ಮಂಗಳೂರು: ಅಮೆಜಾನ್ ತನ್ನ ಮಾರ್ಕೆಟ್ ಪ್ಲೇಸ್‍ನಲ್ಲಿ ವಿವಿಧ ವರ್ಗದ ಉತ್ಪನ್ನಗಳನ್ನು ಮಾರಾಟ ಮಾಡುವ ಮಾರಾಟಗಾರರಿಗೆ ಶುಲ್ಕವನ್ನು ಕಡಿಮೆ ಮಾಡುತ್ತಿರುವಾಗಿ ಘೋಷಿಸಿದೆ. ಹಬ್ಬದ ಸೀಸನ್ ಸಮೀಪಿಸುತ್ತಿರುವುದರಿಂದ ಮತ್ತು ಹಬ್ಬದ ಮಾರಾಟಕ್ಕೆ ಮಾರಾಟಗಾರರು ಸಿದ್ಧವಾಗುತ್ತಿರುವುದರಿಂದ ಅವರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಸೆಪ್ಟೆಂಬರ್ 9ರಿಂದ ಮಾರಾಟ ಶುಲ್ಕವನ್ನು ಕಡಿಮೆ ಮಾಡಲಾಗುತ್ತಿದೆ.
ಈ ಯೋಜನೆಯು ಮಾರಾಟಗಾರರು ಅಮೆಜಾನ್.ಇನ್ ನಲ್ಲಿ ತಮ್ಮ ಉತ್ಪನ್ನ ಶ್ರೇಣಿ ವಿಸ್ತರಿಸಲು ಮತ್ತು ಅವರ ವ್ಯವಹಾರ ಬೆಳೆಸಲು ಅನುವು ಮಾಡಿ ಕೊಡುತ್ತದೆ. ಈ ಯೋಜನೆಯ ಮೂಲಕ ಅಮೆಜಾನ್ ಇಂಡಿಯಾ ಸಂಸ್ಥೆಯು ಮಾರಾಟಗಾರರಿಗೆ ವಿವಿಧ ಉತ್ಪನ್ನ ವಿಭಾಗಗಳಲ್ಲಿ ಶೇ.3 ರಿಂದ ಶೇ.12ರವರೆಗಿನ ಮಾರಾಟ ಶುಲ್ಕ ಕಡಿಮೆಗೊಳಿಸುವ ಪ್ರಯೋಜನ ಒದಗಿಸುತ್ತಿದೆ ಎಂದು ಅಮೆಜಾನ್ ಇಂಡಿಯಾದ ಸೆಲ್ಲಿಂಗ್ ಪಾರ್ಟ್‍ನರ್ ಸರ್ವೀಸಸ್ ವಿಭಾಗದ ನಿರ್ದೇಶಕ ಅಮಿತ್ ನಂದಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಈ ಹೊಸ ದರ ಕಾರ್ಡ್ ವಿಶೇಷವಾಗಿ ರೂ.500 ಕ್ಕಿಂತ ಕಡಿಮೆ ಬೆಲೆಯ ಕೈಗೆಟುಕುವ ದರದ ಉತ್ಪನ್ನಗಳನ್ನು ಒದಗಿಸುವ ಮಾರಾಟಗಾರರಿಗೆ ಹೆಚ್ಚಿನ ಲಾಭ ನೀಡುತ್ತದೆ. ಉದಾಹರಣೆಗೆ ರೂ. 299ರ ಬೆಲೆಯಲ್ಲಿ ಮುದ್ರಿತ ಟೀ ಶರ್ಟ್‍ಗಳನ್ನು ಮಾರಾಟ ಮಾಡುತ್ತಿರುವ ಮಾರಾಟಗಾರರು ಈಗ ಕೇವಲ 2% ರಷ್ಟು ಕಡಿಮೆ ರೆಫರಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹಿಂದೆ ಅವರು 13.5%ನಷ್ಟು ಶುಲ್ಕವನ್ನು ಪಾವತಿಸಬೇಕಿತ್ತು.
ಇದರಿಂದಾಗಿ ಮಾರಾಟಗಾರರಿಗೆ ಪ್ರತೀ ಉತ್ಪನ್ನದಲ್ಲಿ ರೂ.34ರಷ್ಟು ಉಳಿತಾಯ ಆಗುತ್ತದೆ. ಶುಲ್ಕ ಕಡಿತ ಆಫರ್ ವ್ಯಾಪಕ ಶ್ರೇಣಿಯ ಉತ್ಪನ್ನ ವಿಭಾಗಗಳ ಮೇಲೆ ಅನ್ವಯಿಸುತ್ತವೆ. ಹೋಮ್ ಫರ್ನಿಶಿಂಗ್ ಅಂದರೆ ಗೃಹಾಲಂಕಾರ ಉತ್ಪನ್ನಗಳ ಮೇಲೆ 9% ಕಡಿತ, ಒಳಾಂಗಣ ಲೈಟಿಂಗ್ ಉತ್ಪನ್ನಗಳ ಮೇಲೆ 8% ಕಡಿತ, ಗೃಹೋತ್ಪನ್ನಗಳ ಮೇಲೆ 8% ಕಡಿತ ಘೋಷಿಸಲಾಗಿದ್ದು, ಹೀಗೆ ಬೇರೆ ಬೇರೆ ವಿಭಾಗಕ್ಕೆ ಭಿನ್ನ ರೀತಿಯ ಶುಲ್ಕ ಕಡಿತ ಅನ್ವಯವಾಗುತ್ತದೆ ಎಂದು ವಿವರಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ