ಮೂಡುಬಿದಿರೆ:‘ಗುರು ಸ್ಮರಣೆ’ ಕಾರ್ಯಕ್ರಮ

Upayuktha
0


ಮೂಡುಬಿದಿರೆ:
ಓರ್ವ ಸಮಾಜ ಸುಧಾರಕರಾಗಿ ನಾರಾಯಣ ಗುರು ಒಂದು ಜಾತಿ ಧರ್ಮದ ಗುರುವಲ್ಲ. ಅವರು ಹೇಳಿದ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವುದು ಮನುಷ್ಯ ಧರ್ಮದ ಸಾರ. ಚತುರ್ವರ್ಣ ಕರಾಳ ವ್ಯವಸ್ಥೆಯ ವಿರುದ್ಧದ ಹೋರಾಟವೇ ನಾರಾಯಣ ಗುರುಗಳ ಸಮಾಜ ಸುಧಾರಣೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ನುಡಿದರು.


ಯುವವಾಹಿನಿ ಮೂಡುಬಿದಿರೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಆಯೋಜಿಸಿದ್ದ ಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ಮೂಡುಬಿದಿರೆ ತಾಲೂಕು ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಶ್ರೀ ನಾರಾಯಣ ಗುರುಗಳ ಭಾವಚಿತ್ರ ರಚನೆ, ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯ ಗುರು ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ನಾರಾಯಣ ಗುರುಗಳ ಧಾರ್ಮಿಕ ಸುಧಾರಣಾ ಚಳುವಳಿಗಳು ಬೇರೆ ಚಳುವಳಿಗಾರರ ಚಳುವಳಿಗಿಂತ ಭಿನ್ನವಾಗಿದ್ದವು. ಯುದ್ಧಕ್ಕೆ ಬಂದವರನ್ನು ಶಾಸ್ತ್ರವಿಲ್ಲದೆ ಹಿಮ್ಮೆಟ್ಟಿದ ಕೀರ್ತಿ ಅವರದು. ಪೂಜೆಗಾಗಿ ಕೆಳಜಾತಿಯವರನ್ನು ನೇಮಿಸಿದ ಅವರು, ವಿವಾಹಗಳನ್ನು ಸರಳಗೊಳಿಸಿ, ಮಧ್ಯಪಾನದ ವಿರುದ್ಧ ಹೋರಾಟ ನಡೆಸಿದರು. ಅವರ ಜೀವನದಲ್ಲಿ ನಡೆದ ನೈಜ ಘಟನೆಯೊಂದಿಗೆ ಅವರು ಜಾತಿ ಪದ್ಧತಿ ವಿರುದ್ಧ ಹೋರಾಟ ನಡೆಸಿದ ಸಂಧರ್ಭವನ್ನು ವಿವರಿಸಿದರು. ಇಂದಿನ ಜಯಂತಿಗಳು ಜಾತಿಯ ಆಧಾರದಲ್ಲಿ ನಡೆಯುತ್ತಿರುವ ಕುರಿತು ವಿಷಾದ ವ್ಯಕ್ತಪಡಿಸಿದರು.


ಒಂದೇ ಜಾತಿ, ಒಂದೇ ಕುಲ ಎಂದು ಜಗತ್ತಿಗೆ ಸಾರಿದ ಶ್ರೀ ನಾರಾಯಣ ಗುರು ಅವರ ತತ್ವಗಳು ಸಾರ್ವಕಾಲಿಕವಾಗಿದ್ದು ಅವರನ್ನು ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿಸಬಾದರು. ಅವರು ಹಾಕಿಕೊಟ್ಟ ಆದರ್ಶ ತತ್ವಗಳು, ಸಮಾಜ ಸುಧಾರಣೆಯ ದಾರ್ಶನಿಕ  ನಿಲುವುಗಳು ಜಗತ್ತಿಗೆ ಆದರ್ಶಪ್ರಾಯವಾದವುಗಳೆಂದು ನುಡಿದರು.


ಮುಖ್ಯ ಅತಿಥಿಯಾಗಿದ್ದ ಮೂಲ್ಕಿ- ಮೂಡುಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್ ಮಾತನಾಡಿ ನಾರಾಯಣಗುರುಗಳು ಯಾವುದೇ ಸಮುದಾಯ, ಸಮಾಜ, ವರ್ಗಕ್ಕೆ ಸೇರಿದವರಲ್ಲ. ಅವರು ಲೋಕ ಸಂತ. ಅವರ ಬಳಿಯಿಂದ ಮಹಾತ್ಮ ಗಾಂದಿ, ರವೀಂದ್ರನಾಥ್ ಟಾಗೋರ್  ಮಾರ್ಗದರ್ಶನ ಪಡೆಯುತ್ತಿದ್ದರು ಎಂದು ತಿಳಿಸಿದರು. 


ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸುವುದು ಕೇವಲ  ಪ್ರಶಸ್ತಿ ಗೆಲ್ಲುವುದಕ್ಕೇ ಸೀಮಿತವಾಗಿರದೆ ಪ್ರತೀ ಹಂತದಲ್ಲಿ ಕಲಿಯುವಿಕೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಯುವವಾಹಿನಿ ಮೂಡುಬಿದಿರೆ ಸಮಿತಿಯ ಅಧ್ಯಕ್ಷ ಶಂಕರ್  ಎ.ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ನಾರಾಯಣಗುರುಗಳ ಕುರಿತು ಏರ್ಪಡಿಸಿದ್ದ ಇಂದಿನ ಸ್ಪರ್ಧೆಗೆ ದಾಖಲೆ ಸಂಖ್ಯೆಯ ವಿದ್ಯಾರ್ಥಿಗಳು ಹೆಸರು ನಮೂದಿಕೊಂಡು ಪಾಲ್ಗೊಳ್ಳುತ್ತಿರುವುದು ಸಂತೋಷ ವಿಷಯ ಎಂದರು.


ಮುಖ್ಯ ಅತಿಥಿಗಳಾಗಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಹರೀಶ್ ಕೆ. ಪೂಜಾರಿ, ನಿಶ್ಮಿತಾ ಸಂಸ್ಥೆಯ ಅಧ್ಯಕ್ಷ ನಾರಾಯಣ ಪಿ. ಎಂ., ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ., ಮೂಡುಬಿದಿರೆಯ ಬ್ರಹ್ಮಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕೆ. ಪೂಜಾರಿ, ಉಸ್ಥಿತರಿದ್ದರು. ಯುವವಾಹಿನಿ ಸಮಿತಿಯ ಕಾರ್ಯದರ್ಶಿ ಗಿರೀಶ್  ಕೋಟ್ಯಾನ್ ವಂದಿಸಿದರು. ಹನಿ ಆನಂದ್ ಕಾರ್ಯಕ್ರಮ  ನಿರೂಪಿಸಿದರು.


ಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ಮೂಡುಬಿದಿರೆ ತಾಲೂಕು ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಶ್ರೀ ನಾರಾಯಣ ಗುರುಗಳ ಭಾವಚಿತ್ರ ರಚನೆಗೆ 700 ವಿದ್ಯಾರ್ಥಿಗಳು, ಪ್ರಬಂಧ ಸ್ಪರ್ಧೆಗೆ 162 ಹಾಗೂ ಹಾಗೂ ಭಾಷಣ ಸ್ಪರ್ಧೆಗೆ 60 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 925 ವಿದ್ಯಾರ್ಥಿಗಳು ಪಾಲ್ಗೊಂಡರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top