುವ ಮಣ್ಣಿನ ಮಡಕೆಗಳನ್ನು ಒಡೆಯುತ್ತಿದ್ದನು. ಕಾಲ ಕಳೆದಂತೆ ‘ವಿಠ್ಠಲ ಬಂದ’ ‘ವಿಟ್ಟಲ ಪಿಂಡಿ’ ಎನ್ನುವ ಹೆಸರನ್ನು ಪಡೆದುಕೊಂಡಿತು. ಮೊಸರು ಕುಡಿಕೆಯನ್ನು ಕೂಡ ವಿಟ್ಲ ಪಿಂಡಿಯ ದಿನದಂದೇ ಆಚರಿಸಲಾಗುತ್ತದೆ. ಉಡುಪಿಯಲ್ಲಿ ಮಧ್ಯರಾತ್ರಿ ಶ್ರೀಕೃಷ್ಣನಿಗೆ ಅರ್ಘ್ಯ ಸಲ್ಲಿಸುವಿಕೆಯು ಮತ್ತೊಂದು ವಿಶೇಷವಾಗಿದ್ದು,
ಅರ್ಘ್ಯ ಎಂದರೆ ದೇವಾಲಯದ ಗರ್ಭಗುಡಿಯಲ್ಲಿರುವ ಶ್ರೀಕೃಷ್ಣ ದೇವರ ವಿಶೇಷವಾಗಿ ತಯಾರಿಸಿದ ಜೇಡಿಮಣ್ಣಿನ ವಿಗ್ರಹಕ್ಕೆ ಹಾಲು ಮತ್ತು ನೀರನ್ನು ಅರ್ಪಿಸುವುದು. ಈ ವಿಶೇಷ ಆಚರಣೆಯು ಮಧ್ಯರಾತ್ರಿಯಲ್ಲಿ ನಡೆಯುತ್ತದೆ ಮತ್ತು ಅದು ಮುಖ್ಯ ಕಾರ್ಯಕ್ರಮವಾಗಿರುತ್ತದೆ. ಮರುದಿನ ಶ್ರೀ ಕೃಷ್ಣ ಲೀಲೋತ್ಸವವು ನಡೆಯುತ್ತದೆ. ಇದನ್ನು ಸ್ಥಳೀಯವಾಗಿ ವಿಟ್ಲ ಪಿಂಡಿ ಎಂದು ಕರೆಯಲಾಗುತ್ತದೆ.ಶ್ರೀಕೃಷ್ಣ ಮಠದಲ್ಲಿ ವಿಟ್ಲ ಪಿಂಡಿಯು ಮುಕ್ತಾಯಗೊಂಡ ನಂತರ, ಆ ದಿನ ಭಕ್ತರಿಗೆ ವಿತರಿಸಲು ‘ಚಕ್ಕುಲಿ’ ಮತ್ತು ‘ಲಡ್ಡೂ’ಗಳನ್ನು ತಯಾರಿಸಲಾಗುತ್ತದೆ. ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೆ ಉಪವಾಸದ ನಂತರ ಶ್ರೀಕೃಷ್ಣನಿಗೆ ಚಕ್ಕುಲಿ ಮತ್ತು ಲಡ್ಡುಗಳನ್ನು ಅರ್ಪಿಸಲಾಗುತ್ತದೆ. ಬಳಿಕ ಶ್ರೀಕೃಷ್ಣನಿಗೆ ಅರ್ಪಿಸಿದ ಲಡ್ಡು ಮತ್ತು ಚಕ್ಕುಲಿಗಳನ್ನು ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ.
ಎಷ್ಟೇ ವರ್ಣಿಸಿದರೂ ಆ ಸಂಭಮವನ್ನು ಪದಗಳಲ್ಲೇ ಕಟ್ಟಿ ಕೊಡುವುದು ಕಷ್ಟ, ಒಮ್ಮೆ ಆ ಸೊಬಗನ್ನು ಉಡುಪಿಯ ವಿಟ್ಲ ಪಿಂಡಿಗೆ ಹೋಗಿಯೇ ಸವಿಯಬೇಕಷ್ಟೇ.
ದ್ವಿತೀಯ ಬಿ. ಎ.
ಚಾಣಕ್ಯ ವಿಶ್ವವಿದ್ಯಾನಿಲಯ
ದೇವನಹಳ್ಳಿ,ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ