ಬಾಲ್ಯದಲ್ಲಿ ಆಗಸ್ಟ್ ಬಂದರೆ ಸಾಕು, ಎಲ್ಲಿಲ್ಲದ ಸಂಭ್ರಮ- ಮನದಲ್ಲೇನೋ ಖುಷಿ. ಯಾಕಂದರೆ ಆ ತಿಂಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ. ಅಂದು ಎಲ್ಲೆಡೆ ತ್ರಿವರ್ಣ ಧ್ವಜ ಹಾರಾಡುತ್ತದೆ. ಶಾಲೆಯಲ್ಲಿ ಅಂದು ಪಾಠಗಳಿರುವುದಿಲ್ಲ ಅನ್ನುವ ಖುಷಿ ಒಂದೆಡೆಯಾದರೆ, ಉತ್ಸವದ ಪ್ರಯುಕ್ತವಾಗಿ ಸಿಹಿ ತಿಂಡಿಗಳು ದೊರೆಯುತ್ತವೆ ಮತ್ತು ಮೆರವಣಿಗೆ ಹೋಗಲಿಕ್ಕೆ ಇರುತ್ತದೆ ಅನ್ನೋದು ಮತ್ತೊಂದು ಖುಷಿಯ ಸಂಗತಿ. ಅಂದು ಶಾಲೆಗೆ ಹೊರಡುವುದೇ ಮತ್ತೊಂದು ಸಂಭ್ರಮದ ವಿಷಯ; ಅದೊಂದು ಹಬ್ಬದಂತೆ, ಬೆಳಗ್ಗೆ ಬೇಗ ಎದ್ದು ಹೊಸ ಸಮವಸ್ತ್ರ ಧರಿಸಿ, ಮನೆಯಲ್ಲಿರುವ ಹೂಗಳನ್ನು ಧ್ವಜಸ್ತಂಭಕ್ಕೆ ಸಿಂಗರಿಸಲೆಂದು ತಾನು ಹೆಚ್ಚೆಚ್ಚು ತೆಗೆದುಕೊಂಡು ಹೋಗಬೇಕೆಂಬ ಹುರುಪಿನ ಸ್ಪರ್ಧೆ, ಅಮ್ಮನ ಬಳಿ ಒಂದಿಷ್ಟು ಹಣ ಪಡೆದು ದಾರಿ ಮಧ್ಯದಲ್ಲಿ ಸಿಗುವ ಅಂಗಡಿಯಲ್ಲಿ ಬಾವುಟವನ್ನು ತೆಗೆದುಕೊಂಡು ಶಾಲೆಯತ್ತ ಪಟಪಟನೆ ಓಡುವುದು. ಬೆಳ್ಳಂಬೆಳಗ್ಗೆ ಇಷ್ಟು ಮಾಡಿ ಶಾಲೆ ತಲುಪುವಷ್ಟು ಹೊತ್ತಿಗೆ ಕಾರ್ಯಕ್ರಮದ ಸಮಯವಾಗಿರುತಿತ್ತು. ಕಾರ್ಯಕ್ರಮ ಆರಂಭವಾಗುವ ಸ್ವಲ್ಪ ಹೊತ್ತಿನ ಮುಂಚೆ ಎಷ್ಟು ಜನ ಬಾವುಟ ತಂದಿದ್ದಾರೆ? ಎಷ್ಟು ಬಾವುಟ ತಂದಿದ್ದಾರೆ? ಯಾರ ಬಾವುಟ ಯಾವ ರೀತಿ ಇದೆ? ಯಾವ ರೀತಿಯ ಬ್ಯಾಂಡ್- ಯೂನಿಫಾರ್ಮ್ ಧರಿಸಿ ಬಂದಿದ್ದಾರೆ? ಅಂತ ನೋಡುವುದೇ ನಮ್ಮ ಕೆಲಸವಾಗಿತ್ತು. ಅದೊಂದು ವರ್ಣನೆಗೆ ನಿಲುಕದ ಅದ್ಭುತ ಕ್ಷಣಗಳು.
ಧ್ವಜಾರೋಹಣ ನಡೆಸಿ, ಒಂದು ತಿಂಗಳಿಂದ ಅಭ್ಯಸಿಸಿದ್ದ ಧ್ವಜ ಗೀತೆ, ದೇಶಭಕ್ತಿ ಗೀತೆ, ಕವಾಯಿತುಗಳನ್ನು ಪ್ರದರ್ಶಿಸಿ, ಊರಿನವರು ಹಾಗೂ ಶಿಕ್ಷಕರಿಂದ ಮೆಚ್ಚುಗೆ ಗಳಿಸಿ, ಮೆರವಣಿಗೆಗಾಗಿ ಹೆಜ್ಜೆ ಹಾಕುತ್ತಿದ್ದೆವು. ಎಲ್ಲರ ಕೈಯಲ್ಲೂ ತ್ರಿವರ್ಣ ಧ್ವಜಗಳು ಹಾರಾಡುತ್ತಿದ್ದವು. ಸ್ವಾತಂತ್ರ್ಯೋತ್ಸವದ ಸಂದೇಶವನ್ನು ಸಾರುತ್ತ, ಘೋಷಗಳನ್ನು ಕೂಗುತ್ತಾ, ಸುಮಾರು ಒಂದು ಕಿಲೋಮೀಟರ್ ದೂರದವರೆಗೆ ನಡೆದು ಹೋಗುತ್ತಿದ್ದೆವು. ರಸ್ತೆ ಬದಿಯಲ್ಲಿ ನಿಂತು ನಮ್ಮನ್ನು ನೋಡುವ ಊರಿನ ಜನರನ್ನು ಕಂಡು ದೇಶ ಪ್ರೇಮ ಉಕ್ಕಿ ಪೋಷಣೆಗಳನ್ನು ಜೋರಾಗಿ ಕೂಗುತ್ತಿದ್ದು ಇಂದಿಗೂ ನೆನಪಿದೆ.
ಹಿಂದಿರುಗಿ ಶಾಲೆಗೆ ತಲುಪಿದಾಗ ದಾರಿ ಮಧ್ಯೆ ಸಿಗುವ ಅಂಗಡಿಗಳ ಮಾಲೀಕರು ಸಿಹಿ ತಿಂಡಿ, ಚಾಕಲೇಟ್ ಹಾಗೂ ತಂಪು ಪಾನಿಯಗಳನ್ನು ಕೊಡುತ್ತಿದ್ದರು. ಅದನ್ನು ಕಂಡ ಕೂಡಲೇ ಆದ ದಣಿವೆಲ್ಲ ಮಾಯವಾಗುತ್ತಿತ್ತು. ಅನಂತರ ಶಾಲೆಯಲ್ಲಿ ಭಾಷಣ ಸ್ಪರ್ಧೆ, ಭಗತ್ ಸಿಂಗ್ ಚಂದ್ರಶೇಖರ ತಿಲಕರು ಹಾಗೂ ಹತ್ತು ಹಲವರು ಸ್ವಾತಂತ್ರ್ಯಕ್ಕಾಗಿ ಮಾಡಿದ ಬಲಿದಾನದ ಸಾಹಸ ಕಥೆಗಳನ್ನು ಕೇಳುವಾಗ ಮೈ ರೋಮಾಂಚನಗೊಳ್ಳುತ್ತಿತ್ತು.
ಕಾಲೇಜು ಅಂತಕ್ಕೆ ಬಂದಾಗ ಈ ದಿನ ಸಾರ್ವಜನಿಕ ರಜೆ. ಎಂದಿನಂತೆ ಧ್ವಜಾರೋಹಣ ಕಾರ್ಯಕ್ರಮವಿದ್ದರೂ, ಮನಸಿದ್ದವರು, ಹಾಜರಾಗಬಹುದು ಇಲ್ಲದಿದ್ದಲ್ಲಿ ಯಾವುದೇ ಹೇರಿಕೆಗಳಿಲ್ಲ. ಒಟ್ಟಾರೆಯಾಗಿ ಆ ದಿನಗಳಲ್ಲಿದ್ದ ಸಂಭ್ರಮವಿಲ್ಲ. ಕೆಲವರು ಒತ್ತಾಯಪೂರ್ವಕವಾಗಿ ಬಂದಿದ್ದಲ್ಲಿ ಯಾವಾಗ ಅತಿಥಿಗಳ ಭಾಷಣ ಮುಗಿಯುವುದು ಎಂದು ಗೊಣಗುತ್ತಾ ನಿರುತ್ಸಾಹಿಗಳಾಗಿ ಭಾಗಿಯಾಗಿರುತ್ತಾರೆ. ಉತ್ತಮ ಕಾರ್ಯಕ್ರಮಗಳು ಮೂಡಿ ಬರುತ್ತಿದ್ದರು ಯುವ ಮನಸ್ಸುಗಳಲ್ಲಿ ಉತ್ಸಾಹವಿಲ್ಲ. ಇಂದು ಸ್ವಾತಂತ್ರ್ಯ ದಿನಾಚರಣೆ ಎಂಬುದು ಬರೀ ಸಾಮಾಜಿಕ ಜಾಲತಾಣಕ್ಕೆ ಸೀಮಿತವಾಗಿದೆ, ಬೆಳಗೆದ್ದು ವಾಟ್ಸಪ್ ನಲ್ಲಿ ಶುಭಾಶಯಗಳು ಅಂತ ಸ್ಟೇಟಸ್ ಹಾಕಿದ್ರೆ ಮುಗೀತು. ದೇಶಪ್ರೇಮ ಎಲ್ಲಾ ಇಪ್ಪತ್ನಾಲ್ಕು ಗಂಟೆಯಲ್ಲಿ ಮುಗಿದು ಹೋಗುತ್ತದೆ.
ಸ್ವಾತಂತ್ರ್ಯ ಸಂಗ್ರಾಮವಾಗಲಿ ಅಥವಾ ಸ್ವಾತಂತ್ರಕ್ಕೆಂದು ಹೋರಾಡಿದವರ ಬಗ್ಗೆ ಕೇಳಿದರೆ ನಮ್ಮಲ್ಲಿ ಉತ್ತರವಿರುವುದಿಲ್ಲ, ಹೀಗೆ ಮುಂದುವರಿದರೆ ಈ ದಿನದ ಆಚರಣೆಯ ಉದ್ದೇಶವೇ ಮರೆತು ಹೋದಿತು. ಬಾಲ್ಯದಲ್ಲಿನ ಉತ್ಸಾಹ-ಚೈತನ್ಯ ಮತ್ತೆ ಮೂಡಿ ಬರಲಿ. ಯುವ ಜನತೆ ಮತ್ತೊಮ್ಮೆ ಮಗದೊಮ್ಮೆ ಎಂದೆಂದೂ ಈ ಸಂಭ್ರಮವನ್ನು ಆಚರಿಸುತ್ತಾ, ಅದರ ಬಗ್ಗೆ ತಿಳಿದುಕೊಳ್ಳುವಂತಾಗಲಿ. ವರ್ಷಕ್ಕೊಮ್ಮೆ ಆಚರಿಸುವ ದಿನದ ಹಿನ್ನೆಲೆಯನ್ನು ವರ್ಷವಿಡೀ ನೆನೆಯುವ ಯುವ ಪೀಳಿಗೆ ನಮ್ಮದಾಗಲಿ.
-ಸುಶ್ಮಿತಾ ಬಿ. ಆರ್
ದ್ವಿತೀಯ ಬಿ.ಎ.
ಚಾಣಕ್ಯ ವಿಶ್ವವಿದ್ಯಾನಿಲಯ
ದೇವನಹಳ್ಳಿ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ