ಸಮಾಜಕ್ಕೆ ಕೊಡುಗೆ ನೀಡುವ ಉನ್ನತ ಗುರಿಯೊಂದಿಗೆ ಮುನ್ನಡೆಯಿರಿ: ಮುಲ್ಲೈ ಮುಗಿಲನ್

Upayuktha
0

ಪತ್ರಕರ್ತರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ





ಮಂಗಳೂರು: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಕೊಡುಗೆ ನೀಡುವ ಉನ್ನತ ಗುರಿಯೊಂದಿಗೆ ಮುನ್ನಡೆಯಿರಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಯುವ ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಅವರು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾಭವನದಲ್ಲಿ ಭಾನುವಾರ 2023-24ರ ಸಾಲಿನಲ್ಲಿ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 90 ಕ್ಕೂ ಹೆಚ್ಚು ಅಂಕ ಗಳಿಸಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಿ ಮಾತನಾಡುತ್ತಿದ್ದರು.


ಶಿಕ್ಷಣ ನಮ್ಮನ್ನು ಸಮಾಜ ಮುಖಿಯಾಗಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಸಮಾಜದ ಸರಿ ತಪ್ಪುಗಳನ್ನು ಗುರುತಿಸಲು ಸಹಾಯ ಮಾಡಬೇಕು.‌ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಉನ್ನತ ಗುರಿಯೊಂದಿಗೆ ನಿರಂತರ ಪ್ರಯತ್ನ ಪಡಬೇಕು. ಆ ಗುರಿ ಬದುಕನ್ನು ಅರ್ಥಪೂರ್ಣ ಗೊಳಿಸುವಂತಿರಬೇಕು. ಪತ್ರ ಕರ್ತರು ಪ್ರಾಕೃತಿಕ ವಿಕೋಪಗಳಾದ, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ರೀತಿ ಅವರ ಘನತೆಯನ್ನು ಹೆಚ್ಚಿಸಿದೆ ಅದಕ್ಕಾಗಿ ಅವರಿಗೆ ತಾನು ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.


ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಶಿರೂರು ದುರಂತದ ಸಂದರ್ಭ ಮಾನವೀಯ ಕೆಲಸ ಮಾಡಿರುವ ಪತ್ರಕರ್ತರ ಕಾರ್ಯ ರಾಜ್ಯದ ಎಲ್ಲ ಪತ್ರಕರ್ತರಿಗೆ ಹೆಮ್ಮೆ ತಂದಿದೆ. ಅದೇ ರೀತಿ ಬೆಂಗಳೂರಿನ ಅಂಡರ್‌ ಪಾಸ್ ನಲ್ಲಿ ಕಾರು ನೀರಿಗೆ ಸಿಕ್ಕಿದ ಸಂದರ್ಭದಲ್ಲಿ ಜೀವ ಉಳಿಸಿದ್ದೂ ಕೂಡಾ ಇಬ್ಬರು ಪತ್ರಕರ್ತರು. ಇವರಿಗೆ ಸನ್ಮಾನ ಮಾಡಿರುವುದು ನನಗೆ ಖುಷಿ ಕೊಟ್ಟಿದೆ. ಪತ್ರಕರ್ತರು ಮಾನವೀಯ ಕಾರ್ಯ ಮಾಡಿದಾಗ ಬೆನ್ನುತಟ್ಟಬೇಕಾದ್ದು ನಮ್ಮೆಲ್ಲರ ಕರ್ತವ್ಯ ಎಂದರು.


ಮನೆಮನೆಗೆ ಬೆಳಗ್ಗೆಪತ್ರಿಕೆ ವಿತರಿಸುವ ಪತ್ರಿಕಾ ವಿತರಕರ ಕಾಯಕಕ್ಕೆ ಸರಿಸಾಟಿ ಯಾವುದೂ ಇಲ್ಲ. ಇಂತಹ ಕೆಲಸವನ್ನು ನಿರಂತರ 62 ವರ್ಷಗಳ ಕಾಲ ಮಾಡಿರುವ ರಮೇಶ್ ಅವರ ಕಾರ್ಯಕ್ಕೆ ನಾವು ಋಣಿಯಾಗಿರಬೇಕು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಳೆದ ಮೂರು ವರ್ಷಗಳಿಂದ ಪತ್ರಕರ್ತರ ಮಕ್ಕಳಿಗೆ ರಾಜ್ಯಮಟ್ಟ,‌ ಜಿಲ್ಲಾ ಮಟ್ಟ, ತಾಲೂಕು ಮಟ್ಟದಲ್ಲಿ ಸನ್ಮಾನ ಮಾಡುತ್ತಿದೆ. ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಏನಾದರೂ ಅನಾಹುತ ಆದರೆ ಅವರ ಕುಟುಂಬಕ್ಕೆ ಸರಕಾರದಿಂದ 5 ಲಕ್ಷ ಪರಿಹಾರ ದೊರಕಿಸಿಕೊಡುವ ಕೆಲಸ ಮಾಡುತ್ತಾ ಬಂದಿದೆ ಎಂದರು.


ಇದೇ ಸಂದರ್ಭದಲ್ಲಿ 64 ವರ್ಷಗಳಿಂದ ಪತ್ರಿಕೆ ವಿತರಣೆ ಮಾಡುತ್ತಿರುವ 82ರ ಹರೆಯದ ರಮೇಶ್, ವಿನೂತನ ರೀತಿಯಲ್ಲಿ ಮತದಾನ ಹಾಗೂ ಡೆಂಗ್ಯು ಜಾಗೃತಿ ಮೂಡಿಸಿದ ಸನ್ನಿಧಿ ಕಶೆಕೋಡಿ, ಶಿರೂರು ಗುಡ್ಡ ಕುಸಿತ ಸಂದರ್ಭ ವೃದ್ಧೆಯ ಅಂತಿಮ ಸಂಸ್ಕಾರ ನೆರವೇರಿಸಿ ಮಾನವೀಯತೆಯನ್ನು ಸಾರಿದ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಬಿಜೈ ಅಂಗನವಾಡಿಗೆ ಎರಡು ಫ್ಯಾನ್ ಗಳನ್ನು ಹಸ್ತಾಂತರಿಸ ಲಾಯಿತು.


2023-24ನೆ ಸಾಲಿನ ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಾದ ತೇಜಸ್ ಕಿಣಿ, ಅವನಿ ಪಿ.ಬಂಗ, ದೀಪ್ತಿ ಭಟ್ ಹಾಗೂ ಎಸ್ ಎಸ್ ಎಲ್ ಸಿಯ ವಿದ್ಯಾರ್ಥಿಗಳಾದ ಬಿ.ಆರ್. ಶ್ರೀಹರಿ, ತಂಝಿಲ್ ರಹಮಾನ್, ಮನೀಶ್ ಎಸ್ ಶೆಟ್ಟಿ, ಮುಹಮ್ಮದ್ ಶೆಫಿಕ್, ಮಾಧವ ಕಾಮತ್, ದೇವಾಂಶು, ಸುಧನ್ವ ಕೆ.ಬಿ ಯವರನ್ನು ಪುರಸ್ಕರಿಸಲಾಯಿತು.


ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್  ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.


ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಹಿರಿಯ ಪತ್ರಕರ್ತ ಆನಂದ್ ಶೆಟ್ಟಿ, ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಇಬ್ರಾಹಿಂ ಅಡ್ಕಸ್ಥಳ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ, ರಾಜೇಶ್ ಶೆಟ್ಟಿ, ನಿಶಾಂತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇ ಶ್ವರ ವಂದಿಸಿದರು. ಹರೀಶ್ ಮೋಟುಕಾನ ಕಾರ್ಯಕ್ರಮ ನಿರೂಪಿಸಿದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top